ಒಣಕಸದೊಂದಿಗೆ ಹಸಿಕಸವೂ ನಿರ್ವಹಣೆ ಮಾಡುವಂತೆ ಗ್ರಾಮಸ್ಥರ ಆಗ್ರಹ : ನೆಲ್ಯಾಡಿ ಗ್ರಾಮಸಭೆ

0
  • ಅಂಗನವಾಡಿ ಪಕ್ಕ ಟಿಸಿ-ಚರ್ಚೆ:
  • ನೆಲ್ಯಾಡಿ ಶಾಲೆಗೆ ಹೆಚ್ಚುವರಿ ಜಾಗ ಕಾದಿರಿಸಿ:
  • ಸ್ಮಶಾನ ಜಾಗ ಗಡಿಗುರುತಿ ಮಾಡಲು ನಿರ್ಣಯ:
  • ಪಡುಬೆಟ್ಟಿನಲ್ಲೂ ಸ್ಮಶಾನಕ್ಕೆ ಜಾಗ ಕಾದಿರಿಸಿ:
  • ಉಪಯೋಗಕ್ಕಿಲ್ಲದ ಶೌಚಾಲಯ:
  • ನೆಲ್ಯಾಡಿ ಬೇಲು ಎಂಬಲ್ಲಿ ಸೇತುವೆ ನಿರ್ಮಿಸಿ:

ನೆಲ್ಯಾಡಿ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಣಕಸ ಸಂಗ್ರಹದೊಂದಿಗೆ ಹಸಿಕಸ ಸಂಗ್ರಹವೂ ಮಾಡುವಂತೆ ನೆಲ್ಯಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಭೆ ಫೆ.15ರಂದು ಗ್ರಾ.ಪಂ.ಅಧ್ಯಕ್ಷೆ ಚೇತನಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರು ತಾಲೂಕು ವಿಸ್ತರಣಾಧಿಕಾರಿ ರಾಜ್‌ಗೋಪಾಲ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮಸ್ಥ ವರ್ಗೀಸ್ ಮಾದೇರಿ ಮಾತನಾಡಿ, ವರ್ತಕರಿಂದ ಶುಲ್ಕ ಸಂಗ್ರಹ ಮಾಡುತ್ತಿದ್ದರೂ ಪೇಟೆಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ, ಆರೇಳು ಗೋಣಿಚೀಲದಲ್ಲಿ ಕಸ ತುಂಬಿದ್ದರೂ ಅಲ್ಲಿಯೇ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮಂಜುಳ ಎನ್.,ಅವರು ವಾರದಲ್ಲಿ 2 ದಿನ ಒಣಕಸ ಸಂಗ್ರಹ ಮಾಡಲಾಗುತ್ತಿದೆ. ಆದರೆ ಕೆಲವೊಂದು ಹೋಟೆಲ್‌ನವರು ಒಣಕಸದ ಜೊತೆಗೆ ಹಸಿಕಸವೂ ಗೋಣಿಚೀಲಕ್ಕೆ ತುಂಬಿಸುತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ಹಸಿ ಕಸ ವಿಲೇವಾರಿಗೆ ಹೋಟೆಲ್‌ನವರೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಿದರು. ಈ ವೇಳೆ ಮಾತನಾಡಿದ ಗ್ರಾ.ಪಂ.ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ ಅವರು, ಕೇವಲ ಒಣಕಸ ಮಾತ್ರ ಸಂಗ್ರಹಕ್ಕೆ ಪಂಚಾಯತ್‌ನಿಂದ ಸಾವಿರಾರು ರೂ.,ಖರ್ಚು ಮಾಡಲಾಗುತ್ತಿದೆ. ಒಣ ಕಸ ಅಂಗಡಿಯವರೇ ವಿಲೇವಾರಿ ಮಾಡುವುದಿಲ್ಲವೇ ಎಂದರು. ಗ್ರಾಮಸ್ಥ ನಝೀರ್ ಮೊರಂಕಳ ಮಾತನಾಡಿ ಒಣ ಕಸದ ಜೊತೆಗೆ ಹಸಿ ಕಸವನ್ನೂ ವಿಲೇವಾರಿ ಮಾಡಬೇಕೆಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿಯವರು, ವಾಹನ ಖರೀದಿ, ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿರುವುದೇ ಹಸಿ ಕಸ ಸಂಗ್ರಹಕ್ಕೆ. ಕೇವಲ ಪ್ಲಾಸ್ಟಿಕ್ ತಂದು ರಾಶಿ ಹಾಕಲು ಅಲ್ಲ, ಆದ್ದರಿಂದ ಇದರ ಸಮರ್ಪಕ ನಿರ್ವಹಣೆ ಆಗಬೇಕೆಂದರು. ಇದಕ್ಕೆ ಉತ್ತರಿಸಿದ ಪಿಡಿಒ ಮಂಜುಳ ಅವರು, ಹಸಿ ಕಸ ಸಂಗ್ರಹ ಮಾಡಿದಲ್ಲಿ ಅದನ್ನು ಬೇರ್ಪಡಿಸಬೇಕಾಗುತ್ತದೆ. ಇದಕ್ಕೆ ಇನ್ನಷ್ಟೂ ಖರ್ಚು ಆಗುತ್ತದೆ. ಅಲ್ಲದೇ ತಾಲೂಕು ಹಂತದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣದ ಹಂತದಲ್ಲಿದೆ. ಇದಕ್ಕೆ ಗ್ರಾಮ ಪಂಚಾಯತ್‌ನಿಂದಲೂ ದೇಣಿಗೆ ನೀಡಲಾಗಿದೆ. ಇದು ಅನುಷ್ಠಾನಕ್ಕೆ ಬಂದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಅವರು ಮಾತನಾಡಿ, ಮಾರ್ಚ್ ಬಳಿಕ ಘನತ್ಯಾಜ್ಯ ಘಟಕದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಸಂಜೀವಿನಿ ಒಕ್ಕೂಟದವರೇ ಮಾಡುತ್ತಾರೆ. ಗ್ರಾಮ ಪಂಚಾಯತ್‌ಗೆ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು.

ಅಂಗನವಾಡಿ ಪಕ್ಕ ಟಿಸಿ-ಚರ್ಚೆ:
ನೆಲ್ಯಾಡಿ ಜೇಸಿ ಅಂಗನವಾಡಿ ಕೇಂದ್ರದ ಸಮೀಪದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ‍್ಮರ್ ಅಳವಡಿಸಿದ್ದಾರೆ. ಇದರಿಂದ ಮುಂದೆ ಸಮಸ್ಯೆಯಾಗಲಿದೆ. ಇದರ ಸ್ಥಳ ಬದಲಾವಣೆಗೆ ಈಗಾಗಲೇ ಮನವಿ ಮಾಡಲಾಗಿದೆ. ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಪ್ರಶ್ನಿಸಿದರು. ಈ ವಿಚಾರ ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದಿದ್ದು ಸೂಕ್ತ ಕ್ರಮಕ್ಕೆ ಜೆಇಯವರಿಗೆ ಪತ್ರ ಬರೆಯಲಾಗಿದೆ ಎಂದು ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಇ ರಮೇಶ್ ಅವರು, ಇಲ್ಲಿ ಖಾಸಗಿ ವ್ಯಕ್ತಿ ಅವರ ಜಾಗದಲ್ಲಿ ಟಿಸಿ ಅಳವಡಿಸಿದ್ದಾರೆ. ಸದ್ರಿ ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಸುರಕ್ಷತೆ ಕಾಯ್ದುಕೊಂಡೇ ಟಿಸಿ ಅಳವಡಿಸಲಾಗಿದೆ ಎಂದರು. ಗ್ರಾಮಸ್ಥರಾದ ನಝೀರ್ ಮೊರಂಕಳ, ಗಣೇಶ್ ಪೂಜಾರಿ, ವರ್ಗೀಸ್ ಮಾದೇರಿ, ಕೆ.ಪಿ.ಆನಂದ ಪಡುಬೆಟ್ಟು ಹಾಗೂ ಇತರರು ಪ್ರತಿಕ್ರಿಯಿಸಿ ಅಲ್ಲಿ ಸಿಡಿಲು ಬಡಿದು ತೊಂದರೆಯಾದಲ್ಲಿ ಯಾರು ಹೊಣೆ ಎಂದರು. ಸಿಡಿಲಿನಿಂದ ತೊಂದರೆಯಾಗದಂತೆ ಅರ್ಥಿಂಗ್ ಸಹ ಮಾಡಲಾಗಿದೆ ಎಂದು ರಮೇಶ್ ಅವರು ಹೇಳಿದರು. ಟಿಸಿಯು ಸ್ವಲ್ಪ ಎತ್ತರದಲ್ಲೇ ಇದೆ. ಟಿಸಿ ಸುತ್ತಲೂ ಸುರಕ್ಷತಾ ಬೇಲಿ ಹಾಕಲು ಸೂಚನೆ ನೀಡುವುದಾಗಿ ಹೇಳಿದರು. ಸದ್ರಿ ಟಿಸಿ ಸರಕಾರಿ ಅಥವಾ ಖಾಸಗಿಯವರ ಪಟ್ಟಾ ಜಾಗದಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ನಝೀರ್ ಮೊರಂಕಳ ಹೇಳಿದರು. ಕೊಲ್ಯೊಟ್ಟು ಎಂಬಲ್ಲಿ ಮೋರಿ ಪಕ್ಕವೇ ಅಳವಡಿಸಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕೆಂದು ವರ್ಗೀಸ್ ಮಾದೇರಿ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ನೆಲ್ಯಾಡಿ ಶಾಲೆಗೆ ಹೆಚ್ಚುವರಿ ಜಾಗ ಕಾದಿರಿಸಿ:
ನೆಲ್ಯಾಡಿ ಸರಕಾರಿ ಶಾಲೆಗೆ ಗ್ರಾಮ ಪಂಚಾಯತ್‌ನಿಂದ ಹೆಚ್ಚುವರಿ ಜಾಗ ನೀಡಬೇಕೆಂದು ಗ್ರಾಮಸ್ಥರಾದ ನಝೀರ್, ರಫೀಕ್ ಪ್ರಿಯದರ್ಶಿನಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಆನಂದ ಗೌಡ ಪಿಲವೂರು ಅವರು, ನೆಲ್ಯಾಡಿ ಗ್ರಾಮ ಪಂಚಾಯತ್‌ನ ಜಾಗದಲ್ಲಿ ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘ, ಮೆಸ್ಕಾಂ, ರಬ್ಬರ್ ಸೊಸೈಟಿಗೆ ನೀಡಲಾಗಿದೆ. ಈಗ ಮತ್ತೆ ಜಾಗ ನೀಡುವುದಕ್ಕೆ ಸಾರ್ವಜನಿಕರಿಂದಲೂ ಆಕ್ಷೇಪವಿದೆ ಎಂದರು. ಪಿಡಿಒ ಮಂಜುಳ ಅವರು ಮಾತನಾಡಿ, ರಾಜ್ಯ ಹೆದ್ದಾರಿಯೂ ಹಾದು ಹೋಗುವುದರಿಂದ ಪಂಚಾಯತ್‌ನ ಜಾಗವೂ ಹೋಗುವ ಸಂಭವ ಇದೆ. ಎಷ್ಟು ಜಾಗ ಉಳಿಕೆ ಆಗುತ್ತದೆ ಎಂಬುದನ್ನು ತಿಳಿದು ಮುಂದೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಆದರೂ ಗ್ರಾಮಸ್ಥರ ಮನವಿಯಂತೆ ನೆಲ್ಯಾಡಿ ಶಾಲೆಗೆ ಹೆಚ್ಚುವರಿ ಜಮೀನು ಕಾದಿರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ನೆಲ್ಯಾಡಿ ಶಾಲೆಯ ಮುಂಭಾಗ, ಮೈದಾನಕ್ಕೆ ಸೋಲಾರ್ ದೀಪ ಅಳವಡಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಸರಕಾರಿ ಶಾಲೆಗಳಲ್ಲಿ ತರಗತಿಗೊಬ್ಬರಂತೆ ಶಿಕ್ಷಕರ ನೇಮಕ ಆಗಬೇಕೆಂದು ವಾಸುದೇವ ಗೌಡ ಆಗ್ರಹಿಸಿದರು.

ಸ್ಮಶಾನ ಜಾಗ ಗಡಿಗುರುತಿ ಮಾಡಲು ನಿರ್ಣಯ:
ನೆಲ್ಯಾಡಿ ಹಾಗೂ ಪೊಸೊಳಿಗೆಯಲ್ಲಿ ಸ್ಮಶಾನಕ್ಕೆ ಕಾದಿರಿಸಿರುವ ಜಾಗ ಅತಿಕ್ರಮಣಗೊಂಡಿದೆ ಎಂದು ಉಮೇಶ್ ಪೂಜಾರಿ ಪೊಸೊಳಿಗೆ ಹೇಳಿದರು. ಕಂದಾಯ ಇಲಾಖೆಯ ಜೊತೆಗೆ ಸ್ಥಳಕ್ಕೆ ತೆರಳಿ ಸದ್ರಿ ಜಾಗದ ಪರಿಶೀಲನೆ ನಡೆಸಲಾಗಿದೆ. ಒತ್ತುವರಿ ಆಗಿಲ್ಲ ಎಂದು ಕಂದಾಯ ಇಲಾಖೆಯವರು ತಿಳಿಸಿದ್ದಾರೆ ಎಂದು ಪಿಡಿಒ ಮಂಜುಳ ಎನ್. ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಸ್ಮಶಾನಕ್ಕೆ ಕಾದಿರಿಸಿದ ಜಾಗದ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ತುರ್ತಾಗಿ ತೆರವುಗೊಳಿಸುವುದು ಹಾಗೂ ಸ್ಮಶಾನದ ಗಡಿ ಗುರುತು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಪಡುಬೆಟ್ಟಿನಲ್ಲೂ ಸ್ಮಶಾನಕ್ಕೆ ಜಾಗ ಕಾದಿರಿಸಿ:
ಪಡುಬೆಟ್ಟು ಎಂಬಲ್ಲಿ ಸ್ಮಶಾನಕ್ಕೆ ಜಮೀನು ಕಾದಿರಿಸುವಂತೆ ಕೆ.ಪಿ.ಆನಂದ ಒತ್ತಾಯಿಸಿದರು. ಈ ಬಗ್ಗೆ ಕಂದಾಯ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಕಲ್ಲಚಡವು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಮೂರು ಮನೆಗಳಿಗೆ ದಾರಿ ವ್ಯವಸ್ಥೆ ಇಲ್ಲ. ಅವರಿಗೆ ದಾರಿ ವ್ಯವಸ್ಥೆ ಮಾಡಿಕೊಡಬೇಕೆಂದು ಕೆ.ಪಿ.ಆನಂದ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಉಪಯೋಗಕ್ಕಿಲ್ಲದ ಶೌಚಾಲಯ:
ನೆಲ್ಯಾಡಿ ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯ ಬಳಕೆ ಆಗುತ್ತಿಲ್ಲ. ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ ಎಂದು ಗ್ರಾಮಸ್ಥ ರಫೀಕ್ ಲೇವಡಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರವಿಪ್ರಸಾದ್ ಶೆಟ್ಟಿಯವರು ತ್ಯಾಜ್ಯಗಳನ್ನು ತಂದು ಶೌಚಾಲಯಕ್ಕೆ ಹಾಕುತ್ತಿದ್ದಾರೆ. ಮರದ ಎಲೆಗಳೂ ಶೌಚಾಲಯದ ಒಳಕ್ಕೆ ಬಿದ್ದು ಬ್ಲಾಕ್ ಆಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದರು. ಇದನ್ನು ಸಾರ್ವಜನಿಕರ ಬಳಕೆಗೆ ಉಪಯೋಗ ಆಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ನೆಲ್ಯಾಡಿ ಬೇಲು ಎಂಬಲ್ಲಿ ಸೇತುವೆ ನಿರ್ಮಿಸಿ:
ನೆಲ್ಯಾಡಿ ಪೇಟೆಯಿಂದ ಪಡುಬೆಟ್ಟುಗೆ ಸಂಪರ್ಕಿಸುವ ರಸ್ತೆಯ ನೆಲ್ಯಾಡಿ ಬೈಲು ಎಂಬಲ್ಲಿರುವ ಕಿರುಸೇತುವೆ ಸಂಪೂರ್ಣ ಕೆಟ್ಟುಹೋಗಿದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರಾದ ರಫೀಕ್ ಪ್ರಿಯದರ್ಶಿನಿ, ನಝೀರ್ ಮೊರಂಕಳ ಮತ್ತಿತರರು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಇಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರವಿಪ್ರಸಾದ್ ಅವರು, ನೆಲ್ಯಾಡಿ ಬೈಲು ಎಂಬಲ್ಲಿ ಕಿರು ಸೇತುವೆ ನಿರ್ಮಾಣ ವಿಚಾರವನ್ನು ಶಾಸಕರ ಗಮನಕ್ಕೆ ತರಲಾಗಿದೆ. ಮಾರ್ಚ್ ವೇಳೆಗೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಲಿದೆ ಎಂದು ಹೇಳಿದರು.

5 ಸಲ ಹೆದ್ದಾರಿಯಲ್ಲಿ ನೀರು ಹಾಕಿ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ಪೇಟೆಯಲ್ಲಿ ಧೂಳಿನ ಸಮಸ್ಯೆ ವಿಪರೀತ ಆಗಿದೆ. ನೆಲ್ಯಾಡಿ ಶಾಲೆಯೊಳಗೆ ಧೂಳು ಆವರಿಸಿಕೊಂಡು ಮಕ್ಕಳಿಗೆ ಆರೋಗ್ಯ ಕೆಡುತ್ತಿದೆ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಶಾಲೆಯ ಬಳಿ ದಿನದಲ್ಲಿ ಕನಿಷ್ಠ 5 ಸಲ ನೀರು ಹಾಕಿ ಧೂಳಿನಿಂದ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರಿಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಇತರೇ ಬೇಡಿಕೆಗಳು:
ನೆಲ್ಲಿತಿರ್ಥದಲ್ಲಿರುವ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿಗೃಹದಲ್ಲಿ ಪುರುಷ ವಾರ್ಡನ್ ಇದ್ದು ಅವರಿಂದ ಪೋಷಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಮಾರ್ಗದರ್ಶಿ ಅಧಿಕಾರಿಯ ಗಮನಕ್ಕೆ ತರಲಾಯಿತು. ಕದ್ರಿಯಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಆಗಿರುವ ಸಮಸ್ಯೆ ಬಗ್ಗೆಯೂ ಪೋಷಕರು ಮಾರ್ಗದರ್ಶಿ ಅಧಿಕಾರಿಯವರ ಗಮನಕ್ಕೆ ತಂದರು. ಈ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಯೂ ಆಗಿದ್ದ ಸಭೆಯ ಮಾರ್ಗದರ್ಶಿ ಅಧಿಕಾರಿ ರಾಜ್‌ಗೋಪಾಲ್ ಅವರು ಭರವಸೆ ನೀಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲ್ಯಾಬ್ ಟೆಕ್ನಿಷಿಯನ್ ನೇಮಕ, ಪಡುಬೆಟ್ಟು ಎಂಬಲ್ಲಿ ಆನೆ ಸಂಚಾರ ಜಾಗದಲ್ಲಿ ದಾರಿದೀಪ ಅಳವಡಿಕೆ, ಗಾಂಧಿಮೈದಾನದ ಗಡಿ ಗುರುತು ಮಾಡುವಂತೆ ಗ್ರಾಮಸ್ಥರ ಮನವಿ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು. ಇತರೇ ಹಲವು ಅಭಿವೃದ್ಧಿ ಪರ ವಿಚಾರಗಳು ಸಭೆಯಲ್ಲಿ ಪ್ರಸ್ತಾಪಗೊಂಡಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಮೆಸ್ಕಾಂ ಜೆಇ ರಮೇಶ್, ಕೃಷಿ ಅಧಿಕಾರಿ ಸಾಯಿನಾಥ್, ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಸಿಆರ್‌ಪಿ ಪ್ರಕಾಶ್ ಬಾಕಿಲ, ಗ್ರಾಮಕರಣಿಕರಾದ ಲಾವಣ್ಯ ಅವರು ಇಲಾಖೆಯ ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಆನಂದ ಗೌಡ ಪಿಲವೂರು, ಶ್ರೀಲತಾ ಸಿ.ಹೆಚ್., ರೇಷ್ಮಾಶಶಿ, ಯಾಕೂಬ್ ಯಾನೆ ಸಲಾಂ ಪಡುಬೆಟ್ಟು, ಜಯಲಕ್ಷ್ಮೀಪ್ರಸಾದ್, ಪುಷ್ಪಾ ಪಡುಬೆಟ್ಟು, ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಕೆ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು.

ಗಂಗಾಧರ ಶೆಟ್ಟಿ ಅವರಿಗೆ ಸನ್ಮಾನ:
ಸಮಾಜ ಸೇವೆಗಾಗಿ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೆಲ್ಯಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಅವರನ್ನು ಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಗಂಗಾಧರ ಶೆಟ್ಟಿಯವರು ಕೃತಜ್ಞತೆ ಸೂಚಿಸಿ ಮಾತನಾಡಿ, ಗ್ರಾಮಸ್ಥರು, ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯ ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎಂದರು.

ನಿವೇಶನ ಹಕ್ಕುಪತ್ರ ವಿತರಣೆ:
ನೆಲ್ಯಾಡಿಯಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಸಭೆಯಲ್ಲಿ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here