ಪುತ್ತೂರು: ಎರಡು ವರುಷಗಳ ಹಿಂದೆ ಕಿರು ಚಿತ್ರ ಮೂಲಕ ತುಳುನಾಡಿನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಧರ್ಮ ದೈವ’ ಕಿರು ಚಿತ್ರ ಇದೀಗ ಹೊಸ ಕಲಾವಿದರು, ಹೊಸ ಕಥೆ ಹೊಸ ತಂಡದ ಜೊತೆ ದೊಡ್ಡ ಪರದೆಯಲ್ಲಿ ಬರಲು ಸಿದ್ಧತೆ ನಡೆಯುತ್ತಿದೆ.
ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೊದಲ ನೋಟವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್‌ರವರು ಫೆ.23 ರಂದು ಸಂಜೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್‌ರವರು ,ಧರ್ಮ ದೈವ ತುಳು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೋಳಿಸಲು ಸಂತೋಷವಾಗುತ್ತಿದೆ. ದೈವಾರಾಧನೆ ಎಂಬುದು ತುಳುನಾಡಿನ ದೈವಿಕ ಶಕ್ತಿ. ತುಳು ಮತ್ತು ತುಳುನಾಡು ಜನತೆಯ ಪರವಾಗಿ ಈ ಚಿತ್ರದ ಮೊದಲ ನೋಟವನ್ನು ನಾನು ಬಿಡುಗಡೆಗೊಳಿಸುತ್ತಿದ್ದೇನೆ. ನನ್ನ ತಾಯಿ ಕೂಡ ತುಳುನಾಡಿನವರು ಎಂದರು.
ಶ್ರೇಯಸ್ ಅಯ್ಯರ್ ಅವರ ತಾಯಿ ಬಂಟ ಸಮುದಾಯದ ರೋಹಿಣಿ ಅಯ್ಯರ್ ಮೂಲತಃ ಕಿನ್ನಿಗೋಳಿಯವರು. ಇದೀಗ ಪತಿ ಸಂತೋಷ್ ಅಯ್ಯರ್ ಪುತ್ರ ಶ್ರೇಯಸ್ ಮತ್ತು ಪುತ್ರಿ ಶ್ರೇಷ್ಠ ಅವರ ಜೊತೆ ಮುಂಬೈಯಲ್ಲಿ ನೆಲೆಸಿದ್ದು ರೋಹಿಣಿ ಅಯ್ಯರ್ ಅವರು ಧರ್ಮ ದೈವ ಕಿರುಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ದೃಶ್ಯ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಪುತ್ತೂರು ಮತ್ತು ಕೇರಳ ಗಡಿಭಾಗದಲ್ಲಿ ಚಿತ್ರೀಕರಣಗೊಂಡಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ತುಳು ಚಿತ್ರರಂಗದ ದಿಗ್ಗಜ ಕಲಾವಿದರ ಜೊತೆಗೆ ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ.