“ಈ ಮಹಿಳೆಯರು ನಮ್ಮ ಆಶ್ರಮದವರಲ್ಲ…”
ಉಪ್ಪಿನಂಗಡಿ:ನಕಲಿ ಐಡಿ ಕಾರ್ಡ್ ಬಳಸಿ ಮೈಸೂರಿನ ಆಶ್ರಮದ ಹೆಸರಿನಲ್ಲಿ ಭಿಕ್ಷಾಟನೆ ಪತ್ತೆ
ಉಪ್ಪಿನಂಗಡಿ:ನಕಲಿ ಐಡಿ ಕಾರ್ಡ್ ಬಳಸಿ ಮೈಸೂರಿನ ಆಶ್ರಮದ ಹೆಸರಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ವಿಚಾರಣೆ ನಡೆಸಿದ ವೇಳೆ ಕಾಲ್ಕಿತ್ತ ಘಟನೆ ಇಲ್ಲಿನ ಕೆಮ್ಮಾರದಲ್ಲಿ ನಡೆದಿದೆ.
ಮರಾಠಿ ಭಾಷೆ ಮಾತನಾಡುತ್ತಿದ್ದ ಇಬ್ಬರು ಮಹಿಳೆಯರು ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಕೊಯಿಲ ಅವರ ಮನೆಗೆ ಹೋಗಿ, ಮೈಸೂರಿನ ಆಶ್ರಮವೊಂದಕ್ಕೆ ದಾನವಾಗಿ ಹಣ, ಬಟ್ಟೆಬರೆಗಳನ್ನು ನೀಡುವಂತೆ ಒತ್ತಾಯಿಸಿರುತ್ತಾರೆ. ಈ ವೇಳೆ ಅನುಮಾನ ಬಂದು ಮಹಿಳೆಯರಲ್ಲಿ ಐಡಿ ಕಾರ್ಡ್ ತೋರಿಸುವಂತೆ ಹೇಳಿದಾಗ ಅವರು ಸಮರ್ಪಕ ಉತ್ತರ ನೀಡಲಿಲ್ಲ.
ಬಳಿಕ ಅವರಲ್ಲಿ ಇದ್ದ ಆಶ್ರಮದ ಮಾಹಿತಿಯ ಕರಪತ್ರದಲ್ಲಿ ನಮೂದಿಸಲಾಗಿದ್ದ ಆಶ್ರಮದ ಅಧ್ಯಕ್ಷ ಎಸ್.ಕೆ.ರಮೇಶ್ ಎಂಬವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ‘ಈ ಮಹಿಳೆಯರು ನಮ್ಮ ಆಶ್ರಮದವರು ಅಲ್ಲ’ ಎಂದು ಹೇಳಿ, ಅವರಲ್ಲಿದ್ದ ಕರ ಪತ್ರ ಹಾಗೂ ಅವರು ಬಚ್ಚಿಟ್ಟಿದ್ದ ಐಡಿ ಕಾರ್ಡ್ ಒಂದನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ. ಅವರು ಹೇಳಿದಂತೆ, ಮಹಿಳೆಯರಲ್ಲಿದ್ದ ಐಡಿ ಕಾರ್ಡ್ ಮತ್ತು ಕರಪತ್ರಗಳನ್ನು ಸಾರ್ವಜಿನಿಕರು ವಶಪಡಿಸಿಕೊಂಡ ಬಳಿಕ ಆ ಮಹಿಳೆಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಮೂಲಕ ಇನ್ನಷ್ಟು ಮಂದಿ ಮೋಸಹೋಗುವುದು ತಪ್ಪಿದಂತಾಗಿದೆ ಎಂದು ನಾಗರಿಕರು ಪ್ರತಿಕ್ರಿಯಿಸಿದ್ದಾರೆ.