ದೊರೆಯದ ತಡೆಯಾಜ್ಞೆ-ನಾಗಪ್ರತಿಷ್ಠೆ ನಿರಾತಂಕ
ಹೈಕೋರ್ಟ್‌ನಲ್ಲಿ ವಿಚಾರಣೆ
ಮಾ.೧೭ಕ್ಕೆ ಮುಂದೂಡಿಕೆ ನಾಗಪ್ರತಿಷ್ಠೆ ಕಾರ್ಯಕ್ರಮ ಆರಂಭ ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಬೆನ್ನಲ್ಲೇ ಶ್ರೀ ಮೃತ್ಯುಂಜಯೇಶ್ವರ ದೇವಳದ ನೂತನ ನಾಗನಕಟ್ಟೆಯಲ್ಲಿ ನಾಗಪ್ರತಿಷ್ಠೆಗೆ ಸಂಬಂಧಿಸಿದ ಕಾರ್ಯಕ್ರಮ ಮಾ.೭ರಂದು ಸಾಯಂಕಾಲ ಆರಂಭಗೊಂಡಿದೆ. ಮಾ.೮ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ,ಸಂಸ್ಕಾರ ಮಂಗಲ ಹೋಮ, ಆಶ್ಲೇಷ ಬಲಿ, ಅಷ್ಟವಟು ಆರಾಧನೆ, ಪಂಚವಿಂಶತಿ ಕಲಶ ಪೂಜೆ, ನಾಗಪ್ರತಿಷ್ಟೆ, ಪಂಚಾಮೃತ ಅಭಿಷೇಕ,ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಲೋಕಪ್ಪ ಗೌಡ ಕರೆಮನೆ ತಿಳಿಸಿದ್ದಾರೆ.
ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ನಾಗಪ್ರತಿಷ್ಠೆ ಕಾರ್ಯಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡದೇ ಇರುವುದರಿಂದ ಉದ್ದೇಶಿತ ಕಾರ್ಯಕ್ರಮ ನಿರಾತಂಕವಾಗಿ ನಡೆಯಲಿದೆ.ರಿಟ್ ಅರ್ಜಿಯ ವಿಚಾರಣೆ ಮಾ.೭ರಂದು ಹೈಕೋರ್ಟ್ನಲ್ಲಿ ನಡೆದಿದ್ದು ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು ವಿಚಾರಣೆಯನ್ನು ಮಾ.೧೭ಕ್ಕೆ ಮುಂದೂಡಿದೆ.
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆ ಕ್ರಮಬದ್ಧವಾಗಿ ನಿರ್ಮಾಣಗೊಂಡಿಲ್ಲವಾದ್ದರಿಂದ ಮಾ.೭,೮ರಂದು ನಡೆಸಲುದ್ದೇಶಿಸಿರುವ ನಾಗಪ್ರತಿಷ್ಠೆ ಕಾರ್ಯಕ್ರಮ ನಡೆಸದಂತೆ ತಡೆಯಾಜ್ಞೆ ಕೋರಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ನಾರಾಯಣ ನಾಯ್ಕ್ ಕಾಳಿಂಗಹಿತ್ಲು, ಕೆ.ಬಿ.ಸುಂದರ ನಾಯ್ಕ ಮುಂಡೂರು, ಬಾಲಕೃಷ್ಣ ಕೆ.ಮುಂಡೂರು, ಹೊನ್ನಪ್ಪ ನಾಯ್ಕ್ ಬಿ.ಯಾನೆ ಹರೀಶ್ ಬಿ.ಕೆ.ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾಽಕಾರಿ ಮತ್ತು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿತ್ತು.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.೭ಕ್ಕೆ ಮುಂದೂಡಿದ್ದರು.
ಇದು ಅರ್ಜಿದಾರರ ವಾದ:
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶಾಸ್ತ್ರ ಪ್ರಕಾರ ಕ್ರಮಬದ್ಧವಾಗಿ ನಾಗನ ಕಟ್ಟೆ ನಿರ್ಮಾಣ ಮಾಡುತ್ತಿಲ್ಲ.ಈಗ ನಿರ್ಮಾಣ ಮಾಡಲುದ್ದೇಶಿಸಿರುವ ಸ್ಥಳ ಸರಿಯಿಲ್ಲ.ಅಲ್ಲಿ ಶುಚಿತ್ವವಿಲ್ಲ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ರಿಟ್ ಅರ್ಜಿ ಸಲ್ಲಿಸಿ, ಮಾ.೭,೮ರಂದು ನಡೆಸಲುದ್ದೇಶಿಸಿರುವ ನಾಗಪ್ರತಿಷ್ಠೆ ಕಾರ್ಯಕ್ರಮ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು.
-ಫೆ.೨೭ರಂದು ಅರ್ಜಿ ಸಲ್ಲಿಕೆಯಾಗಿದ್ದು ಮಾ.೩ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ನಾಗಪ್ರತಿಷ್ಠೆ ನಡೆಯಲಿರುವ ಸ್ಥಳಕ್ಕೆ ಮಾ.೪ರಂದು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಕುರಿತು ತಿಳಿದುಕೊಂಡು ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.ಸ್ಥಳಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ ಹೊರತು ಇದು ಉದ್ದೇಶಿತ ಕಾರ್ಯಕ್ರಮವನ್ನು ತಡೆಯಲು ಅಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಎ.ಸಿ.ಯವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.೭ಕ್ಕೆ ಮುಂದೂಡಿತ್ತು.
ಎಂಡೋಮೆಂಟ್ ಎ.ಸಿ.ಭೇಟಿ:
ಹೈಕೋರ್ಟ್ ನಿರ್ದೇಶನದಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗುರುರಾಜ್ ಹಾಗೂ ಪರಿವೀಕ್ಷಕ ಶ್ರೀಧರ್‌ರವರು ಮಾ.೪ರಂದು ಮೃತ್ಯುಂಜಯೇಶ್ವರ ದೇವಳಕ್ಕೆ ಭೇಟಿ ನೀಡಿ, ನಾಗಪ್ರತಿಷ್ಠೆ ನಡೆಸಲುದ್ದೇಶಿಸಿರುವ ಸ್ಥಳವನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದರು.ಈ ಕುರಿತು ಅವರು ಹೈಕೋರ್ಟ್ಗೆ ವರದಿ ಸಲ್ಲಿಸಿದ್ದರು.
ದೊರೆಯದ ತಡೆಯಾಜ್ಞೆ ಕಾರ್ಯಕ್ರಮ ನಿರಾತಂಕ:
ಮಾ.೭ರಂದು ರಿಟ್ ಅರ್ಜಿಯ ಮುಂದುವರಿದ ವಿಚಾರಣೆಯಲ್ಲಿ, ಮಾ.೭,೮ರಂದು ನಡೆಸಲುದ್ದೇಶಿಸಿರುವ ನಾಗಪ್ರತಿಷ್ಠೆ ಮತ್ತಿತರ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು ವಿಚಾರಣೆಯನ್ನು ಮಾ.೧೭ಕ್ಕೆ ಮುಂದೂಡಿದೆ.ತಡೆಯಾಜ್ಞೆ ದೊರೆಯದೇ ಇರುವುದರಿಂದಾಗಿ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ ಕಾರ್ಯಕ್ರಮ ಮುಂದುವರಿದಿದೆ.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರ ಪರವಾಗಿ ನ್ಯಾಯವಾದಿ ಭಾನುಪ್ರಕಾಶ್ ವಿ.ಜಿ.ವಾದಿಸಿದ್ದರು.
ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆ ವಿಚಾರದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ದೇವಳದ ಬಳಿ ಪ್ರತಿಭಟನೆ ನಡೆದಿತ್ತು.
ಹಲವು ಅಡೆತಡೆಗಳ ಬಳಿಕ ನಾಗನ ಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಮಾ.೭,೮ರಂದು ನಾಗಪ್ರತಿಷ್ಠೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರೆಮನೆ ಲೋಕಪ್ಪ ಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ,ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗನಕಟ್ಟೆ ನಿರ್ಮಾಣಕ್ಕೆ ಜಿಲ್ಲಾಽಕಾರಿಯವರು ಅನುಮತಿ ನೀಡಿದ್ದು ಸದ್ರಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿ ಸಮಸ್ಯೆಯಾಗದಂತೆ ಕಾನೂನು ಸುವ್ಯವಸ್ಥೆಗೆ ಕ್ರಮತೆಗೆದುಕೊಳ್ಳುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರನ್ನು ಕೋರಿದ್ದರು.