ಪುತ್ತೂರು: ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಮೂಲಕ ಶಿಕ್ಷಣ ನೀಡುವ ಕೆಲಸ ಆಗುತ್ತಿದೆ. ಇದನ್ನು ನಮ್ಮೂರಿನ ಸರಕಾರಿ ಶಾಲೆಗಳಿಗೆ ನೀಡಿ ಯಾಕೆ ಪರಿಚಯಿಸಬಾರದು ಎನ್ನುವ ಆಲೋಚನೆ ಬಂದಿತು. ಈ ಹಿನ್ನೆಲೆಯಲ್ಲಿ ಉಕ್ರೇನ್‍ನಿಂದ ಸ್ಮಾರ್ಟ್ ಬೋರ್ಡ್‍ಗಳನ್ನು ತರಿಸಿಕೊಂಡು ಸರಕಾರಿ ಶಾಲೆಗಳಲ್ಲಿ ನೀಡಿ, ಆಧುನಿಕ ಶಿಕ್ಷಣವನ್ನು ಪರಿಚಯಿಸುವ ಕೆಲಸ ನಡೆಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕುರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮೂಲಕ ದೃಶ್ಯವನ್ನು ಪ್ರಾಕ್ಟೀಕಲ್ ಆಗಿ ತೋರಿಸುವ ಕೆಲಸ ನಡೆಯುತ್ತಿದೆ. ಇದೀಗ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡುವ ಮೂಲಕ ಮಕ್ಕಳಿಗೆ ದೃಶ್ಯದ ಮೂಲಕ ಪಾಠ ಮಾಡಲು ವೇದಿಕೆ ನಿರ್ಮಿಸಿಕೊಡಲಾಗಿದೆ. ಈ ಮೂಲಕ ಪಾಠವನ್ನು ಸುಲಭವಾಗಿ ವಿದ್ಯಾರ್ಥಿಗಳು ಅರ್ಥವಿಸಿಕೊಳ್ಳಲಿದ್ದಾರೆ ಎಂದರು.
ಪುತ್ತೂರಿನ 111 ಶಾಲೆಗಳಿಗೆ 111 ಸ್ಮಾರ್ಟ್ ಕ್ಲಾಸ್‍ಗಳನ್ನು ನೀಡಲಾಗಿದೆ. ಆದರೆ ಇವಿಷ್ಟೇ ಸಾಲದು. ಪ್ರತಿಯೊಂದು ತರಗತಿಗೂ ಸ್ಮಾರ್ಟ್ ಕ್ಲಾಸ್ ನೀಡಬೇಕೆಂದರೆ ಇನ್ನೂ ಸಾವಿರಾರು ಸ್ಮಾರ್ಟ್ ಕ್ಲಾಸ್‍ಗಳ ಅಗತ್ಯವಿದೆ. ಇದನ್ನು ಸ್ಥಳೀಯ ದಾನಿಗಳ ನೆರವಿನಿಂದ ಭರ್ತಿ ಮಾಡಿ, ಶಾಲೆಗಳನ್ನು ಆಧುನೀಕರಣಗೊಳಿಸುವ ಕೆಲಸ ಆಗಬೇಕು ಎಂದು ಶಾಸಕರು ಮನವಿ ಮಾಡಿಕೊಂಡರು.
ಶಾಲೆಯ ಅಭಿವೃದ್ಧಿಗಾಗಿ ದತ್ತು: ಬೂಡಿಯಾರ್
ಶಾಲೆಯನ್ನು ದತ್ತು ತೆಗೆದುಕೊಂಡಿರುವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕುರಿಯ ಶಾಲೆ ಉತ್ತಮ ಪ್ರದೇಶದಲ್ಲಿದೆ. ಆದರೆ ಬೆಳಗ್ಗೆದ್ದು ನೋಡಿದರೆ, ಪೇಟೆ ಶಾಲೆಯ 4-5 ಬಸ್ಸುಗಳು ಓಡಾಟ ನಡೆಸುತ್ತವೆ. ನಮ್ಮೂರಿನ ಮಕ್ಕಳು, ನಮ್ಮೂರಿನ ಶಾಲೆಯನ್ನು ಬಿಟ್ಟ ಬೇರೆ ಶಾಲೆಗೆ ಹೋಗುವುದನ್ನು ನೋಡಿದಾಗ ಬೇಸರ ಆಗುತ್ತದೆ. ಆದ್ದರಿಂದ ನಮ್ಮೂರಿನ ಶಾಲೆಯನ್ನು ದತ್ತು ತೆಗೆದುಕೊಂಡು, ಅಭಿವೃದ್ಧಿಗೊಳಿಸಬೇಕು ಎಂದು ಹಲವು ಸಮಯಗಳಿಂದ ಪ್ರಯತ್ನಿಸುತ್ತಿದ್ದೇವೆ. ಇದೀಗ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಸಲಹಾ ಸಮಿತಿಯನ್ನು ರಚಿಸಲಾಗಿದೆ. ಮುಂದೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು, ಶಾಲೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಸ್ವಯಂ ನಿವೃತ್ತಿ ತೆಗೆದುಕೊಂಡ ಶಾಲಾ ಮುಖ್ಯಗುರುವಾಗಿದ್ದ ಲೀಲಾವತಿ ಅವರಿಗೆ ಇದೇ ಸಂದರ್ಭ ಸನ್ಮಾನಿಸಿ, ಬೀಳ್ಕೊಡಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ, ತಾ.ಪಂ. ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್., ಸಿ.ಆರ್.ಪಿ. ಪರಮೇಶ್ವರಿ, ಮುಖ್ಯಶಿಕ್ಷಕಿ ಪ್ರೇಮಾ ಮೊದಲಾದವರು ಉಪಸ್ಥಿತರಿದ್ದರು”