ಹಳೆನೇರೆಂಕಿ ಶಿವಾರು ರಕ್ಷಿತಾರಣ್ಯದಲ್ಲಿ ಹರಡುತ್ತಲೇ ಇದೆ ಬೆಂಕಿಯ ಕೆನ್ನಾಲಗೆ; ಹತೋಟಿಗೆ ಸಿಗದ ಬೆಂಕಿ; ನಂದಿಸಲು ಹರ ಸಾಹಸ

0

ನೆಲ್ಯಾಡಿ: ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಹರಡುತ್ತಿರುವ ಬೆಂಕಿಯ ಕೆನ್ನಾಲಗೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಾ.2ರಂದು ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸಲು ಗ್ರಾಮಸ್ಥರು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಮೂರು ದಿನದ ಹಿಂದೆ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹಕರಿಸಿ ಬೆಂಕಿ ನಂದಿಸಿದ್ದರು. ಆದರೆ ಮರು ದಿನ ಸಂಜೆ ವೇಳೆಗೆ ಮತ್ತೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು. ಆದರೆ ಬೆಂಕಿಯ ಕಿಡಿ ಅಲ್ಲಲ್ಲಿ ಹರಡಿರುವುದರಿಂದ ಬಿಸಿಲು ಹಾಗೂ ಗಾಳಿಗೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾ.2ರಂದು ಸಂಜೆ ವೇಳೆಗೆ ಹಳೆನೇರೆಂಕಿ ಗ್ರಾಮದ ಇಜ್ಜಾವು, ಕೆಮ್ಮಿಂಜೆ, ಪಾದ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆ ವ್ಯಾಪಕವಾಗಿ ಹರಡುತ್ತಿದ್ದು ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು, ಗಿಡಗಂಟಿಗಳು ಆಹುತಿಯಾಗಿವೆ.

ತಾಳೆ ಮರಕ್ಕೆ ಬೆಂಕಿ: ಕಾಡಿನಲ್ಲಿದ್ದ ಸುಮಾರು 30 ಅಡಿಗೂ ಹೆಚ್ಚು ಎತ್ತರದ ತಾಳೆ ಮರದ ಗರಿಗಳಿಗೆ ಬೆಂಕಿ ಬಿದ್ದು ಹೊತ್ತಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆಂಕಿಯ ಕಿಡಿ ಗಾಳಿಗೆ ತಾಳೆಮರದ ಗರಿಗಳಿಗೆ ತಗುಲಿ ಮರ ಹೊತ್ತಿ ಉರಿದೆ ಎಂದು ವರದಿಯಾಗಿದೆ.

ಮನೆಗಳಿಗೂ ಅಪಾಯ: ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಮನೆಗಳಿಗೂ ಅಪಾಯವಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು ರಾತ್ರಿ ವೇಳೆ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇವರಿಗೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ. ಅರಣ್ಯದೊಳಗೆ ಅಗ್ನಿಶಾಮಕ ವಾಹನ ಸಂಚಾರಕ್ಕೆ ಮಾರ್ಗವೂ ಇಲ್ಲದೇ ಇರುವುದರಿಂದ ಬೆಂಕಿ ನಂದಿಸಲು ಕಷ್ಟ ಸಾಧ್ಯವಾಗುತ್ತಿದೆ. ಖಾಸಗಿಯವರ ಜಾಗಕ್ಕೆ ಬೆಂಕಿ ಹರಡದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಉಪವಲಯಾರಣ್ಯಾಧಿಕಾರಿ ಸುನಿಲ್ ಉಪಸ್ಥಿತರಿದ್ದು ಬೆಂಕಿ ನಂದಿಸುವ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಸೇರಿದಂತೆ ನೂರಾರು ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

LEAVE A REPLY

Please enter your comment!
Please enter your name here