ತಿಂಗಳಾಡಿ:ಶ್ರೀ ಕ್ಷೇತ್ರ ದೇವಗಿರಿ ಭಜನಾ ಮಂದಿರ ಜೀರ್ಣೋದ್ಧಾರ – ಭಕ್ತಾದಿಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

0

ಜೀರ್ಣೋದ್ಧಾರ ಸಮಿತಿ ರಚನೆ; ಅಧ್ಯಕ್ಷ ಕೃಷ್ಣಕುಮಾರ್ ರೈ, ಗೌರವಾಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಪ್ರ.ಕಾರ್ಯದರ್ಶಿಯಾಗಿ ಶರತ್ ಕುಮಾರ್ ಗುತ್ತು, ಕಾರ್ಯದರ್ಶಿ ಸುರೇಶ್ ಕುಮಾರ್, ಕೋಶಾಧಿಕಾರಿ ಸೂರ್ಯಪ್ರಸನ್ನ ರೈ

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಶ್ರೀ ಕ್ಷೇತ್ರ ದೇವಗಿರಿ ಶ್ರೀ ದೇವತಾ ಭಜನಾ ಮಂದಿರ 28ನೇ ವರ್ಷದ ಪ್ರತಿಷ್ಠಾ ಮಂಗಲೋತ್ಸವಕ್ಕೆ ಸಿದ್ಧಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕೈಗೊಳ್ಳಲು ಕ್ಷೇತ್ರದಲ್ಲಿ ಫೆ.26ರಂದು ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ದೇವತಾ ಸಮಿತಿಯ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರ ಅಧ್ಯಕ್ಷತೆಯಲ್ಲಿ ಶ್ರೀ ದೇವತಾ ಭಜನಾ ಮಂದಿರದ ಪ್ರಾಂಗಣದಲ್ಲಿ ಸಭೆ ನಡೆಯಿತು. ಮಾ.17ರಂದು ಕ್ಷೇತ್ರದ 28ನೇ ಪ್ರತಿಷ್ಠಾ ಮಂಗಲೋತ್ಸವ ನಡೆಯಲಿದೆ. ಸುತ್ತಮುತ್ತಲಿನ ಎಲ್ಲ ಪುಣ್ಯಕ್ಷೇತ್ರಗಳು ಪುನರುತ್ಥಾನಗೊಂಡು ಬೆಳಗುತ್ತಿವೆ. ದೇವಗಿರಿ ಕ್ಷೇತ್ರ ಜೀರ್ಣೋದ್ಧಾರಗೊಳಿಸುವ ಈ ಭಾಗದ ಭಕ್ತರ ಕನಸು ಈಗ ನನಸಾಗುವ ಹಂತದಲ್ಲಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

ಜೀರ್ಣೋದ್ಧಾರ ಸಮಿತಿ ರಚನೆ
ಈ ಸಂದರ್ಭದಲ್ಲಿ ದೇವಗಿರಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು.ಸಮಿತಿಯ ಗೌರವಾಧ್ಯಕ್ಷರಾಗಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಅಧ್ಯಕ್ಷರಾಗಿ ಕೆದಂಬಾಡಿಗುತ್ತು ಕೃಷ್ಣ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಕುಮಾರ್ ಗುತ್ತು, ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ತಿಂಗಳಾಡಿ, ಕೋಶಾಧಿಕಾರಿಯಾಗಿ ಸೂರ್ಯಪ್ರಸನ್ನ ರೈ ಎಂಡೆಸಾಗು, ಉಪಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಮಠ, ಬಾಳಾಯ ಜಯರಾಮ ರೈ, ಗೌರವ ಸಲಹೆಗಾರರಾಗಿ ಕಡಮಜಲು ಸುಭಾಸ್ ರೈ, ಮುಂಡಾಲಗುತ್ತು ಮನೋಹರ ರೈ, ನಂಜೆ ರಾಮಯ್ಯ ರೈ, ಮಾದೋಡಿ ಭಾಸ್ಕರ ರೈ ನಂಜೆ, ಪ್ರಸನ್ನ ಎಸ್.ರೈ ಮಜಲುಗದ್ದೆ, ಉಮೇಶ್ ರೈ ಮಿತ್ತೊಡಿ, ಚಾವಡಿ ರಾಧಾಕೃಷ್ಣ ರೈ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ಚಳ್ಳಂಗಾರು ಚಿದಾನಂದ ಗೌಡ ಕಜೆ, ಸುಧಾಕರ ರೈ ತಿಂಗಳಾಡಿ ಕಜೆ, ವಿಠಲ ರೈ ಮಿತ್ತೋಡಿ, ಕೋಚಣ್ಣ ಪೂಜಾರಿ ಎಂಡೆಸಾಗು, ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿ ಬೀಡು, ದಿವಾಕರ ನಾಯ್ಕ ಪಟ್ಟೆ ದರ್ಖಾಸು, ಧನಂಜಯ ಗೌಡ ಪಟ್ಟೆ, ಮೋಹನ್ ಶೆಟ್ಟಿ ಕೊಡಿಮಾರ್, ಭಾಸ್ಕರ ರೈ ಕೆದಂಬಾಡಿ ಗುತ್ತು, ಸದಾಶಿವ ರೈ ಪೊಟ್ಟಮೂಲೆ, ಚಂದ್ರಾವತಿ ಜಿ.ರೈ ಚಾವಡಿ, ಮಿತ್ರಂಪಾಡಿ ಭಾಸ್ಕರ ರೈ, ರಮೇಶ್ ರೈ ಮಿತ್ರಂಪಾಡಿ, ಗಣೇಶ್ ಬಿ.ಜಿ. ಬಾಳಾಯ, ಹರೀಶ್ ರೈ ಮಿತ್ತೋಡಿ, ರವಿ ಕುಮಾರ್ ರೈ ಮಠ, ತಿಮ್ಮಪ್ಪ ಗೌಡ ಕನ್ನಡಮೂಲೆ, ಸುಂದರ ಗಾಂಧಿನಗರ, ಮೋಹನ ಅಂಬೇಡ್ಕರ್ ನಗರ, ಶೇಖರ ರೈ ದೇವಗಿರಿ, ಅಶ್ವತ್ಥ್ ತಿಂಗಳಾಡಿ ಆಯ್ಕೆಯಾದರು.

ಇದು ಭಗವಂತನ ನಿರ್ಣಯ-ಜಯರಾಮ ರೈ ಅಬುಧಾಬಿ:
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಮಾತನಾಡಿ, ೩ ದಶಕಗಳಿಂದ ದೇವಗಿರಿ ಬೆಟ್ಟದ ಮೇಲೆ ಭಜನಾ ಮಂದಿರ ಬೆಳಗುತ್ತಿದೆ. ತಿಂಗಳಾಡಿ ಶಾಲೆಯಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಈ ಮಂದಿರ ನಿರ್ಮಾಣಗೊಂಡ ಬಳಿಕ ದೇವಗಿರಿಗೆ ಸ್ಥಳಾಂತರಗೊಂಡಿತು.ಅಕ್ಕಪಕ್ಕದ ಎಲಿಯ, ಆಲಡ್ಕ ಮತ್ತು ಸರ್ವೆ ದೇವಸ್ಥಾನಗಳು, ಕೆದಂಬಾಡಿ ಶ್ರೀರಾಮ ಭಜನಾ ಮಂದಿರ ಜೀರ್ಣೋದ್ಧಾರಗೊಂಡು ಮಾದರಿಯಾಗಿ ಬ್ರಹ್ಮಕಲಶೋತ್ಸವ ನಡೆದಿದೆ.ಈಗ ತಿಂಗಳಾಡಿಯ ದೇವಗಿರಿಯ ಜೀರ್ಣೋದ್ಧಾರಕ್ಕೆ ಭಗವಂತ ನಿರ್ಣಯಿಸಿದ್ದಾನೆ. ನಾವೆಲ್ಲ ಭಕ್ತರು ನೆಪ ಮಾತ್ರ.ದೇವರ ಇಚ್ಛೆಯಂತೆ ಕೆಲಸ ಮಾಡೋಣ.ನಾನು ವಿದೇಶದಲ್ಲಿದ್ದರೂ ಊರಿನ ನಂಟು ಬಿಟ್ಟಿಲ್ಲ. ಕ್ಷೇತ್ರದ ಜೀರ್ಣೋದ್ಧಾರದಲ್ಲಿ ಜತೆಯಾಗಿರುತ್ತೇನೆ ಎಂದರು.

ಬಹುವರ್ಷಗಳ ಕನಸು-ಕೃಷ್ಣಕುಮಾರ್ ರೈ:
ನೂತನ ಅಧ್ಯಕ್ಷ ಕೆದಂಬಾಡಿಗುತ್ತು ಕೃಷ್ಣಕುಮಾರ್ ರೈ ಮಾತನಾಡಿ, ತಿಂಗಳಾಡಿಗೆ ಮುಕುಟದಂತಿರುವ ದೇವಗಿರಿ ಕ್ಷೇತ್ರ ಜೀರ್ಣೋದ್ಧಾರಗೊಳ್ಳುವುದು ಬಹುವರ್ಷಗಳ ಕನಸು.ಎಲ್ಲರ ಸಹಕಾರದಿಂದ ಇದು ಪೂರ್ಣಗೊಳ್ಳಲಿ ಎಂದರು.

ದೇವತಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ ಸ್ವಾಗತಿಸಿದರು.ಮಾದೋಡಿ ಭಾಸ್ಕರ ರೈ ನಂಜೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆದಂಬಾಡಿಬೀಡು ಭಾಸ್ಕರ ಬಲ್ಲಾಳ್, ಕೋಶಾಧಿಕಾರಿ ಉಂಡೆಮನೆ ಶ್ರೀಕೃಷ್ಣ ಭಟ್, ದೇವತಾ ಭಜನಾ ಮಂಡಳಿಯ ಅಧ್ಯಕ್ಷ ಕೆದಂಬಾಡಿ ಮಠ ಆನಂದ ರೈ ಉಪಸ್ಥಿತರಿದ್ದರು. ಶರತ್ ಕುಮಾರ್ ಗುತ್ತು ನೂತನ ಜೀರ್ಣೋದ್ಧಾರ ಸಮಿತಿಯ ವಿವರ ಪ್ರಸ್ತುತಪಡಿಸಿದರು.ಸೂರ್ಯಪ್ರಸನ್ನ ರೈ ಎಂಡೆಸಾಗು ಮತ್ತು ಗಣೇಶ್ ರೈ ಮಿತ್ರಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಉಂಡೆಮನೆ ಶ್ರೀಕೃಷ್ಣ ಭಟ್ ವಂದಿಸಿದರು.

ಆಮಂತ್ರಣ ಪತ್ರ ಬಿಡುಗಡೆ
ಮಾ.17ರಂದು ನಡೆಯುವ ಭಜನಾ ಮಂದಿರದ 28ನೇ ಪ್ರತಿಷ್ಠಾ ಮಂಗಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂಜೆ ರಾಮಯ್ಯ ರೈ ಬಿಡುಗಡೆ ಮಾಡಿದರು

ಸಾನಿಧ್ಯ ಸಂಕಲ್ಪ ನಿರ್ಣಯಕ್ಕೆ ಆಗ್ರಹ
ಜೀರ್ಣೋದ್ಧಾರ ಕಾರ್ಯಕ್ಕೆ ಅಡಿಯಿಡುವ ಮೊದಲು ಭಜನಾ ಮಂದಿರದ ಪ್ರಧಾನ ಸಾನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಿಟ್ಟು ತಿಳಿದುಕೊಳ್ಳುವುದಾಗಿ ನಿರ್ಧರಿಸಲಾಯಿತು.ಶ್ರೀ ದೇವತಾ ಭಜನಾ ಮಂದಿರ ಎಂಬ ಹೆಸರಿನಲ್ಲಿ ಕ್ಷೇತ್ರವನ್ನು ಕರೆಯಲಾಗುತ್ತಿದೆ.ಇಲ್ಲಿ ಉಪಾಸನೆ ಪಡೆಯುವ ಪ್ರಧಾನ ದೇವರ ಹೆಸರನ್ನು ಉಲ್ಲೇಖಿಸಿ, ಆ ಶಕ್ತಿಯ ಹೆಸರಿನ ಮೂಲಕ ಸಂಕಲ್ಪ ಮಾಡಿ ಅದೇ ಹೆಸರಿನಲ್ಲಿ ಮಂದಿರವನ್ನು ಕರೆಯುವ ಅಗತ್ಯವಿದೆ ಎಂದು ಸಭೆಯಲ್ಲಿ ಸಲಹೆ ಕೇಳಿ ಬಂತು.ತಿಂಗಳಾಡಿ ಶಾಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಈ ಭಜನಾ ಮಂದಿರಕ್ಕೆ ಸ್ಥಳಾಂತರಗೊಂಡ ಮೇಲೆ ಪ್ರತೀವರ್ಷ ಮಹಾಗಣಪತಿಯ ಆರಾಧನೆ ಇಲ್ಲಿ ನಡೆಯುತ್ತಿದೆ.ಮಂದಿರದಲ್ಲೂ ಮಹಾಗಣಪತಿಯ ಭಾವಚಿತ್ರವಿಟ್ಟು ದೀಪಾರಾಧನೆ, ವಾರದ ಭಜನೆ ನಡೆಯುತ್ತಿದೆ.ಹೀಗಿರುವಾಗ ಇಲ್ಲಿ ಮಹಾಗಣಪತಿ ದೇವರ ಸಂಕಲ್ಪವೇ ಪ್ರಧಾನವಾಗುತ್ತದೆ.ಇದನ್ನು ತಾಂಬೂಲ ಚಿಂತನೆಯಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳಬೇಕು ಮತ್ತು ಅದರಂತೆ ಸಂಕಲ್ಪಿತ ದೇವರ ಹೆಸರಿನಲ್ಲೇ ಮಂದಿರಕ್ಕೆ ಹೆಸರು ನೀಡಬೇಕು.ನೂತನ ಮಂದಿರ ನಿರ್ಮಾಣಗೊಂಡ ಬಳಿಕ ದೇವರ ಆರಾಧನೆಯು ಭಾವಚಿತ್ರ ಸಂಕಲ್ಪ,ದೀಪ ಸಂಕಲ್ಪ, ದರ್ಪಣ ಸಂಕಲ್ಪ ಅಥವಾ ಮೂರ್ತಿ ಸಂಕಲ್ಪ ಇವುಗಳಲ್ಲಿ ಯಾವ ರೀತಿ ಇರಬೇಕೆಂಬುದು ಸಾನಿಧ್ಯ ಶಕ್ತಿಯ ಇಚ್ಛೆಯಾಗಿದೆ ಎಂಬುದನ್ನು ಪ್ರಶ್ನೆಯಲ್ಲಿ ಕಂಡುಕೊಂಡು ಅದಕ್ಕೆ ತಕ್ಕಂತೆ ಮುಂದುವರಿಯಬೇಕು ಎಂಬ ಸಲಹೆ ವ್ಯಕ್ತವಾಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರು ಇದಕ್ಕೆ ಸಹಮತ ಸೂಚಿಸಿ, ಪ್ರಶ್ನಾ ಚಿಂತನೆ ನಡೆಸಿ ಅದರಂತೆ ಮುಂದುವರಿಯೋಣ ಎಂದರು.

LEAVE A REPLY

Please enter your comment!
Please enter your name here