ವಿಟ್ಲ: ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದೆ. ಮನೆ ನಿರ್ವಹಣೆಗೆ ನಾಗರಿಕರು ಪರದಾಡುವ ಸ್ಥಿತಿಯನ್ನು ಬಿಜೆಪಿ ಸರಕಾರ ತಂದೊಡ್ಡಿದೆ. ಮುಂದೆ ಬರುವ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ. ಆಗ ಕಾಂಗ್ರೆಸ್ ಗ್ಯಾರೆಂಟಿ ಎಂಬ ಸಂದೇಶದೊಂದಿಗೆ ಮನೆ ಮನೆಗೆ ಕಾರ್ಯಕರ್ತರು ತೆರಳಲಿದ್ದಾರೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಹೇಳಿದರು.
ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಭ್ರಷ್ಟಾಚಾರದ ಕೂಪವಾಗಿದೆ. ಈ ಬಾರಿ ಬಿಜೆಪಿಯ ವಿರುದ್ದ ಜನತೆ ಮತ ಹಾಕಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಸ್ತುವಾರಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಮನೆ ಮನೆಯ ಕಷ್ಟಗಳನ್ನು ನಿಗ್ರಯಿಸಲಿದೆ. ಜಾತಿ, ಮತ, ಪಕ್ಷ ಬೇಧವಿಲ್ಲದೇ ಎಲ್ಲರಿಗೂ ಈ ಸೌಲ ಲಭ್ಯವಾಗಲಿದೆ. ಪ್ರತಿಯೊಬ್ಬ ಬಿಪಿಎಲ್ ಪಡಿತರದಾರನಿಗೆ 10 ಕೆಜಿ ಅಕ್ಕಿ ಲಭ್ಯವಾಗಲಿದೆ. ಬಿಜೆಪಿಯ ಭ್ರಷ್ಟಾಚಾರವೇ ಈ ಬಾರಿಯ ಚುನಾವಣೆ ವಿಶೇಷ ಎಂದು ವ್ಯಂಗ್ಯವಾಡಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದ್ದು, ಅವರಿಗೆ ನಿರೀಕ್ಷಣ ಜಾಮೀನು ಸಿಕ್ಕಿದಾಗ ಬಿಜೆಪಿ ಅವರನ್ನು ಭಾರೀ ಮೆರವಣಿಗೆಯಲ್ಲಿ ಸ್ವಾಗತಿಸುತ್ತಿದೆ. ಇದು ಹಾಸ್ಯಾಸ್ಪದವಾಗಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರರಹಿತ ಸರಕಾರ ಎಂದು ಮಾತನಾಡುತ್ತ ಕರ್ನಾಟಕ್ಕೆ ಅವಮಾನ ಮಾಡಿದ್ದಾರೆ. ಅವರು ಪ್ರತಿಯೊಬ್ಬನ ಖಾತೆಗೆ ಸ್ವಿಸ್ ಬ್ಯಾಂಕಿನಿಂದ ಹಣ ಕೊಡುತ್ತೇನೆಂದು ಇಂದಿನ ತನಕ ಬಂದಿಲ್ಲ. ಸುಳ್ಳು ಭರವಸೆಯನ್ನು ನೀಡುವ ಬಿಜೆಪಿಗೆ ಸತ್ಯ ಮಾತನಾಡಿ ಗೊತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಭ್ರಷ್ಟಾಚಾರ ಸಾಕ್ಷಿ ಸಿಕ್ಕಿಲ್ಲವೆನ್ನುತ್ತಿದ್ದಾರೆ. ವಿರೂಪಾಕ್ಷಪ್ಪ ಒದಗಿಸಿದ ಸಾಕ್ಷಿಗಿಂತ ಬೇರೆ ಸಾಕ್ಷಿ ಇನ್ನು ಬೇಕೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ರಮಾನಾಥ ವಿಟ್ಲ, ಪ.ಪಂ.ಸದಸ್ಯ ವಿ.ಕೆ.ಎಂ.ಅಶ್ರಫ್, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.