ಪಾಣಾಜೆ: ಅಪಘಾತದಲ್ಲಿ ಮೃತ್ಯುಗೀಡಾದ ಲಕ್ಷ್ಮಣ ನಾಯ್ಕ್ ರವರ ಅಂತಿಮ ದರ್ಶನ

0

ಪಾಣಾಜೆ: ಸಂಪ್ಯ ಮಸೀದಿ ಬಳಿ ಎನ್‌ಐಎ ಪೊಲೀಸ್ ಜೀಪು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೃತ್ಯುಗೀಡಾದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಾಣಾಜೆ ಕೋಟೆ ನಿವಾಸಿ ಲಕ್ಷ್ಮಣ ನಾಯ್ಕ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ, ಅಂತ್ಯಕ್ರಿಯೆ ಮಾ. 6 ರಂದು ನಡೆಯಿತು.

ಬೆಳಿಗ್ಗೆ ಪುತ್ತೂರಿನಿಂದ ಆಂಬುಲೆನ್ಸ್ ಮೂಲಕ ಬಂದ ಪಾರ್ಥಿವ ಶರೀರವನ್ನು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಯಿತು. ಈ ವೇಳೆ ಪಾಣಾಜೆ ಗ್ರಾಮದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ನೆರೆದು ಅಂತಿಮ ದರ್ಶನ ಪಡೆದರು.

ನಂತರ ಅವರ ಸ್ವಗೃಹ ಕೋಟೆ ಮನೆಗೆ ಕರಡದೊಯ್ದು ಅಂತಿಮ‌ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮನೆಯಲ್ಲಿಯೂ ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು ಸಾರ್ವಜನಿಕರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಮುಗಿಲು ಮುಟ್ಟಿದ ಆಕ್ರಂದನ
ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಮೃತರ ಮನೆಯವರ ಆಕ್ರಂದನ ಮುಗಿಲುಮುಟ್ಟಿತ್ತು. ಪತ್ನಿ, ಮಕ್ಕಳು, ಸಹೋದರಿಯರ ಕೂಗು ಕಲ್ಲೆದೆಯನ್ನೂ ಕರಗಿಸುವಂತಿತ್ತು. ಆಕಸ್ಮಿಕ ಮರಣದಿಂದ‌ ಬರಸಿಡಿಲು ಬಡಿದಂತಾದ ಪರಿಸ್ಥಿತಿ, ಹತಾಶೆ, ಎಳೆಯ ಕಂದಮ್ಮಗಳ ಮುಗ್ದ ಭಾವದ ಅಳಲು ನೆರೆದವರ ಕಣ್ಣಲ್ಲೂ ನೀರು ಬರಿಸುತ್ತಿತ್ತು.

ಸಜ್ಜನ ವ್ಯಕ್ತಿಯಾಗಿದ್ದರು
ಮೃತ ಲಕ್ಷ್ಮಣ ನಾಯ್ಕ್ ರವರು ಸರಳ‌ ಸಜ್ಜನಿಕೆಗೆ ಇನ್ನೊಂದು ಹೆಸರಾಗಿದ್ದರು. ತನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದವರು. ಆದಿತ್ಯವಾರ‌ ರಜೆಯ ದಿನವಾದರೂ ಬ್ಯಾಂಕಿನ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಪುತ್ತೂರಿಗೆ ಹೋದವರು ಮರಳಿ ಮನೆಗೆ ಹೋಗುವಾಗ ವಿಧಿಯಾಟಕ್ಕೆ ಬಲಿಯಾಗಿದ್ದರು.

LEAVE A REPLY

Please enter your comment!
Please enter your name here