ಉಪ್ಪಿನಂಗಡಿ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕಾಲಾವಧಿ ಉತ್ಸವ ಮಖೆ ಜಾತ್ರೆ ಸಂಭ್ರಮ

0
ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ನೇತ್ರಾವತಿ-ಕುಮಾರಧಾರ ಉಭಯ ನದಿಗಳ ಸಂಗಮ ಕ್ಷೇತ್ರದ ತಟದಲ್ಲಿ ನೆಲೆ ನಿಂತ ದೇವರಾದ ಶ್ರೀ ಮಹಾತೋಭಾರ ಸಹಸ್ರಲಿಂಗೇಶ್ವರ ಮತ್ತು ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ದಿನಾಂಕ 18-2-2023 ರಿಂದ 24-03-2023ರವರೆಗೆ ಕಾಲಾವಧಿ ಮಖೆ ಜಾತ್ರೆ ಉತ್ಸವಗಳು ನಡೆಯಲಿದೆ. ವೇ.ಮೂ.ಕೆಮ್ಮಿಂಜೆ ನಾಗೇಶ್ ತಂತ್ರಿಗಳ ಹಾಗೂ ಪವಿತ್ರಪಾಣಿ ಕರಾಯ ಶ್ರೀ ವಿಷ್ಣುಮೂರ್ತಿ ಕುದ್ದಣ್ಣಾಯರ ನೇತೃತ್ವದಲ್ಲಿ ನಡೆಯುವ ಈ ಉತ್ಸವದಲ್ಲಿ ಮೂರು ಮಖೆ ಜಾತ್ರೆಗಳ ಪೈಕಿ ಈ ಬಾರಿ ಪ್ರಥಮ ಮಖೆ ಜಾತ್ರೆಯು ಇಂದು ಮಹಾಶಿವರಾತ್ರಿಯಂದು ನಡೆಯಲಿದ್ದು, ಭಕ್ತರು ತಮ್ಮ ಕೈಯ್ಯಾರೆ ನೇತ್ರಾವತಿ ನದಿಯ ಉದ್ಬವ ಲಿಂಗಕ್ಕೆ ಸ್ವಯಂ ಲಿಂಗಾಭಿಷೇಕ ಮಾಡಲಿದ್ದಾರೆ. ಪ್ರಾತ: ಕಾಲದಲ್ಲಿ ತೀರ್ಥಸ್ನಾನ, ಶಿವಪೂಜೆ, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಅನ್ನಸಂತರ್ಪಣೆಯು ಭಕ್ತಾದಿಗಳಿಗೆ ಈ ಸಂದರ್ಭದಲ್ಲಿ ನಡೆಯಲಿದೆ.

ದಿನಾಂಕ 6-3-2023 ರ ಹುಣ್ಣಿಮೆಯಂದು ಎರಡನೇ ಮಖೆ ಕೂಟ ಹಾಗೂ ದಿನಾಂಕ 13-3-2023 ರಂದು ಕೊನೆಯ ಅಷ್ಟಮಿ ಮಖೆ ಕೂಟವು ಜರುಗಲಿದೆ.ಜೊತೆಗೆ ಮಹಾಕಾಳಿ ಅಮ್ಮನವರ ವಾರ್ಷಿಕ ಮೆಚ್ಚಿ ಹಾಗೂ ನೇಮೋತ್ಸವವು ಕೂಡ ಈ ಅವಧಿಯಲ್ಲಿ ನಡೆಯಲಿದೆ. ಸಂಗಮ ಕ್ಷೇತ್ರದಲ್ಲಿ ಮಖೆ ತೀರ್ಥ ಸ್ನಾನ ಮಾಡಿದಲ್ಲಿ ಶನಿ ಗ್ರಹಚಾರ ದೋಷ ನಿವಾರಣೆಯಾಗುವುದು ಹಾಗೂ ಇಲ್ಲಿ ಮಿಂದೆದ್ದರೆ ಕಾಶಿಯಲ್ಲಿ ಮಿಂದ ಫಲವಿದೆ ಎನ್ನುವುದು ಕೂಡ ಇಲ್ಲಿನ ಮತ್ತೊಂದು ವಿಶೇಷತೆ.ಮೂರು ತಾಲೂಕುಗಳ ಸಂಗಮಸ್ಥಳವಾದ ಉಪ್ಪಿನಂಗಡಿ ಮಖೆ ಜಾತ್ರೆಯೆಂದರೆ ಅಲ್ಲಿ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನಸಾಗರವೇ ಸೇರುವುದು ವಾಡಿಕೆ. ಈ ಹಿಂದೆಲ್ಲಾ ಪ್ರತಿ ಜಾತ್ರೆಯಲ್ಲಿ 4-5 ಮೇಳಗಳ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು.ಈ ಬಾರಿ ಕೂಡ ಭಕ್ತಾದಿಗಳಿಗೆ ಮನೋರಂಜನೆಯ ದೃಷ್ಟಿಯಿಂದ ಆಡಳಿತ ಮಂಡಳಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಖಂಡ ಭಜನೆ, ರುದ್ರಪಾರಾಯಣ, ತಾಳಮದ್ದಳೆ, ಆಕರ್ಷಕ ಸುಡುಮದ್ದು ಪ್ರದರ್ಶನ, ಪತಂಜಲಿ ಯೋಗಶಿಕ್ಷಣದ ವತಿಯಿಂದ ಸಾಮೂಹಿಕ ಯೋಗ -ಶಿವನಮಸ್ಕಾರ,ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ, ಸ್ಥಳೀಯ ಯುವಕರಿಂದ ನಾಟಕ ಪ್ರದರ್ಶನ, ದಕ್ಷಿಣ ಕಾಶಿ ಟೀಮ್ ಉಬಾರ್ ತಂಡದಿಂದ ಉಬಾರ್ ಉತ್ಸವ ಕಾರ್ಯಕ್ರಮ ಹಾಗೂ ಸೇವಾ ಚಟುವಟಿಕೆಗಳು,ಭೂ ಕೈಲಾಸ ಕುರಿತಾದ ಹರಿಕಥಾ ಕಾರ್ಯಕ್ರಮವು ಜರುಗಲಿದೆ.

ದೇವಳದ ಆಡಳಿತ ಮಂಡಳಿಯ ಪ್ರಯತ್ನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಪ್ರಾಯೋಜಕತ್ವದಲ್ಲಿ ಒಂದು ವಾರ ಕಾಲ ಸಂಗಮ ಉತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ರಾಜ್ಯದ ಎ ಶ್ರೇಣಿ ದೇವಾಲಯಗಳಲ್ಲೊಂದಾದ ಉಪ್ಪಿನಂಗಡಿ ಸೀಮೆಯ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ರಾಜ್ಯ ಹೊರರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಿರುವುದು ಹಾಗೂ ಧಾರ್ಮಿಕ ಶಿಕ್ಷಣ ಸೇರಿದಂತೆ ನಿರಂತರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವುದು ವಿಶೇಷ. ಪಕ್ಕದಲ್ಲಿ ವೀರ ವೆಂಕಟರಮಣ ಲಕ್ಷ್ಮೀ ದೇವಿ ಹಾಗೂ ವೀರಾಂಜನೆಯ ದೇವಾಲಯ ಹಾಗೂ ಕಡವಿನ ಬಾಗಿಲು ಕಾರಣಿಕದ ಕಲ್ಕುಡ ದೇವಸ್ಥಾನಗಳು ಇವೆಲ್ಲವೂ ಮತ್ತೊಂದು ವಿಶೇಷತೆ.

LEAVE A REPLY

Please enter your comment!
Please enter your name here