ಆರ್ಯಾಪು, ಕುಟ್ರುಪ್ಪಾಡಿ, ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂಗಳಲ್ಲಿ ಉಪಚುನಾವಣೆ

0

ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಹಾಗೂ ಕಡಬ ತಾಲೂಕಿನ ಕುಟ್ರುಪ್ಪಾಡಿ, ಬಂಟ್ವಾಳ ತಾಲೂಕಿನ ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂಗಳ ತೆರವಾದ ತಲಾ ಒಂದೊಂದು ಸ್ಥಾನಗಳಿಗೆ ಫೆ.25ರಂದು ಉಪ ಚುನಾವಣೆ ನಡೆಯುತ್ತಿದ್ದು ಬಿರುಸಿನ ಮತದಾನ ನಡೆಯುತ್ತಿದೆ.

ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು ಸಂಜೆ 5 ಗಂಟೆಯ ತನಕ ನಡೆಯಲಿದೆ. ಆರ್ಯಾಪು ಗ್ರಾ.ಪಂನ ವಾರ್ಡ್ 1ಕ್ಕೆ ಹಂಟ್ಯಾರ್ ಹಿ.ಪ್ರಾ ಶಾಲೆ, ಕುಟ್ರುಪ್ಪಾಡಿಯ ವಾರ್ಡ್ 1ಕ್ಕೆ ಬಲ್ಯ ಹಿ.ಪ್ರಾ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ಬಾಬನಕಟ್ಟೆ ಹಿ.ಪ್ರಾ ಶಾಲೆ, ನೆಟ್ಲಮುಡ್ನೂರು ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ನೇರಳಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯುತ್ತಿದೆ.

ಆರ್ಯಾಪು ವಾರ್ಡ್ 1ರಲ್ಲಿ 1090, ಅನಂತಾಡಿಯ ವಾರ್ಡ್ 2ರಲ್ಲಿ 664, ನೆಟ್ಲ ಮುಡ್ನೂರು ವಾರ್ಡ್ 2ರಲ್ಲಿ 816 ಹಾಗೂ ಕುಟ್ರುಪ್ಪಾಡಿ ವಾರ್ಡ್ 1ರಲ್ಲಿ 1055 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಆವಶ್ಯವಿದ್ದರೆ ಫೆ.27ರಂದು ಮರು ಮತದಾನ ನಡೆದು ಫೆ.28ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ನಾಲ್ಕು ಗ್ರಾ.ಪಂಗಳಲ್ಲಿ ತಲಾ ಒಂದೊಂದು ಸ್ಥಾನಗಳ ಒಟ್ಟು 4 ಸ್ಥಾನಗಳಿಗೆ 9 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಆರ್ಯಾಪು ಗ್ರಾ.ಪಂನಲ್ಲಿ ಆರ್ಯಾಪು ವಾರ್ಡ್ 1ರ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಡಿ.ಬಿ ಸಂಟ್ಯಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್ ರೈ ತೊಟ್ಲ ಕಣದಲ್ಲಿದ್ದಾರೆ.

ಕಡಬದ ಕುಟ್ರುಪ್ಪಾಡಿಯ ಬಲ್ಯ ವಾರ್ಡ್ 1ರ ಹಿಂದುಳಿದ ವರ್ಗ ‘ಎ’ಗೆ ಮೀಸಲಾದ 1 ಸ್ಥಾನಕ್ಕೆ ಮೂರು ಮಂದಿ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕರುಣಾಕರ ಮತ್ರಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುದೇಶ್ ಬೀರುಕ್ಕು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ ಬಿ. ಬಾರಿಕೆ ಕಣದಲ್ಲಿದ್ದಾರೆ.

ಬಂಟ್ವಾಳ ತಾಲೂಕಿನ ಅನಂತನಾಡಿ ಗ್ರಾ.ಪಂನ ಹಿಂದುಳಿದ ವರ್ಗ ‘ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೀತಾ ಚಂದ್ರಶೇಖರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾ ಹರಿಣಾಕ್ಷ ಪೂಜಾರಿ ಹಾಗೂ ನೆಟ್ಲ ಮುಡ್ನೂರು ಗ್ರಾ.ಪಂ.ನ ಹಿಂದುಳಿದ ವರ್ಗ ‘ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಣಾಕ್ಷಿ ಹರೀಶ್ ಪೂಜಾರಿ ಅಂತಿಮ ಕಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here