ವಿಟ್ಲ: ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತದ ಬಗ್ಗೆ ಪ್ರವಚನ ಆರೋಪ : ಹಿಂದೂ ಮುಖಂಡರಿಂದ ಠಾಣೆಗೆ ಭೇಟಿ – ಕಾರಣಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ

0

ಕಾರ್ಯಕ್ರಮ ದಲ್ಲಿ ದುರುದ್ದೇಶವಿಲ್ಲ:

ಘಟನೆಗೆ ಸಂಬಂಧಿಸಿ ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯೆ ನೀಡಿ ಇಲ್ಲಿ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು ವಿನಃ ಈ ಒಂದು ಕಾರ್ಯಕ್ರಮದಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಟ್ಲ: ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತದ ಬಗ್ಗೆ ಪ್ರವಚನ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಹಿಂದೂ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರಕ್ಕೆ ಕಳುಹಿಸಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಮುಖಂಡರು ವಿಟ್ಲ ಪೊಲೀಸ್ ಠಾಣೆಗೆ ರಾತ್ರಿ ಭೇಟಿ ನೀಡಿ ಮನವಿ ಮಾಡಿದ ಘಟನೆ ನಡೆಯಿತು.

ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಷನ್ (NIA) ವತಿಯಿಂದ ಅಡ್ಯನಡ್ಕದಲ್ಲಿ ಶೈಕ್ಷಣಿಕ ಕಾರ್ಯಾಗಾರ ನಡೆದಿತ್ತು. ಇದಕ್ಕೆ ಅಡ್ಯನಡ್ಕ ಜನತಾ ಹೈಸ್ಕೂಲ್ ನ ವಿದ್ಯಾರ್ಥಿಗಳನ್ನು ತೆರಳುವಂತೆ ಶಾಲಾ ಪ್ರಾಂಶುಪಾಲ ರುದ್ರಪ್ಪ ನಾಯ್ಕ ತಿಳಿಸಿದ್ದರು. ಪ್ರಾಂಶುಪಾಲರ ನಿರ್ದೇಶನದಂತೆ ಅಲ್ಲಿಗೆ ತೆರಳಿದ ವಿದ್ಯಾರ್ಥಿಗಳಿಗೆ ಅಲ್ಲಿ ಇಸ್ಲಾಂ ಮತದ ಬಗ್ಗೆ ಮತ ಪ್ರವಚನ ಮಾಡಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಹಿಂದೂ ಜಾಗರಣ ವೇದಿಕೆಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಹಿಂದೂ ಮುಖಂಡರಿಂದ ಠಾಣೆಗೆ ಭೇಟಿ:

ವಿದ್ಯಾರ್ಥಿಗಳನ್ನು ಮಾಹಿತಿ ಕಾರ್ಯಾಗಾರಕ್ಕೆ ಕಳುಹಿಸಿ ಮಕ್ಕಳ ಹಾದಿ ತಪ್ಪಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಠಾಣೆಗೆ ಆಗಮಿಸಿದ ಬಿಜೆಪಿ ಹಾಗೂ ಹಿಂದೂ ಮುಖಂಡರು ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್‌ರವರಿಗೆ ಮನವಿ ಮಾಡಿದ್ದಾರೆ.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಟ್ಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ದಯಾನಂದ ಉಜಿರೆಮಾರ್, ಶ್ರೀಕೃಷ್ಣ ವಿಟ್ಲ, ಅಕ್ಷಯ್ ರಜಪೂತ್, ಗಣೇಶ್ ಅಡ್ಯನಡ್ಕ, ಹರಿಪ್ರಸಾದ್ ಯಾದವ್, ಕೇಪು ಗ್ರಾಮಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಮಾಜಿ ಅಧ್ಯಕ್ಷ ತಾರಾನಾಥ್ ಆಳ್ವ, ಪುರುಷೋತ್ತಮ ಕಲ್ಲಂಗಳ, ಉಪಾಧ್ಯಕ್ಷ ರಾಘವ ಮಣಿಯಾಣಿ ಸೇರಿದಂತೆ ಹಲವು ಕಾರ್ಯಕರ್ತರು ಠಾಣೆಗೆ ತೆರಳಿ ಪೊಲೀಸರೊಂದಿಗೆ ಮಾತಕತೆ ನಡೆಸಿರು.

ಠಾಣೆಯ ಮುಂಭಾಗದಲ್ಲಿ ಕಾರ್ಯಕರ್ತರ ಜಮಾವಣೆ:

ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆಯ ಮುಂಭಾಗ ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದು ಈ ವೇಳೆ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರುರವರು ಆಗಮಿಸದ ಹಿನ್ನೆಲೆಯಲ್ಲಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಿಲ್ಲಾಽಕಾರಿಯವರ ಬಳಿ ಮಾತನಾಡುವುದಾಗಿ ತಿಳಿಸಿರುವುದಾಗಿ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here