ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆ, ಅವೈಜ್ಞಾನಿಕ
ಬನ್ನೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ, ಪ್ರತಿಭಟನೆಯ ಎಚ್ಚರಿಕೆ

0

ಪುತ್ತೂರು:ಗ್ರಾಮದ ಜನರಿಗೆ 24*7 ಮಾದರಿಯಲ್ಲಿ ಕುಡಿಯುವ ನೀರು ಸೌಲಭ್ಯ ಕಲ್ಪಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್‌ನ ಕಾಮಗಾರಿಗಳು ಕಳಪೆಯಾಗುತ್ತಿದೆ. ಕಾಮಗಾರಿಗಳನ್ನು ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂದು ಬನ್ನೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಭೆಯು ಮಾ.6ರಂದು ಅಧ್ಯಕ್ಷೆ ಜಯ ಎ.ರವರ ಅಧ್ಯಕ್ಷತೆಯಲ್ಲಿ ಕೆಮ್ಮಾಯಿ ಶ್ರೀವಿಷ್ಣು ಮಂಟಪದಲ್ಲಿ ನಡೆಯಿತು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಮಾಜಿ ಸದಸ್ಯ ರತ್ನಾಕರ ಪ್ರಭು ಮಾತನಾಡಿ, ಗ್ರಾಮದ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇಂದ್ರ ಸರಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಇದರ ಕಾಮಗಾರಿಗಳು ನಡೆಯುತ್ತಿದ್ದು ಟ್ಯಾಂಕ್ ನಿರ್ಮಾಣದ ಕಾಮಗಾರಿಗಳು ಅತ್ಯಂತ ಕಳಪೆಯಾಗಿ ನಡೆಯುತ್ತಿದೆ. ಟ್ಯಾಂಕ್ ನಿರ್ಮಿಸಿ ಅದರ ಕ್ಯೂರಿಂಗ್‌ಗಾಗಿ ನೀರು ಹಾಕಲು ಪಂಚಾಯತ್‌ನಿಂದ ನೀರು ಒದಗಿಸಲಾಗಿದ್ದರೂ ನೀರು ಹಾಕುತ್ತಿಲ್ಲ. ಕಾಮಗಾರಿಗಳನ್ನು ಅವೈಜ್ಞಾನಿಕ ರೀತಿಯಲ್ಲಿ ನಡೆಸಲಾಗುತ್ತಿದ್ದು ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸುವಂತೆ ಅವರು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಸದಸ್ಯ ಅಣ್ಣಿ ಪೂಜಾರಿಯವರು ಮಾತನಾಡಿ, ಚಿಕ್ಕಮುಡ್ನೂರಿನಲ್ಲಿ ನಿರ್ಮಾಣಗೊಂಡಿರುವ ಟ್ಯಾಂಕ್ ಗೋಬರ್ ಗ್ಯಾಸ್ ಟ್ಯಾಂಕ್ ಮಾದರಿಯಲ್ಲಿದೆ. ಎತ್ತರದಲ್ಲಿರುವ ಹಳೆಯ ಟ್ಯಾಂಕ್‌ನಿಂದಲೇ ಎಲ್ಲಾ ಮನೆಗಳಿಗೆ ನೀರು ಸರಬರಾಜಾಗುತ್ತಿಲ್ಲ. ಇನ್ನು ಕೆಲಭಾಗದಲ್ಲಿರುವ ಹೊಸ ಟ್ಯಾಂಕ್‌ನಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಪಿಡಿಓ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪಂಚಾಯತ್‌ಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.

ಪಂಚಾಯತ್‌ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ಮಾಹಿತಿ ನೀಡದೇ ಕಾಮಗಾರಿ ನಡೆಸಿರುವುದು ಸರಿಯಲ್ಲ ಎಂದು ಅಣ್ಣಿ ಪೂಜಾರಿ ಆರೋಪಿಸಿದರು. ಈಗಾಗಲೇ ನಡೆದ ಟ್ಯಾಂಕ್ ಪಂಚಾಯತ್‌ಗೆ ಹಸ್ತಾಂತರಗೊಂಡಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹಸ್ತಾಂತರ ಮಾಡಿಕೊಳ್ಳಲಾಗುವುದು. ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅಣ್ಣಿ ಪೂಜಾರಿ ಎಚ್ಚರಿಕೆ ನೀಡಿದರು.

ಚಿಕ್ಕಮುಡ್ನೂರು ಶಾಲಾ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ:
ಕೆಲ ದಿನಗಳ ಹಿಂದೆ ಶಿಕ್ಷಕ ವೈಯಕ್ತಿಕ ವಿಚಾರದಲ್ಲಿ ಚಿಕ್ಕಮುಡ್ನೂರು ಶಾಲೆಯಲ್ಲಿ ಘಟನೆಯೊಂದು ನಡೆದಿದೆ. ಶಿಕ್ಷಕರಲ್ಲಿ ವೈಯಕ್ತಿಕ ವಿಚಾರಗಳಿದ್ದರೆ ಮನೆಯಲ್ಲಿರಲಿ. ಅವರು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುವುದು ಬೇಡ. ಶಿಕ್ಷಕರು ವೈಯಕ್ತಿಕ ವಿಚಾರದಿಂದ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಲಿದ್ದಾರೆ. ಇದರಿಂದಾಗಿ ಶಾಲೆ ಮುಚ್ಚಿಹೋಗಲಿದೆ. ವೈಯಕ್ತಿಕ ವಿಚಾರದಲ್ಲಿ ಶಾಲೆಯನ್ನು ಬಲಿಕೊಡುವ ಶಿಕ್ಷಕರ ವಿರುದ್ಧ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೆ ಶಾಲಾ ಕಟ್ಟಡವು ಕುಸಿಯುವ ಭೀತಿಯಲ್ಲಿದ್ದು ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ದುರಸ್ಥಿಗೊಳಿಸಿಕೊಡಬೇಕು. ಶಿಕ್ಷಣಾಧಿಕಾರಿಗಳು ಸಮಸ್ಯೆಗಳ ಬಂದಾಗ ಮಾತ್ರ ಶಾಲೆಗೆ ಭೇಟಿ ನೀಡುವುದಲ್ಲ. ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮಾಜಿ ಸದಸ್ಯ ಅಣ್ಣಿ ಪೂಜಾರಿಯವರು ಆಗ್ರಹಿಸಿದರು.

ಆರೋಗ್ಯ ಕೇಂದ್ರಕ್ಕಿರುವ ರಸ್ತೆ ಮಾರ್ಜಿನ್ 94 ಸಿಗೆ ಇಲ್ಲ:
ಬನ್ನೂರಿನಲ್ಲಿ ಆರೋಗ್ಯ ಕೇಂದ್ರದ ಉಪಕೇಂದ್ರ ಜಾಗ ಗುರುತಿಸಲಾಗಿದ್ದು ಇದು ಯಾವ ಹಂತದಲ್ಲಿದೆ ಎಂದು ಮಾಜಿ ಸದಸ್ಯ ಅಣ್ಣಿ ಪೂಜಾರಿ ಪ್ರಶ್ನಿಸಿದರು. ಈಗಾಗಲೇ ಗುರುತಿಸಲಾಗಿರುವ ಜಾಗವು ರಸ್ತೆ ಮಾರ್ಜಿನ್‌ನಲ್ಲಿರುವುದಾಗಿ ಕಂದಾಯ ಇಲಾಖೆಯಿಂದ ವರದಿ ನೀಡಿರುವುದಾಗಿ ಪಿಡಿಓ ತಿಳಿಸಿದರು. ಅದೇ ಜಾಗವನ್ನು ಹಿಂದಿನ ಗ್ರಾಮಕರಣಿಕರು ಹಣ ಪಡೆದುಕೊಂಡು ಖಾಸಗಿ ವ್ಯಕ್ತಿಗಳಿಗೆ 94 ಸಿಯಲ್ಲಿ ನೀಡಿದ್ದಾರೆ. 94 ಸಿಗಿಲ್ಲದ ರಸ್ತೆ ಮಾರ್ಜಿನ್ ಆರೋಗ್ಯ ಕೇಂದ್ರಕ್ಕೆ ಹೇಗೆ ಬಂದಿದೆ ಎಂದು ಅಣ್ಣಿ ಪೂಜಾರಿ ಪ್ರಶ್ನಿಸಿದರು.

ಶಾಸಕರಿಗೆ, ಪಂಚಾಯತ್‌ಗೆ ಅಭಿನಂದನೆ:
ಗ್ರಾಮದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಿದ್ದು ಶಾಸಕರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುವ ಮೂಲಕ ಶೇ.70ರಷ್ಟು ಬೇಡಿಕೆಗಳನ್ನು ಈಡೇರಿಸಿರುವ ಶಾಸಕರಿಗೆ ಹಾಗೂ ಪಂಚಾಯತ್‌ನಲ್ಲಿ ಭ್ರಷ್ಠಾಚಾರ ರಹಿತವಾಗಿ ಜನರಿಗೆ ಸೇವೆ ನೀಡುವ ಮೂಲಕ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ನಾಗೇಶ್ ಟಿ.ಎಸ್ ತಿಳಿಸಿದರು. ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಬೇಜವಾಬ್ದಾರಿಯಿಂದಾಗಿ ಕಾಮಗಾರಿಗಳು ಹಿನ್ನಡೆಯಾಗುತ್ತಿದೆ ಅಲ್ಲದೆ ಕಳಪೆಯಾಗುತ್ತಿದೆ ಎಂದು ನಾಗೇಶ್ ಟಿ.ಎಸ್ ಆರೋಪಿಸಿದರು.

ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ:
ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಶಿಕ್ಷಕರನ್ನು ಒದಗಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರನ್ನು ಎಲ್ಲಾ ಶಾಲೆಗಳಿಗೂ ನೇಮಕಗೊಳಿಸಬೇಕು. ಕೊರತೆಯಿರುವಲ್ಲಿ ನಿಯೋಜನೆಗೊಳಿಸಬೇಕು. ಮಾದರಿ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸದಸ್ಯ ಶ್ರೀನಿವಾಸ ಪೆರ್ವೋಡಿ ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಿಗೆ ಜೀವನ ಭದ್ರತೆ ನೀಡಬೇಕು:
ಕೊರೋನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರನ್ನು ದೇವರಂತೆ ನೋಡಿಕೊಳ್ಳುತ್ತಿದ್ದ ಸರಕಾರ ಈಗ ಅವರಿಗೆ ಏನೇ ಆದರೂ ಕೇಳುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಜೀವನ ಭದ್ರತೆ ಒದಗಿಸಬೇಕು. ಆರೋಗ್ಯ ಉಪಕೇಂದ್ರವನ್ನು ಸ್ಥಾಪಿಸಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಅರುಣಾರವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥ ವಿನಂತ ಆಗ್ರಹಿಸಿದರು.

ವಿಕಲಚೇತರಿಗೆ ಕೇಂದ್ರ ಸ್ಥಾಪಿಸಿ:
ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 83 ಮಂದಿ ವಿಕಲಚೇತರಿದ್ದು ಅವರಿಗೆ ಉಳಿದುಕೊಳ್ಳಲು ಪೂರಕವಾದ ಕೇಂದ್ರಗಳನ್ನು ಸ್ಥಾಪಿಸಬೇಕು. ಸಾಮಾಜಿಕ ಸಂಘಟನೆಗಳು ವಿಕಲಚೇತನರಿಗೆ ಹಲವು ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದ್ದು ಸರಕಾರವೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾಜಿ ಸದಸ್ಯ ಅಣ್ಣಿ ಪೂಜಾರಿ ಒತ್ತಾಯಿಸಿದರು.

ಸ್ವ ಉದ್ಯೋಗ ಕ್ಕೆ ಮಾರುಕಟ್ಟೆ ಒದಗಿಸಿ;
ಕೇಂದ್ರ, ರಾಜ್ಯ ಸರಕಾರದಿಂದ ಸ್ವ ಉದ್ಯೋಗಕ್ಕೆ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರೂ ಅದರ ಮೂಲಕ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಹೀಗಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಮಾಜಿ ಸದಸ್ಯ ರತ್ನಾಕರ ಪ್ರಭು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಪಿಡಿಓ ಚಿತ್ರಾವತಿ ಈಗಾಗಲೇ ಜಾಗ ಗುರುತಿಸಲಾಗಿದ್ದು ಗಡಿ ಗುರುತು ಮಾಡಲು ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಾಗ ಅತಿಕ್ರಮಣ:
ಪಂಚಾಯತ್‌ನಿಂದ ಅಂಬೇಡ್ಕರ್ ಭವನ ಹಾಗೂ ಸ್ಮಶಾನ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗ ಅತಿಕ್ರಮಣ ಆಗುತ್ತಿದ್ದು ಕಂದಾಯ ಇಲಾಖೆ ಸರ್ವೆ ನಡೆಸಿ ಗಡಿಗುರುತು ಮಾಡಿ ಭದ್ರ ಪಡಿಸಿ ಕೊಳ್ಳಬೇಕು ಎಂದು ಮಾಜಿ ಸದಸ್ಯ ರತ್ನಾಕರ ಪ್ರಭು ಒತ್ತಾಯಿಸಿದರು.

ಗ್ರಾಮಕರಣಿಕರ ಕಚೇರಿಗೆ ಸಿಬಂದಿ ನೇಮಿಸಿ:
ಗ್ರಾಮದಲ್ಲಿರುವ ಗ್ರಾಮಕರಣಿಕರ ಕಚೇರಿಯು ಗ್ರಾಮದ ಜನತೆಗೆ ಬಹಳಷ್ಟು ಆವಶ್ಯಕ. ಹೀಗಾಗಿ ಕಚೇರಿಗೆ ಬೀಗ ಹಾಕಿ ಹೊಗಬಾರದು. ಆವಶ್ಯಕ ಕೆಲಸಗಳಿಗೆ ಗ್ರಾಮಸ್ಥರು ಬರುತ್ತಿದ್ದು ಕಚೇರಿಯಲ್ಲಿ ಸಿಬಂದಿಯೊಬ್ಬರನ್ನು ನೇಮಿಸಬೇಕು ಎಂದು ರತ್ನಾಕರ ಪ್ರಭು ಒತ್ತಾಯಿಸಿದರು.

ಮಾದರಿ ಗ್ರಾಮಸಭೆ….!
ಬನ್ನೂರು ಗ್ರಾ.ಪಂನ ಈ ಬಾರಿಯ ದ್ವಿತೀಯ ಸುತ್ತಿನ ಗ್ರಾಮಸಭೆಯು ಮಾದರಿಯಾಗಿ ನಡೆದಿದೆ. ಸಭೆಯಲ್ಲಿ ಸ್ವಾಗತ ವರದಿಯ ಬಳಿಕ ಫಲಾನುಭವಿಗಳಿಂದ ಅಭಿಪ್ರಾಯ, ಅನಿಸಿಕೆಗಳಿಗೆ ಅವಕಾಶ ನೀಡಲಾಗಿದ್ದು ಬೀರಿಗ ಅಂಗವಾಡಿ ಕೇಂದ್ರದ ಪುಟಾಣಿ ಮನ್ವಿತಾ, ಹೈನುಗಾರಿಕೆಯ ಕುರಿತು ರೋಹಿಣಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ ಸ್ವಸಹಾಯ ಸಂಘಗಳ, ವಿನಂತ ಬೀರಿಗ ವಿವಿಧ ಅಭಿಪ್ರಾಯಗಳನ್ನು ತಿಳಿಸಿದರು. ಪ್ರಾರಂಭದಲ್ಲಿ ಎಲ್ಲರಿಗೂ ಉಪಾಹಾರ, ಮಧ್ಯಾಹ್ನ ಸಹಭೋಜನ, ಅಪರಾಹ್ನ ಗ್ರಾಮಸ್ಥರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜೊತೆಗೆ ಆರೋಗ್ಯ ಇಲಾಖೆಯಿಂದ ತಪಾಸಣೆಗಳನ್ನು ವಿಶೇಷವಾಗಿ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here