ಮಹೇಶ್ ಅವರ ಉತ್ತಮ ಗುಣ ಸದಾ ನಮ್ಮೊಂದಿಗಿದೆ : ಸವಣೂರು ಸೀತಾರಾಮ ರೈ
ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜದ ಪ್ರಧಾನ ಕಾರ್ಯದರ್ಶಿ, ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ, `ಸುದ್ದಿ’ ಗೌರವ ವರದಿಗಾರರಾಗಿದ್ದ ಮಹೇಶ್ ಆಚಾರ್ಯ ಎಂ. ಅವರಿಗೆ ಶ್ರದ್ಧಾಂಜಲಿ ಸಭೆ ಫೆ. 15ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ, ಮಹೇಶ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಉತ್ತಮ ಗುಣ ಸದಾ ನಮ್ಮೊಂದಿಗಿರುತ್ತದೆ. ಅವರನ್ನು ಸದಾ ಸ್ಮರಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದರಲ್ಲದೆ, ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ಮಹೇಶ್ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡರು. ನನ್ನ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿಯೂ 3 ದಿನ ತಮ್ಮೊಂದಿಗಿದ್ದು, ಕೆಲಸ ಮಾಡಿದರು. ಲೋಗೋ ರಚನೆಯಲ್ಲೂ ತೊಡಗಿಸಿಕೊಂಡರು. ಅವರು ವಿದ್ಯಾರಶ್ಮಿ ಕಾಲೇಜನ್ನು ಬಿಟ್ಟು 12 ವರ್ಷವಾದರೂ, ಸದಾ ನಮ್ಮ ಜೊತೆ ಸಂಪರ್ಕದಲ್ಲಿದ್ದರು. ಆದ್ದರಿಂದ ನನ್ನ ಜೊತೆಗೆ ಹಾಗೂ ನಮ್ಮ ಶಾಲೆಯ ಜೊತೆಗಿನ ಮಹೇಶ್ ನಂಟು ಅವಿಸ್ಮರಣೀಯ ಎಂದವರು ಹೇಳಿದರು.
ಜ್ಞಾನಪುಂಜವನ್ನು ಕಳೆದುಕೊಂಡಿದ್ದೆವೆ:
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಮಾತನಾಡಿ, ದೊಡ್ಡ ಜ್ಞಾನಪುಂಜವನ್ನು ಕಳೆದುಕೊಂಡಂತಾಗಿದೆ. ಬಹುಮುಖ ಪ್ರತಿಭೆ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸರಳ ವ್ಯಕ್ತಿತ್ವದ ಮಹೇಶ್ ಅವರನ್ನು ಕಳೆದುಕೊಂಡಿರುವುದು ಅಪಾರ ನಷ್ಟ ಎಂದರು.
ಉತ್ತಮ ಸಂಸ್ಕಾರವಂತ:
ಮಂಗಳೂರು ಶ್ರೀ ವಿನಾಯಕ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಲೋಕೇಶ್ ಆಚಾರ್ಯ ಮಾತನಾಡಿ, ರಾಮಣ್ಣ ಆಚಾರ್ಯ ಅವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದರು. ಅದನ್ನು ಮಹೇಶ್ ಅವರಲ್ಲಿ ನಾವು ಕಾಣಬಹುದಿತ್ತು. ವಿವಿಧ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದು, ಎಲ್ಲಾ ಕಡೆಯೂ ಉತ್ತಮ ಹೆಸರು ಸಂಪಾದಿಸಿದ್ದಾರೆ. ಮಹೇಶ್ ಅಜಾತ ಶತ್ರು ಎನ್ನುವುದನ್ನು ನಾವು ತಿಳಿದುಕೊಂಡಿದ್ದೆವೆ. ಮಹೇಶ್ ವಿದ್ಯಾರ್ಥಿಗಳಿಗೆ ಹೆಚ್ಚು ಆಪ್ತವಾಗಲು ಒಂದು ಕಾರಣವಿತ್ತು, ಅದು- ವಿದ್ಯಾರ್ಥಿಗಳ ಮಟ್ಟಕ್ಕೆ ಹೋಗಿ ಅವರು ಪಾಠ ಮಾಡುತ್ತಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಬೇಗನೆ ಅರ್ಥ ಮಾಡಿಕೊಳ್ಳಲು ಆಗುತ್ತಿತ್ತು ಎಂದರು.
ಫಲಾಪೇಕ್ಷೆಯಿಲ್ಲದ ಕೆಲಸ:
ವಿವೇಕಾನಂದ ಕಾಲೇಜಿನ ಹರೀಶ್ ಶಾಸ್ತ್ರಿ ಮಾತನಾಡಿ, ಸದಾ ವಿದ್ಯಾರ್ಥಿಗಳ ಬಗ್ಗೆ, ಸಮಾಜದ ಬಗ್ಗೆ ತುಡಿತ ಹೊಂದಿದ್ದ ವ್ಯಕ್ತಿ ಮಹೇಶ್. ಯಾರನ್ನೇ ಬೈದದ್ದಾಗಲಿ, ದೊಡ್ಡ ಸ್ವರದಲ್ಲಿ ಮಾತನಾಡಿದ್ದಾಗಲಿ ಇಲ್ಲವೇ ಇಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲಸ ಮಾಡುವುದು ಮಾತ್ರವಲ್ಲ, ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದರು. ಮಹೇಶ್ ಅವರ ಸಾವು ವಿದ್ಯಾರ್ಥಿಗಳಿಗೆ ನಷ್ಟ. ಅವರಿಲ್ಲ ಎನ್ನುವುದೇ ದೊಡ್ಡ ನೋವು ಎಂದರು.
ಮಹೇಶ್ ಸದಾ ನಮ್ಮಲ್ಲಿದ್ದಾರೆ:
ಮುಕ್ರಂಪಾಡಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಭೋಜರಾಜ ಆಚಾರ್ಯ ಮಾತನಾಡಿ, ಅರ್ಧಪ್ರಾಯದಲ್ಲೇ ನಮ್ಮನ್ನು ಮಹೇಶ್ ಬಿಟ್ಟು ಹೋದರೂ, ಅವರ ಕಲಾಪ್ರತಿಭೆಯಿಂದಾಗಿ ಹಾಗೂ ಅವರ ಬಹುಮುಖ ವ್ಯಕ್ತಿತ್ವದಿಂದಾಗಿ ಅವರು ಸದಾ ನಮ್ಮಲ್ಲಿ ಉಳಿದುಕೊಂಡಿದ್ದಾರೆ. ಅವರ ಆಂತರಿಕ ವ್ಯಕ್ತಿತ್ವವೂ ಮೇರುಸ್ತರದಲ್ಲಿತ್ತು ಎಂದರು.
ಮಹೇಶ್ ಅಗತ್ಯ ಈ ಲೋಕಕ್ಕೇ ಇದೆ:
ನಿವೃತ್ತ ಉಪನ್ಯಾಸಕ ನವೀನ್ ಮಾತನಾಡಿ, ನಿಷ್ಕಲ್ಮಷ ವ್ಯಕ್ತಿತ್ವಕ್ಕೆ, ಸರಳತೆಗೆ ಇನ್ನೊಂದು ಹೆಸರೇ ಮಹೇಶ್. ಮಹೇಶ್ ಎಂದರೆ ಒಂದು ರೀತಿಯ ಬೆಳಕು. ಆ ಬೆಳಕನ್ನೇ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಆದ್ದರಿಂದ ಮಹೇಶ್ ಅವರ ಅಗತ್ಯ ಈ ಲೋಕಕ್ಕೇ ಇದೆ. ಆದ್ದರಿಂದ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಪ್ರಾರ್ಥಿಸಿದರು.
ಎಲ್ಲರಿಗೂ ಮಾದರಿ:
ಮಹೇಶ್ ಅವರ ಸಹೋದರ ಸತೀಶ್ ಆಚಾರ್ಯ ಮಾತನಾಡಿ, ಸಜ್ಜನಿಕೆ, ಆದರ್ಶ, ಸರಳತೆಯಿಂದ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.
ವಿಚಾರಕ್ಕೆ ಪ್ರಾಮುಖ್ಯತೆ ನೀಡಿದ್ದರು: ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್. ಜಗದೀಶ್ ಮಾತನಾಡಿ, ಪ್ರಚಾರ ಪಡೆಯದೇ ವಿಚಾರಕ್ಕೆ ಪ್ರಾಮುಖ್ಯತೆ ನೀಡಿದವರು ಮಹೇಶ್. ಬಹಳ ಮೃದು ವ್ಯಕ್ತಿತ್ವ, ಅದರಂತೆ ಅವರ ಮನಸ್ಸು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿಯಾಗಿ ಅದ್ಭುತ ಕೆಲಸ ಮಾಡಿದ್ದಾರೆ ಎಂದರು.
ವಿಶ್ವಕರ್ಮ ಸಭಾಭವನಕ್ಕೆ ಅನುದಾನ ಒದಗಿಸುವ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಶಿಫಾರಸು ಮಾಡಿದ್ದರು. ಮಹೇಶ್ ಅವರು ಈಗ ಇರುತ್ತಿದ್ದರೆ, ಆ ಪತ್ರವನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಆಗಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು ಎಂದರು.
ಎಲ್ಲರ ಮನಸ್ಸಲ್ಲೂ ಸ್ಥಾನ ಪಡೆದಿದ್ದರು:
ಬೊಳುವಾರು ವಿ.ಕೆ. ಸ್ಟೀಲ್ ಟ್ರೇಡರ್‍ಸ್‌ನ ವಸಂತ್ ಆಚಾರ್ಯ ಮಾತನಾಡಿ, ಸಣ್ಣ ಅವಧಿಯಲ್ಲಿ ಉತ್ತಮ ಬದುಕನ್ನು ಬದುಕಿದವರು ಮಹೇಶ್. ಉತ್ತಮ ಒಡನಾಟದಿಂದ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.
ಎಲ್ಲಾ ಕೆಲಸದಲ್ಲಿಯೂ ಮಹೇಶ್ ಪಾತ್ರ ಮಹತ್ತರ:
ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಸರಕಾರಿ ಯೋಜನೆಗಳನ್ನು ಸಮಾಜದ ಜನರಿಗೆ ತಲುಪಿಸಲಿಕ್ಕಾಗಿ ವೆಬ್‌ಸೈಟ್‌ಗೆ ಚಾಲನೆ ನೀಡಿದೆವು. ಅದರಲ್ಲಿ ಸರಕಾರಿ ಯೋಜನೆಗಳ ಮಾಹಿತಿಯನ್ನು ಮಹೇಶ್ ಅವರೇ ಅಪ್‌ಲೋಡ್ ಮಾಡುತ್ತಿದ್ದರು. ಸರಕಾರದಿಂದ ಸಮುದಾಯ ಭವನಕ್ಕೆ ಅನುದಾನ ನೀಡುವ ವ್ಯವಸ್ಥೆ ಇದೆ. ಆದ್ದರಿಂದ ಅದಕ್ಕೆ ಮನವಿ ಮಾಡುವ ಎನ್ನುವುದರ ಸಲಹೆ ನೀಡಿ, ಅದಕ್ಕಾಗಿ ಅವರೇ ಹೆಚ್ಚಿನ ಕೆಲಸಗಳನ್ನು ಮಾಡಿದರು. ವಿದ್ಯಾರ್ಥಿಗಳ ಪರೀಕ್ಷಾ ತರಬೇತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇತ್ತೀಚೆಗೆ ನಡೆದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದ ತಯಾರಿಗೂ ಸಾಕಷ್ಟು ಕೆಲಸ ಮಾಡಿ, ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಮಾಜದ ಎಲ್ಲಾ ಕೆಲಸಗಳಲ್ಲಿಯೂ ಅವರ ಪಾತ್ರ ಮಹತ್ತರವಾಗಿತ್ತು ಎಂದು ನೆನಪಿಸಿಕೊಂಡರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಆಚಾರ್ಯ ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಮಹೇಶ್ ಅವರ ಸಹೋದರ ಯೊಗೀಶ್ ಆಚಾರ್ಯ ಅವರು ದೀಪ ಬೆಳಗಿದರು. ಮಹಿಳೆಯರು ಆರತಿ ಮಾಡಿದರು. ಸಭೆಯ ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಆಗಮಿಸಿದ್ದವರೆಲ್ಲರೂ ಮಹೇಶ್ ಆಚಾರ್ಯ ಎಂ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಮಹೇಶ್ ರಚನೆಯ ಕಲೆಗಳ ಪ್ರದರ್ಶನ:
ಮಹೇಶ್ ಆಚಾರ್ಯ ಎಂ. ಅವರ ಕುಂಚದಲ್ಲಿ ಅರಳಿದ ಹಲವು ರೀತಿಯ ಡ್ರಾಯಿಂಗ್‌ಗಳನ್ನು ಸಭಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ವೇದಿಕೆಯೊಂದನ್ನು ನಿರ್ಮಿಸಿ, ಅದರಲ್ಲಿ ಪ್ರತಿಯೊಂದು ಚಿತ್ರಗಳನ್ನು ಓರಣವಾಗಿ ಜೋಡಿಸಿಡಲಾಗಿತ್ತು. ಮಹೇಶ್ ಅವರು ಕೊನೆಯದಾಗಿ ರಚಿಸಿದ ತನ್ನ ತಂದೆ ಹಾಗೂ ತಾಯಿ ಜೊತೆಗಿದ್ದ ಫೊಟೋ ಕೂಡಾ ಅದರಲ್ಲಿತ್ತು. ಕಾಯವಳಿದರೂ ಮಹೇಶ್ ನಿಮ್ಮ ನೆನಪು ಚಿರಶಾಶ್ವತ ಎಂಬ ಶೀರ್ಷಿಕೆಯೊಂದಿಗೆ ಕಲಾಪ್ರದರ್ಶನ ನಡೆಯಿತು. ಇದರ ಪಕ್ಕದಲ್ಲೇ ಮಹೇಶ್ ಅವರಿಗೆ ಅಕ್ಷರ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.