‘ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ’ -ಬೆಟ್ಟಂಪಾಡಿ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಂಪ್ಯ ಎಸ್‌ಐ ಶ್ರೀನಾಥ್ ರೆಡ್ಡಿ

0

ಬೆಟ್ಟಂಪಾಡಿ: ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ವ್ಯಕ್ತಿಯ ಚಾರಿತ್ರ್ಯಹರಣ, ತೇಜೋವಧೆ ಇನ್ನಿತರ ದುಷ್ಕೃತ್ಯಗಳಿಗೆ ಪ್ರೇರೇಪಣೆ ನೀಡುವ ಸಂದೇಶಗಳನ್ನು ರವಾನಿಸಿದ್ದಲ್ಲಿ ಸೈಬರ್ ಕ್ರೈಂ ಅಡಿಯಲ್ಲಿ ಕಠಿಣ ಕಾನೂ‌ನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀನಾಥ್ ರೆಡ್ಡಿ ಹೇಳಿದರು.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆದ ಬೆಟ್ಟಂಪಾಡಿ, ಪಾಣಾಜೆ ಮತ್ತು ನಿಡ್ಪಳ್ಳಿ ವ್ಯಾಪ್ತಿಯ ಪೊಲೀಸ್ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಉದ್ರೇಕಕಾರಿ ಭಾಷಣ, ಅನ್ಯಕೋಮಿನವರನ್ನು ಅವಹೇಳನ ಮಾಡಿ ಭಾಷಣ ಮಾಡಿ ಮತದಾನಕ್ಕೆ ದುಷ್ಪ್ರೇರಣೆ ನೀಡಿ ಸಾರ್ವಜನಿಕ ಸಮಸ್ಯೆ ಉಂಟುಮಾಡುವ ಯಾವುದೇ ವಿಚಾರ ತಿಳಿದು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ಕಾನೂನುರೀತ್ಯಾ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಅಭ್ಯರ್ಥಿಗಳು ತಮ್ಮ ಎದುರಾಳಿ ಅಭ್ಯರ್ಥಿಗಳ ವೈಯುಕ್ತಿಕ ಚಾರಿತ್ರ್ಯ ಹರಣ ಮಾಡುವ ಭಾಷಣ ಮಾಡುವಂತಿಲ್ಲ. ವಾಟ್ಸಾಪ್, ಸೋಷಿಯಲ್ ಮೀಡಿಯಾಗಳಲ್ಲಿ ಅವಹೇಳನಕಾರಿ ಸಂದೇಶ ಕಾನೂನು ಬಾಹಿರವಾದುದು’ ಎಂದರು.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದುದರಿಂದ ಇಲ್ಲಿ ಪ್ರಜೆಗಳ ತಿರ್ಮಾನವೇ ಅಂತಿಮ ನಿರ್ಣಾಯಕವಾದುದರಿಂದ ಸಮಾಜದ ಹಿತದೃಷ್ಟಿಯಿಂದ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕೆಂಬುದು ಚುನಾವಣಾ ಆಯೋಗದ ಕಲ್ಪನೆಯಿದೆ. ಸಂಪೂರ್ಣ ಶೇಕಡಾ ಮತದಾನಕ್ಕೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸುಳ್ಳು ಮತದಾನಕ್ಕೆ ಅವಕಾಶವಿಲ್ಲ. ಒಂದು ಸಲ ಚುನಾವಣೆ ಸಮಯದಲ್ಲಿ ಅಪರಾಧ ಮಾಡಿದರೆ ಮುಂದೆ ಪ್ರತೀ ಸಲ ಆ ವ್ಯಕ್ತಿಯನ್ನು ರೌಡಿಶೀಟರ್ ಗೆ ಒಳಪಡಿಸಿ ಕಾನೂನಿನಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಎಸ್ಸಿ, ಎಸ್ ಟಿ ಜನರಿಗೆ ಬಲವಂತದ ಮತದಾನಕ್ಕೆ ಪ್ರೇರೇಪಣೆ ನೀಡುವ ಯಾವುದೇ ಅಕ್ರಮ ಚಟುವಟಿಕೆ ಕೈಗೊಳ್ಳುವಂತಿಲ್ಲ’ ಎಂದು ಶ್ರೀನಾಥ್ ಹೇಳಿದರು.
ಪರ್ಸನಲ್ ಡಾಟಾ ಹಂಚಿಕೊಳ್ಳಬಾರದು. ಸೈಬರ್ ಕ್ರೈಂ ಅಡಿಯಲ್ಲಿ ಅನೇಕ ಅಕ್ರಮಗಳಿಗೆ ಕಡಿವಾಣವಿದೆ. ಆದರೂ ಯಾರೂ ತಮ್ಮ ಮೊಬೈಲ್ ಗಳಲ್ಲಿ ವೈಯುಕ್ತಿಕ ಮಾಹಿತಿಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಆನ್‌ಲೈನ್ ಹಣಕಾಸಿನ‌ ವ್ಯವಹಾರ ಮಾಡಲು ಹೋಗಿ ಹಣ ಕಳೆದುಕೊಳ್ಳಬೇಡಿ. ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಸಂಚಾರಿ‌ ನಿಯಮಗಳನ್ನು ಸರಿಯಾಗಿ ಪಾಲಿಸಿ. ಸೀಟ್ ಬೆಲ್ಟ್, ಹೆಲ್ಮೆಟ್ ಕಡ್ಡಾಯ ಧರಿಸಿ.‌ ಇತರರಲ್ಲೂ ಜಾಗೃತಿ ಮೂಡಿಸಿ. ಅಪ್ರಾಪ್ತ ವಯಸ್ಸಿನವರಿಗೆ ವಾಹನ ಕೊಡಬೇಡಿ, ಸುಳ್ಳು ದಾಖಲೆ‌ ನೀಡಿ ಲೈಸೆನ್ಸ್ ಮಾಡಿಸಿ ಸುಖಾಸುಮ್ಮನೆ ಜೀವಕ್ಕೆ ಅಪಾಯ ಆಗುವ ಹಾಗೆ ಮಾಡಬೇಡಿ’ ಎಂದು ಕರೆ ನೀಡಿದರು.

ದಂಡ ವಿಧಿಸುವುದು ಪೊಲೀಸರಿಗಾಗಿ ಅಲ್ಲ
ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದು ಜನರಲ್ಲಿ ಜಾಗೃತಿಗಾಗಿ. ಅದು ಪೊಲೀಸರಿಗಾಗಿ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ದಂಡ ವಿಧಿಸುವುದಕ್ಕಿಂತ ಹೆಚ್ಚು ಸರ್ಕಾರಕ್ಕೆ ಖರ್ಚು ಇರುತ್ತದೆ’ ಎಂದು ಎಸ್.ಐ ಹೇಳಿದರು.

ಪೊಲೀಸರಿಗೆ ಕರೆ ಮಾಡಿ ಎಷ್ಟು ಸಮಯದಲ್ಲಿ ಘಟನಾ ಸ್ಥಳಕ್ಕೆ ತಲುಪುತ್ತೀರಿ.. ಕೆಲವೊಂದು ಘಟನೆಗಳ ಸಮಯದಲ್ಲಿ ಸರಿಯಾದ ಸಮಯಕ್ಕೆ ತಲುಪಿಲ್ಲ ಎಂದು ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಮಹೇಶ್ ಕೆ. ಪ್ರಶ್ನಿಸಿದರು. ಉತ್ತರಿಸಿದ ಎಸ್‌ಐಯವರು ಘಟನೆಯ ತೀವ್ರತೆ ನೋಡಿಕೊಂಡು ಘಟನಾ ಸ್ಥಳಕ್ಕೆ ಆದಷ್ಟು ಬೇಗ ತಲುಪುತ್ತೇವೆ. ಪೊಲೀಸರು ಬೇರೆ ಬೇರೆ ಕರ್ತವ್ಯದಲ್ಲಿ ನಿಯೋಜಿತರಾಗಿರುತ್ತಾರೆ. ಅವರನ್ನು ಬದಲಿ ವ್ಯವಸ್ಥೆ ಮಾಡಿ ನಿಯೋಜಿಸುವಾವ ಒಂದಷ್ಟು ತಡವಾಗುತ್ತದೆ. ಇತ್ತೀಚೆಗೆ ಬೆಟ್ಟಂಪಾಡಿ ಗ್ರಾ.ಪಂ. ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ಹೇಳಿದ ಎಸ್‌ಐಯವರು ‘ಸರಕಾರಿ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ಮಾಡುವಾಗ ನಿಯಮವಿದೆ. ಪ್ರತಿಭಟನೆಗೆ ಮೊದಲೇ ಪರವಾನಿಗೆ ಪಡೆದುಕೊಳ್ಳಬೇಕು’ ಎಂದರು.

ಯಾವುದೇ ಸಮಸ್ಯೆ ಬಂದಾಗ ಪೊಲೀಸರನ್ನು ನೇರವಾಗಿ ಸಂಪರ್ಕಿಸಬಹುದು. ನಾವು ಜನರ ಸೇವೆಗಾಗಿಯೇ ಇರೋದು. ಎಸ್‌ಪಿ ಕಚೇರಿ ಹೋಗಬೇಕಾಗಿಲ್ಲ. ನೇರವಾಗಿ ಫೋನ್ ಮುಖಾಂತರ ಹೇಳಿ’ ಎಂದು ಎಸ್‌ಐ ಹೇಳಿದರು.

ಗ್ರಾಮವಾರು ಸಭೆ ನಡೆಸಿ ಮಾಹಿತಿ ನೀಡಿದರೆ ಉತ್ತಮ. ಜನಸಂಪರ್ಕ ಸಭೆಗೆ‌ ಜನರೇ ಇಲ್ಲ.

ಪಾಣಾಜೆಯಲ್ಲಿ ಒಂದು ಸಭೆ ನಡೆಸಿ ಎಂದು ಪಾಣಾಜೆ ಗ್ರಾಮಸ್ಥೆ ಸೀತಾ ಭಟ್ ರವರು ಹೇಳಿದರು. ಮುಂದಿನ ದಿನದಲ್ಲಿ ಪಾಣಾಜೆಯಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದೇವೆ’ ಎಂದು ಎಸ್‌ಐ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ. ಯವರು ‘ಉತ್ತಮ ಜೀವನಕ್ಕಾಗಿ ಪೊಲಿಸ್ ವ್ಯವಸ್ಥೆಯ ಜೊತೆ ನಾವೆಲ್ಲಾ ಸಹಕರಿಸೋಣ’ ಎಂದರು.
ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಪಾರ್ವತಿ ಗೌಡ, ಉಮಾವತಿ, ವಿದ್ಯಾ ಸುರೇಶ್, ಬೇಬಿ ಜಯರಾಮ,‌ ಗೋಪಾಲ ಬೈಲಾಡಿ, ಗಂಗಾಧರ ಮಿತ್ತಡ್ಕ, ‌ಚಂದ್ರಶೇಖರ ರೈ ಬಾಲ್ಯೊಟ್ಟು, ಸುಮಲತಾ, ಲಲಿತಾ ಚಿದಾನಂದ, ಪಿಡಿಒ ಸೌಮ್ಯ ಎಂ.ಎಸ್., ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರೀಶ್ ಗೌಡ ಜಿ. ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ಬೆಟ್ಟಂಪಾಡಿ ಬೀಟ್ ಪೊಲೀಸ್ ಹರ್ಷಿತ್ ಖಂಡಿಗೆ ಸ್ವಾಗತಿಸಿದರು. ಪಾಣಾಜೆ ಬೀಟ್ ಪೊಲೀಸ್ ಗಿರೀಶ್ ಹಾಗೂ ಬೆಟ್ಟಂಪಾಡಿ ಗ್ರಾ.ಪಂ. ಸಿಬಂದಿಗಳಾದ ಸಂದೀಪ್, ಕವಿತಾ, ಸವಿತಾ ಹಾಗೂ ಪ್ರೇಮ ಸಹಕರಿಸಿದರು.

ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಿ
ಮೊಬೈಲ್ ನಿಂದ ಮಕ್ಕಳನ್ನು ದೂರವಿಡಿ. ದೈಹಿಕ ಆಟಗಳನ್ನು ಹೆಚ್ಚು ಪ್ರೋತ್ಸಾಹಿಸಿ, ಮೊಬೈಲ್ ಆಟಗಳು ಸಣ್ಣ‌ ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಕ್ಕಳು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ, ವಿಷಯಗಳನ್ನು ಅವಲಂಬಿಸುವುದರ ಬಗ್ಗೆ ಹಿರಿಯರಾದ ನಾವು ಹೊಣೆ ವಹಿಸಿಕೊಳ್ಳಬೇಕು’ ಎಂದು ಎಸ್‌ಐ ಶ್ರೀನಾಥ್ ಎಚ್ಚರಿಕೆಯ ಮಾತು ಹೇಳಿದರು.

LEAVE A REPLY

Please enter your comment!
Please enter your name here