ಸಂಪ್ಯ: ಎನ್‌ಐಎ ಬೆಂಗಾವಲು ವಾಹನ, ಬೈಕ್ ಡಿಕ್ಕಿ; ಪಾಣಾಜೆ ಸಿಎ ಬ್ಯಾಂಕ್‌ನ ಸಿಇಒ ಲಕ್ಷ್ಮಣ ನಾಯ್ಕ ಮೃತ್ಯು

0

ಪುತ್ತೂರು: ಎನ್.ಐ.ಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಮಸೀದಿ ಬಳಿ ಮಾ.5ರಂದು ರಾತ್ರಿ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ(50ವ.)ರವರು ಮೃತಪಟ್ಟಿದ್ದಾರೆ.

ಲಕ್ಷ್ಮಣ ನಾಯ್ಕ

ಪಾಣಾಜೆ ಕೋಟೆ ನಿವಾಸಿ ಲಕ್ಷ್ಮಣ ನಾಯ್ಕರವರು ಮಾ.5ರಂದು ಮಧ್ಯಾಹ್ನ ತನ್ನ ಬೈಕ್‌ನಲ್ಲಿ ಪುತ್ತೂರಿಗೆ ಬಂದಿದ್ದರು. ರಾತ್ರಿ ವೇಳೆ ಅವರು ಪುತ್ತೂರಿನಿಂದ ಪಾಣಾಜೆ ಮನೆ ಕಡೆ ವಾಪಸ್ಸಾಗುತ್ತಿದ್ದಾಗ ಸಂಪ್ಯ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಎನ್‌ಐಎ ಬೆಂಗಾವಲು ವಾಹನ ಮತ್ತು ಇವರ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಲಕ್ಷ್ಮಣ ನಾಯ್ಕ ಅವರ ಹೆಲ್ಮೆಟ್ ಹುಡಿಯಾಗಿದ್ದು ಅವರ ತಲೆಗೆ ಬಲವಾದ ಗಾಯವಾಗಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸಂದರ್ಭ ಅದೇ ರಸ್ತೆಯಾಗಿ ಹೋಗುತ್ತಿದ್ದ ನಗರಸಭಾ ಮಾಜಿ ಸದಸ್ಯ ರಮೇಶ್ ರೈ ಅವರು ತಕ್ಷಣ ಗಾಯಾಳುವನ್ನು ಸ್ಥಳೀಯರ ಸಹಕಾರದೊಂದಿಗೆ ಆಟೋ ರಿಕ್ಷಾವೊಂದರಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತಂದರು. ಆದರೆ ಆ ವೇಳೆಗೆ ಲಕ್ಷ್ಮಣ ನಾಯ್ಕ ಅವರು ಮೃತಪಟ್ಟಿದ್ದರು.

ಲಕ್ಷ್ಮಣ ನಾಯ್ಕ್ ಅವರು ಕಳೆದ 10 ವರ್ಷಗಳಿಂದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1999ರಲ್ಲಿ ಸಂಘದಲ್ಲಿ ಕೆಲಸಕ್ಕೆ ಸೇರಿದ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದರು. ಮೃತರು ತಾಯಿ ಸರಸ್ವತಿ, ಪಾಣಾಜೆ ವಿವೇಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಅನುರಾಧ, ಪುತ್ರಿಯರಾದ ತೃಷಾ ಮತ್ತು ತನ್ವಿ, ಸಹೋದರ ರಾಮ ನಾಯ್ಕ್, ಸಹೋದರಿಯರಾದ ಪುಷ್ಪಾ, ಶಶಿಕಲಾ ಅವರನ್ನು ಅಗಲಿದ್ದಾರೆ.

ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಮಾಜಿ ಸದಸ್ಯ ರಮೇಶ್ ರೈ, ಕೆಎಮ್‌ಎ- ನಿರ್ದೇಶಕ ನಾರಾಯಣ ಪ್ರಕಾಶ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಬಿಜೆಪಿ ಹಿಂದುಳಿದ ಮೋರ್ಚಾಗಳ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸಹಿತ ನೂರಾರು ಮಂದಿ ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿದ್ದ ಮೃತ ದೇಹದ ಅಂತಿಮ ದರ್ಶನ ಮಾಡಿದರು. ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್, ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಆಸ್ಪತ್ರೆಗೆ ಭೇಟಿ ನೀಡಿ ನೀಡಿ ಮೃತ ಸಂಬಂಽಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಪೊಲೀಸರ ನಿರ್ಲಕ್ಷ್ಯ ಆರೋಪ-ಶಾಸಕರಲ್ಲಿ ದೂರು

ಅಪಘಾತ ನಡೆದ ಸಂದರ್ಭಎನ್‌ಐಎ ಬೆಂಗಾವಲು ವಾಹನದ ಪೊಲೀಸರು ಗಂಭೀರ ಗಾಯಗೊಂಡಿದ್ದ ಲಕ್ಷ್ಮಣ ನಾಯ್ಕ್‌ರವರನ್ನು ತಮ್ಮ ವಾಹನದಲ್ಲಿ ಕರೆದೊಯ್ಯಲು ಮುಂದೆ ಬಂದಿಲ್ಲ. ಬಳಿಕ ನಾವು ಆಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತರಬೇಕಾಯಿತು ಎಂದು ಲಕ್ಷ್ಮಣ ನಾಯ್ಕರವರನ್ನು ಆಸ್ಪತ್ರೆಗೆ ಕತೆತಂದವರು ಹೇಳಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ಕುರಿತು ಆಸ್ಪತ್ರೆಯಲ್ಲಿ ನೆರೆದ ಮಂದಿ ಶಾಸಕರಲ್ಲಿ ದೂರು ನೀಡಿದರಲ್ಲದೆ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರನ್ನು ಒತ್ತಾಯಿಸಿದ ಘಟನೆಯೂ ನಡೆಯಿತು.

ಉತ್ತಮ ಕ್ರಿಕೆಟ್ ಪ್ಲೇಯರ್

ಲಕ್ಷ್ಮಣ್ ನಾಯ್ಕ್ ಅವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಅವರು ಕೆಲಸಕ್ಕೆ ಸೇರಿದ ಬಳಿಕವು ಇತ್ತೀಚಿನ ದಿನದಲ್ಲೂ ಕ್ರಿಕೆಟ್ ತಂಡವೊಂದರಲ್ಲಿ ಆಡುತ್ತಿದ್ದರು ಎಂದು ಅವರ ಜೊತೆಗಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here