ಇ ಶೌಚಾಲಗಳನ್ನು ದುರಸ್ಥಿ ಮಾಡುವುದಕ್ಕಿಂತ ಗುಜುರಿಗೆ ಕೊಡಿ – ನಗರಸಭೆ ಸಾಮಾನ್ಯ ಸಭೆಯಲ್ಲಿ ಶಕ್ತಿ ಸಿನ್ಹ ಪ್ರಸ್ತಾಪ

0

ನಿಮ್ಮ ಅವಧಿಯಲ್ಲಿ ಉದ್ಘಾಟಿಸಿ, ನೀವೇ ಗುಜುರಿಗೆ ಕೊಡಿಸುವುದಾ ? – ಕೆ ಜೀವಂಧರ್ ಜೈನ್

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿರುವ ಮೂರು ಇ ಶೌಚಾಲಯಗಳ ನಿರ್ವಾಹಣೆ ಸರಿಯಾಗಿ ನಡೆಯುತ್ತಿಲ್ಲ. ಅದನ್ನು ದುರಸ್ಥಿ ಪಡಿಸುವ ಬದಲು ಗುಜುರಿಗೆ ಕೊಡಿ ಎಂದು ನಗರಸಭಾ ಸದಸ್ಯ ಶಕ್ತಿ ಸಿನ್ಹ ಅವರು ಸಭೆಯಲ್ಲಿ ಪ್ರಸ್ತಾಪಿಸಿದ ಮತ್ತು ನಿಮ್ಮ ಅವಧಿಯಲ್ಲಿ ಇ ಶೌಚಾಲಯವನ್ನು ಉದ್ಘಾಟಿಸಿ, ನಿವೇ ಅದನ್ನು ಗುಜುರಿಗೆ ಕೊಡಬೇಕೆಂದು ಹೇಳುತ್ತಿರುವುದು ಎಷ್ಟು ಸರಿ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಪ್ರಶ್ನಿಸಿದ ಘಟನೆ ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಪುತ್ತೂರು ನಗರಸಭೆ ಸಾಮಾನ್ಯ ಸಭೆಯು ಫೆ.28ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು. ನಗರಸಭೆ ಅಜೇಂಡಾ ಪ್ರಸ್ತಾವನೆ ಸಂದರ್ಭ ನಗರಸಭಾ ವ್ಯಾಪ್ತಿಯಲ್ಲಿನ ಇ ಶೌಚಾಲಯದ ಕಾರ್ಯಾಚರಣೆ ಮತ್ತು ವಾರ್ಷಿಕ ನಿರ್ವಹಣೆ ಬಗ್ಗೆ 2ನೇ ಬಾರಿ ಟೆಂಡರ್ ಆಹ್ವಾನಿಸಲಾಗಿದ್ದು, ಏಕ ಬಿಡ್ ಸ್ವೀಕೃತಿಗೊಂಡಿದೆ. ಇದರಲ್ಲಿ ವಾರ್ಷಿಕ ನಿರ್ವಹಣೆಗೆ ರೂ. 2.15 ಲಕ್ಷ ಸಂಧಾನ ಮೂಲಕ ಒಪ್ಪಲಾಗಿದ್ದು, ಇದನ್ನು ಮಂಜೂರು ಮಾಡುವಂತೆ ಸಭೆಗೆ ಓದಿ ಹೇಳಲಾಯಿತು. ಆಕ್ಷೇಪಿಸಿದ ಸದಸ್ಯ ಶಕ್ತಿ ಸಿನ್ಹ ಅವರು ನಗರಸಭೆಯ ಮೂರು ಕಡೆಯಲ್ಲಿ ಇ ಶೌಚಾಲಯವಿದೆ. ಆದರೆ ಅದು ಯಾವುದು ಕೂಡಾ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿದೆ. ಕಾಯಿನ್ ಹಾಕಿದರು ಪ್ರಯೋಜವಿಲ್ಲ. ಅದನ್ನು ದುರಸ್ಥಿ ಮಾಡಿದರೆ ಮತ್ತೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಅದನ್ನು ಗುಜುರಿಗೆ ಕೊಡುವುದು ಉತ್ತಮ ಎಂದರು.

ಉತ್ತರಿಸಿದ ಅಧ್ಯಕ್ಷರು ನಿಮ್ಮ ಆಡಳಿತ ಅವಧಿಯಲ್ಲಿ ಅದನ್ನು ನಿವೇ ಪುತ್ತೂರಿಗೆ ತರಿಸಿ ಉದ್ಘಾಟಿಸಿದ್ದೀರಿ. ಇದೀಗ ನೀವೇ ಅದನ್ನು ಗುಜುರಿಗೆ ಕೊಡುವ ಮೂಲಕ ಬಂದ್ ಮಾಡುವುದು ಸರಿಯಾ ಎಂದು ಪ್ರಶ್ನಿಸಿದರು. ಶಕ್ತಿ ಸಿನ್ಹ ಅವರ ಮಾತನಾಡಿ ಅಂದು ಮಂಗಳೂರಿನಲ್ಲಿ ಅದು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದಾಗ ಪುತ್ತೂರಿನಲ್ಲೂ ಇಂತಹ ವ್ಯವಸ್ಥೆ ಬೇಕೆಂದು ತರಿಸಲಾಗಿತ್ತು. ಆದರೆ ಇಲ್ಲಿ ಅದರ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದರು. ಸದಸ್ಯ ಸಂತೋಷ್ ಬೊಳುವಾರು ಅವರು ಮಾತನಾಡಿ ಇ ಶೌಚಾಲಯ ಬೊಳುವಾರಿನಲ್ಲೂ ಇದೆ. ಅದನ್ನು ದುರಸ್ಥಿ ಮಾಡುವಂತೆ ನಾವೆ ಅನುಮೋದನೆ ಕೊಟ್ಟಿದ್ದೇವೆ. ಹಾಗಾಗಿ ಈ ಭಾರಿ ಅದನ್ನು ದುರಸ್ಥಿ ಮಾಡಿಸುವ ಎಂದು ತಿಳಿಸಿದರು. ಅದರಂತೆ ಸಭೆಯಲ್ಲಿ ದುರಸ್ಥಿಗೆ ಮಂಜೂರಾತಿ ಪಡೆಯಲಾಯಿತು.

ವೇತನ ನೀಡುವಲ್ಲಿ ಹೊರಗುತ್ತಿಗೆದಾರರನ್ನು ಗಮನಿಸಬೇಕು:
ನಗರಸಭೆಗೆ ಹೊರಗುತ್ತಿಗೆ ಮೂಲಕ ಚಾಲಕರು ಮತ್ತು ಸ್ಯಾನಿಟರಿ ಸುಪರ್‌ವೈಸರ್ ಅವರನ್ನು ನೇಮಿಸಲು ಬಿಡ್ ಕರೆಯಲಾಗಿದ್ದು, ಅದರಲ್ಲಿ ಬಿಡ್ಡ್ ದಾರರು ನೌಕರರಿಗೆ ಸರಿಯಾಗಿ ವೇತನ ನೀಡುತ್ತಾರೆಯೋ ಎಂಬುದನ್ನು ಪರಿಶೀಲಿಸಬೇಕು. ಈ ಹಿಂದೆ ಹೊರಗುತ್ತಿಗೆದಾರರು ನೌಕರರಿಗೆ ವೇತನ ಮೂರುನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಸಂದರ್ಭ ಬಂದಿತ್ತು. ಇದು ನೌಕರರಿಗೆ ತೊಂದರೆ ಆಗುತ್ತಿದ್ದು, ಇದೀಗ ಮತ್ತೆ ಬಿಡ್ಡ್ ಪಡೆದು ಕೊಂಡವರು ನೌಕರರಿಗೆ ಸರಿಯಾಗಿ ವೇತನ ನೀಡುವಂತೆ ಸೂಚನೆ ನೀಡಬೇಕೆಂದು ಶಕ್ತಿಸಿನ್ಹ ಅವರು ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದರು.

ಜಾತ್ರೆಯ ಮುಂದೆ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಆಗಬೇಕು:
ಪುತ್ತೂರು ನಗರಸಭೆ ವ್ಯಾಪ್ತಿಯ ಉರ್ಲಾಂಡಿ ಬೈಪಾಸ್‌ನಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆದ್ರಾಳಕ್ಕೆ ಹೋಗುವ ರಾಜಕಾಲುವೆಯಲ್ಲಿ ಹೂಳೆತ್ತುವ ಕಾಮಗಾರಿ ಅತಿ ಶೀಘ್ರದಲ್ಲಿ ಆಗಬೇಕು. ಮುಂದೆ ಎಪ್ರಿಲ್‌ನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಮುಂದೆ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಇದನ್ನು ಅತಿ ಶೀಘ್ರದಲ್ಲಿ ಮಾಡಲಾಗುತ್ತದೆ ಎಂದರು. ಬೇಸಿಗೆ ಕಾಲದಲ್ಲಿ ಇದೀಗ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಬಗೆ ಹರಿಸುವಂತೆ ಸದಸ್ಯ ಮನೋಹರ್ ಕಲ್ಲಾರೆ ಪ್ರಸ್ತಾಪಿಸಿದರು.

ಬಾಕಿ ತೆರಿಗೆ ಸಂಗ್ರಹ:
ತೆರಿಗೆ ಸಂಗ್ರಹ ಬಾಕಿ ಪಟ್ಟಿಯನ್ನು ನೋಡಿದಾಗ ರೂ. 1.84 ಕೋಟಿ ಬಾಕಿ ಇತ್ತು. ಅದರಲ್ಲಿ ಈಗಾಗಲೇ ರೂ. 60ಲಕ್ಷ ಸಂಗ್ರಹ ಮಾಡಿದ್ದೇವೆ. ಉಳಿದ ತೆರಿಗೆಗೆ ನೋಟೀಸ್ ಜಾರಿ ಮಾಡಿದ್ದೇವೆ. ಬೇರೆ ಬೇರೆ ಸರಕಾರಿ ಇಲಾಖೆಯಿಂದಲೂ ತೆರಿಗೆ ಬರಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹೇಳಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ಪಿ.ಜಿ.ಜಗನ್ನವಾಸ ರಾವ್, ಶಿವರಾಮ್ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ಸುಂದರ ಪೂಜಾರಿ ಬಡಾವು, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ , ಯಶೋಧಾ ಹರೀಶ್ ಪೂಜಾರಿ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ, ಮಮತ ರಂಜನ್, ಬಿ.ಶೈಲಾ ಪೈ, ಯೂಸುಪ್ ಡ್ರೀಮ್, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಮತ್ತು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಸಭಾ ನಡಾವಳಿ ಮಂಡಿಸಿದರು.

ಇ ಆಸ್ತಿ ತಂತ್ರಾಂಶದಲ್ಲಿ ಸರ್ವೆಗೆ ನಿಗದಿತ ನಮೂನೆ ಸಿದ್ಧ
ನಗರಸಭೆ ಆಸ್ತಿಗಳನ್ನು ಇ ಆಸ್ತಿ ತಂತ್ರಾಂಶದಲ್ಲಿ ಅಳವಡಿಸಲು ಸರ್ವೆ ಮಾಡಿ ಆಸ್ತಿ ಮಾಲಿಕರಿಂದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಲು ಬೇಕಾದ ನಮೂನೆಗಳ ಪ್ರತಿಗಳನ್ನು ಮುದ್ರಿಸಲಾಗಿದೆ. ಈಗಾಗಲೇ ಸುಮಾರು ೮ಸಾವಿರ ಆನ್‌ಲೈನ್ ಮಾಡಿ ಆಗಿದೆ. ಇನ್ನು ಇಪ್ಪತ್ತು ದಿವಸದೊಳಗೆ ಪೂರ್ಣಗೊಳ್ಳಲಿದೆ.
ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ

ನಗರಸಭೆ ಎಲ್ಲಾ ವಾರ್ಡ್‌ಗಳಿಗೆ ತಲಾ ರೂ. 5ಲಕ್ಷ ಅನುದಾನ ನೀಡುತ್ತಿದ್ದು, ಈ ಅನುದಾನದಲ್ಲಿ ರಸ್ತೆ, ಚರಂಡಿ, ತಡೆಗೋಡೆ ಕಾಮಗಾರಿ ನಿರ್ಮಾಣ ಮಾಡಬಹುದು. ರೂ. 5ಲಕ್ಷದಲ್ಲಿ ಒಂದೇ ಕಾಮಗಾರಿ ಅಥವಾ ಎರಡು ಕಾಮಗಾರಿ ಕೈಗೆತ್ತಿಕೊಳ್ಳಬಹುದು. ಈ ಕುರಿತು ತಕ್ಷಣ ಪಟ್ಟಿ ಮಾಡಿಕೊಡುವಂತೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸದಸ್ಯರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here