ಅಸಾಧ್ಯವಾದರೆ ಪುತ್ತೂರು ಕ್ಷೇತ್ರದಲ್ಲಾದರೂ ಅವಕಾಶ ನೀಡಲೇಬೇಕು- ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸಂಘ ಅಗ್ರಹ
ಮಂಗಳೂರು:ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು ಎಂದು ರಾಜಕೀಯ ಪಕ್ಷಗಳ ನಾಯಕರನ್ನು ಆಗ್ರಹಿಸಿರುವ ಸಮುದಾಯದ ಮುಖಂಡರು, ಎರಡು ಕ್ಷೇತ್ರಗಳಲ್ಲಿ ಸಾಧ್ಯವಿಲ್ಲವಾದರೆ ಕನಿಷ್ಟ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಗೌಡ ಜನಾಂಗಕ್ಕೆ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ಯಾವುದೇ ಪಕ್ಷದಲ್ಲಿ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿದರೆ ಅವರನ್ನು ಗೌಡ ಸಮುದಾಯ ಬೆಂಬಲಿಸುತ್ತದೆಯಾದ್ದರಿಂದ ಗೌಡ ಸಮುದಾಯದ ಅಭ್ಯರ್ಥಿಗಳಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಲೋಕಯ್ಯ ಗೌಡ ಹೇಳಿದ್ದಾರೆ.ಜಿಲ್ಲೆಯಲ್ಲಿ ಗೌಡ ಸಮಾಜದವರ ಸಂಖ್ಯೆ ಅಧಿಕವಾಗಿದೆ.ಆದರೆ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಗೌಡ ಸಮುದಾಯದವರನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲಾಗಿದೆ.ದ.ಕ.ಜಿಲ್ಲೆಯ ಕೃಷಿಕ ವರ್ಗದ ಒಕ್ಕಲಿಗ ಗೌಡರು ಜಿಲ್ಲೆಯಲ್ಲಿ ಬಹು ಸಂಖ್ಯಾತರಾಗಿದ್ದು ರಾಜಕೀಯದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳ ಗೆಲುವು ಅಥವಾ ಸೋಲಿಗೆ ನಿರ್ಣಾಯಕ ಪಾತ್ರವನ್ನು ವಹಿಸುವಷ್ಟು ಸಾಮರ್ಥ್ಯ ಹೊಂದಿದ್ದರೂ ಜಿಲ್ಲೆಯಲ್ಲಿ ರಾಜಕೀಯವಾಗಿ ಸಮುದಾಯದವರನ್ನು ತೀರಾ ಕಡೆಗಣಿಸಲಾಗಿದೆ.ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಗೌಡ ಜನಾಂಗವು ಪ್ರಬವಾಗಿದೆ.ಆದರೆ ಚುನಾವಣೆಯ ಸಂದರ್ಭದಲ್ಲಿ ಗೌಡ ಸಮಾಜಕ್ಕೆ ದೊರೆತ ಅವಕಾಶಗಳೇ ಬಹಳ ಕಡಿಮೆ.ಜಾತಿ ಆಧಾರದಲ್ಲಿ ಸೀಟು ಹಂಚುವ ರಾಜಕೀಯ ಪಕ್ಷಗಳು ಗೌಡ ಸಮಾಜವನ್ನು ಮೊದಲಿನಿಂದಲೂ ಕಡೆಗಣಿಸುತ್ತಾ ಬಂದಿವೆ.ದ.ಕ.ಜಿಲ್ಲೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಒಕ್ಕಲಿಗ ಗೌಡರಿಗೆ ದೊರಕಬೇಕಾದ ರಾಜಕೀಯ ಸ್ಥಾನಮಾನಗಳು ಸರಿಯಾಗಿ ದೊರಕದಿರುವುದು ನಮ್ಮ ಸಮಾಜಕ್ಕೆ ತುಂಬಾ ನೋವನ್ನುಂಟು ಮಾಡಿದೆ ಎಂದು ಲೋಕಯ್ಯ ಗೌಡ ತಿಳಿಸಿದರು.
ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ವಿಧಾನ ಸಭೆ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಗೌಡ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸುಳ್ಯದಲ್ಲಿ ಸುಮಾರು 65ಶೇ.,ಪುತ್ತೂರು 50ಶೇ., ಬೆಳ್ತಂಗಡಿ 45ಶೇ., ಬಂಟ್ವಾಳ 15ಶೇ.,ಅಲ್ಲದೆ ಮಂಗಳೂರು ತಾಲೂಕಿನಲ್ಲೂ ಗೌಡ ಸಮಾಜದ ಮತದಾರರಿದ್ದು ಒಟ್ಟಾಗಿ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3,50,000 ಮತದಾರರು ಇದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.ಆದುದರಿಂದ ಬೇರೆ ಬೇರೆ ಪಕ್ಷಗಳ ಮುಖಂಡರುಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಹಾಗೂ ಬೆಳ್ತಂಗಡಿ ಕ್ಷೇತ್ರಗಳಲ್ಲಿ ಗೌಡ ಸಮಾಜದ ವ್ಯಕ್ತಿಗಳಿಗೆ ಅವಕಾಶ ಕೊಡಬೇಕಾಗಿ ವಿನಂತಿಸುತ್ತೇವೆ. ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಸ್ಥಾನ ನೀಡಲಾಗದಿದ್ದರೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ನಮ್ಮ ಸಮಾಜದ ವ್ಯಕ್ತಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ ಲೋಕಯ್ಯ ಗೌಡ,ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸದೆ ಎಲ್ಲಾ ರಾಜಕೀಯ ಪಕ್ಷದವರಿಗೂ ಒಕ್ಕಲಿಗ ಗೌಡ ಸಮಾಜದ ಬೇಡಿಕೆಯನ್ನು ಪರಿಗಣಿಸಬೇಕಾಗಿ ಮನವಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಂಗಳೂರು ತಾಲೂಕು ಅಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಸದಾನಂದ ಗೌಡ ಡಿ.ಪಿ.,ಮಂಗಳೂರು ತಾಲೂಕು ಒಕ್ಕಲಿಗರ ಯಾನೆ ಗೌಡರ ಸಂಘದ ಉಪಾಧ್ಯಕ್ಷ,ಜಿಲ್ಲಾ ಸಂಘದ ಸದಸ್ಯರೂ ಆಗಿರುವ ಪದ್ಮನಾಭ ಗೌಡ ದೇವಸ್ಯ, ಮಂಗಳೂರು ಒಕ್ಕಲಿಗ ಯಾನೇ ಗೌಡರ ಸಂಘದ ಕಾರ್ಯದರ್ಶಿ,ಜಿಲ್ಲಾ ಸಂಘದ ಸದಸ್ಯರೂ ಆಗಿರುವ ಕೆ.ರಾಮಣ್ಣ ಗೌಡ, ಮಂಗಳೂರು ತಾಲೂಕು ಸಂಘದ ನಿರ್ದೇಶಕರಾಗಿರುವ ಜಿಲ್ಲಾ ಒಕ್ಕಲಿಗರ ಸಂಘದ ಸದಸ್ಯ ಗುರುದೇವ್ ಯು.ಬಿ.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸುಳ್ಯದಲ್ಲಿ ಸುಮಾರು 65 ಶೇ.,ಪುತ್ತೂರು 50ಶೇ., ಬೆಳ್ತಂಗಡಿ 45ಶೇ., ಬಂಟ್ವಾಳ 15ಶೇ.,ಅಲ್ಲದೆ ಮಂಗಳೂರು ತಾಲೂಕಿನಲ್ಲೂ ಗೌಡ ಸಮಾಜದ ಮತದಾರರಿದ್ದು ಒಟ್ಟಾಗಿ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3,50,000 ಮತದಾರರು ಇದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.ಆದುದರಿಂದ ಬೇರೆ ಬೇರೆ ಪಕ್ಷಗಳ ಮುಖಂಡರುಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಹಾಗೂ ಬೆಳ್ತಂಗಡಿ ಕ್ಷೇತ್ರಗಳಲ್ಲಿ ಗೌಡ ಸಮಾಜದ ವ್ಯಕ್ತಿಗಳಿಗೆ ಅವಕಾಶ ಕೊಡಬೇಕಾಗಿ ವಿನಂತಿಸುತ್ತೇವೆ-
ಲೋಕಯ್ಯ ಗೌಡ ಕೆ.,ಅಧ್ಯಕ್ಷರು, ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ