ಕವಿ ನಾರಾಯಣ ಕುಂಬ್ರ ಅವರ ‘ಸ್ವಪ್ನಗಳ ತೇರು’ ಕೃತಿ ಲೋಕಾರ್ಪಣೆ

0

ಬರಹಗಾರನ ಅನುಭವ ಹೆಚ್ಚಿದಂತೆ ಪ್ರೌಢಿಮೆ ಕಾಣಿಸಬೇಕು : ಡಾ.ಎಚ್.ಮಾಧವ ಭಟ್


ಪುತ್ತೂರು: ಬರಹಗಾರನ ಅನುಭವ ಹೆಚ್ಚಿದಂತೆ ಪ್ರೌಢಿಮೆ ಕಾಣಿಸಬೇಕು. ಹಾಗಾದಾಗ ಬರಹಕ್ಕೂ, ಬರಹಗಾರನಿಗೂ ಗೌರವ ಪ್ರಾಪ್ತಿಸುತ್ತದೆ. ಆರಂಭದ ದಿನಗಳ ಬಾಲಿಶ ಬರಹಗಳಿಂದ ತೊಡಗಿದಂತೆ ನಿರಂತರ ಬರೆದಾಗ ಬರಹ ಪಕ್ವವಾಗುತ್ತಾ ಸಾಗುತ್ತದೆ. ಭಾಷಾಶುದ್ಧಿ ಬರೆಯುವವರಿಗೆ ಅತ್ಯಂತ ಮುಖ್ಯ. ಅದನ್ನು ಒಲಿಸಿಕೊಳ್ಳುವುದು ಒಂದು ಕಲೆ. ಬರಹಗಳು ಹೊಸ ಧ್ವನಿ, ಹೊಸತನಗಳನ್ನು ಹೊಮ್ಮಿಸಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.


ಅವರು ನಗರದ ಮಾತೃಛಾಯಾ ಸಭಾಭವನದಲ್ಲಿ ರೂಪಶ್ರೀ ಪ್ರಕಾಶನ ಹಾಗೂ ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗದ ಆಶ್ರಯದಲ್ಲಿ ಫೆ.19ರಂದು ನಡೆದ ಕವಿ ನಾರಾಯಣ ಕುಂಬ್ರ ಅವರ ಸ್ವಪ್ನಗಳ ತೇರು ಎಂಬ ಕವನ ಸಂಕಲನದ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಯೌವನದ ದಿನಗಳಲ್ಲಿ ಪ್ರತಿಯೊಬ್ಬರೂ ಕವಿಗಳಾಗುತ್ತಾರೆ. ಆ ಕಾಲದಲ್ಲಿ ಅದು ಸಹಜವೂ ಹೌದು. ಆದರೆ ಕವನಗಳು ವಿಭಿನ್ನ ವಿಷಯಗಳನ್ನಾಧರಿಸಿ ಸೃಷ್ಟಿಯಾದಾಗ ಕವಿಯ ಸತ್ವ ಅನಾವರಣಗೊಳ್ಳುತ್ತದೆ. ಕವಿ ನಾರಾಯಣ ಅವರು ಕಾವ್ಯಕುಸುರಿಯ ಕಾಯಕಕ್ಕೆ ತನ್ನನ್ನು ತಾನು ಒಡ್ಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ವರ್ಷದಿಂದ ವರ್ಷಕ್ಕೆ ಹೆಚ್ಚು ಮೌಲ್ಯಯುತ ಕವಿತೆಗಳನ್ನು ಸೃಜಿಸುತ್ತಿದ್ದಾರೆ ಎಂಬುದು ಗಮನಾರ್ಹ ಎಂದು ನುಡಿದರು.


ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಿದರು. ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಶಮಾ ಫರ್ವಿನ್‌ತಾಜ್ ಜಾದೂ ಮುಖಾಂತರ ಕೃತಿ ಲೋಕಾರ್ಪಣೆಗೊಳಿಸಿದರು. ಮಂಗಳೂರಿನ ಕೆನರಾ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಕೃತಿ ಪರಿಚಯಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹಾಗೂ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಶುಭಾಶಂಸನೆಗೈದರು.


ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ., ಪುತ್ತೂರು ಕ.ಸಾ.ಪ. ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ರಂಗ ಕಲಾವಿದೆ ವಸಂತಲಕ್ಷ್ಮೀ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಪುತ್ತೂರಿನ ಐಆರ್‌ಸಿಎಂಡಿ ಎಜುಕೇಶನ್ ಸೆಂಟರ್‌ನ ಪ್ರಫುಲ್ಲ ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.


ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಗೋಪಾಲಕೃಷ್ಣ ಶಗ್ರಿತ್ತಾಯ, ಬಿ.ಐತ್ತಪ್ಪ ನಾಯ್ಕ್, ಪ್ರೊ.ವಿ.ಬಿ.ಅರ್ತಿಕಜೆ, ವಿಶ್ವೇಶ್ವರ ಭಟ್, ಜಯಾನಂದ ಪೆರಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಸಾಹಿತ್ಯ ಪೋಷಕರಾದ ಡಾ.ಶೇಖರ್ ಅಜೆಕಾರು, ಡಾ.ಸುರೇಶ್ ನೆಗಳಗುಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ಉದಯ ಸಾರಂಗ್, ಭೀಮರಾವ್ ವಾಷ್ಟರ್, ಗೋಪಾಲಕೃಷ್ಣ ಕಟ್ಟತ್ತಿಲ, ಕೃಷ್ಣಪ್ಪ ಶಿವನಗರ, ಶಾಂತಾ ಕುಂಟಿನಿ, ಸುಭಾಶ್ ಪೆರ್ಲ, ಸುದರ್ಶನ್ ಮುರ, ರಾಮಕೃಷ್ಣ ಸವಣೂರು, ಜೆಸ್ಸಿ ಪಿ.ವಿ, ಅಪೂರ್ವ ಕಾರಂತ್, ಮಾನಸ ವಿಜಯ ಕೈಂತಜೆ, ಅಬ್ದುಲ್ ಸಮದ್ ಬಾವಾ, ಮಾನಸ ಪ್ರವೀಣ್ ಭಟ್, ಗಣೇಶ ಪ್ರಸಾದ ಪಾಂಡೇಲು, ಬಾಲಕೃಷ್ಣ ಕೇಪುಳು, ರೇಖಾ ಸುದೇಶ್ ರಾವ್, ಆನಂದ ರೈ ಅಡ್ಕಸ್ಥಳ ಹಾಗೂ ಚಂದ್ರಮೌಳಿ ಕಡಂದೇಲು ಅವರನ್ನು ಸನ್ಮಾನಿಸಲಾಯಿತು. ಕೃತಿಕಾರ ನಾರಾಯಣ ಕುಂಬ್ರ ಅನಿಸಿಕೆ ವ್ಯಕ್ತಪಡಿಸಿದರು. ನಾರಾಯಣ ಅವರ ಪತ್ನಿ ರೂಪಶ್ರೀ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.


ಚಿಗುರೆಲೆ ಬಳಗದ ಸದಸ್ಯೆ ಸುಜಯ ಸಜಂಗದ್ದೆ ಪ್ರಾರ್ಥಿಸಿದರು. ಸದಸ್ಯೆ ವಿಂಧ್ಯಾ ಎಸ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಚಿಗುರೆಲೆ ಬಳಗದ ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲು ವಂದಿಸಿದರು. ಸದಸ್ಯ ರಾಧಾಕೃಷ್ಣ ಎರುಂಬು ಹಾಗೂ ಸದಸ್ಯೆ ಬೃಂದಾ ಮುಕ್ಕೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ತರುವಾಯ ಸ್ವಪ್ನಗಳ ತೇರು ಕೃತಿಯ ಆಯ್ದ ಕವನಗಳ ಗಾಯನ ಕಾರ್ಯಕ್ರಮ, ಕಲಾ ಸೃಷ್ಟಿ ತಂಡದಿಂದ ಶೈಕ್ಷಣಿಕ ಜಾದೂ ಕಾರ್ಯಕ್ರಮ, ಕವಿಗೋಷ್ಟಿ ನಡೆದವು.

LEAVE A REPLY

Please enter your comment!
Please enter your name here