ಕಿಲೋಗೆ ₹.251ರ ಬದಲು ₹.351 ಅಡಕೆ ಆಮದು ಕನಿಷ್ಠ ದರ ಹೆಚ್ಚಳಗೊಳಿಸಿದ ಕೇಂದ್ರ

0

ಪುತ್ತೂರು:ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಮೇಲಿನ ಕನಿಷ್ಟ ಆಮದು ಬೆಲೆಯನ್ನು 100ರೂ.ಹೆಚ್ಚಳಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು ಧಾರಣೆ ಹೆಚ್ಚಳ ಕುರಿತು ಅಡಿಕೆ ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿಸಿದೆ. ಈ ಹಿಂದೆ ಅಡಿಕೆ ಮೇಲಿನ ಕನಿಷ್ಟ ಆಮದು ದರ ಕಿಲೋಗೆ ರೂ.251 ಇದ್ದುದನ್ನು ಇದೀಗ ರೂ.351ಕ್ಕೆ ಹೆಚ್ಚಳಗೊಳಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಫೆ.14ರಂದು ಆದೇಶ ಹೊರಡಿಸಿದೆ.

ಕ್ಯಾಂಪ್ಕೋ ಹರ್ಷ: ಅಡಿಕೆ ಮೇಲಿನ ಕನಿಷ್ಟ ಆಮದು ದರ ಹೆಚ್ಚಳಗೊಳಿಸಿರುವುದಕ್ಕೆ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಹರ್ಷ ವ್ಯಕ್ತಪಡಿಸಿದೆ. ವಿದೇಶದಿಂದ ಭಾರತಕ್ಕೆ ಅಡಿಕೆ ಆಮದು ಮೇಲಿನ ಕನಿಷ್ಠ ದರವನ್ನು ಅಡಿಕೆ ಉತ್ಪಾದನಾ ವೆಚ್ಚವಾಗಿ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದವು.

ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹಾಗೂ ಕೃಷಿ ಯಂತ್ರ ಮೇಳ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪ್ರತ್ಯೇಕ ಮಾತನಾಡಿ ಮನವಿ ಮಾಡಿದ್ದರು. ಈ ಎಲ್ಲ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಅಡಕೆ ಆಮದು ಮೇಲಿನ ಕನಿಷ್ಠ ದರ ಕೆಜಿಗೆ 251 ರು.ಗಳಿಂದ 351ರು.ಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದು ಸಮಸ್ತ ಅಡಿಕೆ ಬೆಳೆಗಾರರಿಗೆ ಆಶಾದಾಯಕವಾಗಿದ್ದು, ಬೆಳೆಗಾರ ಹಿತರಕ್ಷಕ ಸಂಸ್ಥೆ ಕ್ಯಾಂಪ್ರೋ ಪ್ರಯತ್ನಕ್ಕೆ ಲಭಿಸಿದ ಯಶಸ್ಸಾಗಿದೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ, ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಕರಾವಳಿಯ ಸಂಸದರು ಮತ್ತು ಶಾಸಕರಿಗೆ ಕ್ಯಾಂಪ್ಕೋ ಆಡಳಿತ ಮಂಡಳಿ ಅಭಾರಿಯಾಗಿದೆ ಎಂದು ಕ್ಯಾಂಪ್ರೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಅಡಿಕೆ ಮೇಲಿನ ಕನಿಷ್ಠ ಆಮದು ಬೆಲೆ ಕೆಜಿಗೆ 251 ಇದ್ದುದನ್ನು ಇದೀಗ ಕೆಜಿಗೆ ₹.351ಕ್ಕೆ ಹೆಚ್ಚಳಗೊಳಿಸಿದೆ .ಈ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಯಲು ಮೋದಿ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಕು.ಶೋಭಾ ಕರಂದ್ಲಾಜೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here