- ಹಲ್ಲೆಗೆ ಯತ್ನ
- ಕಲ್ಲುತೂರಾಟದಿಂದ ವಾಹನಕ್ಕೆ ಹಾನಿ
- ಪೊಲೀಸರಿಂದ ಲಾಠಿಚಾರ್ಜ್
- ಓರ್ವ ವಶಕ್ಕೆ ?
ನೆಲ್ಯಾಡಿ: ಆನೆ ಸೆರೆ ಕಾರ್ಯಾಚರಣೆ ನಾಳೆಯೂ(ಫೆ.24)ಮುಂದುವರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಈ ವೇಳೆ ಗ್ರಾಮಸ್ಥರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆದ ಘಟನೆ ಕೊಂಬಾರಿನ ಮಂಡೆಕರದಲ್ಲಿ ಫೆ.23ರಂದು ರಾತ್ರಿ ನಡೆದಿದೆ.
ಮೂರು ದಿನಗಳ ಕಾರ್ಯಾಚರಣೆ ಬಳಿಕ ಮಂಡೆಕರ ಸಮೀಪ ಮುಜೂರು ರಕ್ಷಿತಾರಣ್ಯದಲ್ಲಿ 1 ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಸೆರೆ ಹಿಡಿದ ಕಾಡಾನೆಯನ್ನು ಲಾರಿಯಲ್ಲಿ ತುಂಬಿಸಿ ಸ್ಥಳಾಂತರ ಮಾಡುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
ಆನೆ ಸೆರೆ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಇತರೇ ಆನೆಗಳನ್ನೂ ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಗ್ರಾಮಸ್ಥರು ತೀವ್ರ ವಾಗ್ವಾದ ನಡೆಸಿರುವುದಾಗಿ ವರದಿಯಾಗಿದೆ. ಘಟನೆ ಸಂದರ್ಭದಲ್ಲಿ ಸಾವಿರಾರು ಜನ ನೆರೆದಿದ್ದರು. ಒಂದು ಹಂತದಲ್ಲಿ ಕೆಲವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರ ಮೇಲೆ ಹಲ್ಲೆಗೆ ಯತ್ನಿಸಿರುವುದಾಗಿ ವರದಿಯಾಗಿದೆ.
ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ. ಸೆರೆ ಹಿಡಿಯಲಾದ ಕಾಡಾನೆಯನ್ನು ನಾಗರಹೊಳೆ ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ಯುವ ವೇಳೆ ಅಭಿಮನ್ಯು ಹಾಗೂ ಇನ್ನೊಂದು ಸಾಕಾನೆಯನ್ನೂ ಅಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.
ಕಾರ್ಯಾಚರಣೆ ನಿಲ್ಲಿಸಿಲ್ಲ, ಆನೆಗಳಿಗೆ ಒಂದು ದಿನ ವಿಶ್ರಾಂತಿ ನೀಡಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮನವರಿಕೆ ಮಾಡಿದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿ, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಎರಡು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.