ಪುತ್ತೂರು:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಪಕ್ಷದಿಂದ ಅವಕಾಶ ನೀಡಬೇಕೆಂದು ಪುತ್ತೂರು ಮತ್ತು ಸುಳ್ಯ ಒಕ್ಕಲಿಗ ಗೌಡ ಸಮಾಜದ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಿದರು.
ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರಿಂದ ಒಕ್ಕಲಿಗರ ಕಡೆಗಣನೆಯಾಗಿದೆ. ಒಕ್ಕಲಿಗರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನೂ ಕೊಡಲಿಲ್ಲ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕೂಜುಗೋಡು ವೆಂಕಟ್ರಮಣ ಗೌಡರವರಿಗೆ ಅವಕಾಶ ಕೊಟ್ಟಾಗ ಸತತ ಮೂರು ಬಾರಿ ಕಾಂಗ್ರೆಸ್ ಜಯಗಳಿಸಿತ್ತು. ಅದಾದ ಬಳಿಕ ಒಕ್ಕಲಿಗ ಗೌಡ ಸಮುದಾಯಕ್ಕೆ ಅವಕಾಶ ನೀಡದ ಕಾರಣ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಬಿಜೆಪಿಯಿಂದ ಡಿ.ವಿ.ಸದಾನಂದ ಗೌಡರು ವಿಜಯಿಯಾದ ಬಳಿಕ ಒಕ್ಕಲಿಗ ಗೌಡ ಸಮಾಜವನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಜಿಲ್ಲಾ ನಾಯಕರಿಂದ ಇವತ್ತಿನ ತನಕ ಆಗಿಲ್ಲ.
ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಮತದಾರರು ಒಕ್ಕಲಿಗರಿದ್ದು, ಲೋಕಸಭಾ ಚುನಾವಣೆಯಲ್ಲೂ ಸಮುದಾಯದವರಿಗೆ ಅವಕಾಶ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು.ಆಗಲೂ ಅವಕಾಶ ಸಿಕ್ಕಿಲ್ಲ.ಪುತ್ತೂರಿನಲ್ಲಿ ಒಕ್ಕಲಿಗ ಗೌಡ ಸಮುದಾಯದವರು ಪ್ರಬಲ ಮತದಾರರಾಗಿದ್ದಾರೆ. ಹಾಗಾಗಿ ಈ ಬಾರಿ ಒಕ್ಕಲಿಗ ಗೌಡ ಸಮುದಾಯಕ್ಕೆ ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರಿಗೆ ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾ ನಾಯಕರಿಂದ ಈ ವಿಚಾರದಲ್ಲಿ ಹಾರಿಕೆಯ ಉತ್ತರ ಬಂದಿದೆ ಎಂದು ನಿಯೋಗದಲ್ಲಿದ್ದವರು ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದರು. ನಿಯೋಗದಲ್ಲಿ ದ.ಕ.ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನ್ಯಾಯವಾದಿ ವೆಂಕಪ್ಪ ಗೌಡ, ಅಮರ್ನಾಥ್ ಗೌಡ ಪುತ್ತೂರು, ಶೈಲಜಾ ಅಮರ್ನಾಥ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್,ಬಾಲಕೃಷ್ಣ ಗೌಡ ಕೆಮ್ಮಾರ, ಧೀರಜ್ ಕೊಡಿಪ್ಪಾಡಿ ನಿಯೋಗದಲ್ಲಿದ್ದರು.