ಹಲವು ವರ್ಷಗಳ ಬೇಡಿಕೆ ಈಡೇರಲೇ ಇಲ್ಲ
ಪರ್ಪುಂಜ-ದರ್ಬೆತ್ತಡ್ಕ ಸಂಪರ್ಕ ರಸ್ತೆಗೆ ಸಿಗದ ಸೇತುವೆ ಭಾಗ್ಯ..?!

0

@ ಸಿಶೇ ಕಜೆಮಾರ್

ಪುತ್ತೂರು: ಅದು ಬರೋಬ್ಬರಿ 30 ವರ್ಷಗಳ ಹಿಂದಿನ ಕಿರುಸೇತುವೆ. ಕೇವಲ ಒಂದು ಜೀಪು ಕಷ್ಟಪಟ್ಟು ಸಂಚರಿಸುವಷ್ಟು ಅಗಲವಿರುವ ಈ ಸೇತುವೆ ಇದೀಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸೇತುವೆಯ ತಡೆಬೇಲಿ ತುಕ್ಕು ಹಿಡಿದು ತುಂಡಾಗಿ ಬೀಳುತ್ತಿದೆ. ಸೇತುವೆಯ ಅಡಿ ಭಾಗ ಅಲ್ಲಲ್ಲಿ ಬಿರುಕು ಅಪಾಯದ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಈ ಸೇತುವೆಯ ಮೇಲೆ ಸಂಚರಿಸಲು ಭಯ ಆಗುತ್ತಿದೆ. ಒಂದು ಮಿನಿ ಲಾರಿ ಹೋಗಲು ಸಾಧ್ಯವಿರದ ಈ ಸೇತುವೆಯನ್ನು ಬದಲಾಯಿಸಿ ದೊಡ್ಡದಾದ ಸೇತುವೆ ನಿರ್ಮಿಸಿ ಕೊಡಿ ಎಂದು ಭಾಗದ ಜನರು ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಅಂದಿನ ಶಾಸಕ ಡಿ.ವಿ ಸದಾನಂದ ಗೌಡರಿಂದ ಹಿಡಿದು ಇಂದಿನ ಸಂಜೀವ ಮಠಂದೂರು ತನಕ ಮನವಿ, ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿ ಕೂಡ ಇವರ ಮನವಿಗೆ ಬೆಲೆ ಕೊಡಲೇ ಇಲ್ಲ. ಇದೀಗ ಈ ಭಾಗದ ಜನರು ಆಕ್ರೋಶಗೊಂಡಿದ್ದಾರೆ. ಶಾಸಕರು ಈ ಸೇತುವೆಯನ್ನು ಬಂದು ನೋಡಬೇಕು, ನೋಡಿ ಏನಾದರೂ ಭರವಸೆ ಕೊಡಬೇಕು ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಈ ಭಾಗದವರೆಲ್ಲಾ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ನಿರ್ಧರಿಸಿದ್ದಾರೆ. ಇಷ್ಟಕ್ಕೂ ಸೇತುವೆ ಆಗಬೇಕಾಗಿರುವುದು ಎಲ್ಲಿ? ಅಂತೀರಾ…

ಕಲ್ಲಡ್ಕ-ಮುಳಿಯಡ್ಕದಲ್ಲಿ ಆಗಬೇಕಿದೆ ಸೇತುವೆ

ಹೌದು…ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಲಡ್ಕ ಮುಳಿಯಡ್ಕ ಎಂಬಲ್ಲಿ ಈ ಅಗಲ ಕಿರಿದಾದ ಅಪಾಯಕಾರಿ ಸೇತುವೆ ಇದೆ. ಪರ್ಪುಂಜದಿಂದ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ಭಾಗದಲ್ಲಿ ಸುಮಾರು 200 ಕ್ಕೂ ಅಧಿಕ ಮನೆಗಳಿವೆ. ಅಗಲ ಕಿರಿದಾಗಿರುವುದರಿಂದ ಮಿನಿ ಲಾರಿ ಕೂಡ ಇದರಲ್ಲಿ ಸಂಚರಿಸುತ್ತಿಲ್ಲ ಇದರಿಂದ ಕಲ್ಲಡ್ಕ ಈ ಭಾಗದ ಜನರಿಗೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಕ್ಕೆ ಮರಳು, ಕಲ್ಲು, ಕಬ್ಬಿಣ ಇತ್ಯಾದಿ ಸಾಮಾಗ್ರಿಗಳನ್ನು ಪೇಟೆಯಿಂದ ತರಬೇಕಾದರೆ ದರ್ಬೆತ್ತಡ್ಕದಿಂದ ಸುತ್ತು ಬಳಸಿ ತರಬೇಕಾಗುತ್ತದೆ.

20 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ
ಈ ಅಗಲ ಕಿರಿದಾದ ಸೇತುವೆಯಿಂದ ತೊಂದರೆಯಾಗುತ್ತಿದೆ. ಒಂದು ಲಾರಿ ಹೋಗುವಷ್ಟು ಅಗಲ ಇರುವ ಸೇತುವೆಯನ್ನು ನಿರ್ಮಿಸಿ ಕೊಡಿ ಎಂದು ಈ ಭಾಗದ ಜನರು ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಅಂದಿನ ಶಾಸಕ ಡಿ.ವಿ ಸದಾನಂದ ಗೌಡರಿಂದ ಹಿಡಿದು ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ.ಶೆಟ್ಟಿ ಹಾಗೇ ಇಂದಿನ ಶಾಸಕ ಸಂಜೀವ ಮಠಂದೂರು ತನಕ ಮನವಿ ಕೊಟ್ಟಿದ್ದಾರೆ. ಹಾಗೇ ಸಂಸದ ನಳಿನ್ ಕುಮಾರ್ ಕಟೀಲ್‌ರವರಿಗೆ ಮನವಿ ಮಾಡಿದ್ದು ಅಲ್ಲದೆ ಅವರನ್ನು ಕರೆದುಕೊಂಡು ಬಂದು ಸೇತುವೆ ಬಗ್ಗೆ ವಿವರಿಸಿದ್ದಾರೆ. ಹಾಗೇ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಹಾಗೂ ಮೌಖಿಕವಾಗಿ ತಿಳಿಸಲಾಗಿದೆ. ಆದರೆ ಯಾವೊಬ್ಬ ಜನಪ್ರತಿನಿಧಿ ಕೂಡ ಇವರ ಮನವಿಗೆ ಸ್ಪಂದನೆ ನೀಡದೇ ಇರುವುದು ಇವರಲ್ಲಿ ಆಕ್ರೋಶ ಉಂಟಾಗಲು ಕಾರಣವಾಗಿದೆ. ಗ್ರಾಮಸ್ಥರೆಲ್ಲ ಸೇರಿ ಠಸ್ಸೆ ಪೇಪರ್‌ನಲ್ಲಿ ಸಹಿ ಮಾಡಿ ಗ್ರಾಮ ಸಡಕ್ ಯೋಜನೆಗೂ ಮನವಿ ಮಾಡಿದ್ದರು. ಆದರೆ ಯಾವ ಮನವಿಗೂ ಬೆಲೆ ಸಿಗಲೇ ಇಲ್ಲ.

ಸೇತುವೆ ಅಪಾಯದ ಸ್ಥಿತಿಯಲ್ಲಿದೆ
ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಈ ಅಗಲ ಕಿರಿದಾದ ಸೇತುವೆ ಈಗ ಅಪಾಯದ ಸ್ಥಿತಿಯಲ್ಲಿದೆ. ಪ್ರತಿನಿತ್ಯ ಈ ಸೇತುವೆ ಮೇಲೆ ಕಾರು, ಜೀಪು, ದ್ವಿಚಕ್ರ ವಾಹನಗಳು ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಲೇ ಇರುತ್ತಾರೆ. ಸೇತುವೆಯ ತಡೆ ಬೇಲಿ ತುಕ್ಕು ಹಿಡಿದು ತುಂಡಾಗಿ ಬಿದ್ದಿದೆ. ಸೇತುವೆ ಅಡಿ ಭಾಗ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗಾಲದಲ್ಲಿ ಈ ಸೇತುವೆ ಮೇಲೆ ಸಂಚರಿಸುವುದೇ ಭಯ ಆಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಶೀಘ್ರದಲ್ಲಿ ಈ ಸೇತುವೆಯನ್ನು ಬದಲಾಯಿಸಿ ಹೊಸ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಶಾಸಕರೇ ದಯವಿಟ್ಟು ಬಂದು ನೋಡಿ
ಶಾಸಕರಾದ ಸಂಜೀವ ಮಠಂದೂರುರವರಿಗೂ ಈ ಸೇತುವೆ ಬಗ್ಗೆ ಈ ಭಾಗದ ಜನರು ಮನವಿ ಮಾಡಿಕೊಂಡಿದ್ದರು. ಆದರೆ ಶಾಸಕರು ಯಾವುದೇ ಸ್ಪಂದನೆ ನೀಡಿಲ್ಲ ಎಂಬ ನೋವು ಈ ಭಾಗದ ಜನರಲ್ಲಿದೆ. ಸುಮಾರು 300 ಕ್ಕೂ ಅಧಿಕ ಮನೆಯವರಿಗೆ ಪ್ರಯೋಜನಕಾರಿಯಾಗಿರುವ ಈ ಸೇತುವೆಯ ಬಗ್ಗೆ ಶಾಸಕರು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಈ ವರದಿ ಪ್ರಕಟಗೊಂಡ ಬಳಿಕವಾದರೂ ಶಾಸಕರು ಒಂದ್ಸಲ ಭೇಟಿ ಕೊಟ್ಟು ನೋಡಿ ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.

ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ!!
ಕಳೆದ ಹಲವು ವರ್ಷಗಳಿಂದ ನೀಡುತ್ತಿರುವ ನಮ್ಮ ಮನವಿಗೆ ಬೆಲೆ ಇಲ್ಲ ಎಂದ ಮೇಲೆ ನಾವ್ಯಾಕೆ ಓಟು ಹಾಕಬೇಕು ಎನ್ನುವ ಈ ಭಾಗದ ಗ್ರಾಮಸ್ಥರು ನಮ್ಮ ಬೇಡಿಕೆ ಈಡೇರದಿದ್ದರೆ ಈ ಸಲದ ಚುನಾವಣಾ ಬಹಿಷ್ಕಾರಕ್ಕೂ ಬದ್ಧ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಶಾಸಕರು ಭೇಟಿ ಕೊಡುತ್ತಾರೋ? ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ ದೊರೆಯುತ್ತದೋ ಕಾದು ನೋಡಬೇಕಾಗಿದೆ.


ಇದು ಇಂದು ನಿನ್ನೆಯ ಕಥೆ ಅಲ್ಲ, ಕಳೆದ 20 ವರ್ಷಗಳಿಂದ ನಾವು ಈ ಅಗಲ ಕಿರಿದಾದ ಸೇತುವೆಯ ಬಗ್ಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಡಿ.ವಿ ಸದಾನಂದ ಗೌಡರಿಂದ ಹಿಡಿದು ಸಂಜೀವ ಮಠಂದೂರು ತನಕ ಮನವಿ ಮಾಡಿದ್ದೇವೆ. ಯಾರೂ ಕೂಡ ನಮ್ಮ ಮನವಿಗೆ ಸ್ಪಂದನೆ ನೀಡಿಲ್ಲ. ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಇದರಿಂದ ನಮಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ಈ ಸಲದ ಚುನಾವಣ ಬಹಿಷ್ಕಾರಕ್ಕೂ ನಾವು ಸಿದ್ಧರಿದ್ದೇವೆ.
ರಮೇಶ್ ಆಳ್ವ ಕಲ್ಲಡ್ಕ, ಉದ್ಯಮಿ ಕುಂಬ್ರ

ಇದು ಪರ್ಪುಂಜ ರಾಮಜಾಲು ಗರಡಿಯಿಂದ ದರ್ಬೆತ್ತಡ್ಕ ಕುಕ್ಕುತ್ತಡಿ ಗರಡಿ ಅಲ್ಲಿಂದ ಪಡುಮಲೆ ಕೋಟಿ ಚೆನ್ನಯರ ಜನ್ಮಭೂಮಿ ಸೇರಿದಂತೆ ಹನುಮಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಅಗಲ ಕಿರಿದಾದ ರಸ್ತೆಯಿಂದ ಬಹಳಷ್ಟು ತೊಂದರೆಯಾಗುತ್ತಿದೆ. ತಕ್ಷಣವೇ ಈ ಸೇತುವೆಯನ್ನು ಕೆಡವಿ ದೊಡ್ಡದಾದ ಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮೆಲ್ಲರ ಮನವಿಯಾಗಿದೆ.
ರಾಧಾಕೃಷ್ಣ ಗೌಡ, ನಿವೃತ್ತ ಸೈನಿಕರು

LEAVE A REPLY

Please enter your comment!
Please enter your name here