ಕಡಬ ರೆಂಜಿಲಾಡಿಯಲ್ಲಿ ಬೆಳ್ಳಂಬೆಳಗ್ಗೆ ಗಜಾರ್ಭಟ: ಅಮಾಯಕರಿಬ್ಬರ ದಾರುಣ ಬಲಿ

0

ಅರಣ್ಯ ಇಲಾಖೆಯ ವಿರುದ್ದ ಸಾರ್ವಜನಿಕರ ಆಕ್ರೋಶ
ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ.ಪರಿಹಾರ:
ರಂಜಿತಾ ಸಹೋದರಿಗೆ ಉದ್ಯೋಗ:
ಜಿಲ್ಲಾಧಿಕಾರಿ ಭರವಸೆಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಆನೆ ದಾಳಿಯಿಂದ ಇಬ್ಬರು ಮೃತಪಟ್ಟಿರುವುದು ದುರದೃಷ್ಟಕರ, ಈ ಭಾಗದಲ್ಲಿ ಆನೆಗಳ ಹಾವಳಿ ಇಷ್ಟೊಂದು ಇದೆ ಎಂದು ಈಗ ನನಗೆ ತಿಳಿಯಿತು.ಮೃತಪಟ್ಟವರ ಕುಟುಂಬಗಳಿಗೆ ತಲಾ 15 ಲಕ್ಷ ರೂ.ಪರಿಹಾರ ನೀಡಲಾಗುವುದು.ಆನೆ ದಾಳಿಯಿಂದ ಮೃತಪಟ್ಟ ರಂಜಿತಾ ಅವರೇ ಮನೆಗೆ ಆಧಾರಸ್ತಂಭ ಆಗಿದ್ದರು.ಈ ಹಿನ್ನೆಲೆಯಲ್ಲಿ ಅವರ ಕುಟುಂಬ ನಿರ್ವಹಣೆಗೆ ರಂಜಿತಾ ಅವರ ಸಹೋದರಿಗೆ ಉದ್ಯೋಗ ನೀಡಲಾಗುವುದು.ಅಲ್ಲದೆ ಆನೆ ಹಾವಳಿಯನ್ನು ತಪ್ಪಿಸಲು ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಲಾಗುವುದು.ಅಲ್ಲದೆ ಗ್ರಾಮೀಣ ಭಾಗದ ಜನರು ಸೊಪ್ಪು, ದಿನನಿತ್ಯದ ಪರಿಕರಗಳಿಗಾಗಿ ಕಾಡಿಗೆ ಹೋದರೆ ಅವರಿಗೆ ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದಾರೆ ಎಂದು ಈಗಾಗಲೇ ಸಾರ್ವಜನಿಕರು ತಿಳಿಸಿದ್ದಾರೆ.ಗ್ರಾಮಸ್ಥರಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ಕಡಬ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮತ್ತು ಆಕೆಯ ರಕ್ಷಣೆಗೆ ಬಂದ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಘಟನೆ ಇಲ್ಲಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ನಡೆದಿದೆ.


ಫೆ.20ರ ಮುಂಜಾನೆ ಸುಮಾರು 6.30 ಕ್ಕೆ ಈ ದಾರುಣ ಘಟನೆ ಸಂಭವಿಸಿದೆ.ನೈಲ ನಿವಾಸಿ ರಾಜೀವ ಶೆಟ್ಟಿ-ಸುಂದರಿ ದಂಪತಿಯ ಪುತ್ರಿ ರಶ್ಮಿತಾ(22ವ.) ಹಾಗೂ ನೈಲ ನಿವಾಸಿ ದಿ.ತಿಮ್ಮಪ್ಪ ಶೆಟ್ಟಿ ಎಂಬವರ ಪುತ್ರ ರಮೇಶ್ ರೈ(55ವ.)ಆನೆ ದಾಳಿಗೆ ಬಲಿಯಾದವರು.ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ರಶ್ಮಿತಾ ಅವರು ಪೇರಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಳೆದ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಫೆ.20ರಂದು ಬೆಳಿಗ್ಗೆ ಸುಮಾರು 6.30ರ ಸಮಯಕ್ಕೆ ಮನೆಯಿಂದ ಹೊರಟವರು ಸುಮಾರು 300 ಮೀಟರ್ ದೂರದಲ್ಲಿ ಆನೆ ದಾಳಿಗೆ ತುತ್ತಾಗಿದ್ದಾರೆ. ಪ್ರತಿನಿತ್ಯ ನಡೆದುಕೊಂಡು ಹೊಗುತ್ತಿದ್ದ ಗ್ರಾಮ ಪಂಚಾಯತ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಲೇ ಆನೆಯನ್ನು ಕಂಡೊಡನೆ ಓಡಿ ತಪ್ಪಿಸಲು ಯತ್ನಿಸಿರಬಹುದೆಂದು ಅಂದಾಜಿಸಲಾಗಿದೆ.ಇದಕ್ಕೆ ಪುಷ್ಟಿ ನೀಡುವಂತೆ, ರಂಜಿತಾ ಅವರು ರಸ್ತೆಯಿಂದ ತುಸು ದೂರದಲ್ಲಿ ಬಿದ್ದಿದ್ದರು.ಆನೆ ದಾಳಿಗೊಳಗಾದ ರಂಜಿತಾ ಅವರ ಕಿರುಚಾಟ ಕೇಳಿ ಅಲ್ಲೇ ಪಕ್ಕದ ಗುಡ್ಡೆಯಲ್ಲಿದ್ದ ರಮೇಶ್ ರೈ ಅವರು ಓಡೋಡಿ ರಂಜಿತಾ ಅವರಲ್ಲಿಗೆ ಬರಲು ಯತ್ನಿಸಿದ್ದರು.ಇದೇ ವೇಳೆ ಹಠಾತ್ತನೆ ಎದುರಿನಿಂದ ಬಂದ ಆನೆ ರಮೇಶ್ ರೈಯವರ ಮೇಲೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.ಇದೇ ವೇಳೆ ನಂದೇಶ್ ಎಂಬವರು ಸ್ಥಳಕ್ಕೆ ಬಂದಿದ್ದರಾದರೂ ಅವರು ಆನೆಯನ್ನು ದೂರದಿಂದಲೇ ಕಂಡು ಓಡಿ ತಪ್ಪಿಸಿಕೊಂಡಿದ್ದಾರೆ.
ರಮೇಶ್ ರೈಯವರ ಶರೀರ ಆನೆಯ ತುಳಿತದಿಂದ ನುಚ್ಚುನೂರಾಗಿದ್ದು ಕರುಳು ಹೊಟ್ಟೆಯಿಂದ ಹೊರ ಬಂದಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ರಂಜಿತಾ ಅವರನ್ನು ಸ್ಥಳೀಯರು ನೆಲ್ಯಾಡಿ ಆಸ್ಪತ್ರೆಗೆ ಕೊಂಡೊಯ್ದರಾದರೂ ಆಸ್ಪತ್ರೆ ತಲುಪುವ ಮೊದಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.ಈ ಬಗ್ಗೆ ಸುರೇಶ್ ರೈ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಹಾರ ಘೋಷಣೆ

ಸತ್ತಾಗ ಬರುತ್ತೀರಿ-ಪರಿಹಾರ ಕೊಡುತ್ತೀರಿ-ಆನೆಗಳು ಮತ್ತೆ ಮತ್ತೆ ಬರುತ್ತಲೇ ಇವೆ:

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಭೇಟಿ ನೀಡಿದರು.ಪ್ರಾರಂಭದಲ್ಲಿ ಘಟನಾ ಸ್ಥಳ ಮತ್ತು ಮೃತದೇಹಗಳನ್ನು ವೀಕ್ಷಣೆ ಮಾಡಿ ಬಳಿಕ ರಂಜಿತಾ ಅವರ ಮನೆಗೆ ತೆರಳಿದರು.ಈ ಸಂದರ್ಭದಲ್ಲಿ ಮನೆಯವರ ಆಕ್ರಂದನವನ್ನು ನೋಡಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.ಈ ವೇಳೆ ಮಾತನಾಡಿದ ರಂಜಿತಾ ಅವರ ಸಹೋದರಿ ರಶ್ಮಿತಾ ಹಾಗೂ ಮಮತಾ ಅವರು, ಇಂತಹ ಘಟನೆಗಳಿಂದ ಯಾರಾದರೂ ಸತ್ತಾಗ ನೀವು ಮನೆಗೆ ಬರುತ್ತೀರಿ, ಪರಿಹಾರ ಕೊಟ್ಟು ಹೋಗುತ್ತೀರಿ, ಆದರೆ ಆನೆಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ.ಇಲ್ಲಿನ ಜನರು ಏನು ಮಾಡಬೇಕು, ಉತ್ತರ ಕೊಡಿ ಸರ್.. ಎಂದು ದು:ಖ ಮತ್ತು ಆಕ್ರೋಶಿತರಾಗಿ ಹೇಳಿದರು.ಸಮಾಧಾನ ಚಿತ್ತದಿಂದಲೇ ಆಲಿಸಿದ ಜಿಲ್ಲಾಧಿಕಾರಿಯವರು, ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಹಾಗೂ ರಂಜಿತಾ ಅವರ ಸಹೋದರಿಗೆ ಉದ್ಯೋಗ ನೀಡುವ ಭರವಸೆ ಜೊತೆಗೆ ಮೃತರ ಮನೆಯವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.


ದುಡ್ಡು ಕೊಟ್ಟರೆ ರಂಜಿತಾ ಬದುಕಿ ಬರುತ್ತಾಳೆಯೇ..?:

ಈ ವೇಳೆ ರಂಜಿತಾ ಅವರ ಮನೆಯವರು, ನಮಗೆ ದುಡ್ಡು ಕೊಟ್ಟರೆ ನಮ್ಮ ರಂಜಿತಾ ಬದುಕಿ ಬರುತ್ತಾಳೆಯೇ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ವೈ.ಕೆ. ದಿನೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್‌ನಂದನ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ, ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್, ಡಿವೈಎಸ್ಪಿ ವೀರಯ್ಯ ಹಿರೇಮಠ್, ಕಡಬ ಎಸ್.ಐ. ಹರೀಶ್ ಆರ್, ಬೆಳ್ಳಾರೆ ಎಸ್.ಐ. ಸುಹಾಸ್, ಸುಬ್ರಹ್ಮಣ್ಯ ಎಸ್.ಐ. ಮಂಜುನಾಥ್, ಪುತ್ತೂರು ನಗರ ಇನ್ಸ್‌ಪೆಕ್ಟರ್ಶ್ರೀ ಕಾಂತ್ ಸೇರಿದಂತೆ ಹಲವಾರು ಮಂದಿ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


ಮನೆಗೆ ಆಧಾರಸ್ತಂಭವಾಗಿದ್ದ ರಂಜಿತಾ:

ರಾಜೀವ ಶೆಟ್ಟಿ-ಸುಂದರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ರಶ್ಮಿತಾ ಅವರನ್ನು ವಿಟ್ಲಕ್ಕೆ ಮದುವೆ ಮಾಡಿಕೊಡಲಾಗಿದೆ.ಆ ಬಳಿಕ ರಂಜಿತಾ ಅವರೇ ಮನೆಯ ಆಧಾರಸ್ಥಂಭವಾಗಿದ್ದರು.ರಾಜೇಶ್ ಶೆಟ್ಟಿಯವರು ಅನಾರೋಗ್ಯ ಪೀಡಿತರಾಗಿದ್ದು ಬರಸಿಡಿಲಿನಂತೆ ಬಂದೆರಗಿದ ಮಗಳ ಸಾವಿನಿಂದ ಕುಟುಂಬ ಕಂಗೆಟ್ಟಿದೆ.


ಏಕಾಂಗಿಯಾಗಿದ್ದ ರಮೇಶ್ ರೈ:

ಕಾರ್ಮಿಕ ಸಂಘಟನೆ, ಬೀಡಿ ಕಾರ್ಮಿಕರ ಪರವಾದ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ರೈಯವರು ಅವಿವಾಹಿತರಾಗಿದ್ದು, ಮನೆಯಲ್ಲಿ ಒಬ್ಬಂಟಿಯಾಗಿಯೇ ವಾಸಿಸುತ್ತಿದ್ದರು.ಅವರ ಸಾವಿನಿಂದಾಗಿ ಅವರ ಮನೆ ಖಾಲಿಯಾದಂತಾಗಿದೆ.


ಐತ್ತೂರು ಪಿಡಿಒ ವಿರುದ್ದ ಆಕ್ರೋಶ-ಜಿಲ್ಲಾಧಿಕಾರಿಗೆ ದೂರು:

ಘಟನೆ ಸಂಭವಿಸಿ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬರುವ ಮೊದಲು ಘಟನಾ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.ಅಧಿಕಾರಿಗಳು, ಸಚಿವರ ಸಹಿತ ಜನಪ್ರತಿನಿಧಿಗಳು ಬರುವವರೆಗೆ ಇಲ್ಲಿಂದ ಶವಗಳನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದೂ ಕೆಲವರು ಆಕ್ರೋಶಭರಿತರಾಗಿ ಹೇಳುತ್ತಿದ್ದರು.ಕೆಲವರು ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಮಾತಿನ ಚಕಮಕಿ ನಡೆಸಿದ್ದರು.ಈ ವೇಳೆ ಐತ್ತೂರು ಪಿಡಿಒ ಸುಜಾತ ಅವರ ವಿರುದ್ದವೂ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.ಕೆಲ ದಿನಗಳ ಹಿಂದೆ ಮರ್ದಾಳದ ಸಂತೋಷ್ ರೈ ಎಂಬವರು ಆನೆ ಹಾವಳಿಯ ಕುರಿತು ವೀಡಿಯೋವೊಂದನ್ನು ಮಾಡಿದ್ದರು.ಅದರಲ್ಲಿ ಪಂಚಾಯತ್ ಕಛೇರಿ, ಸಾರ್ವಜನಿಕರ ಅಭಿಪ್ರಾಯಗಳೂ ಇತ್ತು.ಈ ವೀಡಿಯೋವನ್ನು ಅವರು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.ಈ ವಿಚಾರದ ಬಗ್ಗೆ ಐತ್ತೂರು ಪಂಚಾಯತ್ ಪಿಡಿಒ ಸುಜಾತ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಪೊಲೀಸರು ಯೂಟ್ಯೂಬ್‌ನಿಂದ ವೀಡಿಯೋ ಡಿಲೀಟ್ ಮಾಡಿಸಿದ್ದರು.ಈ ಘಟನೆಯ ಬಗ್ಗೆ ಕೆಲವು ಸಾರ್ವಜನಿಕರಲ್ಲಿದ್ದ ಅಸಮಾಧಾನ ಆನೆ ದಾಳಿ ಸಂದರ್ಭದ ಘಟನೆಯಲ್ಲಿ ಸ್ಪೋಟಗೊಂಡು ಪಿಡಿಒ ಸುಜಾತ ವಿರುದ್ಧ ಆಕ್ರೋಶದ ಮಾತುಗಳು ವ್ಯಕ್ತವಾದವು.ಅವರು ಖಾಸಗಿಯಾಗಿ ಇರುವ ವೀಡಿಯೋ ಮಾಡಿಲ್ಲ ಸಾರ್ವಜನಿಕವಾಗಿ ಪಂಚಾಯತ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೀಡಿಯೋ ಮಾತ್ರ ಮಾಡಲಾಗಿದೆ, ಅವರು ಸ್ಥಳಕ್ಕೆ ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದರು.ಈ ವಿಚಾರವನ್ನು ಡಿಸಿಯವರ ಗಮನಕ್ಕೂ ತರಲಾಯಿತು.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿದರು.


ಅರಣ್ಯ ಇಲಾಖಾ ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ:


ಘಟನೆ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಊರುಗಳಿಂದ ಸಾರ್ವಜನಿಕರು ಆಗಮಿಸಿದ್ದರು.ಎಲ್ಲರ ಬಾಯಲ್ಲಿಯೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬರುತ್ತಿತ್ತು.ಈ ಭಾಗದಲ್ಲಿ ಆನೆಗಳಿರುವ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ನಾವು ಮಾಹಿತಿ ನೀಡುತ್ತಿದ್ದರೂ ಅವರು ನಾಮಕಾವಸ್ಥೆಗೆ ಬಂದು ಹೋಗುತ್ತಿದ್ದರು.ಆನೆ ಕಂದಕಗಳನ್ನು ನಿರ್ಮಿಸುತ್ತಿಲ್ಲ, ನಿರ್ಮಿಸಿದರೂ ಅದನ್ನು ಸಮರ್ಪಕವಾಗಿ ಮಾಡದೆ ದುಡ್ಡು ತಿನ್ನುತ್ತಿದ್ದಾರೆ.ಅವರ ಮನೆಯವರಿಗೆ ಈ ರೀತಿಯಾದರೆ ಆ ನೋವು ಅವರಿಗೆ ಅರ್ಥವಾಗುತ್ತದೆ ಎಂದೆಲ್ಲ ಜನರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದುದು ಕಂಡು ಬಂತು.


ಭೀಕರ ದೃಶ್ಯಕ್ಕೆ ಕಣ್ಣೀರಾದ ಜನ:

ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ದುರಂತ ಸುದ್ದಿಯಾಗುತ್ತಲೇ ಘಟನಾ ಸ್ಥಳಕ್ಕೆ ತಂಡೋಪತಂಡವಾಗಿ ಜನ ಆಗಮಿಸಿದರು.ಕಾಡಾನೆ ದಾಳಿಯಿಂದ ರಮೇಶ್ ರೈಯವರ ದೇಹದ ಭಾಗಗಳು ಅಲ್ಲಲ್ಲಿ ಬಿದ್ದು, ದೇಹದ ಸ್ಥಿತಿ ಭೀಕರವಾಗಿತ್ತು.ಸೊಂಡಿಲಿನಿಂದ ಎತ್ತಿಹಾಕಿ, ಕಾಲಿನಿಂದ ತುಳಿದು, ಕೋರೆಯಿಂದ ತಿವಿದು ಸಾಯಿಸಿರುವುದು ಕಂಡುಬಂದಿದೆ.ಮೃತರ ಚಪ್ಪಲಿಗಳು ಅಲ್ಲಿಲ್ಲಿ ಬಿದ್ದುಕೊಂಡಿದ್ದ ದೃಶ್ಯಗಳನ್ನು ಗಮನಿಸಿದರೆ ಅವರ ಸಾವಿನ ಭೀಕರತೆ ದೃಶ್ಯ ಕಣ್ಣಮುಂದೆ ಬಂದು ಕಲ್ಲೆದೆಯವರಲ್ಲೂ ಕಣ್ಣೀರು ತರಿಸುವಂತಿತ್ತು.


ಕಾಡಾನೆಗಳಿಂದ ನಿರಂತರ ಹಾವಳಿ: ಕೃಷಿಯೊಂದಿಗೆ ಅಮಾಯಕರ ಪ್ರಾಣ ಬಲಿ:

ಕಡಬ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರುತ್ತಿದ್ದು, ಜನರು ಅಪಾರ ನಷ್ಟ ಅನುಭವಿಸಿದ್ದಾರೆ.ಗದ್ದೆ, ಬಾಳೆ, ಅಡಕೆ,ತೆಂಗು ಸಹಿತ ಕೃಷಿ ತೋಟಕ್ಕೆ ಲಗ್ಗೆ ಇಡುವ ಕಾಡಾನೆಗಳು ಕೃಷಿ ಹಾನಿ ಮಾಡುತ್ತಿರುತ್ತವೆ.ಹಗಲು-ರಾತ್ರಿ ಜನತೆ ನಡೆದಾಡಲೂ ಭಯ ಪಡುತ್ತಿರುತ್ತಾರೆ.ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಇದೀಗ ಇಬ್ಬರ ಪ್ರಾಣಬಲಿ ಪಡೆದಿರುವುದು ಈ ಭಾಗದ ಜನತೆಯಲ್ಲಿ ಮತ್ತಷ್ಟು ಭಯಾತಂಕಕ್ಕೆ ಕಾರಣವಾಗಿದೆ.ತಿಂಗಳ ಹಿಂದೆ ಕಡಬ ತಾಲೂಕಿನ ಶಿರಾಡಿ ಎಂಬಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟು ಇನ್ನೊರ್ವ ಗಾಯಗೊಂಡಿದ್ದರು.ಕೆಲ ವರ್ಷಗಳ ಹಿಂದೆ ಮೀನಾಡಿ ಸಮೀಪ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ನಡೆಸಿದ ವೇಳೆ ಸವಾರ ಅಪಾಯದಿಂದ ಪಾರಾಗಿದ್ದರು.ಕಡಬ ತಾಲೂಕಿನ ನೂಜಿಬಾಳ್ತಿಲ, ರೆಂಜಿಲಾಡಿ, ಕಡ್ಯ ಕೊಣಾಜೆ, ಕೊಂಬಾರು, ಐತ್ತೂರು, ಶಿರಾಡಿ, ಬಿಳಿನೆಲೆ, ಸಿರಿಬಾಗಿಲು ಸೇರಿದಂತೆ ಕೆಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿರಂತರವಾಗಿ ನಡೆಯುತ್ತಿರುತ್ತವೆ.ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ಈ ಭಾಗದ ಜನತೆಯ ಬಹು ಸಮಯದ ಬೇಡಿಕೆಯಾಗಿದೆ.


ಶಾಶ್ವತ ಪರಿಹಾರ ಅಗತ್ಯ-ಪಿ.ಪಿ.ವರ್ಗೀಸ್:

ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಈ ಭಾಗದಲ್ಲಿ ನಿರಂತರ ಆನೆ ಹಾವಳಿ ಇದ್ದರೂ ಅರಣ್ಯ ಇಲಾಖೆಯವರ ಸ್ಪಂದನೆ ಸಾಕಾಗುವುದಿಲ್ಲ.ಆನೆ ಹಾವಳಿಗೆ ಶಾಶ್ವತ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.


ಸಮರ್ಪಕ ಯೋಜನೆಗಳಿಲ್ಲ-ಸಯ್ಯದ್ ಮೀರಾ ಸಾಹೇಬ್:

ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಮೈಸೂರು, ಹಾಸನಗಳಲ್ಲಿ ಆನೆ ಹಾವಳಿ ತಪ್ಪಿಸಲು ಸಮರ್ಪಕವಾದ ಯೋಜನೆಗಳನ್ನು ಮಾಡಲಾಗಿದೆ.ಆದರೆ ಇಲ್ಲಿ ಯಾವುದೂ ಇಲ್ಲ, ಆನೆ ಕಂದಕ ನಿರ್ಮಾಣ ಮಾಡಿದರೂ ಅದನ್ನು ಸಮರ್ಪಕವಾಗಿ ಮಾಡಲಾಗಿಲ್ಲ ಎಂದು ಹೇಳಿದರು.


ಆನೆಯನ್ನು ಶಿಫ್ಟ್ ಮಾಡುವುದೇ ಪರಿಹಾರ-ಕೃಷ್ಣ ಶೆಟ್ಟಿ:

ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಮಾತನಾಡಿ, ಆನೆಗಳನ್ನು ಈ ಭಾಗದ ಕಾಡಿನಿಂದ ಸ್ಥಳಾಂತರ ಮಾಡಿದರೆ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.ಕೇವಲ ಆನೆಗಳನ್ನು ಓಡಿಸಿದರೆ ಮತ್ತೆ ಅದೇ ಸಮಸ್ಯೆ ಪ್ರಾರಂಭವಾಗುತ್ತದೆ.ಕೂಡಲೇ ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ನನ್ನ ವೈಯುಕ್ತಿಕ ವಿಡಿಯೋ ಅಪ್ರೋಡ್ ಮಾಡಿದ್ದಕ್ಕೆ ದೂರು ನೀಡಿರುವುದೇ ಹೊರತು ಆನೆಯ ವಿಚಾರಕ್ಕೆ ಅಲ್ಲ-ಐತ್ತೂರು ಪಿಡಿಓ ಸುಜಾತಾ ಸ್ಪಷ್ಟನೆ:

ಗ್ರಾಮ ಪಂಚಾಯತ್ ಕಛೇರಿಯ ಒಳಗೆ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನನ್ನ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಯೂ ಟ್ಯೂಬಲ್ಲಿ ಅಪ್ಲೋಡ್ ಮಾಡಿದ ಕಾರಣಕ್ಕೆ ನಾನು ಪೊಲೀಸರಿಗೆ ದೂರು ನೀಡಿದ್ದೆ. ಖಾಸಗಿ ಯೂ ಟ್ಯೂಬ್ ಚಾನೆಲ್ ಅವರು ಗ್ರಾಮ ಪಂಚಾಯತ್ ಕಛೇರಿಯ ಒಳ ಬಂದು ವಿಡಿಯೋ ಚಿತ್ರೀಕರಣ ಮಾಡಲು ಆರಂಭಿಸಿದಾಗ ನಿಮಗೆ ಬೇಕಾದ ಮಾಹಿತಿ ನೀಡುತ್ತೇನೆ ಎಂದು ನಾನು ತಿಳಿಸಿದರೂ ಅವರು ಬಲವಂತವಾಗಿ ನನ್ನ ಹತ್ತಿರದಿಂದ ಕ್ಲೋಸ್ ಅಪ್ ಮಾಡಿ ಚಿತ್ರೀಕರಣ ಮಾಡಿ ಅಪ್ಲೋಡ್ ಮಾಡಿದ್ದರು. ನನ್ನ ದೂರಿನಲ್ಲಿ ಸತ್ಯಾಂಶ ಇದ್ದ ಕಾರಣ ಎಸ್.ಐ. ಮತ್ತು ಸಿಬ್ಬಂದಿಗಳು ಯೂ ಟ್ಯೂಬಿನಿಂದ ವಿಡಿಯೋ ಡಿಲಿಟ್ ಮಾಡಿದ್ದಾರೆ ಹೊರತು ಆನೆಯ ವಿಚಾರಕ್ಕೆ ಮಾಡಿದ ಚಿತ್ರೀಕರಣಕ್ಕಾಗಲೀ, ಆನೆಯಿಂದಾಗುವ ಸಮಸ್ಯೆಯ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕಾಗಲೀ ನಾನು ದೂರು ನೀಡಿಲ್ಲ.ಆನೆಯಿಂದ ಆಗುವ ಸಮಸ್ಯೆಯ ಕುರಿತು ನಮ್ಮ ಗ್ರಾಮ ಪಂಚಾಯತ್ ಆರು ತಿಂಗಳ ಹಿಂದೆಯೇ ಸ್ಪಂದಿಸಿದ್ದು ಅಲ್ಲಲ್ಲಿ ಸೋಲಾರ್ ದೀಪ ಅಳವಡಿಸಿದ್ದೆವೆ. ಜನತೆಗೆ ಆಗುವ ಸಮಸ್ಯೆಯ ಬಗ್ಗೆ, ಅನ್ಯಾಯದ ವಿರುದ್ಧ ಯಾರೇ ಧ್ವನಿ ಎತ್ತಿದರೂ ನಾನು ಬೆಂಬಲ ನೀಡುತ್ತೇನೆ ಎಂದು ಐತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತಾ ಕೆ. ಸ್ಪಷ್ಟನೆ ನೀಡಿದ್ದಾರೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇನೆ. ಆಮೇಲೆ ಚಿತ್ರೀಕರಣ ಮಾಡಿ ಎಂದು ಹೇಳಿದರೂ ಕೇಳದೆ ನನ್ನೊಂದಿಗೆ ತಪ್ಪು ನಡವಳಿಕೆ ತೋರಿದ್ದಕ್ಕಾಗಿ ಯೂ ಟ್ಯೂಬ್ ಚಾನೆಲ್ ವ್ಯಕ್ತಿಯ ವಿರುದ್ಧ ದೂರು ನೀಡಿದ್ದೆನೆ. ಆನೆಯ ವಿಚಾರಕ್ಕೆ ಸಂಬಂಧಿಸಿ ಗ್ರಾಮಸಭೆಯಲ್ಲಿ ವಿಚಾರ ಪ್ರಸ್ತಾಪ ಆಗಿದ್ದು ಆ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದೆ.ಪಂಚಾಯತಿನಿಂದ ಏನು ಮಾಡಬೇಕೋ ಅದನ್ನು ಮಾಡಿದ್ದೆವೆ. ಸತ್ಯಾಂಶ ತಿಳಿಯದೆ ಸುಳ್ಳು ಆರೋಪ ಮಾಡುವುದು ಸರಿ ಅಲ್ಲ ಎಂದು ಪಿಡಿಓ ಸುಜಾತ ಕೆ. ತಿಳಿಸಿದ್ದಾರೆ.

ರಂಜಿತಾ ಕುಟುಂಬಕ್ಕೆ ರೂ.5 ಲಕ್ಷ ತುರ್ತು ಪರಿಹಾರದ ಚೆಕ್ ವಿತರಣೆ :ಸಂಜೆ ವೇಳೆಗೆ ಆಗಮಿಸಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ|ವಿ.ಕರಿಕಲನ್‌ರವರು ರಂಜಿತಾ ಅವರ ಕುಟುಂಬಕ್ಕೆ ರೂ.5 ಲಕ್ಷ ತುರ್ತು ಪರಿಹಾರದ ಚೆಕ್ ವಿತರಿಸಿದರು.ಮೃತ ರಮೇಶ್ ರೈಯವರು ಒಬ್ಬಂಟಿಯಾಗಿರುವುದರಿಂದ ಅವರ ವಾರಸುದಾರರಿಗೆ ಇನ್ನಷ್ಟೆ ಪರಿಹಾರ ವಿತರಣೆಯಾಗಬೇಕಿದೆ.

ಆನೆ ಸ್ಥಳಾಂತರಿಸಲು ಇಂದಿನಿಂದಲೇ ಕಾರ್ಯಾಚರಣೆ -ವೈ.ಕೆ. ದಿನೇಶ್ ಕುಮಾರ್
ಘಟನಾ ಸ್ಥಳದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ.ದಿನೇಶ್ ಕುಮಾರ್ ಅವರು, ಆನೆ ದಾಳಿಗೆ ಮೃತಪಟ್ಟ ಬಗ್ಗೆ ನಿಮ್ಮಂತೆ ನನಗೂ ನೋವಿದೆ, ಇದಕ್ಕೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಆನೆಯನ್ನು ಸ್ಥಳಾಂತರಿಸಲು ಕಾರ್ಯಾಚರಣೆ ಮಾಡಲಾಗುವುದು, ಇದಕ್ಕೆ ಕೆಲವೊಂದು ತಯಾರಿಗಳು ಬೇಕಾದ ಹಿನ್ನೆಲೆಯಲ್ಲಿ ಆ ಬಗ್ಗೆ ಈಗಾಗಲೇ ಕೆಲಸ ಪ್ರಾರಂಭವಾಗಿದೆ, ನಾನು ಇಲ್ಲೇ ಮೊಕ್ಕಾಂ ಹೂಡಿ ಆ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಕ್ಕಿಯನ್ನು ಸಾಕಿದ್ರೆ ಮನೆಗೆ ಹುಡುಕಿಕೊಂಡು ಬರುತ್ತೀರಿ ಆನೆಯಿಂದ ತೊಂದರೆಯಾಗುವ ವಿಷಯದಲ್ಲಿ ಅಸಡ್ಡೆ ವಹಿಸುತ್ತೀರಿ..
ಆನೆಯನ್ನು ಜನರು ಕೊಂದರೆ, ಹಕ್ಕಿಯನ್ನು ಸಾಕಿದ್ರೆ ಮನೆ ಮನೆಗೆ ಹುಡುಕಿ ಬರ್ತೀರಿ ಆದರೆ ಆನೆಯಿಂದ ತೊಂದರೆಯಾಗುವ ವಿಷಯದಲ್ಲಿ ಇಲಾಖೆಯ ಗಮನಕ್ಕೆ ತಂದರೂ ಅಸಡ್ಡೆ ವಹಿಸುತ್ತಿರಿ ಎಂದು ಬಿಜೆಪಿ ಮುಖಂಡ ಕೃಷ್ಟ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಪ್ರದೇಶಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಡಿಎಫ್‌ಒ ಜೊತೆ ಮಾತುಕತೆ ನಡೆಸಿದರು.ವಿಷಯ ಪ್ರಸ್ತಾಪಿಸಿದ ಕೃಷ್ಟ ಶೆಟ್ಟಿಯವರು ಆನೆಗಳು ಕಾಡಂಚಿನಲ್ಲಿ ತೊಂದರೆ ಕೊಟ್ಟರೆ ನಮಗೇನೂ ಸಮಸ್ಯೆ ಇಲ್ಲ,.ಆದರೆ ಜನವಸತಿ ಪ್ರದೇಶವಾಗಿರುವ ಮಾರ್ಗಗಳಲ್ಲಿ ಕಾಡಾನೆ ತೊಂದರೆ ನೀಡುತ್ತಿವೆ.ಶಿರಾಡಿಯಲ್ಲಿ ಆನೆ ದಾಳಿಗೆ ಗ್ರಾಮಸ್ಥರೊಬ್ಬರು ಮೃತಪಟ್ಟಾಗಲೇ ಆನೆಗಳ ಶಿಫ್ಟ್ ಮಾಡುವ ಕಾರ್ಯಕ್ಕೆ ಮುಂದಾಗಬೇಕಿತ್ತು.ಆದರೆ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ. ಈಗ ಎರಡು ಜೀವ ಹೋಗಿದೆ. ಕ್ರಮ ಕೈಗೊಳ್ಳಲು ಇನ್ನೆಷ್ಟು ಜೀವಗಳು ಬಲಿಯಾಗಬೇಕು.ಆನೆಯನ್ನು ಹಿಡಿದು ಶಿಫ್ಟ್ ಮಾಡುವುದೇ ಇದಕ್ಕೆ ಪರಿಹಾರ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಶವ ತೆಗೆಯಬೇಕಾದರೆ ಜಿಲ್ಲಾಧಿಕಾರಿ ಬರಬೇಕು-ಆಕ್ರೋಶ:
ರಮೇಶ್ ಅವರ ಮೃತದೇಹ ಘಟನಾ ಸ್ಥಳದಲ್ಲಿಯೇ ಇತ್ತು.ಆಸ್ಪತ್ರೆ ಹಾದಿಯಲ್ಲಿ ಮೃತಪಟ್ಟ ರಂಜಿತಾ ಅವರ ಮೃತದೇಹವನ್ನೂ ಬಳಿಕ ಆಸ್ಪತ್ರೆಯಿಂದ ತಂದು ಘಟನಾ ಸ್ಥಳದಲ್ಲಿಯೇ ಇಡಲಾಗಿತ್ತು.ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಸಚಿವರು ಬರಬೇಕು, ಇಲ್ಲವಾದಲ್ಲಿ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ನಾಗರಿಕರು, ಆನೆ ಹಾವಳಿಯ ಬಗ್ಗೆ ಮಾಡಲಾಗಿದ್ದೆನ್ನಲಾದ ವೀಡಿಯೋ ಡಿಲೀಟ್ ಮಾಡಿರುವ ಪೋಲಿಸರ ವಿರುದ್ದ ವೂ ಆಕ್ರೋಶ ವ್ಯಕ್ತ ಪಡಿಸಿ,ದೂರು ನೀಡಿದ ಐತ್ತೂರು ಪಿಡಿಒ ಅವರನ್ನು ಸ್ಥಳಕ್ಕೆ ಕರೆಸಲೇಬೇಕು ಎಂದು ಎ.ಸಿ.ಯವರಲ್ಲಿ ಆಗ್ರಹಿಸಿದರು.ಅರಣ್ಯ ಅಧಿಕಾರಿಗಳ ವಿರುದ್ದವೂ ನಾಗರಿಕರಿಂದ ಆಕ್ರೋಶ ವ್ಯಕ್ತವಾಯಿತು.ಒಟ್ಟಿನಲ್ಲಿ ಗೊಂದಲಮಯ ವಾತಾವರಣ, ಮಾತಿನ ಚಕಮಕಿ, ತುಸು ಉದ್ವಿಗ್ನತೆ ಎಲ್ಲವೂ ನಿರ್ಮಾಣವಾಗಿತ್ತು.ದೋಳ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೋಗುವ ಮೊದಲೇ ಡಿಸಿಯವರು ಸ್ಥಳಕ್ಕಾಗಮಿಸಿದರು.ಆ ಸಂದರ್ಭವೂ ಸಾರ್ವಜನಿಕರ ಆಕ್ರೋಶ ಮುಂದುವರಿದಿತ್ತು.ಅಧಿಕಾರಿಗಳು ಕಛೇರಿಯಲ್ಲಿ ಕುಳಿತಿದ್ದಾಗ ನಾವು ಹೋದರೆ ನಮ್ಮನ್ನು ಕುಣಿಸುತ್ತಾರೆ, ಇವಾಗ ಅವರೂ ಸ್ವಲ್ಪ ಬಿಸಿಲಿನಲ್ಲಿ ನಿಲ್ಲಲಿ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಡಿಸಿಯವರು ಪರಿಹಾರದ ಭರವಸೆ ನೀಡಿದ ಬಳಿಕ ಸಾರ್ವಜನಿಕರು ಸ್ವಲ್ಪ ಸಮಾಧಾನಗೊಂಡರು.

ಸಚಿವ ಎಸ್.ಅಂಗಾರ ಭೇಟಿ

ಉಡುಪಿಯಲ್ಲಿದ್ದ ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಅವರು ಸಂಜೆ ವೇಳೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಮೃತ ರಂಜಿತಾ ಅವರ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ತಿಳಿಸಿದರು.ಇಲಾಖೆ ವತಿಯಿಂದ ಕಾಡಾನೆ ಹಿಡಿದು ಸ್ಥಳಾಂತರಿಸಲು ಪೂರಕ ಕ್ರಮಕೈಗೊಳ್ಳಲಾಗುವುದು.ಶೀಘ್ರ ಈ ಕೆಲಸ ಆರಂಭಿಸಲಾಗುತ್ತದೆ.ಸರಕಾರದ ವತಿಯಿಂದ ಮೃತರ ಮನೆಯವರಿಗೆ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕ ರ ಒಕ್ಕೂಟದಿಂದ ಮೃತ ರಂಜಿತಾರ ಕುಟುಂಬಕ್ಕೆ ಸಹಾಯದ ಭರವಸೆ:


ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮೃತರ ಕುಟುಂಬಕ್ಕೆ ಸಹಾಯ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ. ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ದುಡಿಯುತ್ತಿದ್ದ ರಂಜಿತಾರವರ ಅಕಾಲಿಕ ಮರಣ ನಮಗೆ ನೋವು ತಂದಿದೆ, ಅವರ ಕುಟುಂಬದ ಜತೆ ನಾವಿದ್ದೆವೆ. ಅವರ ಕುಟುಂಬಕ್ಕೆ ಸಹಾಯಹಸ್ತ ನೀಡುವ ಬಗ್ಗೆ ನಮ್ಮ ಸಭೆಯಲ್ಲಿ ತಿರ್ಮಾನಿಸುತ್ತೇವೆ ಎಂದು ಹೇಳಿದರು. ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಲ್ಲಿ ದುಡಿಯುವ ಸಿಬ್ಬಂದಿಗಳನ್ನು ವಿಮಾ ಸೌಲಭ್ಯಕ್ಕೆ ಒಳಪಡಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಉಡುಪಿ ಹಾಗೂ ದ.ಕ ಒಕ್ಕೂಟದ ನೌಕರರ ಸಂಘದ ಅಧ್ಯಕ್ಷ ಸುನೀಲ್ ಅವರು ಉಪಸ್ಥಿತರಿದ್ದರು.

ಆನೆ ದಾಳಿಗೆ ಇಬ್ಬರು ಬಲಿಯಾದ ನಂತರ ಜನಾಕ್ರೋಶ, ಅಧಿಕಾರಿಗಳ ಆಗಮನ, ಪರಿಹಾರ-ಕುರಿತು ಹೆಚ್ಚಿನ ವೀಡಿಯೋಗಳು ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here