ಪುತ್ತೂರು: ಶ್ರಮ ಶಕ್ತಿ, ಗೃಹಿಣಿ ಶಕ್ತಿ, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ವಿದ್ಯಾರ್ಥಿನಿಯರಿಗೆ ಬಸ್ ಉಚಿತ ಬಸ್ ಪಾಸ್, ಕೃಷಿಕರಿಗೆ ರೂ.5 ಲಕ್ಷದ ತನಕ ಬಡ್ಡಿ ರಹಿತ ಸಾಲ, ಶಾಲಾ, ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸ ಘೋಷಣೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.ಈ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉತ್ತಮ ಬಜೆಟ್ ನೀಡಿದ್ದಾರೆ. ಇದು ಜನಸಾಮಾನ್ಯರ ಮತ್ತು ಮಹಿಳಾ ಹಾಗು ಮಕ್ಕಳಿಗೆ ನೀಡಿದ ಬಜೆಟ್ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ರಾಜ್ಯ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಗಳ ಸಹಾಯಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ. 25 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 50,೦೦೦ ರೂ.ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ 30,೦೦೦ ರೂ. ಗಳ ಆರ್ಥಿಕ ಭದ್ರತೆಯನ್ನು ಒಂದು ಬಾರಿಗೆ ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು. ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಇಲಾಖೆಯನ್ನು ವಿಭಜಿಸಿ, ಪ್ರತ್ಯೇಕ ಇಲಾಖೆ ರೂಪಿಸಲು ನಿರ್ಧರಿಸಲಾಗಿದೆ. ಸಾಲ ಸೌಲಭ್ಯವನ್ನು ಹೆಚ್ಚಿಸುವ ಯೋಜನೆ, ಉಚಿತ ಬಸ್ ಪಾಸ್ ಯೋಜನೆ, 45೦೦೦ ಹೊಸ ಶಿಶುವಿಹಾರ ಕೇಂದ್ರಗಳ ಸ್ಥಾಪನೆ, ಅಂಗನವಾಡಿ ಸಹಾಯಕಿ, ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಹಾಗೂ ಆರೋಗ್ಯ ವೆಚ್ಚ ಭರಿಸಲು 50ಸಾವಿರ ರೂಪಾಯಿ ಅನುದಾನ ಘೋಷಿಸಲಾಗಿದೆ. ಗೃಹಿಣಿಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ ಪ್ರಾರಂಭಿಸಲು ಅನುವಾಗುವಂತೆ, ಈ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು. ಬಾಲಕಿಯರು ಮತ್ತು ಮಹಿಳೆಯರಿಗೆ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ‘ಆರೋಗ್ಯ ಪುಷ್ಟಿ’ ಯೋಜನೆ, ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಥಿನಿಯರಿಗೆ ‘ವಿದ್ಯಾವಾಹಿನಿ’ ಎಂಬ ಯೋಜನೆಯಡಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ನಿರ್ಧರಿಸಲಾಗಿದೆ.ರೈತರಿಗಾಗಿ ಭೂ ಸಿರಿ ಎಂಬ ನೂತನ ಯೋಜನೆಯಡಿಯಲ್ಲಿ ರೂ.10 ಸಾವಿರ ಹೆಚ್ಚುವರಿ ಸಹಾಯಧನ ನೀಡಿಕೆ, ಸಹಸ್ರ ಸರೋವರ ಯೋಜನೆಯಡಿ ರಾಜ್ಯದ 1 ಸಾವಿರ ಸಣ್ಣ ಸರೋವರಗಳನ್ನು ಅಭಿವೃದ್ಧಿ ಪಡಿಸುವುದು, ರೈತ ಸಿರಿ ಯೋಜನೆಯಲ್ಲಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರ್ಗೆ ರೂ.10 ಸಾವಿರ ಪ್ರೋತ್ಸಾಹ ಧನ, ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನಾರು ಸಂರಕ್ಷಣೆಗಾಗಿ ಸಹ್ಯಾದ್ರಿ ಸಿರಿ ಯೋಜನೆ, ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಮಕ್ಕಳ ಬಸ್ ಯೋಜನೆ, ಬದುಕುವ ದಾರಿ ಯೋಜನೆಯಡಿ ಯುವಜನರಿಗೆ 3 ತಿಂಗಳು ಐಡಿಐ ತರಬೇತಿ ಹೀಗೆ ಹಲವು ಜನಪರ ಯೋಜನೆಗಳನ್ನು ಹೊಂದಿರುವ ಉತ್ತಮ ಬಜೆಟ್ ಇದಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.