ರೈತರಿಗೆ ರೂ.5 ಲಕ್ಷ ತನಕ ಬಡ್ಡಿ ರಹಿತ ಸಾಲ, ಸರಕಾರಿ ಕಾಲೇಜುಗಳಲ್ಲಿ ಪೂರ್ಣ ಶುಲ್ಕ ವಿನಾಯಿತಿ ; ಬಜೆಟ್‌ನಲ್ಲಿ ಘೋಷಿಸಿದ ಸಿಎಂ ಬೊಮ್ಮಾಯಿ

0

ಬೆಂಗಳೂರು: ‘ರೈತರಿಗೆ ರೂ.5 ಲಕ್ಷ ತನಕ ಬಡ್ಡಿರಹಿತ ಸಾಲ, ಮಹಿಳೆಯರಿಗೆ ಮಾಸಿಕ 500 ರೂ.ನೆರವು ನೀಡುವ ‘ಗೃಹಿಣಿ ಶಕ್ತಿ’, ವಿದ್ಯಾರ್ಥಿನಿಯರು-ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ಪಾಸ್, ಅಸಂಘಟಿತ ವಲಯ ಕಾರ್ಮಿಕರಿಗೆ ‘ಸಿಎಂ ವಿಮೆ’, ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿಯ ‘ಸಿಎಂ ವಿದ್ಯಾಶಕ್ತಿ’, ಟೈಲರ‍್ಸ್, ಟ್ಯಾಕ್ಸಿ, ರಿಕ್ಷಾ ಚಾಲಕರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ,ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ರೂ.1 ಕೋಟಿಯ ವಿಮಾ ಯೋಜನೆ, ಅಸಂಘಟಿತ ಕಾರ್ಮಿಕರಿಗೆ 4ಲಕ್ಷ ರೂಗಳ ವಿಮ ಯೋಜನೆ. 30 ಲಕ್ಷ ಕಾರ್ಮಿಕ ಮಹಿಳೆಯರಿಗೆ ಉಚಿತ ಬಸ್ ಪಾಸ್, ವಿದ್ಯಾವಾಹಿನಿ ಯೋಜನೆಯಡಿ, ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಯೋಜನೆಗಳ ಘೋಷಣೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.

ಜಿಲ್ಲೆಯ ಜನತೆಗೂ ಅನ್ವಯವಾಗುವ ಬಜೆಟ್‌ನ ಪ್ರಮುಖ ಅಂಶಗಳು: ರೈತರಿಗೆ ‘ಭೂ ಸಿರಿ’ ಹೊಸ ಯೋಜನೆ ಘೋಷಿಸಿದ್ದು, ಕೃಷಿಕರಿಗೆ 10 ಸಾವಿರ ರೂ.ಹೆಚ್ಚುವರಿ ಸಹಾಯಧನ. ‘ರೈತ ಸಿರಿ’ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಪ್ರೋತ್ಸಾಹ ಧನ, ‘ವಿದ್ಯಾವಾಹಿನಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ 350 ಕೋಟಿ ರೂ.ವೆಚ್ಚದಲ್ಲಿ ‘ಉಚಿತ ಬಸ್ ಪಾಸ್’ ಸೌಲಭ್ಯ.

ಗೃಹಿಣಿ ಶಕ್ತಿ: ಮಹಿಳೆಯರಿಗೆ ‘ಗೃಹಿಣಿ ಶಕ್ತಿ’ ಯೋಜನೆಯಡಿ ಮಾಸಿಕ 50 ರೂ.ನೆರವು ನೀಡಲು ಒಟ್ಟು 46,278ಕೋಟಿ ರೂ.ಅನುದಾನ ಒದಗಿಸಿದ್ದು, ‘ನಮ್ಮ ನೆಲೆ’ ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ, ‘ಸಹ್ಯಾದ್ರಿ ಸಿರಿ’ ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ‘ಒಂದು ತೋಟ ಒಂದು ಬೆಳೆ’ ಯೋಜನೆಗೆ 10 ಕೋಟಿ ರೂ.ಮೀಸಲು.

ಯುವಜನರಿಗೆ ‘ಬದುಕುವ ದಾರಿ’: ಬದುಕುವ ದಾರಿ ಯೋಜನೆಯಡಿ ಯುವಜನರಿಗೆ 3 ತಿಂಗಳು ಐಟಿಐ ತರಬೇತಿ, ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ‘ಯುವಸ್ನೇಹಿ’ ಯೋಜನೆಯಡಿ ರೂ.2 ಸಾವಿರ ನೆರವು.‘ಮುಖ್ಯಮಂತ್ರಿ ವಿದ್ಯಾ ಶಕ್ತಿ’ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ.

ಅಸಂಘಟಿತ ಕಾರ್ಮಿಕರಿಗೆ ರೂ.4 ಲಕ್ಷದ ವಿಮೆ: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಇ-ಕಾಮರ್ಸ್ ಡೆಲಿವರಿ ಸೇವೆ ನೀಡುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸಲು 4 ಲಕ್ಷ ರೂ.ಗಳ ವಿಮೆ ಘೋಷಿಸಲಾಗಿದೆ. ಕಾರ್ಮಿಕರು ಮರಣ ಹೊಂದಿದಲ್ಲಿ ಎರಡು ಲಕ್ಷ ರೂಪಾಯಿ ಹಾಗೂ ಅಪಘಾತದಲ್ಲಿ ಮರಣ ಹೊಂದಿದರೆ ನಾಲ್ಕು ಲಕ್ಷ ರೂಪಾಯಿ ವಿಮಾ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ವಿಮಾ ಯೋಜನೆ ಆರಂಭಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ಪೂರ್ಣ ಶುಲ್ಕ ವಿನಾಯಿತಿ: ಸರಕಾರಿ ಪದವಿಪೂರ್ವ ಮತ್ತು ಸರಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ.‘ಹಳ್ಳಿ ಮುತ್ತು’ ಯೋಜನೆಯಡಿ ಗ್ರಾಮೀಣ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ, ಸಿಇಟಿ ಮೂಲಕ ಸರಕಾರಿ ಕೋಟಾದಲ್ಲಿ ಆಯ್ಕೆಯಾಗುವ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಲು ಕ್ರಮ.

ಆರೋಗ್ಯ ಸೇವೆಗಳ ಡಿಜಿಟಲೀಕರಣ: ‘ಮನೆ ಮನೆಗೆ ಆರೋಗ್ಯ’ ಕಾರ್ಯಕ್ರಮದಡಿ ಗ್ರಾಮೀಣ ಜನತೆಯ ಸಮಗ್ರ ಆರೋಗ್ಯ ತಪಾಸಣೆ, ಆರೋಗ್ಯ ಸೇವೆಗಳ ಡಿಜಿಟಲೀಕರಣ. ರೋಗಿಗಳ ಆರೋಗ್ಯ ದಾಖಲೆಗಳ ಸುರಕ್ಷಿತ ಕ್ರೋಢೀಕರಣಕ್ಕೆ ಕ್ರಮ.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ: ‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಉಪಧನಕ್ಕಾಗಿ 40 ಕೋಟಿ ರೂ.ಅನುದಾನ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ತಯಾರಕಿಯರು, ಆಶಾ ಕಾರ್ಯಕರ್ತೆಯರ ಗೌರವ ಧನ 1 ಸಾವಿರ ರೂ.ಹೆಚ್ಚಳ.

ಮಕ್ಕಳ ಬಸ್: ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಜಾನಪದ ಹಬ್ಬ ಆಯೋಜನೆ.ಸರಕಾರಿ ಶಾಲೆಗಳಿಗೆ ತೆರಳಲು 100 ಕೋಟಿ ರೂ.ವೆಚ್ಚದಲ್ಲಿ ‘ಮಕ್ಕಳ ಬಸ್’ ಯೋಜನೆ.

ರೈತರ ಜಮೀನುಗಳಲ್ಲಿ ಜಲ ಹೊಂಡ: ‘ಜಲನಿಧಿ’ ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ ‘ಪುಣ್ಯ ಕೋಟಿ ದತ್ತು ಯೋಜನೆ’ ಹಣಕಾಸು ನೆರವು, ‘ಸ್ವಚೇತನ’ ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ ಸೇರಿದಂತೆ ಎಸ್‌ಸಿ-ಎಸ್‌ಟಿ, ಹಿಂ.ವರ್ಗ, ಅಲ್ಪಸಂಖ್ಯಾತರು, ರೈತರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಒತ್ತು.

ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ: ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಹಾಗೂ ಸಹಕಾರ ವಲಯದಲ್ಲಿ ಶೂನ್ಯಬಡ್ಡಿ ದರದಲ್ಲಿ ಸಾಲ ಒದಗಿಸಲು ಕ್ರಮ. ದುಡಿಯುವ ಮಹಿಳೆಯರಿಗಾಗಿ ನಗರ ಪ್ರದೇಶಗಳಲ್ಲಿ 4ಸಾವಿರ ಶಿಶುಪಾಲನಾ ಕೇಂದ್ರ ಮತ್ತು ಗ್ರಾಮೀಣ ಭಾಗದಲ್ಲಿ 500 ಶಿಶು ವಿಹಾರ ಪ್ರಾರಂಭ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20ಲಕ್ಷ ರೂ.ಶೂನ್ಯ ಬಡ್ಡಿ ಸಾಲ: ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ.ನಂತೆ ಶೂನ್ಯಬಡ್ಡಿ ದರದಲ್ಲಿ ಸಾಲ ಪಡೆಯಲು ಬಡ್ಡಿ ಸಹಾಯಧನ,ಅಲ್ಪಸಂಖ್ಯಾತ ಪದವೀಧರ ಮಹಿಳೆಯರ ಉದ್ಯೋಗಾವಕಾಶಕ್ಕೆ ಹಾಗೂ ಸ್ವಂತ ಉದ್ದಿಮೆ ಸ್ಥಾಪಿಸಲು ಐಐಎಂಬಿ ಬೆಂಗಳೂರು ಇಲ್ಲಿ 300 ಅಭ್ಯರ್ಥಿಗಳಿಗೆ 3 ಕೋಟಿ ರೂ.ವೆಚ್ಚದಲ್ಲಿ ಉದ್ಯಮ ಶೀಲತೆ ತರಬೇತಿ.

ಕಾರ್ಮಿಕರಿಗೆ ಉಚಿತ ಬಸ್ ಪಾಸ್: ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 3.8 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ 543 ಕೋಟಿ ರೂ.ಸಹಾಯಧನ, 2 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ.

ರೈತ ವಿದ್ಯಾನಿಧಿ ಯೋಜನೆ: ರೈತರು, ಭೂರಹಿತ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಮತ್ತು ಇತರರ ಮಕ್ಕಳಿಗೆ ಸಹಾಯ ಮಾಡಲು ಕಳೆದ ವರ್ಷ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ರೈತ ವಿದ್ಯಾ ನಿಧಿ ಯೋಜನೆಯನ್ನು ಘೋಷಿಸಿದ್ದ ಬಸವರಾಜ ಬೊಮ್ಮಾಯಿ ಅವರು 141 ಕೋಟಿ ರೂಪಾಯಿ ಅದಕ್ಕೆ ವೆಚ್ಚ ಮಾಡುತ್ತಿದ್ದು,ಬಜೆಟ್‌ನಲ್ಲಿ ಇದೀಗ ದರ್ಜಿಗಳ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ.

ಮುಖ್ಯಮಂತ್ರಿ ವಿದ್ಯಾಶಕ್ತಿ: ಈ ವರ್ಷ, ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯನ್ನು ಘೋಷಿಸಲಾಗಿದ್ದು, ಪ್ರೌಢಶಾಲೆಗಳಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು, ಅವರಿಗೆ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲಾಗುತ್ತದೆ.‘ಹಳ್ಳಿ ಮುತ್ತು’ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಸಿಇಟಿ ಮೂಲಕ ವೃತ್ತಿ ಶಿಕ್ಷಣಕ್ಕೆ ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.

ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್: ‘ಅಮರ್ ಜ್ಯೋತಿ’ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್.

69,೦೦೦ ಬೀದಿ ವ್ಯಾಪಾರಿಗಳಿಗೆ 70 ಕೋಟಿ ರೂ. ಸಾಲ ಮಂಜೂರು. ಬೀದಿ ನಾಯಿಗಳ ದತ್ತು: ಬೀದಿ ನಾಯಿಗಳನ್ನು ದತ್ತು ಪಡೆಯಲು ಅನುಕೂಲವಾಗುವಂತೆ ಆನ್‌ಲೈನ್ ಪೋರ್ಟಲ್ ಸ್ಥಾಪನೆ.ಬೀದಿ ನಾಯಿಗಳ ಶುಶ್ರೂಷೆ ಮತ್ತು ಆರೈಕೆಗಾಗಿ, ಸಾರ್ವಜನಿಕರಿಗೆ ಸಹಾಯ ಮಾಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವುದು.ಈ ಆನ್‌ಲೈನ್ ಪೋರ್ಟಲ್ ಮೂಲಕ, ಪ್ರಾಣಿ ಪ್ರೇಮಿಗಳು ನಾಯಿಗಳನ್ನು ದತ್ತು ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್: ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್.ಶಾಲಾ/ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಉಚಿತ ಬಸ್ ಪಾಸ್ ದೊರೆಯಲಿದೆ.

ಕಾಲೇಜುಗಳಲ್ಲಿ ಯೋಗಾಭ್ಯಾಸ: ಎಲ್ಲೆಡೆ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿದ್ದು, ಉತ್ತಮ ಆರೋಗ್ಯಕ್ಕಾಗಿ ಕಾಲೇಜುಗಳಲ್ಲಿ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಎಲ್ಲ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ಆರಂಭವಾಗಲಿದೆ.

ವನ್ಯಪ್ರಾಣಿಗಳಿಂದ ಪ್ರಾಣ ಹಾನಿಗೆ 15 ಲಕ್ಷ ರೂ.ಪರಿಹಾರ: ವನ್ಯಪ್ರಾಣಿಗಳಿಂದ ಪ್ರಾಣ ಹಾನಿಗೆ ಒಳಗಾದವರಿಗೆ 15 ಲಕ್ಷ ರೂ. ಪರಿಹಾರ.ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ ಸಂಭವಿಸುವ ಪ್ರಾಣಹಾನಿಗೆ ಈಗ ನೀಡಲಾಗುತ್ತಿರುವ 7.50 ಲಕ್ಷ ರೂ. ಪರಿಹಾರವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಗ್ರಾ.ಪಂ.ಗಳಿಗೆ 60 ಲಕ್ಷ ರೂ. ತನಕ ಅನುದಾನ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 60 ಲಕ್ಷ ರೂ.ವರೆಗೆ ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಗ್ರಾಮ ಪಂಚಾಯಿತಿಗೆ 22 ಲಕ್ಷ ರೂ.ನಿಂದ 60 ಲಕ್ಷ ರೂ.ವರೆಗೆ ಅನುದಾನ ನೀಡಲು 780 ಕೋಟಿ ರೂ. ಅನುದಾನ ನೀಡಲಾಗುವುದು.ರಸ್ತೆ ಹಾಗೂ ಮೂಲಸೌಕರ್ಯ ವೃದ್ಧಿಗಾಗಿ ಈ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು.

ಚರ್ಮಗಂಟು ರೋಗ 1 ಕೋಟಿ ಲಸಿಕೆ: ಹೈನುಗಾರಿಕೆ, ಪಶುಸಂಗೋಪನೆಗೆ ಸಂಬಂಧಿಸಿ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳಲ್ಲಿ ಚರ್ಮಗಂಟು ರೋಗ ಬಾರದೇ ಇರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸರ್ಕಾರ ಮುಂದಾಗಿದೆ.ಈ ಸಮಸ್ಯೆಯಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರವಾಗಿ 55 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ರೂ.ವಿಮೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.ಇಷ್ಟೊಂದು ಮೊತ್ತದ ವಿಮಾ ಸೌಲಭ್ಯ ನೀಡುತ್ತಿರುವುದು ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲಾಗಿದೆ ಎಂದು ಸಿಎಂ ಹೇಳಿದ್ದಾರೆ.

‘ನಗು ಮಗು’ ವಾಹನ ಯೋಜನೆ: ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ಸೌಲಭ್ಯ ಒದುಗಿಸುವುದಕ್ಕೆ ‘ನಗು ಮಗು’ ವಾಹನ ಯೋಜನೆ ಜಾರಿಗೆ.

ಗ್ರಾಮೀಣ ಯುವಕರಿಗಾಗಿ ‘ಬದುಕುವ ದಾರಿ’: ‘ಬದುಕುವ ದಾರಿ’ ಎಂಬ ಹೊಸ ಯೋಜನೆ ಜಾರಿ. ಗ್ರಾಮೀಣ ಯುವಕರ ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಈ ಯೋಜನೆ ಸಹಾಯ ಮಾಡುತ್ತದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ ಹತ್ತು ಸಾವಿರ ರೂ.ನಂತೆ ವಿವಿಧ ಚಟುವಟಿಕೆಗೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ.ಈ ಮೂಲಕ ‘ಬದುಕುವ ದಾರಿ’ ಹೊಸ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದರು.

LEAVE A REPLY

Please enter your comment!
Please enter your name here