





ಫಿಲೋಮಿನಾ ಪಿಯು ಕಾಲೇಜು ಚಾಂಪಿಯನ್







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಂಗಳೂರು ಮಹಾನಗರಪಾಲಿಕೆಯ ಆಶ್ರಯದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.8 ರಂದು ಮಂಗಳೂರಿನ ಕರಾವಳಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟ 2022-23 ಇದರಲ್ಲಿ ಅಂಡರ್-19 ಹುಡುಗಿಯರ ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಚಾಂಪಿಯನ್ ಶಿಪ್ ನಲ್ಲಿ ಪುತ್ತೂರು ತಾಲೂಕಿನಿಂದ ಪ್ರತಿನಿಧಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ತಂಡ ಚಾಂಪಿಯನ್ ಎನಿಸಿಕೊಂಡಿದೆ.
ಮಂಗಳೂರು ತಾಲೂಕಿನ ಹುಡುಗಿಯರ ತಂಡ ರನ್ನರ್ಸ್ ಪ್ರಶಸ್ತಿಗೆ ಭಾಜನರಾಗಿದೆ. ಫೈನಲ್ ಹಂತದ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಫಿಲೋಮಿನಾ ಕಾಲೇಜು ತಂಡ ನಿಗದಿತ ಐದು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 80 ರನ್ ಗಳನ್ನು ಪೇರಿಸಿತ್ತು. ಫಿಲೋಮಿನಾ ಕಾಲೇಜು ತಂಡದ ಪರ ಆರಂಭಿಕ ಬ್ಯಾಟರ್ ಗಳಾಗಿ ಕ್ರೀಸಿಗಿಳಿದ ಏಂಜಲಿಕಾ ಮೆಲಾನಿ ಪಿಂಟೋ(ಅಜೇಯ 36 ರನ್) ಹಾಗೂ ಶ್ರೀಶ(ಅಜೇಯ 26 ರನ್)ರವರ ಬೀಡುಬೀಸುಗೆಯ ಆಟದಿಂದಾಗಿ ಬೃಹತ್ ಮೊತ್ತವನ್ನು ಪೇರಿಸಲು ತಂಡ ಶಕ್ತವಾಯಿತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಂಗಳೂರು ತಾಲೂಕು ತಂಡವು ನಿಗದಿತ ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 34 ರನ್ ಗಳಷ್ಟೇ ಪೇರಿಸಲು ಶಕ್ತವಾಗಿ 46 ರನ್ ಗಳಿಂದ ಸೋಲೊಪ್ಪಿಕೊಂಡಿತು. 
ಫಿಲೋಮಿನಾ ಕಾಲೇಜು ತಂಡದ ಪರ ಏಂಜಲಿಕಾ ಮೆಲಾನಿ, ಶ್ರೀಶಾ, ಅನಘಾರವರು ತಲಾ 2 ವಿಕೆಟ್ ಗಳಿಸಿ ತಂಡ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಈ ಕೂಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿತ್ತು. ಫಿಲೋಮಿನಾ ಕಾಲೇಜು ಹುಡುಗಿಯರ ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ತರಬೇತಿ ನೀಡಿದ್ದರು ಮಾತ್ರವಲ್ಲದೆ ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ ಏಂಜಲಿಕಾ ಮೆಲಾನಿ ಪಿಂಟೋರವರು ಎಲ್ಯಾಸ್ ಪಿಂಟೋರವರ ಪುತ್ರಿಯಾಗಿದ್ದಾರೆ.


            




