- ಕರ್ನಾಟಕದಲ್ಲಿ ಬದಲಾವಣೆ ಪರ್ವ, ದ.ಕ.ದ 8 ಕ್ಷೇತ್ರದಲ್ಲೂ ಗೆಲುವು ನಮ್ಮದೆ -ಪ್ರತಾಪ್‌ಸಿಂಹ ನಾಯಕ್
- ನೂರು ಗಂಗಾ ಕಲ್ಯಾಣ ತಿಂಗಳೊಳಗೆ ನೀಡಲು ಬದ್ಧ – ಸಂಜೀವ ಮಠಂದೂರು
- ಎಸ್ಟಿ ಸಮುದಾಯ ಬಿಜೆಪಿ ಜೊತೆಗಿದೆ- ಸುದರ್ಶನ್ ಮೂಡಬಿದ್ರೆ
- ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ನೀಡಿದ್ದು ಮೋದಿ ಸರಕಾರ ಮಾತ್ರ- ಚೆನ್ನಕೇಶವ
ಪುತ್ತೂರು: ಕರ್ನಾಟಕದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಹಾಗೆಂದು ನಾವು ಸುಮ್ಮನೆ ಕೂರಬಾರದು. ದಕ್ಷಿಣ ಕನ್ನಡದ 8 ವಿಧಾನಸಭಾ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯಿಂದ ನಮ್ಮ ಕೆಲಸ ಕಾರ್ಯ ನಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ರವರು ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಿಜೆಪಿ ವತಿಯಿಂದ ನಡೆಯುವ ವಿಜಯ ಸಂಕಲ್ಪ ಯಾತ್ರೆ, ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮಾವೇಶ, ಪ್ರಗತಿ ರಥ ವಾಹನ, ಪ್ರಣಾಳಿಕೆಗೆ ಸಲಹೆ ಕಾರ್ಯಕ್ರಮದಲ್ಲಿ ಮೋರ್ಚಾಗಳ ಸಮಾವೇಶಕ್ಕೆ ಸಂಬಂಧಿಸಿ ಮಾ.5ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಎಸ್ಟಿ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಥಮ ಸಮಾವೇಶದಲ್ಲಿ ಅವರು ಮುಖ್ಯಭಾಷಣ ಮಾಡಿದರು.
ಅಂದು ಛತ್ರಪತಿ ಶಿವಾಜಿಯ ಜೊತೆ ಹೆಗಲಿಗೆ ಹೆಗಲುಕೊಟ್ಟ ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಂದಾಗಿ ನಾವೆಲ್ಲ ಇವತ್ತು ಹಿಂದುಗಳೆಂದು ಹೇಳಿಕೊಳ್ಳುತ್ತಿದ್ದೇವೆ. ಪರಿಶಿಷ್ಟ ಜಾತಿಗೆ ವಿಶೇಷ ಸ್ಥಾನಮಾನವಿದೆ. ಮೊದಲ ಬಾರಿಗೆ ಎಸ್.ಟಿ ಜನಾಂಗಕ್ಕೆ ವಿಶೇಷ ಮಂತ್ರಾಲಯ ಮಾಡಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ನೀಡಲು ಪ್ರಧಾನ ಮಂತ್ರಿಯವರ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು. ಇವತ್ತು ಈಶಾನ್ಯದಲ್ಲಿ ಮಾತ್ರವಲ್ಲ ಕಾಶ್ಮೀರದಲ್ಲೂ ಬದಲಾವಣೆ ಕಾಣುತ್ತಿದ್ದೇವೆ. ಅಭಿವೃದ್ದಿ ವಿಚಾರದಲ್ಲಿ ಜಾತಿ ಬರುವುದಿಲ್ಲ. ಊರಿಗೆ ಒಳ್ಳೆಯದಾದರೆ ಅಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ನೋಡುವುದಿಲ್ಲ. ರಾಜೀವ ಗಾಂಧಿಯವರು ಹೇಳಿದಂತೆ ಕೇಂದ್ರದ 1 ರೂಪಾಯಿಯಲ್ಲಿ ಜಸನಾಮಾನ್ಯರಿಗೆ ತಲುಪುವುದು ಕೇವಲ 15 ಪೈಸೆ, ಪಂಡಿತ್ ನೆಹರು ಹೇಳಿದಂತೆ ಪ್ರತಿಮನೆಯಲ್ಲಿ ಶೌಚಾಲಯ ಆದಾಗ ಸ್ವಾತಂತ್ರ್ಯ, ಕಡು ಬಡವನಿಗೆ ಊಟ ಈ ಎಲ್ಲಾ ವಿಚಾರಗಳಿಗೆ ಬಿಜೆಪಿ ಸರಕಾರ ಪರಿಹಾರ ಕಂಡು ಹಿಡಿದೆ. ಹಾಗಾಗಿ ಇವತ್ತು ನಾವು ಬದಲಾವಣೆ ತರುವ ದೊಡ್ಡ ಪರ್ವ ಕಾಲದಲ್ಲಿದ್ದೇವೆ. ನೂರು ವರ್ಷಗಳ ಬಳಿಕ ಬಂದ ಮಹಾಮಾರಿ ಕೋವಿಡ್ ಎರಡೇ ವರ್ಷದಲ್ಲಿ ಸ್ತಬ್ದ. ಇಂದು ಭಾರತ ಏನಾದರು ಸಾಧಿಸಿದರೆ ಅದರ ಪ್ರಯೋಜನ ಜಗತ್ತಿಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಈ ಭಾರಿ ಬಹುಮತದ ಸರಕಾರ ನಮ್ಮದು ಬರಲಿದೆ. ದಕ್ಷಿಣ ಕನ್ನಡದಲ್ಲಿ 8 ಕ್ಕೆ 8 ಸ್ಥಾನವನ್ನು ನಾವೇ ಗೆಲ್ಲುತ್ತೇವೆ. ಆ ಮೂಲಕ ಭಾರತಕ್ಕೆ ಒಂದು ಶಕ್ತಿಯನ್ನು ಕೊಡಲಿದ್ದೇವೆ ಎಂದರು.
100 ಗಂಗಾ ಕಲ್ಯಾಣ ತಿಂಗಳೊಳಗೆ ನೀಡಲು ಬದ್ಧ: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಪಂಗಡಕ್ಕೆ ವಿಶೇಷ ಸ್ಥಾನ ಮಾನ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಜನಸಂಖ್ಯೆ ಉಳ್ಳವರೆಂದು ಎರಡು ಪ್ರತ್ಯೇಕ ಸಚಿವಾಲಯ ಮಾಡಲಾಯಿತು. ಮೀಸಲಾತಿಯನ್ನು ಶೇ.2 ರಿಂದ 7ಕ್ಕೆ ಏರಿಸಲಾಯಿತು, ಕೃಷಿಗಿರುವ ಕಾನೂನು ತೊಡಕನ್ನು ಸರಿ ಮಾಡಲು ಭೂಪರಿವರ್ತನೆಗೂ ಪಿಟಿಸಿಎಲ್ ಆಕ್ಟ್ ತಿದ್ದುಪಡಿ ಮಾಡಲಾಯಿತು. ಕಾಲೋನಿಗಳ ಅಭಿವೃದ್ದಿ, ವಿಧಾನಸಭಾ ಕ್ಷೇತ್ರಕ್ಕೆ ಸಹಾಯಧನದ ಮೂಲಕ 100 ದ್ವಿಚಕ್ರ ವಾಹನ, ಗುತ್ತಿಗೆದಾರ ಆಗುವ ಅವಕಾಶ ಸಹಿತ ಹಲವಾರು ಕಾರ್ಯಕ್ರಮ ಸರಕಾರ ನೀಡಿದೆ. ಕೇರಳದಿಂದ ಮದುವೆಯಾಗಿ ಬಂದವರಿಗೆ ಜಾತಿ ಪ್ರಮಾಣ ಪತ್ರದ ಸಮಸ್ಯೆ, ಕೃಷಿಗೆ ಜಾಯಿಂಟ್ ಆರ್.ಟಿ.ಸಿ ಸಮಸ್ಯೆಯನ್ನು ಮುಂದಿನ ದಿನ ಸರಕಾರದ ಮೂಲಕ ಇತ್ಯರ್ಥ ಮಾಡಲು ನಾನು ಬದ್ದನಾಗಿದ್ದೇನೆ. ಅದೇ ರೀತಿ ಈ ಆರ್ಥಿಕ ವರ್ಷದಲ್ಲಿ 100 ಗಂಗಾ ಕಲ್ಯಾಣ ನೀಡುವ ವ್ಯವಸ್ಥೆ ಮಾಡಿದ್ದು, ಒಂದು ತಿಂಗಳೊಳಗೆ ಅದನ್ನು ಕೊಡಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಎಸ್ಟಿ ಸಮುದಾಯ ಬಿಜೆಪಿ ಜೊತೆಗಿದೆ: ಸಮಾವೇಶವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ಮಾತನಾಡಿ, ಪರಿಶಿಷ್ಟ ಪಂಗಡದ ಸಮಾಜ ಬಿಜೆಪಿ ಜೊತೆ ಇದೆ ಎಂದು ಪುತ್ತೂರಿನಲ್ಲಿ ನಡೆದ ಮೊದಲ ಸಮಾವೇಶದಲ್ಲೇ ಕಂಡು ಬಂದಿರುವುದು ಸಂತೋಷ ಆಗಿದೆ. ಬಿಜೆಪಿ ಅಧಿಕಾರದ ಗದ್ದುಗೆ ಏರಬೇಕೆಂದು ನಡೆಸುವ ಉದ್ದೇಶದಿಂದ ಸ್ಥಾಪಿತವಾದದ್ದಲ್ಲ. ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡಬೇಕೆಂಬ ಸಂಕಲ್ಪದಿಂದ ಈ ಪಾರ್ಟಿ ಬಂದಿದೆ. ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು, ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡುವ ದೃಢ ನಿರ್ಧಾರ ಬಿಜೆಪಿಯದ್ದು, ಎಸ್ಟಿ ಸಮುದಾಯದ ಎಲ್ಲಾ ತೊಡಕುಗಳನ್ನು ನಿವಾರಣೆ ಮಾಡಿ ಸಮಸ್ಯೆ ಬಾರದ ರೀತಿಯಲ್ಲಿ ಅನೇಕ ಯೋಜನೆ, ಜಾರಿಗೆ ತರುವ ಮೂಲಕ ಸಮಾಜದ ಬಂಧುಗಳನ್ನು ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಗೆ ಹೊಸ ಶಕ್ತಿ ನೀಡಲು ಈ ಸಮಾವೇಶ ಮಾಡಲಾಗಿದೆ ಎಂದರು.
ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ನೀಡಿದ್ದು ಮೋದಿ ಸರಕಾರ ಮಾತ್ರ: ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಪರಿಶಿಷ್ಟ ಪಂಗಡದ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅವರು ಮಾತನಾಡಿ, ಸರಕಾರದ ಯೋಜನೆ, ಅಭಿವೃದ್ಧಿ ಬಗ್ಗೆ ಅರ್ಥಮಾಡಿಕೊಂಡಿರುವುದು ಈ ಸಮಾವೇಶದಲ್ಲಿ ಕಾಣುತ್ತಿದೆ. ಇತರ ಪಕ್ಷಗಳು ಸಮಾಜದ ಕಟ್ಟಕಡೆ ಎಂದು ಹೇಳಿದ್ದು ಮಾತ್ರವಲ್ಲದೆ ಯಾವ ಸವಲತ್ತು ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ನಮ್ಮ ಅಭಿವೃದ್ದಿಯಾಗಿದೆ. ಈ ಹಿಂದೆ ತುಘಲಕ್, ಬಹುಮನಿ ಸಾಮ್ರಾಜ್ಯ ಕೇಳಿದ್ದೇವೆ ಹೊರತು ನಮ್ಮ ಸಮುದಾಯದ ಭಗವಾನ್ ಬಿರ್ಸೆ ಕೂಡಾ ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರೆಂದು ತಿಳಿಸಲು ಇವತ್ತು ನಮಗೆ ನಮ್ಮ ಪ್ರಧಾನಿ ಮೋದಿ ಬರಬೇಕಾಯಿತು ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿ.ಪಂ ನಿವೃತ್ತ ಸಿಇಒ ಸುಂದರ ನಾಯ್ಕ್, ನಿವೃತ್ತ ಜಿಲ್ಲಾಧಿಕಾರಿ ಯು.ಕೆ ನಾಯ್ಕ್, ಪಶುವೈದ್ಯ ಡಾ ಗೋವಿಂದ, ಸಮಾಜ ಸೇವಕ ವಿಶ್ವನಾಥ ನಾಯ್ಕ, ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಸದಸ್ಯ ವೆಂಕಪ್ಪ ನಾಯ್ಕ, ಪಕ್ಷದ ಹಿರಿಯ ಮಹಿಳಾ ಕಾರ್ಯಕರ್ತೆ ಜಯಲಕ್ಷ್ಮೀ ಮೂಡಬಿದ್ರೆ, ಪ್ರಗತಿಪರ ಕೃಷಿಕ ಗೋಪಾಲ ನಾಯ್ಕ ಮೂಡಬಿದ್ರೆ, ಸಮಾಜ ಸೇವಕ ಕೃಷ್ಣನಾಯ್ಕ್ ಅವರನ್ನು ಮತ್ತು ಕ್ರೀಡಾ ಸಾಧಕರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಎಸ್ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎರ್ಮೆನಾಡು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಬೆಳ್ತಂಗಡಿ, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಕಸ್ತೂರಿ ಪಂಜ, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ, ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕರ್ಕೆರ, ಸಹ ಸಂಚಾಲಕ ಸಂದೇಶ ಶೆಟ್ಟಿ, ವೆಂಕಟ್ ವಳಲಂಬೆ, ಎಸ್ಟಿ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ಶೀವಪ್ಪ ನಾಯ್ಕ, ಸುಳ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಐತ್ತಪ್ಪ ನಾಯ್ಕ್, ಮಂಗಳೂರು ಉತ್ತರ ಎಸ್ಟಿ ಮೋರ್ಚಾ ಅಧ್ಯಕ್ಷ ಅಶೋಕ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವನಿತಾ ನೆಕ್ಕಿಲಾಡಿ, ಋತ್ವಿಕ್ ಬೊಳುವಾರು ವಂದೇ ಮಾತರಂ ಹಾಡಿದರು. ದ.ಕ ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ ಸ್ವಾಗತಿಸಿದರು. ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಟಿ ಮೋರ್ಚಾದ ನಗರ ಮಂಡಲದ ಅಧ್ಯಕ್ಷ ಅಶೋಕ್ ಕುಮಾರ್ ವಂದಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಮುಂಡೋವುಮೂಲೆ, ಸುಮಿತ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಿದ್ದರಾಮಯ್ಯರವರು ಬಿಜೆಪಿಗೂ ಮತ ಕೇಳ್ತಾರೆ
ಸಿದ್ದರಾಮಯ್ಯರವರ ಮನಸ್ಸಿನಲ್ಲಿ ಬಿಜೆಪಿ ಎಷ್ಟು ಇದೆ ಎಂದರೆ ಅವರು ತಮ್ಮ ಭಾಷಣದಲ್ಲೂ ಬಿಜೆಪಿಗೆ ಓಟು ಕೊಡಿ ಎಂದು ಹೇಳುತ್ತಾರೆ. ಆದರೆ ಲಸಿಕೆ ಕಂಡು ಹುಡುಕಿದರೆ ಅದು ಬಿಜೆಪಿ ಲಸಿಕೆ ಎಂದು ಟೀಕಿಸಿ, ಮತ್ತೆ ಕದ್ದು ಮುಚ್ಚಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಸೋತರೆ ಇವಿಎಮ್ ಸರಿಯಿಲ್ಲ ಎಂದು ಹೇಳುತ್ತಾರೆ.
ಪ್ರತಾಪ್‌ಸಿಂಹ ನಾಯಕ್
ವಿಧಾನಪರಿಷತ್ ಸದಸ್ಯರು