ಉಪ್ಪಿನಂಗಡಿ: ರಾಜ್ಯ ಹೆದ್ದಾರಿಗೆ ಸೇರಿದ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ಗ್ರಾ.ಪಂ. ನಿರ್ಮಾಣ ಮಾಡಲುದ್ದೇಶಿಸಿದ ಪಾರ್ಕ್ನ ಕಾಮಗಾರಿಯನ್ನು ತಡೆದು, ಕೆಲಸಗಾರರನ್ನು ವಾಪಸ್ ಕಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಗಾಂಧಿಪಾರ್ಕ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಲವು ವರ್ಷಗಳಿಂದ ಉದ್ಯಾನವನವೊಂದಿದ್ದು, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಈ ಪಾರ್ಕ್ ಬಲಿಯಾಗಿತ್ತು. ಬಳಿಕ ಉದ್ಯಾನವನ ನಿರ್ಮಿಸಲು ಗ್ರಾ.ಪಂ.ಗೆ ಸೂಕ್ತ ಜಾಗದ ವ್ಯವಸ್ಥೆಯಾಗಿರಲಿಲ್ಲ. ಕೆಲವು ತಿಂಗಳ ಹಿಂದೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರಿನಲ್ಲಿ ಲಭ್ಯವಿದ್ದ ಸ್ವಲ್ಪ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆ ಗ್ರಾ.ಪಂ. ಹಾಕಿಕೊಂಡಿತ್ತು. ಇದರ ನಿರ್ಮಾಣಕ್ಕೆ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಐದು ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ, ಅದರ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಬುಧವಾರ ಇದರ ಕಾಮಗಾರಿಗೆ ಗುತ್ತಿಗೆದಾರರು ಮುಂದಾಗಿದ್ದು, ಹಿಟಾಚಿ ಸಹಿತ ಕೆಲಸಕ್ಕೆ ಜನ ಕಳುಹಿಸಿದ್ದರು. ಇದನ್ನು ಅರಿತ ಗ್ರಾ.ಪಂ. ಸದಸ್ಯೆ ವಿದ್ಯಾಲಕ್ಷ್ಮೀ ಪ್ರಭು ಹಾಗೂ ಗ್ರಾಮಸ್ಥ ಸಿದ್ದೀಕ್ ಕೆಂಪಿ ಸ್ಥಳಕ್ಕೆ ತೆರಳಿ, ಇದು ಪುತ್ತೂರು- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಜಾಗ. ಮುಂದೊಂದು ದಿನ ಹೆದ್ದಾರಿಯ ಅಗಲೀಕರಣ ನಡೆದರೆ, ಈ ಪಾರ್ಕ್ ಕೂಡಾ ಅದಕ್ಕೆ ಬಲಿಯಾಗಬೇಕಿದೆ. ಅಲ್ಲದೇ, ಇದು ನದಿಗೆ ಇಳಿಯುವ ಕಾಲು ದಾರಿಯಾಗಿದೆ. ಇಲ್ಲಿ ಉದ್ಯಾನವನ ನಿರ್ಮಿಸಿದರೆ ಕಾಲು ದಾರಿ ಬಂದ್ ಆಗಲಿದೆ. ಉಪ್ಪಿನಂಗಡಿಯಲ್ಲಿ ಈಗಲೇ ಪಾರ್ಕಿಂಗ್ಗೆ ಸ್ಥಳವಿಲ್ಲ. ಹೆಚ್ಚಿನ ದ್ವಿಚಕ್ರ ವಾಹನ ಸವಾರರು ಇಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ಆದ್ದರಿಂದ ಇಲ್ಲಿ ಉದ್ಯಾನವನ ನಿರ್ಮಾಣವಾದರೆ ಉಪ್ಪಿನಂಗಡಿಯ ಪಾರ್ಕಿಂಗ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಿಳಿಸಿ, ಉದ್ಯಾನವನ್ನು ನಿರ್ಮಿಸಲು ವಿರೋಧಿಸಿದರು. ಬಳಿಕ ಗುತ್ತಿಗೆದಾರರು ಕಾಮಗಾರಿಯನ್ನು ಕೈಬಿಟ್ಟು ಸ್ಥಳದಿಂದ ತೆರಳಿದರು. ಈ ಸಂದರ್ಭ ಸ್ಥಳೀಯರಾದ ನಾಗೇಶ ಉಪಸ್ಥಿತರಿದ್ದರು.