ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆ ಸುಳ್ಳಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಾದರೂ ಘೋಷಣೆ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಕರೆ ನೀಡಲಿದ್ದೇವೆ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ರಾಜ್ಯ ಬಜೆಟ್‌ನಲ್ಲಿ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಆರೋಗ್ಯದ ವಿಚಾರದಲ್ಲಿ ಪ್ರಾಮುಖ್ಯತೆ ಸಿಕ್ಕಿಲ್ಲ. ನಮ್ಮ ಬೇಡಿಕೆ ಒಂದೇ. ಚುನಾವಣೆ ಹತ್ತಿರ ಬರುವಾಗ ಹೊಸ ಸರಕಾರ ರಚನೆಯಾಗುತ್ತದೆ. ಈ ಸಂದರ್ಭದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಕುರಿತು ಯಾವುದೇ ಪಕ್ಷದ ಶಾಸಕರು ಆದರೂ ಆದ್ಯತೆ ನೀಡಬೇಕು ಮತ್ತು ತಮ್ಮ ಪ್ರಣಾಳಿಕೆಯಲ್ಲಿ ಘೊಷಣೆ ಮಾಡಬೇಕೆಂದರು.
ಸಹಿ ಸಂಗ್ರಹ ಅಭಿಯಾನ:
ಹೋರಾಟ ಸಮಿತಿ ಉಪಾಧ್ಯಕ್ಷ ಝೇವಿಯರ್ ಡಿ’ಸೋಜ ಅವರು ಮಾತನಾಡಿ ಈಗಾಗಲೇ ಮನವಿ ಸಲ್ಲಿಸಿ ತಾಲೂಕಿನಾದ್ಯಂತ ಮತ್ತು ತಾಲೂಕಿನ ಹೊರಗಡೆಯೂ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈಗಾಗಲೇ ಪುತ್ತೂರಿನಲ್ಲಿ ಪಾದಯಾತ್ರೆ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆದಿದೆ. ಮುಂದೆ ವಿಟ್ಲದಲ್ಲಿ ಪಾದಯಾತ್ರೆ ನಡೆಯಲಿದೆ. ಹಾಗೆ ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಈಶ್ವರಮಂಗಲದಲ್ಲೂ ಅಭಿಯಾನ ನಡೆಯಲಿದೆ. ಈ ಎಲ್ಲಾ ಅಭಿಯಾನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ವರ್ತಕ ಸಂಘ ಪೂರ್ಣ ಬೆಂಬಲ ನೀಡಿದೆ ಎಂದರು.
ಬಜೆಟ್ ಚರ್ಚೆಯಲ್ಲೂ ಅವಕಾಶವಿದೆ:
ಹೋರಾಟ ಸಮಿತಿ ಇನ್ನೋರ್ವ ಉಪಾಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು ಅವರು ಮಾತನಾಡಿ ಬಜೆಟ್‌ನಲ್ಲಿ ಘೋಷಣೆ ಮಾಡದಿದ್ದರೂ ಈ ತಿಂಗಳು ನಡೆಯುವ ಬಜೆಟ್ ಮೇಲಿನ ಚರ್ಚೆಯಲ್ಲಿ ಪುತ್ತೂರು ಸರಕಾರಿ ಅಸ್ಪತ್ರೆ ಮೇಲ್ದರ್ಜೆಗೆ ಸೇರಿಸುವುದು ಮತ್ತು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಘೋಷಣೆ ಮಾಡಲು ಅವಕಾಶವಿದೆ ಎಂದು ಹೇಳಿದರು. ಕಾರ್ಯಕಾರಿ ಸಮತಿ ಸದಸ್ಯೆ ಶಶ್ಮಿ ಭಟ್ ಅಜ್ಜಾವರ ಅವರು ಮಾತನಾಡಿ ಸಾವಿರಾರು ಮಹಿಳೆಯರ ಸಹಿತ ಸಂಗ್ರಹದ ಮೂಲಕ ಹಕ್ಕೊತ್ತಾಯ ಮಾಡಲಿದ್ದೇವೆ ಎಂದರು. ಶಾಸಕರು ಕೂಡಾ ಸರಕಾರಿ ಅಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ಹಣ ಮೀಸಲಿಡದಿರಲು ಕಾರಣ ಮತ್ತು ಸಮಸ್ಯೆಗಳನ್ನು ಕೈಗೊಂಡ ಕ್ರಮಗಳ ಕುರಿತು ಉತ್ತರಿಸಬೇಕೆಂದು ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ಅವರು ತಿಳಿಸಿದರು.