ಸುರತ್ಕಲ್‌ನಲ್ಲಿ ಯೋಧನ ಕುಟುಂಬಕ್ಕೆ ಸೇರಿದ ಕಟ್ಟಡ ರಾತ್ರೋರಾತ್ರಿ ಧ್ವಂಸ : ಅಶೋಕ್ ಕುಮಾರ್ ರೈ ವಿರುದ್ಧ ಆರೋಪದ ವರದಿ ಟಿವಿ ಚಾನೆಲ್‌ನಲ್ಲಿ ಪ್ರಸಾರ – ನನ್ನದೇ ಜಾಗದಲ್ಲಿ ಅಕ್ರಮ ಶೆಡ್ ಕಟ್ಟಿದ್ದರು-ಹೈಕೋರ್ಟ್ ಆದೇಶದಂತೆ ತೆರವು:ರೈಯವರ ಸ್ಪಷ್ಟನೆ

0


ಪುತ್ತೂರು:ಸುರತ್ಕಲ್ ಸಮೀಪದ ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯೋಧನ ಪತ್ನಿಗೆ ಸೇರಿರುವ ಕಟ್ಟಡವೊಂದನ್ನು ಉದ್ಯಮಿ ಕೋಡಿಂಬಾಡಿ ಅಶೋಕ್ ಕುಮಾರ್ ರೈಯವರು ರಾತ್ರೋರಾತ್ರಿ ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ ಎಂದು ಪವರ್ ಟಿವಿ ಚಾನೆಲ್‌ನಲ್ಲಿ ವರದಿ ಪ್ರಸಾರವಾಗಿದೆ. ನನ್ನದೇ ಜಾಗದಲ್ಲಿ ಅವರು ಅಕ್ರಮವಾಗಿ ಕಟ್ಟಿ ಬಾಡಿಗೆಗೆ ನೀಡಿ,ಸದ್ಯ ಖಾಲಿಬಿದ್ದುಕೊಂಡಿದ್ದ ಶೆಡ್ ಒಂದನ್ನು ಹೈಕೋರ್ಟ್ ಆರ್ಡರ್‌ನಂತೆ ತೆರವುಗೊಳಿಸಲಾಗಿದೆ ಎಂದು ಅಶೋಕ್ ಕುಮಾರ್ ರೈಯವರು ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ಯೋಧನ ಕುಟುಂಬಕ್ಕೆ ಸೇರಿದ ಶಾಪ್‌ನ್ನು ರಾತ್ರೋರಾತ್ರಿ ಧ್ವಂಸಗೊಳಿಸುವ ಮೂಲಕ ಅಶೋಕ್ ಕುಮಾರ್ ರೈಯವರು ಯೋಧನ ಕುಟುಂಬದ ಮೇಲೆ ಅಟ್ಟಹಾಸ ಮೆರೆದಿದ್ದಾರೆ.ಯಾವುದೇ ದಾಖಲೆ ನೀಡದೆ ಕಟ್ಟಡ ಧ್ವಂಸಗೊಳಿಸಿದ್ದಾರೆ.ಧ್ವಂಸಗೊಳಿಸಲು ಇವರಿಗೆ ಯಾವುದೇ ಅಽಕಾರವಿಲ್ಲ.ಈ ಬಗ್ಗೆ ಕಟ್ಟಡದ ಮಾಲಕಿಯಾಗಿರುವ ಯೋಧನ ಪತ್ನಿ ಪ್ರಭಾವತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಮಾಧ್ಯಮದ ಮುಂದೆಯೂ ತಮ್ಮ ಹೇಳಿಕೆ ನೀಡಿ ಕಣ್ಣೀರಿತ್ತಿದ್ದಾರೆ.ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗುತ್ತದೆ ಎಂದು ನಮ್ಮ ಕಟ್ಟಡವನ್ನು ನೆಲಸಮಗೊಳಿಸಿರುವುದು ನ್ಯಾಯವಾ? ಎಂದು ಅವರು ಪ್ರಶ್ನಿಸಿದ್ದಾರೆ.ಜನವರಿ 9ರ ರಾತ್ರಿ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ.ಈ ಬಗ್ಗೆ ನಾನು ಕೇಳಿದಾಗ ಅವರು ಪೊಲೀಸ್ ದೂರು ನೀಡಿ, ಕೋರ್ಟಲ್ಲಿ ನೋಡಿಕೊಳ್ಳೋಣಮ್ಮ ಎಂದಷ್ಟೆ ಹೇಳಿದ್ದಾರೆ.ಇಷ್ಟಕ್ಕೂ ಇದು ಅವರ ಜಾಗವಲ್ಲ.ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ.ಮಗಳ ಮದುವೆ ಸಮಯದಲ್ಲಿ ಕಟ್ಟಡವನ್ನು ರೆಂಟ್‌ಗೆ ನೀಡಿದ್ದೆವು.ಇದೀಗ ನಾನು ಅಸಹಾಯಕತೆಯಿಂದ ಇದ್ದೇನೆ.ಅವರ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳಬೇಕು ಮತ್ತು ನೆಲಸಮಗೊಳಿಸಲಾದ ಕಟ್ಟಡವನ್ನು ಮತ್ತೆ ನಿರ್ಮಿಸಿಕೊಡಬೇಕು ಎಂದು ಪ್ರಭಾವತಿಯವರು ಹೇಳಿರುವ ಕುರಿತು ಟಿವಿ ಚಾನೆಲ್‌ನಲ್ಲಿ ವರದಿ ಪ್ರಸಾರವಾಗಿದೆ.

ನನ್ನದೇ ಜಾಗದಲ್ಲಿ ಅಕ್ರಮ ಶೆಡ್ ಕಟ್ಟಿದ್ದರು-ಹೈಕೋರ್ಟ್ ಆರ್ಡರ್‌ನಂತೆ ತೆರವು:

ಘಟನೆ ಕುರಿತು ಸುದ್ದಿ ಗೆ ಸ್ಪಷ್ಟನೆ ನೀಡಿರುವ ಅಶೋಕ್ ಕುಮಾರ್ ರೈಯವರು, ನನ್ನದೇ ಜಾಗದಲ್ಲಿ ಅಕ್ರಮವಾಗಿ ಶೆಡ್ ಒಂದನ್ನು ಕಟ್ಟಿಕೊಂಡಿದ್ದ ಮಹಿಳೆ ಬಳಿಕ ಅದನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು.ಕಳೆದ ಕೆಲವು ಸಮಯದಿಂದ ಈ ಶೆಡ್‌ನಲ್ಲಿ ಯಾರೂ ಇರದೆ ಖಾಲಿ ಬಿದ್ದುಕೊಂಡಿತ್ತು.ನನ್ನ ಜಮೀನಿನಲ್ಲಿದ್ದು ಕಟ್ಟಡ ಸಂಖ್ಯೆ,ಪರವಾನಿಗೆ ಯಾವುದೂ ಇಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಶೆಡ್ ತೆರವುಗೊಳಿಸುವಂತೆ ಬಾಳ ಗ್ರಾಮ ಪಂಚಾಯತ್‌ನವರು ನನಗೆ ನೋಟೀಸ್ ನೀಡಿದ್ದರು.ಈ ಹಿನ್ನೆಲೆಯಲ್ಲಿ ಶೆಡ್ ತೆರವುಗೊಳಿಸಲಾಗಿದೆ.ತೆರವಿಗೆ ಹೈಕೋರ್ಟ್ ಆರ್ಡರ್ ಇತ್ತು.ಅಲ್ಲದೆ, ಮೆಸ್ಕಾಂಗೆ ಸುಳ್ಳು ದಾಖಲೆಗಳನ್ನು ನೀಡಿ ವಂಚಿಸಿ ಆಕೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರಿಂದ ಮೆಸ್ಕಾಂನವರೇ ಬಂದು ಸಂಪರ್ಕ ಕಡಿತಗೊಳಿಸಿದ್ದಾರೆ.ನನ್ನದೇ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ, 10-15 ವರ್ಷಗಳ ಕಾಲ ಅದನ್ನು ಬೇರೆಯವರಿಗೆ ಬಾಡಿಗೆ ನೀಡಿ ಹಣ ತಿಂದಿದ್ದರೂ ಮಾನವೀಯ ನೆಲೆಯಲ್ಲಿ ಮಹಿಳೆಗೆ 1 ಲಕ್ಷ ರೂ.ಪರಿಹಾರ ನೀಡುವುದಾಗಿ ಹೇಳಿ, ಶೆಡ್ ತೆರವುಗೊಳಿಸಲು ಕೇಳಿಕೊಂಡಿದ್ದೆ.ಆದರೆ ಅದಕ್ಕೆ ಸ್ಪಂದಿಸದೆ ಅಹಂಕಾರದಿಂದ ವರ್ತಿಸಿದ್ದರು.ಕೊನೆಗೆ ಪಂಚಾಯತ್ ನೋಟೀಸ್ ಬಂದ ಬಳಿಕ ಹೈಕೋರ್ಟ್‌ ಗೆ ಹೋಗಿ ತೆರವುಗೊಳಿಸಿದ್ದೇನೆ.ಒಂದು ವೇಳೆ ಅವರ ಜಾಗದಲ್ಲಿದ್ದುದನ್ನು ನಾನು ತೆರವುಗೊಳಿಸಿದ್ದರೆ ಕೋರ್ಟಿಗೆ ಹೋಗಬಹುದಲ್ಲ ಎಂದು ಹೇಳಿದ್ದಾರೆ.

ಟಿವಿ ಚಾನೆಲ್‌ನಲ್ಲಿ ಹೇಳಿರುವಂತೆ ಮಹಿಳೆ ಯೋಧನ ಪತ್ನಿಯಲ್ಲ.ಆದರೂ ಭಾರತೀಯ ಸೇನೆ, ಯೋಧರನ್ನು ಅಪಾರವಾಗಿ ಗೌರವಿಸುವ, ಪ್ರೀತಿಸುವ ನನ್ನ ಮೇಲೆ, ಯೋಧನ ಕುಟುಂಬದ ಮೇಲೆ ಅಟ್ಟಹಾಸ ಎಂಬಿತ್ಯಾದಿಯಾಗಿ ದುರುದ್ದೇಶಪೂರ್ವಕ ಆಪಾದನೆ ಮಾಡಲಾಗಿದೆ.ಈ ಘಟನೆ ನಡೆದು ತಿಂಗಳುಗಳೇ ಕಳೆದಿದ್ದರೂ ನನ್ನ ಹೆಸರು ಹಾಳು ಮಾಡಲಾಗುತ್ತದೋ ಎಂದು ಈ ರೀತಿಯ ಬೆಳವಣಿಗೆಗಳು ನಡೆದಿರುವುದಾಗಿ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here