ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.1ರಂದು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾ.2ರಂದು ಮಿಥುನ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ ನಡೆಯಲಿದೆ.
ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರ ತತ್ವಹೋಮ, ತತ್ತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಜೀವ ಕಲಶ ತಯೋನ್ನಯನ, ಅಂಕುರ ಪೂಜೆ, ಮಹಾಪೂಜೆ, ಮಧ್ಯಾಹ್ನ ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲ ಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಬಿಂಬಶುದ್ದಿ, ಕಲಶಾಭಿಷೇಕ, ಪೀಠಾಧಿವಾಸ, ಧ್ಯಾನಾಧಿವಾಸ, ಅಧಿವಾಸ ಹೋಮ, ಅಧಿವಾಸಬಲಿ, ತ್ರಿಕಾಲಪೂಜೆ, ಶಿರಸ್ತತ್ವಹೋಮ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ಪಡುಮಲೆ ಸರಕಾರಿ ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಟ್ಟೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಇಂದು ಶ್ರೀ ದೇವರ ಪ್ರತಿಷ್ಠೆ:
ಮಾ.೨ರಂದು ಪೂರ್ವಾಹ್ನ ೮ ಗಂಟೆಗೆ ೧೦೮ ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ, ಮಧ್ಯಾಹ್ನ ಗಂಟೆ ೧.೦೪ ರಿಂದ ೩.೧೫ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆಯು ಕ್ಷೇತ್ರದ ತಂತ್ರಿ ವೇ. ಮೂ.ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ವೇ. ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಅನಂತರ ಪ್ರತಿಷ್ಠಾ ಬಲಿ, ಅಂಕುರಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ ನಿತ್ಯ ನೈಮಿತ್ಯಗಳ ನಿರ್ಣಯ, ಭದ್ರದೀಪವಿಟ್ಟು ಕವಾಟ ಬಂಧನ, ಅಂಕುರ ಪೂಜೆ, ಸೋಪಾನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಧಾರ್ಮಿಕ ಸಭೆಯು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕ್ಷೇತ್ರದ ವಾಸ್ತು ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಮೊದಲಾದವರು ಭಾಗವಹಿಸಲಿದ್ದಾರೆ. ರಾತ್ರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ‘ಕಲ್ಯಾಣತ್ರಯ ಲಕ್ಷ್ಮೀ-ಕನಕಾಂಗಿ-ರತಿ’ಯಕ್ಷಗಾನ ಬಯಲಾಟ ನಡೆಯಲಿದೆ.