ನಾವು ನಿಮ್ಮ ಸೇವೆಗೆ ಇರುವವರು ಅಪ್ರಾಪ್ತರ ಕೈಗೆ ವಾಹನ ನೀಡಿದರೆ 25 ಸಾವಿರ ರೂ.ದಂಡ

ಇತ್ತೀಚಿನ ದಿನಗಳಲ್ಲಿ 18 ವರ್ಷಕ್ಕಿಂತ ಒಳಗಿನ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡು ಬರುತ್ತಿದೆ. ಹೆತ್ತವರು ತಮ್ಮ ಮಕ್ಕಳ ಕೈಗೆ ಸ್ಕೂಟರ್, ಬೈಕ್ ಇತ್ಯಾದಿ ವಾಹನಗಳನ್ನು ಕೊಟ್ಟು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ 25 ಸಾವಿರ ರೂ.ದಂಡ ಪಾವತಿಸಬೇಕಾಗುತ್ತದೆ ಎಂದು ಸಬ್‌ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ತಿಳಿಸಿದರು. ಅಪ್ರಾಪ್ತರು ವಾಹನ ಚಲಾವಣೆ ಮಾಡಿ ಸಿಕ್ಕಿಬಿದ್ದರೆ ಚಾಲಕನಿಗೆ 20 ಸಾವಿರ ಮತ್ತು ವಾಹನ ನೀಡಿದ ತಂದೆಗೆ 5 ಸಾವಿರ ಒಟ್ಟು 25 ಸಾವಿರ ರೂ.ದಂಡ ಕಟ್ಟಬೇಕಾಗುತ್ತದೆ. ಈಗಾಗಲೇ ಒಂದೆರಡು ಪ್ರಕರಣ ದಾಖಲಾಗಿದ್ದು ವಾಹನ ಮಾರಾಟ ಮಾಡಿದರೂ ದಂಡದ ಹಣ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಹೆತ್ತವರು ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಡುವ ಮೊದಲು ನೂರು ಬಾರಿ ಯೋಚಿಸುವುದು ಒಳಿತು ಎಂದರು. ತಮ್ಮ ಮಕ್ಕಳು ಎಲ್ಲಾದರೂ ಆಕ್ಸಿಡೆಂಟ್ ಮಾಡಿಕೊಂಡು ಕೈಕಾಲು ಮುರಿದುಕೊಂಡು ಜೀವನಪೂರ್ತಿ ನರಕಯಾತನೆ ಪಡುವ ಬದಲು ವಾಹನ ಕೊಡದೇ ಇರುವುದು ಒಳಿತು ಈ ಬಗ್ಗೆ ಹೆತ್ತವರು ಚಿಂತನೆ ಮಾಡಬೇಕು ಎಂದರು.

ಪುತ್ತೂರು: ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಯಾವುದೇ ಗ್ಯಾಪ್ ಇರಬಾರದು, ಪೊಲೀಸರು ಯಾವತ್ತೂ ಜನಸ್ನೇಹಿಗಳಾಗಬೇಕು, ಸಾರ್ವಜನಿಕರು ನೀಡುವ ಮಾಹಿತಿಯೇ ಪೊಲೀಸರಿಗೆ ಸಹಕಾರಿ ಆದ್ದರಿಂದಲೇ ಪೊಲೀಸರು ಜನರ ಸೇವಕರಾಗಿದ್ದಾರೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಪ್ರಥಮ ಪೊಲೀಸ್ ನಿರೀಕ್ಷಕ ಮಂಜುನಾಥ್ ಹೇಳಿದರು.


ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ವತಿಯಿಂದ ಮಾ.5 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಒಳಮೊಗ್ರು, ಕೆದಂಬಾಡಿ, ಅರಿಯಡ್ಕ, ಮುಂಡೂರು ಸರ್ವೆ ಗ್ರಾಮದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ಪೊಲೀಸರ ಬಗ್ಗೆ ಯಾವುದೇ ಭಯ ಇರಬಾರದು ಎಂದ ಅವರು, ಜನರ ಸಹಕಾರ ಇಲ್ಲದಿದ್ದರೆ ಯಾವುದೇ ಕೆಲಸಗಳು ನಡೆಯಲು ಸಾಧ್ಯವಿಲ್ಲ. ಮುಂದಿನ ಚುನಾವಣಾ ಸಮಯದಲ್ಲೂ ಯಾವುದೇ ರೀತಿಯ ಗೊಂದಲಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮಂಜುನಾಥ್ ಕರೆ ನೀಡಿದರು.

ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜಾಗೃತೆ ಇರಲಿ:

ಗ್ರಾಮದಲ್ಲಿ ಅಥವಾ ಪೇಟೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬೀಟ್ ಪೊಲೀಸ್‌ಗೆ ಮಾಹಿತಿ ನೀಡಿ ಎಂದ ಮಂಜುನಾಥ್‌ರವರು, ವಸ್ತುಗಳನ್ನು ಸೇಲ್ಸ್ ಮಾಡುವ ನೆಪದಲ್ಲಿ ನಿಮ್ಮ ಮನೆಗೆ ಬರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಯಾವುದೇ ರೀತಿಯ ತೊಂದರೆ ಉಂಟಾದರೆ ತಕ್ಷಣವೇ ಬೀಟ್ ಪೊಲೀಸ್‌ಗೆ ಮಾಹಿತಿ ಕೊಡಿ ಅಥವಾ 112 ಗೆ ಕರೆ ಮಾಡಿ ವಿಷಯ ತಿಳಿಸಿ ಎಂದರು. ಮುಂದೆ ವಿಧಾನಸಭಾ ಚುನಾವಣೆ ಬರುತ್ತದೆ. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾನದ ವಿಷಯದಲ್ಲಿ ಯಾರೇ ಆಗಲಿ ಬೆದರಿಸುವ ಅಥವಾ ಈ ಪಕ್ಷಕ್ಕೆ ಓಟು ಹಾಕಿ ಎಂದು ಧಮ್ಕಿ ಹಾಕುವ ಪ್ರಸಂಗ ನಡೆದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ನಾವು ನಿಮ್ಮ ರಕ್ಷಣೆಗೆ ಬರುತ್ತೇವೆ ಎಂದು ಮಂಜುನಾಥ್ ಹೇಳಿದರು.

ಡೋರ್ ಲಾಕ್ ಇರಲಿ:

ಹೆಚ್ಚಿನ ಮನೆಗಳಲ್ಲಿ ದೊಡ್ಡ ದೊಡ್ಡ ಬಾಗಿಲುಗಳು ಇರುತ್ತವೆ ಆದರೆ ಲಾಕ್ ಮಾತ್ರ ಬೀಗದ ಕಾಯಿ ಇರುವಂತಹ ಲಾಕ್ ಸಿಸ್ಟಮ್ ಇರುತ್ತದೆ. ಇದು ಅಷ್ಟೊಂದು ಸೇಪ್ ಅಲ್ಲ ಎಂದ ಮಂಜುನಾಥ್‌ರವರು, ನಾವು ದೊಡ್ಡದಾದ ಬೀಗದ ಕಾಯಿ ಹಾಕಿ ಲಾಕ್ ಮಾಡಿ ಹೋದರೆ ಕಳ್ಳನಿಗೆ ನಾವು ಮನೆಯಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇದರ ಬದಲು ಡೋರ್ ಲಾಕ್ ಸಿಸ್ಟಮ್ ಇದ್ದರೆ ತುಂಬಾ ಒಳ್ಳೆಯದು. ಡೋರ್ ಲಾಕ್ ಮಾಡಿದರೆ ಯಾರಿಗೂ ನಾವು ಲಾಕ್ ಮಾಡಿದ್ದೇವೆ, ಮನೆಯಿಂದ ಹೊರ ಹೋಗಿದ್ದೇವೆ ಎಂಬುದು ಅಷ್ಟು ಸುಲಭದಲ್ಲಿ ತಿಳಿಯುವುದಿಲ್ಲ. ಮನೆಯಿಂದ ಎಲ್ಲಾದರೂ ವಾರಗಟ್ಟಲೆ ಟೂರ್ ಹೋಗುವುದಾದರೆ ಮನೆಯಲ್ಲಿನ ಚಿನ್ನ,ಹಣ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟು ಹೋಗುವುದು ಉತ್ತಮ ಮತ್ತು ಬೀಟ್ ಪೊಲೀಸ್‌ಗೆ ಮಾಹಿತಿ ನೀಡಿ ತೆರಳುವುದು ಸೂಕ್ತ ಎಂದು ತಿಳಿಸಿದರು.

ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶ್ರೀನಾಥ ರೆಡ್ಡಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ, 5 ಬೀಟ್ ಪೊಲೀಸ್ ಅಽಕಾರಿ ಎ.ಎಸ್.ಐ ಮುರುಗೇಶ್ ಉಪಸ್ಥಿತರಿದ್ದರು. ಸಿಬ್ಬಂದಿ ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ವರ್ಗೀಸ್, ಶಿವಾನಂದ, ಆಸ್ತಮ್, ಹರ್ಷಿತ್, ಭೀಮನ ಗೌಡ ಸಹಕರಿಸಿದ್ದರು. ಸಭೆಯಲ್ಲಿ ಪಂಚಮಿ ಗ್ರೂಪ್ ಮಾಲಕ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಲತೀಫ್ ಸಿರಾಜುದ್ದೀನ್, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರಾದ ಎಸ್.ಮಾಧವ ರೈ ಕುಂಬ್ರ, ದಿವಾಕರ ಶೆಟ್ಟಿ, ಪ್ರ.ಕಾರ್ಯದರ್ಶಿ ಭವ್ಯ ರೈ, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ರೈ ಮೇಗಿನಗುತ್ತು, ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು, ಉದ್ಯಮಿ ಯಕೂಬ್ ಮುಲಾರ್, ಎಸ್‌ಡಿಪಿಐ ಮುಖಂಡ ಮಹಮ್ಮದ್ ಕುಂಞ್ ಕುಂಬ್ರ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ, ಉದ್ಯಮಿ ಅಶೋಕ್ ಪೂಜಾರಿ, ಉದ್ಯಮಿ ಪ್ರವೀಣ್ ಪಲ್ಲತ್ತಾರು ಅಲ್ಲದೆ ಗ್ರಾಪಂ ಸದಸ್ಯರುಗಳು, ಒಳಮೊಗ್ರು, ಕೆದಂಬಾಡಿ, ಅರಿಯಡ್ಕ, ಮುಂಡೂರು ಸರ್ವೆ ಗ್ರಾಮದ ಪ್ರಮುಖರು, ವರ್ತಕರ ಸಂಘದ ಪದಾಽಕಾರಿಗಳು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

ಸಾರ್ವಜನಿಕರಿಂದ ಕೇಳಿಬಂದ ಪ್ರಶ್ನೆಗಳು

ಮೋಟಾರ್ ಸೈಕಲ್‌ನಲ್ಲಿ ಚೆಯರ್ ತುಂಬಿಕೊಂಡು ಬರುವವರ ಬಗ್ಗೆ ಗಮನ ಹರಿಸಿ: ಪದ್ಮಶ್ರೀ ಸೋಲಾರ್ ಸಿಸ್ಟಮ್‌ನ ಮಾಲಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತುರವರು ಮಾತನಾಡಿ, ರಿಕ್ಷಾದಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಜನ ಹಾಕಿದರೆ ಪೊಲೀಸರು ದಂಡ ಹಾಕುತ್ತಾರೆ. ಆದರೆ ಎಲ್ಲಿಂದಲೋ ಬಂದವರು ಬೈಕ್‌ನಲ್ಲಿ 30 ಕ್ಕೂ ಅಧಿಕ ಚೆಯರ್, ಮಿಕ್ಸಿ, ಗ್ರೈಂಡರ್, ಫ್ಯಾನ್ ಇತ್ಯಾದಿಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಓಡಾಟ ಮಾಡುತ್ತಾರೆ ಮತ್ತು ಹಳ್ಳಿಗಳಿಗೆ ತಂದು ಮಾರಾಟ ಮಾಡುತ್ತಾರೆ. ಇವರ ಪೊಲೀಸರು ಗಮನ ಹರಿಸಬೇಕು ಎಂದ ಅವರು, ಈಗಾಗಲೇ ಜಿಎಸ್‌ಟಿ ಕಟ್ಟಿ ವ್ಯಾಪಾರ ಮಾಡುವ ಅದೆಷ್ಟೋ ವ್ಯಾಪಾರಸ್ಥರಿಗೆ ಇವರು ಈ ರೀತಿ ತಂದು ಅರ್ಧ ಬೆಲೆಯಲ್ಲಿ ಮಾರಾಟ ಮಾಡುವುದರಿಂದ ತೊಂದರೆಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಮಂಜುನಾಥ್‌ರವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಇವರಿಂದ ಯಾವುದೇ ತೊಂದರೆಯಾದರೂ 112 ಗೆ ಕರೆ ಮಾಡಿ ಎಂದು ತಿಳಿಸಿದರು.

ತೋಟಕ್ಕೂ ಸಿಸಿ ಕ್ಯಾಮರ ಹಾಕಿಸಿದ್ದೇನೆ:

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಕೆಲವು ಸಮಯಗಳಿಂದ ಬೀಟ್ ಪೊಲೀಸರು ಬರುವುದು ಕಡಿಮೆಯಾಗಿದೆ ಎಂದರು. ಸಿಸಿ ಕ್ಯಾಮರ ಹಾಕಿಸುವುದು ಬಹಳ ಒಳ್ಳೆಯದು ನಾನು ನನ್ನ ಗೇರು ತೋಟ ಸಹಿತ ಕೃಷಿ ಕ್ಷೇತ್ರಕ್ಕೆ ಸಿಸಿ ಕ್ಯಾಮರ ಹಾಕಿಸಿದ್ದೇನೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ತೋಟದಲ್ಲಿ ಏನು ನಡೆಯುತ್ತೆ ಎಂಬುದನ್ನು ನೋಡುತ್ತೇನೆ ಎಂದರು. ಇದಕ್ಕೆ ಪೊಲೀಸ್ ನಿರೀಕ್ಷಕ ಮಂಜುನಾಥ್‌ರವರು ಶಹಬ್ಬಾಸ್ ಹೇಳಿದರು. ಎಲ್ಲಾ ಕೃಷಿಕರು ಇದೇ ರೀತಿ ಮಾಡಬೇಕು ಎಂದರು.

ಏಕವಚನದಲ್ಲಿ ಬೈತಾರೆ?!:

ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ, ವ್ಯಾಪಾರಸ್ಥರಾಗಿರುವ ಇಕ್ಬಾಲ್ ಹುಸೇನ್ ಕೌಡಿಚ್ಚಾರ್‌ರವರು ಮಾತನಾಡಿ, ಪೊಲೀಸರು ಜನಸ್ನೇಹಿಗಳಾಗಬೇಕು ಎಂದು ಹೇಳುತ್ತೀರಿ ಆದರೆ ನಾವು ಠಾಣೆಗೆ ಬಂದರೆ ನಮ್ಮನ್ನು ಏಕವಚನದಲ್ಲಿ ಬೈಯುವ ಪೊಲೀಸರೂ ಇದ್ದಾರೆ ಎಂದು ಆರೋಪ ಮಾಡಿದರು. ಕೌಡಿಚ್ಚಾರ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಪರ್ಮಿಷನ್‌ಗೆ ಕೌಡಿಚ್ಚಾರ್‌ನ ವ್ಯಕ್ತಿಯೊಬ್ಬರು ಠಾಣೆಗೆ ಬಂದರೆ ಅವರಿಗೆ ಠಾಣೆಯ ಸಿಬ್ಬಂದಿಯೋರ್ವರು ನಮಗೆ ಇದೊಂದೇ ಕೆಲಸ ಅಲ್ಲ ಎಂದು ಏಕವಚನದಲ್ಲಿ ಬೈದಿದ್ದಾರೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ನಿರೀಕ್ಷಕ ಮಂಜುನಾಥ್‌ರವರು ನೀವು ಠಾಣೆಗೆ ಬನ್ನಿ ಈ ಬಗ್ಗೆ ಮಾತನಾಡುವ ಎಂದು ತಿಳಿಸಿದರು.

ನಾರ್ತ್ ಇಂಡಿಯನ್‌ರವರು ವ್ಯಾಪಾರಕ್ಕೆ ಬರುತ್ತಾರೆ ಇವರ ಬಗ್ಗೆ ನಿಗಾ ಇರಲಿ:

ಎಪಿಎಂಸಿ ಮಾಜಿ ಅಧ್ಯಕ್ಷ, ನಿವೃತ್ತ ಸೈನಿಕ ಅಮ್ಮಣ್ಣ ರೈ ದೇರ್ಲರವರು ಮಾತನಾಡಿ, ನಮ್ಮ ಕಡೆಗೆ ಉತ್ತರ ಭಾರತದ ಕಡೆಯವರು ಹೆಚ್ಚಾಗಿ ವ್ಯಾಪಾರ ಮಾಡಲು ಬರುತ್ತಿದ್ದಾರೆ. ಇವರಿಗೆ ವ್ಯಾಪಾರ ಮಾಡಲು ಯಾವುದೇ ಪರವಾನಗೆ ಕೂಡ ಇಲ್ಲ, ಮನೆಗೆ ಬಂದು ಮನೆಯವರು ವಸ್ತುಗಳನ್ನು ಖರೀದಿಸದಿದ್ದರೆ ಹೆದರಿಸುವ ಕೆಲಸವನ್ನು ಕೂಡ ಮಾಡುತ್ತಾರೆ. ಇವರ ಬಗ್ಗೆ ಪೊಲೀಸ್ ಇಲಾಖೆ ನಿಗಾ ಇಡಬೇಕು ಎಂದರು. ಇದಕ್ಕೆ ಉತ್ತರಿಸಿದ ಮಂಜುನಾಥ್‌ರವರು, ಯಾರಿಂದಲೇ ಆಗಲಿ ತೊಂದರೆ ಉಂಟಾದರೆ ತಕ್ಷಣವೇ ಬೀಟ್ ಪೊಲೀಸ್‌ಗೆ ಅಥವಾ 112 ಗೆ ಕರೆ ಮಾಡಿ ಎಂದರು. ಯಾರಾದರೂ ಇಂತಹ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮೊದಲು ಅವರ ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಪರಿಶೀಲನೆ ಮಾಡಿಯೇ ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದರು.

ಉತ್ತಮ ಕ್ವಾಲಿಟಿ ಸಿಸಿ ಕ್ಯಾಮರಗಳನ್ನು ಅಳವಡಿಸಿ:

ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ, ಕುಂಬ್ರದಲ್ಲಿ ಅಳವಡಿಸಿದ ಸಿಸಿ ಕ್ಯಾಮರದ ಕ್ವಾಲಿಟಿ ಒಳ್ಳೆದಿಲ್ಲ, ರಾತ್ರಿ ಸಮಯದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ಅದರ ದೃಶ್ಯಗಳನ್ನು ಸರಿಯಾಗಿ ನೋಡಲು ಆಗುತ್ತಿಲ್ಲ, ಉತ್ತಮ ಕ್ವಾಲಿಟಿ ಕ್ಯಾಮರಗಳನ್ನು ಇಲಾಖೆ ವತಿಯಿಂದ ಅಳವಡಿಸಬೇಕು ಎಂದರು.

112 ಗೆ ಕರೆ ಮಾಡಿ:

ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಮ್ ನಂಬರ್ 112 ಅನ್ನು ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು. ತಮಗೆ ಯಾವುದೇ ಸಮಯದಲ್ಲಿ ತೊಂದರೆಯಾದರೆ ತಕ್ಷಣವೇ 112 ಗೆ ಕರೆ ಮಾಡಿ. ಕೆಲವೊಮ್ಮೆ ಹತ್ತಿರದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಇಲ್ಲದೇ ಇದ್ದರೂ ಚಿಂತೆ ಮಾಡುವ ಅಗತ್ಯ ಇಲ್ಲ. 112 ಗೆ ಕರೆ ಮಾಡಿದರೆ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ ಮತ್ತು ನಿಮ್ಮಲ್ಲಿಗೆ ಪೊಲೀಸ್ ರಕ್ಷಣೆ ದೊರೆಯುತ್ತದೆ ಎಂದು ಸಿಐ ಮಂಜುನಾಥ ತಿಳಿಸಿದರು.

ವಾಣಿಜ್ಯ ಸಂಕೀರ್ಣಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ:

ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳು ಸಿಸಿ ಕ್ಯಾಮಾರ ಅಳವಡಿಸಿದರೆ ಬಹಳ ಒಳ್ಳೆಯದು. ಅದರಲ್ಲೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ಕಡ್ಡಾಯವಾಗಿ ತಮ್ಮ ವಾಣಿಜ್ಯ ಸಂಕೀರ್ಣದ ಹೊರಗೆ ಮತ್ತು ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮಂಜುನಾಥ್‌ರವರು ಹೇಳಿದರು. ಬೆಂಗಳೂರಿನಲ್ಲಿ ಈಗಾಗಲೇ ವಾಣಿಜ್ಯ ಸಂಕೀರ್ಣಗಳಿಗೆ ಸಿಸಿ ಕ್ಯಾಮರ ಅಳವಡಿಸುವಂತೆ ನೊಟೀಸ್ ನೀಡಲಾಗುತ್ತಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ನೊಟೀಸ್ ಕೊಡುತ್ತಿಲ್ಲ. ವಾಣಿಜ್ಯ ಸಂಕೀರ್ಣದವರೇ ಮನಸ್ಸು ಮಾಡಿ ಸಿಸಿ ಕ್ಯಾಮರಾ ಅಳವಡಿಸಬೇಕು. ಸಿಸಿ ಕ್ಯಾಮರ ಕೇವಲ ಅಂಗಡಿಯ ಒಳಗೆ ಮಾತ್ರ ಅಳವಡಿಸುವುದು ಸರಿಯಲ್ಲ ಅಂಗಡಿಯ ಹೊರ ಭಾಗ ಕವರ್ ಆಗುವಂತೆ ಅಳವಡಿಸಬೇಕು. ಇದರಿಂದ ಅಂಗಡಿ, ವಾಣಿಜ್ಯ ಸಂಕೀರ್ಣಗಳಲ್ಲಿ ಯಾವುದೇ ರೀತಿಯ ಕಳ್ಳತನ ಇತ್ಯಾದಿಗಳು ಉಂಟಾದರೆ ಕಳ್ಳರನ್ನು ಪತ್ತೆ ಹಚ್ಚಲು ತುಂಬಾ ಸಹಕಾರಿಯಾಗುತ್ತದೆ ಎಂದು ಇನ್ಸ್ಪೆಕ್ಟರ್ ಮಂಜುನಾಥ ಹೇಳಿದರು.

LEAVE A REPLY

Please enter your comment!
Please enter your name here