ಉಪ್ಪಿನಂಗಡಿಯಲ್ಲಿ ಸಂಗಮ ಉತ್ಸವ ಉದ್ಘಾಟನೆ

0


ಉಪ್ಪಿನಂಗಡಿ: ದೇವಾಲಯಗಳ ಅಭಿವೃದ್ಧಿಗೆ ಅನುದಾನವನ್ನು ನೀಡುವ ಮೂಲಕ ಬಹು ಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಪೂರಕವಾದ ಕೆಲಸವನ್ನು ಸರಕಾರವಿಂದು ಮಾಡುತ್ತಿದೆ. ದೇವಾಲಯಗಳಿಂದಲೂ ಕೂಡಾ ಧಾರ್ಮಿಕ ಶಿಕ್ಷಣ, ಕಲಾರಾಧನೆ, ಜೀರ್ಣೋದ್ಧಾರಗಳನ್ನು ನಡೆಸುವ ಮೂಲಕ ಜನರನ್ನು ಧಾರ್ಮಿಕತೆಯೆಡೆಗೆ ಕೊಂಡೊಯ್ಯುವ ಕೆಲಸಗಳು ಆಗುತ್ತಿವೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.


ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವದ ಪ್ರಯುಕ್ತ ದೇವಾಲಯದ ಬಳಿಯ ನೇತ್ರಾವತಿ ನದಿ ಕಿನಾರೆಯ ಸಹಸ್ರ ರಂಗಮಂಟಪ'ದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಾ.೪ರಿಂದ ೧೦ರವರೆಗೆ ಪ್ರತಿ ದಿನ ಸಂಜೆ ನಡೆಯಲಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಸಂಗಮ ಉತ್ಸವ’ ಕಾರ್ಯಕ್ರಮವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ದೇವಾಲಯಗಳಲ್ಲಿ ಧಾರ್ಮಿಕತೆಯ ಶಿಕ್ಷಣ ನೀಡುವ ಮೂಲಕ ಮುಂದಿನ ಪೀಳಿಗೆಯನ್ನು ಸಮಾಜದಲ್ಲಿ ಆಚಾರ- ವಿಚಾರ ಸಂಪನ್ನರಾಗಿ ಧರ್ಮೀಷ್ಠರಾಗಿ ಮಾಡಲು ಸಾಧ್ಯ ಎಂದ ಅವರು, ಇಂತಹ ಉತ್ಸವಗಳ ಆಯೋಜನೆಯಿಂದ ನಮ್ಮ ಸಾಂಸ್ಕೃತಿಕ ವೈಭವ ನಾಡಿಗೆ ಪರಿಚಯವಾಗಲು ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಸೂರ್‍ಯನಾರಾಯಣ ಭಟ್ ಕಶೆಕೋಡಿ ಮಾತನಾಡಿ, ಧಾರ್ಮಿಕ ಕ್ಷೇತ್ರಕ್ಕೆ ನಿತ್ಯ ನಿರಂತರ ಭಕ್ತಾದಿಗಳು ಬರುವಂತಾಗಬೇಕು. ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡಾಗ ಇದು ಸಾಧ್ಯವಿದೆ. ದೇವರಿಗೆ ಅರ್ಪಿಸುವ ನೈವೇದ್ಯದ ಫಲ ಅನ್ನದಾನಕ್ಕಿದ್ದು, ಭಕ್ತರಿಗೆ ಅನ್ನದಾನ ನೀಡುವ ಕಾರ್ಯವೂ ಕ್ಷೇತ್ರಗಳಲ್ಲಿ ನಡೆಯಬೇಕು. ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವು ಉತ್ತಮ ಅಭಿವೃದ್ಧಿಯನ್ನು ಸಾಧಿಸಿದ್ದು, ಕಾಣುವ ಕನಸುಗಳು ದೊಡ್ಡದಿದ್ದರಿಂದ ಇದು ಸಾಧ್ಯವಾಗಿದೆ ಎಂದರು.


ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಮಾತನಾಡಿ ಶುಭಹಾರೈಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ವಾದಕ ಕೃಷ್ಣಪ್ರಸಾದ್ ಹಾಗೂ ದೇವಾಲಯದಲ್ಲಿ ಮಕ್ಕಳಿಗೆ ತಾಯಿಯಂದಿರು ಸ್ತನ್ಯಪಾನ ಮಾಡಿಸಲು `ಶಿಶು ಪೋಷಣಾ ಕೊಠಡಿ’ಯನ್ನು ಸಮರ್ಪಿಸಿದ ಬಾಬು ಗೌಡ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ದೇವಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಜಯಂತ ಪೊರೋಳಿ, ಹರೀಶ್ ಉಪಾಧ್ಯಾಯ, ಪ್ರೇಮಲತಾ ಕಾಂಚನ, ರಾಮ ನಾಯ್ಕ, ಸುನೀಲ್ ಎ., ಪ್ರಮುಖರಾದ ಚಂದಪ್ಪ ಮೂಲ್ಯ, ಸುನೀಲ್ ಕುಮಾರ್ ದಡ್ಡು, ಸುರೇಶ್ ಗೌಂಡತ್ತಿಗೆ, ಜಗದೀಶ್ ಶೆಟ್ಟಿ, ವಿನೀತ್ ಶಗ್ರಿತ್ತಾಯ, ಕೈಲಾರು ರಾಜಗೋಪಾಲ ಭಟ್, ಪ್ರಸನ್ನ ಕುಮಾರ್ ಪೆರಿಯಡ್ಕ, ವಿಶ್ವನಾಥ ಶೆಟ್ಟಿ ಕಂಗ್ವೆ, ಚಂದ್ರಶೇಖರ ಮಡಿವಾಳ, ವಿಜಯಕುಮಾರ್ ಕಲ್ಲಳಿಕೆ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಸ್ವಾಗತಿಸಿದರು. ಡಾ. ಗೋವಿಂದ ಪ್ರಸಾದ ಕಜೆ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಪದ್ಮನಾಭ ಸಹಕರಿಸಿದರು.
ಬಳಿಕ ಕೃಷ್ಣಪ್ರಸಾದ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ಹಾಗೂ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಯಿತು.

ಝಗಮಗಿಸುತ್ತಿರುವ ಉಪ್ಪಿನಂಗಡಿ

ದೇವಾಲಯದ ಜಾತ್ರೆಯ ಪ್ರಯುಕ್ತ ಏಳು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ `ಸಂಗಮ ಉತ್ಸವ’ವು ಉಪ್ಪಿನಂಗಡಿಯಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, ಉಪ್ಪಿನಂಗಡಿಯಲ್ಲಿರುವ ನೇತ್ರಾವತಿ, ಕುಮಾರಧಾರ ಸೇತುವೆ ಸೇರಿದಂತೆ ಪೇಟೆಯಿಡೀ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಅಲ್ಲದೇ ದೇವಾಲಯದ ಪರಿಸರದಲ್ಲಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವ ಸ್ಟಾಲ್‌ಗಳು, ಆಟಿಕೆ ಮಳಿಗೆಗಳು ಬಂದಿವೆ. ವಿಶೇಷವಾಗಿ ಜೇಸಿಐಯ ಉಪ್ಪಿನಂಗಡಿ ಘಟಕದ ವತಿಯಿಂದ ನದಿ ತೀರದಲ್ಲಿ ಅಕ್ಕಿ ರೊಟ್ಟಿಯ ಸ್ಟಾಲ್ ತೆರೆಯಲಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮನೋಲ್ಲಾಸ ನೀಡಲು ಜಾಯಿಂಟ್ ವ್ಹೀಲ್‌ಗಳು ನದಿ ಕಿನಾರೆಯಲ್ಲಿ ಸಜ್ಜಾಗಿ ನಿಂತಿವೆ. ಒಟ್ಟಿನಲ್ಲಿ ಈ ಬಾರಿಯ ಜಾತ್ರೆಗೆ ಸಂಗಮ ಉತ್ಸವ ಹೊಸ ಮೆರುಗನ್ನು ನೀಡುವುದರೊಂದಿಗೆ ಉಪ್ಪಿನಂಗಡಿಗೆ ಹೊಸ ಕಳೆಯನ್ನು ನೀಡಿದೆ.

LEAVE A REPLY

Please enter your comment!
Please enter your name here