ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

0

ಮಹಾರುದ್ರಯಾಗ ಶತರುದ್ರಾಭಿಷೇಕ ಏಕ ಬಿಲ್ವಂ ಶಿವಾರ್ಪಣಂ ಸೇವೆ ಸಾಂಸ್ಕೃತಿಕ ಕಾರ್ಯಕ್ರಮ ಭಜನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಫೆ.೧೮ರಂದು ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ದೇವಳದ ಸೋಪಾನ ಗೋಪುರದ ಬಳಿ ಮಹಾರುದ್ರಯಾಗ, ಒಳಾಂಗಣದಲ್ಲಿ ಏಕ ಬಿಲ್ವಂ ಶಿವಾರ್ಪಣಂ ಸೇವೆ, ಪಂಚಾಕ್ಷರಿ ಮಂಟಪದಲ್ಲಿ ಶಿವಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮ, ಧ್ಯಾನರೂಢ ಶಿವನ ಪ್ರತಿಮೆ ಬಳಿ ಭಜನಾ ಕಾರ್ಯಕ್ರಮ ಸೇರಿದಂತೆ ದೇವಳದ ಪರಿಸರದಲ್ಲಿ ಶಿವನ ಆರಾಧನೆಯು ವಿವಿಧ ರೀತಿಯಲ್ಲಿ ನಡೆಯಿತು. ದೇವಳದ ಒಳ ಮತ್ತು ಹೊರಾಂಗಣದಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಬಂದು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾದರು. ಮಹಾಶಿವರಾತ್ರಿ ಉತ್ಸವಕ್ಕೆ ವಿಶೇಷವಾಗಿ ಬೆಳಿಗ್ಗೆ ವೇದ ಸಂವರ್ಧನಾ ಪ್ರತಿಷ್ಠಾನದಿಂದ ಮಹಾರುದ್ರಯಾಗ ನಡೆಯಿತು. ಸುಮಾರು ೧೨೧ ಮಂದಿ ಋತ್ವಿಜರು ರುದ್ರಪಠಣ ಮಾಡಿದರು. ಹೋಮ ಸೇವೆ ಮಾಡಿಸಿದ ಭಕ್ತರಿಗೆ ಪ್ರತ್ಯೇಕ ಸಂಕಲ್ಪ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ದೇವರಿಗೆ ಶತರುದ್ರಾಭಿಷೇಕ ಮತ್ತು ದೇವಳದ ಒಳಾಂಗಣದಲ್ಲಿ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಿತು. ಭಕ್ತರು ತಾವೇ ಸ್ವತಃ ಬಿಲ್ವಾರ್ಚಣೆ ಮಾಡಿದರು. ದೇವಳದ ಗದ್ದೆಯಲ್ಲಿರುವ ಧ್ಯಾನರೂಢ ಶಿವನ ಮೂರ್ತಿಯ ಮಂಭಾಗದಲ್ಲಿ ಮುಂಜಾನೆಯಿಂದಲೇ ಭಜನೆ, ಕುಣಿತ ಭಜನೆ ಆರಂಭಗೊಂಡಿದ್ದು ಫೆ.೧೯ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ಸಂಪನ್ನಗೊಳ್ಳಲಿದೆ. ದೇವಾಲಯದ ಪಂಚಾಕ್ಷರಿ ಮಂಟಪದಲ್ಲಿ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಹರಿಕಥೆ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ೨ ಗಂಟೆಯಿಂದ ಪಂಚಾಕ್ಷರಿ ಮಂಟಪದಲ್ಲಿ ಪುತ್ತೂರಿನ ವಿವಿಧ ಸಂಗೀತ ಕಲಾ ಶಾಲೆಗಳ ಗುರುಗಳ ನೇತೃತ್ವದಲ್ಲಿ ಸಂಗೀತೋತ್ಸವ, ಸಂಜೆ ಗಂಟೆ ೫ ರಿಂದ ವಿವಿಧ ನೃತ್ಯ ಕಲಾಶಾಲೆಗಳ ಗುರುಗಳ ನೇತೃತ್ವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:

ಪಂಚಾಕ್ಷರಿ ಮಂಟಪದಲ್ಲಿ ಶಿವಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಐತ್ತಪ್ಪ ನಾಯ್ಕ್ ಅವರು ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಕೇಶವ ಪ್ರಸಾದ್, ಶಿವಾರ್ಪಣಂ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಸುರೇಶ್ ಶೆಟ್ಟಿ, ರಾಜೇಶ್ ಬನ್ನೂರು, ಡಾ.ರಾಜೇಶ್ ಬೆಜ್ಜಂಗಳ, ಸುಬ್ಬಪ್ಪ ಕೈಕಂಬ, ಮೌನೇಶ್ ವಿಶ್ವಕರ್ಮ ಮೊದಲಾದವರು ಉಪಸ್ಥಿತರಿದ್ದರು.


ಭಜನಾ ಕಾರ್ಯಕ್ರಮ ಉದ್ಘಾಟನೆ:

ಧ್ಯಾನ ರೂಢ ಶಿವನ ಮೂರ್ತಿಯ ಬಳಿ ಭಜನಾ ಕಾರ್ಯಕ್ರಮವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಬಿ.ಕೆ.ವೀಣಾ, ರವೀಂದ್ರನಾಥ ರೈ ಬಳ್ಳಮಜಲು, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಗೋಪಾಲಕೃಷ್ಣ, ರಾಜೇಶ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಸೋಮತೀರ್ಥದಿಂದ ಭಕ್ತರಿಗೆ ತೀರ್ಥ:

ಶ್ರೀ ದೇವರಿಗೆ ಶತರುದ್ರಾಭಿಷೇಕ ಮಾಡಿದ ತೀರ್ಥವನ್ನು ಸೋಮಸೂತ್ರದಿಂದ ಭಕ್ತರು ತೀರ್ಥ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ತೀರ್ಥ ಸ್ವೀಕರಿಸುತ್ತಿರುವುದು ಕಂಡು ಬಂತು.


ಏಕ ಬಿಲ್ವಾರ್ಚನೆ:

ದೇವಳದ ಒಳಾಂಗಣದಲ್ಲಿ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಿತು. ಶ್ರೀ ದೇವರ ಪೊಟೋದ ಎದುರು ಭಕ್ತರು ಬಿಲ್ವಾರ್ಚನೆ ಮಾಡಿದರು. ಅರ್ಚನೆಗೊಂಡ ಬಿಲ್ವಪತ್ರೆಗಳನ್ನು ಅರ್ಚಕರು ಗರ್ಭಗುಡಿಯಲ್ಲಿ ಶ್ರೀ ದೇವರಿಗೆ ಅರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಸಹಿತ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶಿಲ್ಪಶಾಸ್ತ್ರದ ಪ್ರಕಾರ ಯಾಗಶಾಲೆ

ದೇವಳದ ಹೊರಾಂಗಣದ ಸೋಪಾನಮಂಟಪದ ಬಳಿ ಮಹಾರುದ್ರಯಾಗ ಶಾಲೆಗೆ ಶಿಲ್ಪಶಾಸ್ತ್ರದ ಪ್ರಕಾರ ಯಾಗ ಕುಂಡ ಮತ್ತು ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಯಾಗ ಶಾಲೆಗೆ ಅಡಿಕೆ ಮರದ ಕಂಬ, ಬಿದಿರನ್ನು ಉಪಯೋಗಿಸಿ ಛಾವಣಿಗೆ ಹಾಳೆ ತಟ್ಟೆಯನ್ನು ಕಲಾತ್ಮಕವಾಗಿ ಜೋಡಿಸಿ ಸುಂದರಗೊಳಿಸಲಾಗಿತ್ತು. ತಾತ್ಕಾಲಿಕ ವ್ಯವಸ್ಥೆಯಾದರೂ ಶಾಸ್ತ್ರದ ಪ್ರಕಾರ ಯಾಗ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು, ರಾತ್ರಿ ಶ್ರೀ ದೇವರ ಉತ್ಸವ ಬಲಿಗೆ ತೊಂದರೆಯಾಗದಂತೆ ಯಾಗ ಪೂರ್ಣಾಹುತಿ ಬಳಿಕ ಸಂಜೆ ಯಾಗ ಶಾಲೆಯನ್ನು ತೆರವು ಮಾಡಲಾಯಿತು. ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ಯಾಗ ಶಾಲೆ ನಿರ್ಮಾಣ ಮಾಡಲಾಗಿತ್ತು.

LEAVE A REPLY

Please enter your comment!
Please enter your name here