ಫೆ.21ರಿಂದ ಕೊರತಿಕಟ್ಟೆ ಮಾಡತ್ತಾರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ನೇಮೋತ್ಸವ

0

ಉಪ್ಪಿನಂಗಡಿ: ಸಂಪೂರ್ಣ ಶಿಥಿಲಾವಸ್ಥೆಗೊಂಡು ಕಾಲಗರ್ಭದಲ್ಲಿ ಸೇರಿ ಹೋಗಿದ್ದ ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರುವಿನ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವಗಳ ಕ್ಷೇತ್ರವು ಪುನರ್‌ನಿರ್ಮಾಣಗೊಂಡಿದ್ದು, ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಫೆ.21ರಿಂದ 23ರವರೆಗೆ ನಡೆಯಲಿದೆ ಎಂದು ದೈವಸ್ಥಾನ ಟ್ರಸ್ಟ್‌ನ ಗೌರವಾಧ್ಯಕ್ಷ ಈಶ್ವರಪ್ರಸನ್ನ ಕೆ. ಪೆರ್ನೆಕೋಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 500 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನದಲ್ಲಿ 200 ವರ್ಷಗಳ ಹಿಂದೆ ದೈವದ ಆರಾಧನೆಗಳು ನಿಂತು ಹೋಗಿದ್ದು, ಕಾಲಾಂತರದಲ್ಲಿ ದೈವಗಳ ಗುಡಿಮಾಡಗಳು, ದೈವಗಳ ಮೊಗ- ಮೂರ್ತಿಯಿರುವ ಚಾವಡಿ ಮನೆಯು ಶಿಥಿಲಗೊಂಡು ದೈವಸ್ಥಾನವು ಕುರುಹೇ ಇಲ್ಲದಂತೆ ಭೂಗರ್ಭದಲ್ಲಿ ಲೀನವಾಗಿ ಹೋಗಿತ್ತು. ಬಳಿಕ ಗ್ರಾಮದಲ್ಲಿ ಅನೇಕ ರೀತಿಯ ದುರ್ನಿಮಿತ್ತಗಳೂ, ಸಾವು- ನೋವುಗಳು ಹಾಗೂ ಕಷ್ಟ- ನಷ್ಟಗಳು ಉಂಟಾಗಿದ್ದವು. ಕೇವಲ ಮೂರು ತಿಂಗಳ ಅವಧಿಯಲ್ಲಿ 13 ನಾಗರಹಾವುಗಳ ಸರಣಿ ದುರ್ಮರಣ ಈ ಪರಿಸರದಲ್ಲಿ ಸಂಭವಿಸಿತ್ತು. ಈ ಬಗ್ಗೆ ಪ್ರಶ್ನಾಚಿಂತನೆ ನಡೆಸಿದಾಗ ಇಲ್ಲಿ ದೈವಗಳ ಸಾನಿಧ್ಯವಿರುವುದು ಹಾಗೂ ದೈವಗಳ ಆರಾಧನೆ ಸ್ಥಗಿತಗೊಂಡಿದ್ದರ ಪರಿಣಾಮ ಈ ರೀತಿಯ ಕಷ್ಟ- ನಷ್ಟಗಳು ಸಂಭವಿಸಿದ ಬಗ್ಗೆ ತಿಳಿದು ಬಂತು.

ಭಂಡಾರದ ಮನೆಯ ಉತ್ಖನನ ಸಮಯದಲ್ಲಿ ಗ್ರಾಮದೈವಗಳ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು ಹಾಗೂ ಕೊರತಿ ದೈವಗಳ ದೈವಾರಾಧನೆಗೆ ಬೇಕಾದ ಪರಿಕರಗಳು ಮಣ್ಣಿನಡಿ ಸಿಕ್ಕಿದವು. ಆದರೆ ಅವೆಲ್ಲಾ ಭಗ್ನಗೊಂಡಿದ್ದು, ಜ್ಯೋತಿಷಿ ಕೆ.ವಿ. ಗಣೇಶ್ ಭಟ್ ಅವರ ಸಲಹೆಯಂತೆ ಮಾಡತ್ತಾರು ಕ್ಷೇತ್ರದ ದೈವಗಳ ಗುಡಿಮಾಡಗಳ ಹಾಗೂ ಭಂಡಾರದ ಮನೆಯ ಪುನರ್‌ನಿರ್ಮಾಣದೊಂದಿಗೆ ಪೂರ್ವೋಕ್ತ ಸಂಪ್ರದಾಯದಂತೆ ದೈವಗಳ ಆರಾಧನೆ ನಡೆಸಿಕೊಂಡು ಬರಲು ಗ್ರಾಮಸ್ಥರು ತೀರ್ಮಾನಿಸಿದ್ದು, ಇದೀಗ 1.25 ಕೋ. ರೂ. ವೆಚ್ಚದಲ್ಲಿ ದೈವಗಳ ಕ್ಷೇತ್ರ ಹಾಗೂ ಭಂಡಾರದ ಮನೆ ಪುನರ್ ನಿರ್ಮಾಣಗೊಂಡಿದ್ದು, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.21ರಿಂದ ಮೂರು ದಿನಗಳ ತನಕ ನಡೆಯಲಿದೆ. ಇಲ್ಲಿ ದೈವಗಳ ಭಂಡಾರ ಬರುವಾಗ ಮುಂದೆ ಬಸವ ಇರಬೇಕಾಗಿದ್ದು, ಈಗಾಗಲೇ ಕ್ಷೇತ್ರಕ್ಕೆ ಭಕ್ತರೋರ್ವರು ಬಸವನನ್ನು ದಾನವಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಫೆ.21ರಂದು ಬೆಳಗ್ಗೆ 7:30ಕ್ಕೆ ಗೊನೆ ಮುಹೂರ್ತ ನಡೆಯಲಿದ್ದು, 9ಕ್ಕೆ ಉಗ್ರಾಣ ಮುಹೂರ್ತ ಹಾಗೂ 10ಕ್ಕೆ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ. 11ಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆ, ಮಧ್ಯಾಹ್ನ 1ಕ್ಕೆ ಪ್ರಸಾದ ಭೋಜನ, ಸಂಜೆ 5:30ಕ್ಕೆ ಕ್ಷೇತ್ರದ ತಂತ್ರಿಗಳು ಮತ್ತು ಋತ್ವಿಜರ ಆಗಮನ, ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಸಂಜೆ ಭಂಡಾರದ ಮನೆ ಅತ್ತೆಜಾಲುವಿನಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಪ್ರಾಸಾದಾದಿ ಬಿಂಬ ಪರಿಗ್ರಹ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳು ನಡೆದು ರಾತ್ರಿ 8:30ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 4ಕ್ಕೆ ಸ್ಥಳೀಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6:30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8ರಿಂದ ಶ್ರೀ ರಾಗ್ ಮ್ಯೂಸಿಕ್ಸ್‌ನವರಿಂದ ‘ನೃತ್ಯ- ಗಾನ- ವೈಭವ’ ನಡೆಯಲಿದೆ.

ಫೆ.22ರಂದು ಬೆಳಗ್ಗೆ 6ರಿಂದ ಅತ್ತೆಜಾಲು ಕ್ಷೇತ್ರದ ಭಂಡಾರದ ಮನೆಯಲ್ಲಿ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆಯಲಿದ್ದು, ಪೂರ್ವಾಹ್ನ 8:22ರ ಮೀನಲಗ್ನದ ಶುಭ ಮುಹೂರ್ತದಲ್ಲಿ ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ, ಗುಳಿಗ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ನಾಗದೇವರಿಗೆ ತಂಬಿಲ ಸೇವೆ, ಅತ್ತೆಜಾಲುವಿನಲ್ಲಿರುವ ಪರಿಚಾರಕರ ಮನೆಯ ಗೃಹ ಪ್ರವೇಶ, ಮಂಗಳಾರತಿ ನಡೆದು ಮಾಡತ್ತಾರು ಕ್ಷೇತ್ರದಲ್ಲಿ ಅನ್ನಪ್ರಸಾದ ವಿತರಣೆಯಾಗಲಿದೆ. ಸಂಜೆಯಿಂದ ರಾತ್ರಿಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 4ಕ್ಕೆ ಶ್ರೀ ಶಾರದಾ ನೃತ್ಯ ಕಲಾಕೇಂದ್ರದವರಿಂದ ‘ನೃತ್ಯ ವೈಭವ’, ಸಂಜೆ 6;30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಕನ್ಯಾಡಿಯ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಸುನೀಲ್ ಕುಮಾರ್, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಮತ್ತಿತರರು ಭಾಗವಹಿಸಲಿದ್ದಾರೆ.

ಫೆ.23ರಂದು ಬೆಳಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆಯಲಿದ್ದು, ಪೂರ್ವಾಹ್ನ 8:24ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿ ಮತ್ತು ಗುಳಿಗ ದೈವಗಳ ಮಂಚ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ನೇಮಸ್ತಿಕ ನಿಯಮಗಳ ನಿರ್ಣಯ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12:30ರಿಂದ ಪ್ರಸಾದ ಭೋಜನ ನಡೆಯಲಿದೆ. ಸಂಜೆ 5:30ಕ್ಕೆ ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರು ದೈವಸ್ಥಾನಕ್ಕೆ ಭಂಡಾರ ಬರುವುದು, ರಾತ್ರಿ 7ಕ್ಕೆ ಮಾಡತ್ತಾರು ಕ್ಷೇತ್ರದಲ್ಲಿ ಎಣ್ಣೆ ಬೂಳ್ಯ, ರಾತ್ರಿ 8ರಿಂದ ಪ್ರಸಾದ ಭೋಜನ, 8:30ರಿಂದ ಸಪರಿವಾರ ದೈವಗಳಿಗೆ ನರ್ತನ ಸೇವೆ, ನೇಮೋತ್ಸವ ನಡೆಯಲಿದೆ. ಬೆಳಗ್ಗೆ 11: 30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಎಸ್. ಅಂಗಾರ, ಶಾಸಕರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಹರೀಶ್ ಪೂಂಜಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ದೈವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನಕೋಡಿ, ಕಾರ್ಯದರ್ಶಿ ಎನ್. ಶಿವಪ್ಪ ನಾಯ್ಕ ಕಾರ್ಲ, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಯಾದವ್ ನಾಗಮೂಲೆ, ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಸಾಲಿಯಾನ್ ಹನುಮಾಜೆ, ಕೋಶಾಧಿಕಾರಿ ಕೃಷ್ಣಕುಮಾರ್ ಪೆರ್ನೆಕೋಡಿ, ಟ್ರಸ್ಟಿಗಳಾದ ದಯಾನಂದ ಪೂಜಾರಿ ಮಾಡತ್ತಾರು, ಆನಂದ ಶೆಟ್ಟಿ ಅತ್ತೆಜಾಲು, ಸೀತಾರಾಮ ನಾಯಕ್ ಪಾಲೆದಕೋಡಿ, ರಮೇಶ ಹನುಮಾಜೆ, ಜಾನಕಿ ಕೊರತಿಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here