ಮಾನವೀಯತೆಯ, ಮನುಷ್ಯತ್ವವನ್ನು ಕಲ್ಪಿಸುವ ಜೀವನ ನಮ್ಮದಾಗಲಿ-ಪ್ರಕಾಶ್ ಕಾರಂತ್
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಗೆಳೆತನ, ಒಡನಾಟ, ಬಾಂಧವ್ಯ, ಸಹಕಾರ, ಸಹಬಾಳ್ವೆ ಹಾಗೂ ಸಹಭಾಗಿತ್ವ ರೋಟರಿಯ ಮೂಲ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಬದುಕುವ ನಾವು ಮಾನವೀಯತೆಯ, ಮನುಷ್ಯತ್ವವನ್ನು ಕಲ್ಪಿಸುವ ಜೀವನ ನಮ್ಮದಾಗಲಿ ಎಂದು ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.
ಫೆ.24ರಂದು ಪುತ್ತೂರು ಹೊರವಲಯದಲ್ಲಿರುವ ಮರೀಲು ದಿ ಪುತ್ತೂರು ಕ್ಲಬ್‌ನಲ್ಲಿ ಸಂಜೆ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸಂಸ್ಥೆಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಅವರು ಕ್ಲಬ್‌ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಿಯಲ್ಲಿ ಸದಸ್ಯತನ ಎಂದರೆ ಅದು ಚಾಲನಾಶಕ್ತಿ. ರೋಟರಿ ಕುಟುಂಬ ವಿಸ್ತಾರವಾಗುವಲ್ಲಿ ಸದಸ್ಯತನ ಎಂಬುದು ಸ್ತುತ್ಯಾರ್ಹವಾಗಿದೆ. ಕೇವಲ ಪುರುಷರು ಮಾತ್ರ ರೋಟರಿಗೆ ಸೇರ್ಪಡೆಯಾಗುವುದಲ್ಲ, ಮಹಿಳೆಯರೂ ಸೇರ್ಪಡೆಯಾಗಿ ರೋಟರಿಯ ಮೂಲ ಆಶಯವನ್ನು ದ್ವಿಗುಣಗೊಳಿಸಬೇಕು. ಕ್ಲಬ್ ಸದಸ್ಯರು ವಿಶೇಷಚೇತನರಿಗೆ ಸಹಾಯಹಸ್ತ ನೀಡುವ ಮೂಲಕ ಬದ್ಧತೆ ಮೆರೆದಿದ್ದಾರೆ. ಪ್ರತಿ ಕ್ಲಬ್‌ಗಳು ಗ್ಲೋಬಲ್ ಗ್ರ್ಯಾಂಟ್ ಮೂಲಕ ಅತ್ತ್ಯುನ್ನತ ಕಾರ್ಯಗಳನ್ನು ಮಾಡುವಂತಾಗಬೇಕು. ರೋಟರಿ ಧತ್ತಿನಿಧಿಗೆ ನೀಡುವ ದೇಣಿಗೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗುತ್ತದೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈಯವರು ಕ್ಲಬ್ ಸದಸ್ಯ ಬಾಲಕೃಷ್ಣ ಆಚಾರ್ಯರವರ ಸಂಪಾದಕತ್ವದ ಬುಲೆಟಿನ್ ‘ರೋಟ ರೆಕಾರ್ಡ್’ ಅನ್ನು ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ಅಧ್ಯಕ್ಷ ಉಮಾನಾಥ್‌ರವರು ತಮ್ಮ ಅಧ್ಯಕ್ಷಗಾದಿನಿಂದ ಇಂದಿನವರೆಗೆ ಅಲ್ಲದೆ ವರ್ಷದ 52 ವಾರಗಳೂ ಕಾರ್ಯಕ್ರಮಗಳು ಇದೇ ತೆರನಾಗಿ ಬರಬೇಕು ಎಂದು ಕೈಪಿಡಿ ಮುದ್ರಿಸಿರುವುದು ಮಾತ್ರವಲ್ಲ ಅದರಂತೆ ನಡೆದುಕೊಂಡಿರುವುದು ಶ್ಲಾಘನೀಯ. ಅವರ ಕಾರ್ಯಕ್ಷಮತೆ ಹಾಗೂ ನಾಯಕತ್ವ ಗುಣವನ್ನು ನಾವು ನಿಜಕ್ಕೂ ಮೆಚ್ಚಬೇಕಾಗಿದೆ. ಪುತ್ತೂರು ಕ್ಲಬ್‌ಗೆ ಸದಸ್ಯರಾಗಿ ಸೇರ್ಪಡೆಯಾಗಲು ಎಲ್ಲರೂ ಬಯಸುವುದು ಕ್ಲಬ್‌ನಲ್ಲಿನ ಯಶಸ್ವಿ ಪ್ರಾಜೆಕ್ಟ್‌ಗಳು ಆಗಿದೆ. 1970-80ರ ದಶಕದಲ್ಲಿ ಕ್ಲಬ್ ಫಲಾನುಭವಿಗಳಿಗೆ 80-90 ರಷ್ಟು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟದ್ದು ಕ್ಲಬ್‌ನ ಕಾಳಜಿ ಮೆಚ್ಚತಕ್ಕದ್ದು. ಪ್ರಸ್ತುತ ಕ್ಲಬ್‌ನ ಕನಸಿನ ಪ್ರಾಜೆಕ್ಟ್ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು.
ರೋಟರಿ ವಲಯ ಸೇನಾನಿ ಪುರಂದರ ರೈ ಮಾತನಾಡಿ, ಪುತ್ತೂರಿನ ಹಿರಿಯ ಸಂಸ್ಥೆಯಾಗಿರುವ ಪುತ್ತೂರು ರೋಟರಿ ಕ್ಲಬ್ ಜನಮಾನಸದಲ್ಲಿ ನೆಲೆಸುವಂತಹ ಕೈಂಕರ್ಯವನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿ ಬೆಳೆದು ನಿಂತಿದೆ. ಕ್ಲಬ್ ಈಗಾಗಲೇ 57 ಅಧ್ಯಕ್ಷರುಗಳನ್ನು ಕಂಡಿದ್ದು ಮಾತ್ರವಲ್ಲ ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹಿರಿಯ ಅಧ್ಯಕ್ಷರುಗಳು ಹಾಕಿದ ಮೇಲ್ಪಂಕ್ತಿಯಲ್ಲಿ ಪ್ರಸ್ತುತ ಉಮಾನಾಥ್‌ರವರು ಸರ್ವರ ಪ್ರೋತ್ಸಾಹದಿಂದ ಯಶಸ್ವಿ ಹೆಜ್ಜೆಯನ್ನಿಡುತ್ತಿದ್ದಾರೆ ಎಂದರು.
ಮೇಜರ್ ಡೋನರ್ ಗೌರವ:
ಕ್ಲಬ್ ಕಾರ್ಯದರ್ಶಿ, ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ವೈದ್ಯರಾಗಿದ್ದು ರೋಟರಿ ಧತ್ತಿನಿಧಿಗೆ ದೇಣಿಗೆ ನೀಡುವ ಮೂಲಕ ಪಿ.ಎಚ್.ಎಫ್ ಪದವಿಯೊಂದಿಗೆ ಮೇಜರ್ ಡೋನರ್ ಎಂದು ಕರೆಸಿಕೊಂಡ ಡಾ.ಶ್ರೀಪ್ರಕಾಶ್‌ರವರನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಶಾಲು ಹೊದಿಸಿ, ಪ್ರಮಾಣಪತ್ರ ನೀಡಿ ಗೌರವಿಸಿದರು.
ಹೂ ನೀಡಿ ಗೌರವ:
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ ನಾಮಿನೇಟಿಂಗ್ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಪಿಡಿಜಿ ಡಾ.ಭಾಸ್ಕರ್ ಎಸ್, ತನ್ನ 90ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ರೋಟರಿ ಕಣ್ಣಿನ ಆಸ್ಪತ್ರೆಗೆ ರೂ.1 ಲಕ್ಷ ದೇಣಿಗೆ ನೀಡಿದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಕ್ಲಬ್ ಸದಸ್ಯರಾಗಿದ್ದು ಕಣ್ಣಿನ ಆಸ್ಪತ್ರೆಗೆ ರೂ.1 ಲಕ್ಷ ನೀಡಿರುವುದು ಅಲ್ಲದೆ ತನ್ನ ಸೋದರಳಿಯನಿಂದಲೂ ರೂ.1 ಲಕ್ಷ ದೇಣಿಗೆ ನೀಡಲು ಸಹಕರಿಸಿದ ನಿವೃತ್ತ ಪಶುವೈದ್ಯ ಡಾ.ಎಂ.ಎಸ್ ಭಟ್, ಮಹಾವೀರ ಆಸ್ಪತ್ರೆಯ ಡಯಾಲಿಸಿಸ್ ಸೆಂಟರಿಗೆ ವೀಲ್ ಚೆಯರ್ ಕೊಡುಗೆ ನೀಡಿದ ಸೀತಾರಾಮ ರೈ ಮೇಲ್ಮಜಲುರವರನ್ನು ಗುರುತಿಸಿ ಅವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಹೂ ನೀಡಿ ಗೌರವಿಸಿದರು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ದರ್ಬೆ ಬ್ಯಾಂಕ್ ಆಫ್ ಬರೋಡದ ಪ್ರಬಂಧಕರಾಗಿರುವ ಸಾದಿಕ್ ಎಂ.ಎಸ್‌ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.
ಸನ್ಮಾನ:
ಕ್ಲಬ್‌ನ ಪ್ರತಿಯೊಂದು ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಹಾಗೂ ಅವರ ಪತ್ನಿ ಶ್ರೀಮತಿ ವಾಣಿ ಪ್ರಕಾಶ್ ಕಾರಂತ್‌ರವರನ್ನು ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕು.ಶಾಯರಿ ಕೊಳತ್ತಾಯ ಪ್ರಾರ್ಥಿಸಿದರು. ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿರವರ ಪತ್ನಿ ಶ್ರೀಮತಿ ಜಾಹ್ನವಿ ಉಮಾನಾಥ್, ಕ್ಲಬ್ ನಿಯೋಜಿತ ಅಧ್ಯಕ್ಷ ಜೈರಾಜ್ ಭಂಡಾರಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ. ವರದಿ ಮಂಡಿಸಿ, ವಂದಿಸಿದರು. ಸದಸ್ಯ ಸುಬ್ಬಣ್ಣ ಕೈಕಂಬ ಜಿಲ್ಲಾ ಗವರ್ನರ್‌ರವರ ಪರಿಚಯ ಮಾಡಿದರು. ಸದಸ್ಯ ಪರಮೇಶ್ವರ ಗೌಡ ಹಾಗೂ ಪ್ರೀತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಮೇ 5:ಸುಸಜ್ಜಿತ ಕಣ್ಣಿನ ಆಸ್ಪತ್ರೆ ಉದ್ಘಾಟನೆ…
57 ವರ್ಷದ ಇತಿಹಾಸದಲ್ಲಿ ಪ್ರಸ್ತುತ ವರ್ಷ ಸಮಾಜಕ್ಕಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿರುವೆನು ಎಂಬ ಹೆಮ್ಮೆಯಿದೆ. ಕ್ಲಬ್ ಸದಸ್ಯರ ಧನಾತ್ಮಕ ಸಹಕಾರದೊಂದಿಗೆ ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇತ್ತೀಚೆಗೆ ಜರ್ಮನಿಯಿಂದ ಕ್ಯಾಡರ್ ಡಾ.ಲಿಂಡಾರವರು ಪುತ್ತೂರಿಗೆ ಆಗಮಿಸಿ ಬ್ಲಡ್ ಬ್ಯಾಂಕ್‌ನ ಪರಿಶೀಲನೆ ನಡೆಸಿ ಇದು ವಿಶ್ವದಲ್ಲಿಯೇ ಮಾದರಿಯಾಗಿದೆ ಎಂದು ಶಿಫಾರಸ್ಸು ನೀಡಿರುವುದು ಮತ್ತೂ ಸಂತೋಷ ತಂದಿದೆ. ಕ್ಲಬ್ ರಚನಾ ಸಂದರ್ಭದಲ್ಲಿ ವಿವಿಧ ಕ್ಲಬ್ ನಿರ್ದೇಶಕರಾಗಿ ಇವರುಗಳೇ ಆಗಬೇಕು ಎಂದಾಗ ಆ ಸದಸ್ಯರು ನನ್ನ ಮಾತಿಗೆ ಒಪ್ಪಿಕೊಂಡಿದ್ರು. ಅದರಲ್ಲಿ ಸಾರ್ಜಂಟ್ ಹುದ್ದೆ ಮಾತ್ರ 80ರ ಹಿರಿಯರಾದ ರಾಮಕೃಷ್ಣರವರು ವಹಿಸಿಕೊಳ್ಳಬೇಕು ಎಂದು ನನ್ನ ಅಪೇಕ್ಷೆಯಾಗಿತ್ತು ಮತ್ತು ಅವರಲ್ಲಿ ನಾನು ಈ ಬಗ್ಗೆ ಕೇಳಿಕೊಂಡಾಗ ಅವರು ಖುಶಿಯಿಂದ ಒಪ್ಪಿಕೊಂಡಿರುತ್ತಾರೆ. ಜನವರಿ 14 ರಂದು ಕಣ್ಣಿನ ಆಸ್ಪತ್ರೆ ಉದ್ಘಾಟನೆಯಾಗಬೇಕಿತ್ತು. ಆದರೆ ಅಂತರ್ರಾಷ್ಟ್ರೀಯ ರೋಟರಿಯಿಂದ ಇದಕ್ಕೆ ಅನುಮತಿ ಸಿಕ್ಕಿರ್ಲಿಲ್ಲ. ಇದೀಗ ಅನುಮತಿ ಸಿಕ್ಕಿದ್ದು ಮೇ.5ರಂದು ಪುತ್ತೂರಿನಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಜನರಿಗೆ ಒದಗಿ ಬರಲಿದೆ.
-ಉಮಾನಾಥ್ ಪಿ.ಬಿ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು
ಕ್ಲಬ್ ಮೈಲಿಗಲ್ಲು..
-70-50ರ ದಶಕದಲ್ಲಿ ‘ರೋಟರಿಪುರ’ ಎಂಬಲ್ಲಿ ಸುಮಾರು 90ರಷ್ಟು ಮನೆಗಳ ನಿರ್ಮಾಣ
-1998ರಲ್ಲಿ ಪುತ್ತೂರಿನಲ್ಲಿ ಪ್ರತಿಷ್ಠಿತ ಬ್ಲಡ್ ಬ್ಯಾಂಕ್ ನಿರ್ಮಾಣ
-2009-10 ರಲ್ಲಿ ಬ್ಲಡ್ ಬ್ಯಾಂಕ್ ಮೇಲ್ದರ್ಜೆಗೆ
-ಎರಡು ವರ್ಷದ ಹಿಂದೆ ಮಹಾವೀರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಕೇಂದ್ರ ನಿರ್ಮಾಣ
-ಇದೇ ಮೇ 5ರಂದು ಕನಸಿನ ಸುಸಜ್ಜಿತ ಕಣ್ಣಿನ ಆಸ್ಪತ್ರೆಯ ಲೋಕಾರ್ಪಣೆಗೆ ದಿನಗಣನೆ
ಡಿಜಿ ಕಾರ್ಯಕ್ರಮಗಳು..
ಬೆಳಿಗ್ಗೆ ಬನ್ನೂರು ಸಂತ ಅಂತೋನಿ ಚರ್ಚ್ ಬಳಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ಕ್ಲಬ್ ವತಿಯಿಂದ ಸ್ವಾಗತ ಮಾಡಲಾಯಿತು. ಬಳಿಕ ಕ್ಲಬ್ ಕೋಶಾಧಿಕಾರಿ ಎಂ.ಜಿ ರಫೀಕ್‌ರವರ ಮನೆಯಲ್ಲಿ ಉಪಹಾರ. ಉಪಹಾರ ಸೇವಿಸಿದ ಬಳಿಕ ಡಿಜಿಯವರಿಂದ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ ಏರ್ಪಡಿಸಲಾದ ಒಂದೇ ಸೂರಿನಡಿಯಲ್ಲಿ ಉಚಿತ ವೈದ್ಯಕೀಯ ಸೇವೆಗಳು, ಸೇವಾ ಯೋಜನೆಗಳಾದ ರೋಟರಿ ಪುತ್ತೂರು ಸೇವಾ ಉತ್ಸವ್ ಇದರ ಉದ್ಘಾಟನೆ, ಕೊಡಿಪ್ಪಾಡಿ ಎಂಬಲ್ಲಿ ಕ್ಲಬ್‌ನಿಂದ ನಿರ್ಮಿಸಲ್ಪಟ್ಟ ಮನೆಯ ಹಸ್ತಾಂತರ, ಸವಣೂರು ಅರೆಲ್ತಡಿ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಿಜಿ ವಿನಾಯಕ ಕುಡ್ವರವರ ಪ್ರಾಯೋಜಕತ್ವದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಮಧ್ಯಾಹ್ನ ಕ್ಲಬ್ ಸದಸ್ಯರೊಂದಿಗೆ ಕ್ಲಬ್ ಅಸೆಂಬ್ಲಿಯಲ್ಲಿ ಪಾಲ್ಗೊಂಡು ಸಂಜೆ ಮರೀಲು ದಿ ಪುತ್ತೂರು ಕ್ಲಬ್‌ನಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಡಿಜಿ ಪ್ರಕಾಶ್ ಕಾರಂತ್‌ರವರು ಭಾಗವಹಿಸಿದರು.