ನೆಲ್ಯಾಡಿ: ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಮಾಧವ ಗೌಡ ಎಂಬವರ ವಿರುದ್ಧ ಕೊಕ್ಕಡ ಮೆಸ್ಕಾಂ ಶಾಖೆಯ ಪವರ್‌ಮ್ಯಾನ್ ಉಮೇಶ್ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದ ಬಚ್ಚೇನಹಳ್ಳಿ ನಿವಾಸಿಯಾಗಿರುವ ಉಮೇಶ್ ಕಳೆದ 7 ವರ್ಷಗಳಿಂದ ಉಜಿರೆ ಉಪವಿಭಾಗದ ಕೊಕ್ಕಡ ಮೆಸ್ಕಾಂ ಶಾಖೆಯಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫೆ.26ರಂದು ಮಧ್ಯಾಹ್ನ 12.00 ಗಂಟೆಗೆ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ನಿರಾಣ ಎಂಬಲ್ಲಿ ಪೊಸೋಡಿ-ಬಂಗೇರಡ್ಕ ಎಂಬಲ್ಲಿಗೆ ಹೊಸದಾಗಿ ವಿದ್ಯುತ್ ಸಂಪರ್ಕದ ಕೆಲಸವನ್ನು ಮೆಸ್ಕಾಂ ಇಲಾಖೆಯಲ್ಲಿ ಟೆಂಡರ್ ಮೇಲೆ ಕೆಲಸ ಮಾಡಿಕೊಂಡಿರುವ ಪ್ರಕಾಶ್, ರಾಮಣ್ಣ ಎಂಬವರ ಜೊತೆ ನಿರ್ವಹಿಸುತ್ತಿದ್ದ ವೇಳೆ ಮಾಧವ ಗೌಡ ಎಂಬವರು ಜೀಪಿನಲ್ಲಿ ಬಂದು ಕರೆಂಟ್ ಕಂಬದ ಲೈನ್‌ಗಳಿಗೆ ತಾಗುತ್ತಿರುವ ಮರಗಳನ್ನು ಕಡಿಯಿರಿ ಎಂದು ಹೇಳಿದ್ದರು.
ವಿದ್ಯುತ್ ಸಂಪರ್ಕ ಮಾಡುವ ಸಮಯ ಮರದ ಗೆಲ್ಲುಗಳನ್ನು ಕಡಿಯುವುದಾಗಿ ಪವರ್‌ಮ್ಯಾನ್ ಉಮೇಶ ತಿಳಿಸಿದರೂ ಕೇಳದ ಮಾಧವ ಗೌಡರವರು ಏಕಾಏಕಿ ಅವ್ಯಾಚವಾಗಿ ಬೈದು ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಮೇಶ್ ದೂರು ನೀಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 323, 353, 504, 506 ಐಪಿಸಿ, ಮತ್ತು ಕಲಂ 3(1)(ಡಿ) ಎಸ್‌ಸಿ/ ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.