ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯರ ವಿದಾಯ ಸಮಾರಂಭ

0

ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯರಿಗೆ ವಿದಾಯ ಸಮಾರಂಭವು ಮಾ.9ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳ ಸಂಚಾಲಕ ಅತಿ|ವಂ|ಫಾ| ಲಾರೆನ್ಸ್ ಮಸ್ಕರೇನ್ಹಸ್, ಮುಖ್ಯ ಅತಿಥಿಗಳಾದ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಕೆ ವಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲೀನಾ ರೇಗೊ, ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್‌ಲಿನ್ ಲೋಬೊ ಹಾಗೂ 10ನೇ ತರಗತಿ ವಿದ್ಯಾರ್ಥಿ ಪ್ರತಿನಿಧಿಗಳಾದ ನಿಶ್ವಿತಾ, ಧನ್ಯಾ, ಆಯಿಷತ್ ಸದೀದಾ, ಖದೀಜತ್ ಶೈಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂ|ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಕೆಲವು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಹೃದಯದಲ್ಲಿ ಪ್ರೀತಿ ತುಂಬಿ ಪರರಿಗೆ ಒಳಿತು ಮಾಡಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ. ಭವಿಷ್ಯ ಸರಿಮಾಡಲು ಅಡ್ಡ ದಾರಿಗಳಿಲ್ಲ. ಪರಿಶ್ರಮದ ದಾರಿ ಹಿಡಿದು ಪರಿಶ್ರಮಿಗಳಾದರೆ ಮಾತ್ರ ಸಾಧಕರಾಗಲು ಸಾಧ್ಯ. ದೇವರಲ್ಲಿ ಭಯ ಭಕ್ತಿ ನಿಮ್ಮಲ್ಲಿ ಆತ್ಮ ವಿಶ್ವಾಸವಿರಲಿ. ಪರಾವಲಂಬಿಗಳಾಗುವ ಬದಲು ಸ್ವಾವಲಂಬಿಗಳಾಗಿ, ಅಹಂಕಾರ , ದರ್ಪ ತೋರಿಸುವವರಾಗದೆ ವಿಧೇಯತೆ ತೋರುವ, ಸರಳ ಸಜ್ಜನಿಕೆ ಇರುವ ವ್ಯಕ್ತಿಗಳಾಗಿ ಬದುಕಿ ಮಾನವೀಯತೆಯನ್ನು ಮೆರೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲೀನಾ ರೇಗೊ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನವನ್ನು ವಿತರಿಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ಶಾಲಾ ಸಹಶಿಕ್ಷಕಿ ಜೋಯ್ಲಿನ್ ರೊಡ್ರಿಗಸ್‌ರವರು ಎಲ್ಲಾ ಶಿಕ್ಷಕರ ಪರವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರತಿನಿಧಿಗಳಾದ ನಿಶ್ವಿತಾ, ಧನ್ಯಾ, ಆಯಿಷತ್ ಸದೀದಾ, ಖದೀಜತ್ ಶೈಮಾರವರು ಈ ಶಾಲೆಯಲ್ಲಿ ಕಳೆದ ತಮ್ಮ ಮೂರು ವರುಷಗಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ರೀನಾ ರೆಬೆಲ್ಲೊ ಹಾಗೂ ಡೋರಿನ್ ವಿಲ್ಮ ಲೋಬೊ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಹೆಸರನ್ನು ವಾಚಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಗಣ್ಯರನ್ನು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿನಿಯರನ್ನು ಶಾಲಾ ವಾದ್ಯವೃಂದದೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್‌ಲಿನ್ ಲೋಬೊರವರು ಪ್ರಾಸ್ತಾವಿಕವಾಗಿ ಮಾತನಾಡಿ ನೆರೆದ ಸರ್ವರನ್ನು ಸ್ವಾಗತಿಸಿ, ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಮೊಂಬತ್ತಿಯನ್ನು ಹಚ್ಚುವುದರ ಮೂಲಕ ಸಮರ್ಪಣಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಸಿಂಚನಾ ಜೆ ಎನ್ ವಂದಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ಫಾತಿಮ ಖಾಸಿಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here