ಮುಂಡೂರು : ಬೆಟ್ಟಂಪಾಡಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ

0

ಬದುಕುವ ಶಿಕ್ಷಣವನ್ನು ಎನ್ಎಸ್ಎಸ್ ನೀಡುತ್ತದೆ : ಸಂಜೀವ ಮಠಂದೂರು

ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣವನ್ನು ಎನ್ಎಸ್ಎಸ್ ನೀಡುತ್ತದೆ. ವ್ಯಕ್ತಿತ್ವ ವಿಕಸನ, ಪ್ರಕೃತಿ ಜೊತೆ ಸಂಬಂಧ ಹೀಗೆ ವಿವಿಧ ವಿಷಯಗಳನ್ನು ಬೋಧಿಸುತ್ತಾ ಉತ್ತಮ ನಾಯಕರನ್ನು ಸೃಷ್ಟಿಸುವ ಕಾರ್ಯವನ್ನು ಎನ್ ಎಸ್ ಎಸ್ ಇದು ನಿರಂತರವಾಗಿ ಮಾಡುತ್ತಿದೆ. ಹೇಗೆ ಶಿಕ್ಷಣವನ್ನು ತರಗತಿಯಲ್ಲಿ ನೀಡಲಾಗುತ್ತದೆಯೋ ಅದೇ ರೀತಿ ಬದುಕನ್ನು ಗೆಲ್ಲುವ ಶಿಕ್ಷಣವನ್ನು ಎನ್ ಎಸ್ ಎಸ್ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಶಿಬಿರದ ಪ್ರಯೋಜನವನ್ನು ಪಡೆಯಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಸಂಜೀವ ಮಠಂದೂರು ಹೇಳಿದರು.

ಇವರು ನಿಡ್ಪಳ್ಳಿ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಬಿರಾಧಿಕಾರಿ ಹರಿಪ್ರಸಾದ್ ಎಸ್ ಎನ್ಎಸ್ಎಸ್ ಶಿಬಿರವು ಕಾಲೇಜು- ಶಾಲೆ-ಸಮಾಜದ ನಡುವಿನ ಸಂಬಂಧ ವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶವನ್ನು ಒಳಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಹೊಸ ಶಿಕ್ಷಣಪದ್ಧತಿಯಲ್ಲಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ.

ಮುಖ್ಯ ಅತಿಥಿಗಳಾದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಶಾಲೆಯ ಒಳಾಂಗಣ ಶಿಕ್ಷಣವು ವೃತ್ತಿ ಜೀವನಕ್ಕೆ ಸಹಕಾರಿಯಾದರೂ ಬದುಕನ್ನು ನಡೆಸುವ ಕಲೆ ಎನ್ಎಸ್ಎಸ್ ಪರಿಚಯಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ ಧನಾತ್ಮಕ ಚಿಂತನೆಗಳನ್ನು ತರುವಲ್ಲಿ ಎನ್ಎಸ್ಎಸ್ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟರಮಣ ಬೋರ್ಕರ್  ಮನಸ್ಸಿನ ಅಂಧಕಾರವನ್ನು ಕಳೆದು ಜೀವನದಲ್ಲಿ ಬೆಳಕನ್ನು ಮೂಡಿಸುವಂತಹ ಪವಿತ್ರ ಕಾರ್ಯದಲ್ಲಿ ಎನ್ಎಸ್ಎಸ್ ತೊಡಗಿದೆ. ಇಂತಹ ಶಿಬಿರಗಳು ಒಂದು ಹಿಂದುಳಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.

ಶಾಲೆಯ ಮುಖ್ಯಗುರು ಆಶಾ ಎಸ್ ಮಾತನಾಡುತ್ತಾ ಇಂತಹ ಶಿಬಿರಗಳು ನಮ್ಮ ಶಾಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ಶಿಬಿರವು ಸ್ವಯಂಸೇವಕರಲ್ಲಿ ಅದೇ ರೀತಿ ನಮ್ಮ ಶಾಲಾ ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ವರದರಾಜ ಚಂದ್ರಗಿರಿ ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಪೀಳಿಗೆಯು ಮೊಬೈಲಿಗೆ ಬಲಿಯಾಗುತ್ತಿರುವ ಘಟನೆಗಳನ್ನು ಉಲ್ಲೇಖಿಸುತ್ತಾ ಶಿಬಿರವು ವಿದ್ಯಾರ್ಥಿಗಳಲ್ಲಿ ಮೊಬೈಲ್ ರಹಿತ ಜೀವನವನ್ನು ಕಲಿಸುತ್ತದೆ. ನಮ್ಮ ಕಾಲೇಜಿನ ಈ ವರ್ಷದ ಎನ್ ಎಸ್ ಎಸ್ ಶಿಬಿರದ ಧ್ಯೇಯವಾಕ್ಯವಾಗಿರುವ ‘ಸಾಮಾಜಿಕ ಜಾಲತಾಣಗಳ ಸದ್ಬಳಕೆಯತ್ತ ನಮ್ಮ ಚಿತ್ತ’ ಯುವಜನತೆಯನ್ನು ಇನ್ನಷ್ಟು ಶಿಕ್ಷಿತರನ್ನಾಗಿಸಲಿ ಎಂದು ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು  ಇಲ್ಲಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕವೃಂದದವರಾದ ಕರುಣಾಲಕ್ಷ್ಮಿ, ಪ್ರೊ. ಉದಯರಾಜ್, ಡಾ.ಪೊಡಿಯ, ಮಮತಾ, ಶಿಬಿರಾಧಿಕಾರಿಗಳಾದ ಪ್ರೊ.ಶಶಿಕುಮಾರ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಕರ್ಕೇರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಭಟ್, ಊರವರು, ಶಾಲಾ ವಿದ್ಯಾರ್ಥಿಗಳು, ಘಟಕ ನಾಯಕರುಗಳು, ಶಿಬಿರಾರ್ಥಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಆದರ್ಶ ಬಿ ಸ್ವಾಗತಿಸಿದರು. ಶ್ರಾವ್ಯ ಕೆ ಎಸ್ ವಂದಿಸಿದರು. ನಯನ ಬಿ ನಿರೂಪಿಸಿದರು.

LEAVE A REPLY

Please enter your comment!
Please enter your name here