ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಮಾಹಿತಿ ಸಮೀಕ್ಷೆ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ಎನ್ ಎಸ್ ಎಸ್ ಕೋಶ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಸಹಕಾರದೊಂದಿಗೆ ಮತ್ತು ನರಿಮೊಗರು ಗ್ರಾಮ ಪಂಚಾಯತ್, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಪುತ್ತೂರು ಘಟಕ ಇದರ ಸಹಯೋಗದಲ್ಲಿ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಮಾಹಿತಿ ಸಮೀಕ್ಷೆ ನಡೆಯಿತು.
ಕಾರ್ಯಕ್ರಮವನ್ನು ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿಗೋಡನ್ನು ದತ್ತು ಗ್ರಾಮವಾಗಿ ಪಡೆದುಕೊಂಡಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಉತ್ತಮ ಕೆಲಸ ಮಾಡುತ್ತಿದೆ. ಈ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಸಮೀಕ್ಷೆ ಯಶಸ್ವಿಯಾಗಲಿ. ಜೊತೆಗೆ ಗ್ರಾಮಸ್ಥರಿಗೆ ಇದರಿಂದ ಉಪಯೋಗವಾಗಲಿ ಎಂದು ಶುಭಹಾರೈಸಿದರು. ಜೊತೆಗೆ ಇತ್ತೀಚಿಗೆ ವೀರಮಂಗಲ ಶಾಲೆಯಲ್ಲಿ ನಡೆದ ಎನ್ ಎಸ್ ಎಸ್ ಶಿಬಿರ ತುಂಬಾ ಅಚ್ಚುಕಟ್ಟಾಗಿ ಜರುಗಿತ್ತು ಎಂದು ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಮಾತನಾಡಿ, ಜನರ ಸಮಸ್ಯೆ ತಿಳಿದುಕೊಳ್ಳುವ ಕೆಲಸ ನಮ್ಮ ಮಕ್ಕಳಿಂದ ಆಗುತ್ತಿದೆ. ಜೊತೆಗೆ ಕಾನೂನು ವಿದ್ಯಾರ್ಥಿಯಾಗಿ ಸಮಾಜದ ನಾಡಿಮಿಡಿತವನ್ನು ತಿಳಿಯುವ ಪ್ರಯತ್ನವನ್ನು ಮಾಡಿ. ಜೊತೆಗೆ ನರಿಮೊಗರು ಗ್ರಾಮವನ್ನು ವ್ಯಾಜ್ಯಮುಕ್ತ ಗ್ರಾಮವನ್ನಾಗಿಸುವಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರಯತ್ನಿಸಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನರಿಮೊಗರು ಗ್ರಾ.ಪಂ. ಪಿ.ಡಿ.ಓ. ರವೀಂದ್ರ ಯು ಮಾತನಾಡಿ, ಕಾನೂನು ಸಮೀಕ್ಷೆಯಿಂದ ಹಳ್ಳಿ ಜನರ ಎಲ್ಲ ಸಮಸ್ಯೆ ಗಳ ಬಗ್ಗೆ ಅರಿವು ಆಗುತ್ತದೆ. ಜೊತೆಗೆ ಕಾನೂನು ವಿದ್ಯಾರ್ಥಿಗಳ ಮೂಲಕ ಕಾನೂನಿನ ಹಾಗೂ ಸರಕಾರದ ಸೌಲಭ್ಯಗಳ ಮಾಹಿತಿ ಗ್ರಾಮದ ಪ್ರತಿಯೊಂದು ಮನೆಗೂ ತಲುಪಲಿ. ಆ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ವಕೀಲ ಸುಧೀರ್ ಕುಮಾರ್ ತೋಲ್ಪಡಿ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಘಟಕದ ಸಂಯೋಜಕರಾದ ಲಕ್ಷ್ಮಿಕಾಂತ ಎ. ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಘಟಕದ ಸಹ ಸಂಯೋಜಕಿ ಶ್ರೀರಕ್ಷಾ, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಾಮವಿಕಾಸ ಸಮಿತಿಯ ಸಹ ಸಂಯೋಜಕರಾದ ನವೀನ್ ಕುಮಾರ್ ಎಂ.ಕೆ, ಶಾಂತಿಗೋಡು ಹಿ. ಪ್ರಾ. ಶಾಲೆ ಪ್ರಭಾರ ಮುಖ್ಯಗುರು ಸವಿತಾಕುಮಾರಿ ಎಮ್.ಡಿ., ಎಸ್ ಡಿ ಎಮ್ ಸಿ ಉಪಾಧ್ಯಕ್ಷ ದಾಮೋದರ ಸುವರ್ಣ ಕರ್ಪುತಮೂಳೆ, ಗ್ರಾಮ ವಿಕಾಸ ಸಮಿತಿ ಸದಸ್ಯ ವಿನೋದ್ ಕರ್ಪುತಮೂಳೆ, ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷೆ ಪ್ರಮೀಳಾ ಜನಾರ್ದನ ಆಚಾರ್ಯ ಹಾಗೂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಂತಿಗೋಡು ಹಾಗೂ ನರಿಮೊಗರು ಗ್ರಾಮ ಪಂಚಾಯತ್ ನ ಆನಡ್ಕ, ಶಾಂತಿಗೋಡು, ನರಿಮೊಗರು ಹಾಗೂ ವೀರಮಂಗಲ ಪರಿಸರದಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮ ಹಾಗೂ ಕಾನೂನು ಸಮೀಕ್ಷೆ ನಡೆಸಲಾಯಿತು.