ರಾಮಕುಂಜ: ಫೆ.12ರಂದು ನಿಧನರಾದ ರಾಮಕುಂಜ ಗ್ರಾಮದ ತಾವೂರು ’ಸಂತೃಪ್ತಿ’ ನಿವಾಸಿ ಭಾಗೀರಥಿ ಎನ್.ಸಿ.ಗೌಡ ಅವರ ಉತ್ತರಕ್ರಿಯೆ ಹಾಗೂ ಶ್ರದ್ದಾಂಜಲಿ ಸಭೆ ಫೆ.26ರಂದು ತಾವೂರು ಸಂತೃಪ್ತಿ ನಿವಾಸದಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಟಿ.ನಾರಾಯಣ ಭಟ್‌ರವರು ನುಡಿನಮನ ಸಲ್ಲಿಸಿ ಮಾತನಾಡಿ, ಮೃತ ಭಾಗೀರಥಿಯವರು ಆದರ್ಶಗೃಹಿಣಿ. 7ನೇ ತರಗತಿಯ ತನಕ ವ್ಯಾಸಂಗ ಮಾಡಿದ್ದರೂ ಸತ್ಕಾರ, ಸನ್ಮಾರ್ಗದಲ್ಲಿ ಮುನ್ನಡೆದವರು. ಮಕ್ಕಳಿಗೂ ಉತ್ತಮ ಸಂಸ್ಕಾರ, ಶಿಸ್ತು ಕಲಿಸಿಕೊಟ್ಟಿದ್ದಾರೆ. ಮನೆಗೂ ಕೀರ್ತಿ ತಂದಿದ್ದಾರೆ. ಊರಿನವರಿಗೂ ತಾವೂರು ಗೌರವದ ಮನೆಯಾಗಿದೆ. ಇದನ್ನು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮುಂದುವರಿಸಿಕೊಂಡು ಮನೆಯ ಗೌರವ ಉಳಿಸಬೇಕೆಂದು ಹೇಳಿದರು.
ಆತ್ಮಕ್ಕೆ ಸಾವಿಲ್ಲ, ಸಾವು ಎಂಬುದು ಇನ್ನೊಂದು ಜೀವನದ ಆರಂಭವಾಗಿದೆ. ಆತ್ಮ ದೇಹವನ್ನು ಬಿಟ್ಟು ಹೋದರೂ ಅದು 10 ದಿನ ನಮ್ಮ ಸುತ್ತಲೂ ಸುತ್ತುತ್ತಿರುತ್ತದೆ. 11ನೇ ದಿನಕ್ಕೆ ಅದಕ್ಕೆ ಸೂಕ್ಷ್ಮವಾದ ಶರೀರದ ಆಕೃತಿ ಬರುತ್ತದೆ. ನಾವು ಮಾಡುವ ಎಲ್ಲಾ ಕ್ರಿಯೆಗಳನ್ನು ಪಡೆದುಕೊಳ್ಳುವ ಶಕ್ತಿ ಆತ್ಮಕ್ಕೆ ಇರುತ್ತದೆ. ಒಳ್ಳೆಯ ದಾರಿಯಲ್ಲಿ ಸಾಗಿದಲ್ಲಿ ಮೋಕ್ಷ ಸಂಪಾದನೆ ಮಾಡಲು ಸಾಧ್ಯವಿದೆ. ಆದ್ದರಿಂದ ಬದುಕಿರುವಷ್ಟು ಸಮಯ ಪುಣ್ಯ ಸಂಪಾದನೆ ಮಾಡುವ ಕೆಲಸ ಆಗಬೇಕೆಂದು ಹೇಳಿದರು. 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತರ ಪುತ್ರರಾದ ನಾಗೇಶ್ ಎನ್.ಸಿ., ರಮೇಶ್ ಎನ್.ಸಿ. ಹಾಗೂ ಕುಟುಂಬಸ್ಥರು ಅತಿಥಿಗಳನ್ನು ಸತ್ಕರಿಸಿದರು. ಗ್ರಾಮಸ್ಥರು, ಕುಟುಂಬಸ್ಥರು, ಬಂಧುಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.