ಆನೆ ಇರುವ ಬಗ್ಗೆ ಯಾವುದೇ ದೂರುಗಳಿಲ್ಲ, ಗಸ್ತು ಕಾರ್ಯ ನಡೆಸುತ್ತಿದ್ದೇವೆ-ರಾಘವೇಂದ್ರ
ಕಡಬ: ಕಳೆದ ಕೆಲವು ದಿನಗಳ ಹಿಂದೆ ಆನೆ ದಾಳಿಯಿಂದ ರೆಂಜಿಲಾಡಿ ಗ್ರಾಮದ ಇಬ್ಬರು ಮೃತಪಟ್ಟ ಬಳಿಕ ಕಾಡಾನೆಗಳ ಸೆರೆ ಕಾರ್ಯಾಚರಣೆ ಭರದಿಂದ ಸಾಗಿತ್ತು, ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು, ಇದೀಗ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಸಾಕು ಆನೆಗಳನ್ನು ವಾಪಾಸು ಕೊಂಡೊಯ್ಯಲಾಗಿದೆ. ಆನೆ ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬರುತ್ತಿಲ್ಲ, ಇಲಾಖಾ ಸಿಬ್ಬಂದಿಗಳು ರಾತ್ರಿ ಹಗಲು ಗಸ್ತು ತಿರುಗುತ್ತಿದ್ದೇವೆ ಎಂದು ಸುಬ್ರಹ್ಮಣ್ಯ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಹೇಳಿದ್ದಾರೆ.
ಗ್ರಾಮಸ್ಥರು, ಅರಣ್ಯ ಇಲಾಖೆ ದ್ವಂದ್ವ ಹೇಳಿಕೆಗಳು: ಕೊಂಬಾರು, ಕೊಣಾಜೆ ಭಾಗಗಳಿಂದ ಗ್ರಾಮಸ್ಥರು ಆನೆ ಇರುವ ಬಗ್ಗೆ ಮತ್ತು ಕೃಷಿಯನ್ನು ನಾಶ ಮಾಡಿರುವ ಬಗ್ಗೆ ವೀಡಿಯೋ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡುತ್ತಾರೆ, ಆದರೆ ಅರಣ್ಯ ಇಲಾಖೆಯವರಲ್ಲಿ ಆನೆ ಬಗ್ಗೆ ವಿಚಾರಿಸಿದರೆ, ಆನೆ ಇರುವ ಯಾವುದೇ ಮಾಹಿತಿಗಳು ನಮಗೆ ಬರುತ್ತಿಲ್ಲ, ನಾವು ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ವಾಪಾಸು ಆದ ಸಾಕಾನೆಗಳು: ಕಾಡಾನೆಯನ್ನು ಸೆರೆ ಹಿಡಿಯಲು ಬಂದಿದ್ದ 5 ಸಾಕಾನೆಯಲ್ಲಿ ಎರಡು ಆನೆಗಳನ್ನು ಈ ಮೊದಲು ವಾಪಾಸು ಕೊಂಡೊಯ್ಯಲಾಗಿತ್ತು ಉಳಿದ ಮೂರು ಆನೆಗಳನ್ನು ಫೆ.26ರ ರಾತ್ರಿ ಕೊಂಡೊಯ್ಯಲಾಗಿದೆ. ಆದುದರಿಂದ ಸದ್ಯಕ್ಕೆ ಆನೆ ಸೆರೆ ಹಿಡಿಯುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ ಕಾಡಾನೆಗಳು ಮಾತ್ರ ದಿನ ರೈತರ ಜಮೀನುಗಳಿಗೆ ಬಂದು ಕೃಷಿ ನಾಶ ಮಾಡುತ್ತಲೇ ಇದೆ. ಇದನ್ನು ಕೇಳುವವರ್ಯಾರು? ಪರಿಹರಿಸುವವರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.