ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯ, ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಹಾಗೂ ಜೇಸಿಐ ನೆಲ್ಯಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನೆಲ್ಯಾಡಿ ಕೃಷ್ಣ ಸೌರಭ ಕಾಂಪ್ಲೆಕ್ಸ್‌ನಲ್ಲಿರುವ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್.ಅವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಸದೃಢ ಹಾಗೂ ಆರೋಗ್ಯಯುತ ಯುವ ಜನತೆ ದೇಶದ ಸಂಪತ್ತು. ಇದಕ್ಕೆ ಯುವಕರಲ್ಲಿ ದೈಹಿಕ, ಮಾನಸಿಕ ಸ್ವಾಸ್ಥ್ಯ ಅಗತ್ಯವಾಗಿದೆ. ಇದಕ್ಕೆ ಸಂಕಲ್ಪ ಮಾಡಿಕೊಂಡು ಸಮಾಜ, ದೇಶಕ್ಕಾಗಿ ನಾವು ಬದಲಾವಣೆ ಮಾಡಿಕೊಳ್ಳಬೇಕು ಎಂದರು. ರವಿ ಬಿ.ಎಸ್.ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಉಪನ್ಯಾಸಕ ಚೇತನ್ ಆನೆಗುಂಡಿ ಮಾತನಾಡಿ, ವೈಯಕ್ತಿಕ ಸ್ವಾಸ್ಥ್ಯಕ್ಕಿಂತ ಸಾಮಾಜಿಕ ಸ್ವಾಸ್ಥ್ಯ ಮುಖ್ಯವಾಗಿದೆ. ಸಂಪತ್ತು, ಸಂಸಾರ ಹಾಗೂ ಸ್ವಾಸ್ಥ್ಯ ಚೆನ್ನಾಗಿ ನಿರ್ವಹಣೆ ಮಾಡಿದಲ್ಲಿ ಜೀವನದಲ್ಲಿ ಯಶಸ್ವಿಯಾಗುತ್ತೇವೆ. ಸೇವಿಸುವ ಆಹಾರದಿಂದಲೇ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ತಿನ್ನುವ ಆಹಾರದ ಕುರಿತೂ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ಸಹ ಸಂಯೋಜಕ, ಇತಿಹಾಸ ಸಂಘದ ಸಂಚಾಲಕರೂ ಆದ ಡಾ.ಸೀತಾರಾಮ ಪಿ.,ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಇದನ್ನು ಮನಗಂಡು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ನೆಲ್ಯಾಡಿ ಜೇಸಿಐ ಅಧ್ಯಕ್ಷ ಕೆ.ಎಂ.ದಯಾಕರ ರೈ, ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ನೈತಿಕ ಶಿಕ್ಷಣವೂ ಮಕ್ಕಳಿಗೆ ಸಿಗಬೇಕೆಂಬ ಉದ್ದೇಶದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಡಾ.ನೂರಂದಪ್ಪ ವಂದಿಸಿದರು.
ರವಿ ಬಿ.ಎಸ್.ರವರಿಗೆ ಸನ್ಮಾನ:
ಪುತ್ತೂರು ಗ್ರಾಮಾಂತರ ವೃತ್ತ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್.ಅವರನ್ನು ಈ ಸಂದರ್ಭದಲ್ಲಿ ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರ ನೇತ್ರತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ದುಶ್ಚಟಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞೆ ಈ ಸಂದರ್ಭದಲ್ಲಿ ಸ್ವೀಕರಿಸಲಾಯಿತು.