ಪುಣಚ ಅಷ್ಟಬಂಧ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ

0

ಐಕ್ಯಮತದ ಬದುಕು ದೇವರ ಸಂಪ್ರೀತಿಗೊಳಗಾಗುತ್ತದೆ – ಪೇಜಾವರ ಶ್ರೀ
ದೇವಸ್ಥಾನಗಳು ಬದುಕಿಗೆ ಬೆಳಕು ಕೊಡಬೇಕು – ಒಡಿಯೂರು ಶ್ರೀ
ಸಂಸ್ಕಾರ ರೂಪಿಸಲು ಮನೆಯಿಂದ ಚಿಂತನೆ ಆರಂಭವಾಗಬೇಕು – ಕಜಂಪಾಡಿ
ತುಳುನಾಡಿನ ಸಂಸ್ಕೃತಿಗೆ ಪಾವಿತ್ರ್ಯತೆಯಿದೆ – ಮಠಂದೂರು
ಸ್ವಚ್ಛತೆ ಮತ್ತು ಅಚ್ಚುಕಟ್ಟುತನದ ಬ್ರಹ್ಮಕಲಶೋತ್ಸವ – ಸೀತಾರಾಮ ರೈ
ದೇವಸ್ಥಾನ ಕೇಂದ್ರೀಕೃತ ಸಂಘಟನೆ ನಮ್ಮದು – ಶ್ರೀಶ ನಾಯಕ್
ಅತ್ಯಂತ ಸುಂದರ ದೇವಾಲಯ – ಕೆ.ಕೆ. ಶೆಟ್ಟಿ ಕುತ್ತಿಕಾರ್

ಪುಣಚ: ಅಣ್ಣತಮ್ಮಂದಿರು ಐಕ್ಯಮತದಿಂದ ಬದುಕಿದಾಗ ತಾಯಿಗೆ ಖುಷಿಯಾಗುತ್ತದೆ. ತಾಯಿಯನ್ನು ಸಂತೋಷಪಡಿಸುವ ಬದುಕು ನಮ್ಮದಾಗಬೇಕು. ಶಾಂತಿ ನೆಮ್ಮದಿ ದೇವರಲ್ಲಿ ಸಿಗುತ್ತದೆಯೇ ಹೊರತು ಟಿವಿ ಮೊಬೈಲ್‌ನಿಂದಲ್ಲ. ದೇವಾಲಯಗಳಿಂದ ಸಂಸ್ಕಾರದ ಜೀವನಕ್ಕೆ ಸ್ಪೂರ್ತಿ ಸಿಗುವಂತಾಗಬೇಕು. ನಾವು ಮಾಡುವ ಸತ್‌ಪ್ರಯತ್ನಗಳಿಗೆ ದೇವರ ಅನುಗ್ರಹ ಸಿಕ್ಕಾಗ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ವಿಶ್ವಸ್ಥರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ನುಡಿದರು.
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.


ದೇವಸ್ಥಾನಗಳು ಬದುಕಿಗೆ ಬೆಳಕು ಕೊಡಬೇಕು – ಒಡಿಯೂರು ಶ್ರೀ
ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀಗಳು ‘ಬದುಕಿಗೆ ಬೆಳಕು ಕೊಡುವ ವ್ಯವಸ್ಥೆ ಧಾರ್ಮಿಕ ಶ್ರದ್ದಾ ಕೇಂದ್ರಗಳಿಂದ ಆಗಬೇಕು’ ಎಂದು ನುಡಿದರು.

ಆನ್‌ಲೈನ್ ಆಫ್‌ಲೈನ್
ಮೊಬೈಲ್‌ನಲ್ಲಿ ಆನ್‌ಲೈನ್ ಗೆ ಹೋಗುತ್ತಿರುವ ಮಕ್ಕಳು ಜೀವನದಲ್ಲಿ ಆಫ್‌ಲೈನ್ ಆಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ ಶ್ರೀಗಳು ಧರ್ಮದ ಬಗ್ಗೆ ಪ್ರೀತಿ ಹುಟ್ಟಿಸುವ ಕಾರ್ಯ ಆಗಬೇಕು. ಮನೋರಂಜನೆ ಜೊತೆಗೆ ಆತ್ಮರಂಜನೆ ಮಾಡಬೇಕಾದ ಅವಶ್ಯಕತೆ ಇದೆ.


ಧರ್ಮದ ಅಂತರ್ಯ ಸತ್ಯ. ಒಂದನ್ನೊಂದು ಬಿಟ್ಟಿಲ್ಲ.
ಪ್ರೀತಿ ವಿಶ್ವಾಸವಿರುವ ಹೃದಯವಿರುವಲ್ಲಿ ದೇವರಿರುತ್ತಾರೆ ಎಂಬುದಕ್ಕೆ ಪುಣಚದ ಪುಣ್ಯ ಕ್ಷೇತ್ರ ಸಾಕ್ಷಿಯಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ‘ಇಲ್ಲಿ ಶಿಸ್ತು, ಸಂಯಮ, ಸ್ವಚ್ಛತೆಯನ್ನು ಇಲ್ಲಿ ಕಾಪಾಡಿಕೊಂಡು ಬರಲಾಗಿದೆ. ಇಲ್ಲಿನ ವ್ಯವಸ್ಥೆಯನ್ನು ಅನುಭವಿಸುವ ಎಂಬ ಭಾವನೆ ಬರುತ್ತಿದೆ ಎಂದು ಶ್ಲಾಘನೀಯ ನುಡಿಯಾಡಿದರು.


ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ‘ಭೂತಾರಾಧನೆ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನಕಲೆಯ ಮುಖಾಂತರ ಭಗವಂತನ ಆರಾಧನೆ ನಡೆಯುವ ಪವಿತ್ರ ಸಂಸ್ಕೃತಿ ತುಳುನಾಡಿನಲ್ಲಿ ಇರುವುದರಿಂದ ಇಂತಹ ದೇವಸ್ಥಾನಗಳ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಆಗುತ್ತದೆ. ಆ ಮೂಲಕ ವಿಭಿನ್ನ ವಿಚಾರ, ಚಿಂತನೆಗಳನ್ನು ಹೊಂದಿದ್ದರೂ ನಾವೆಲ್ಲಾ ಒಗ್ಗೂಡುವ ಕೇಂದ್ರ ದೇವಸ್ಥಾನವಾಗಿದೆ ಎಂದರು.
ದೇಶದ ಧರ್ಮವನ್ನು ಪಾಲಿಸುವ ಕಾರ್ಯ ಮೋದಿ ಸರಕಾರದಿಂದ ನಡೆಯುತ್ತಿದೆ’. ಪುಣಚದ ಮಹಿಷಮರ್ದಿನಿ ಭವ್ಯತೆ, ದಿವ್ಯತೆಯಿಂದ ಕಂಗೊಳಿಸುವಲ್ಲಿ ಈ ಭಾಗದ ಪ್ರತಿಯೋರ್ವರೂ ಶ್ರಮವಹಿಸಿ ಒಗ್ಗಟ್ಟು ಮೆರೆದಿದ್ದಾರೆ’ ಎಂದರು.


ಸಂಸ್ಕಾರ ರೂಪಿಸುವಲ್ಲಿ ಮನೆಯಿಂದ ಚಿಂತನೆ ಆರಂಭಗೊಳ್ಳಬೇಕು – ಕಜಂಪಾಡಿ:
ಆರ್‌ಎಸ್‌ಎಸ್ ಅಖಿಲ ಭಾರತೀಯವ ಕಾರ್ಯಕಾರಿಣಿ ಮಂಡಳಿಯ ಆಹ್ವಾನಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಧಾರ್ಮಿಕ ಉಪನ್ಯಾಸ ನೀಡಿದರು.
‘ಒಳಿತು ಕೆಡುಕುಗಳ ಯುದ್ದದಲ್ಲಿ ಒಳಿತು ಗೆಲುವು ಸಾಧಿಸಿರುವುದು ಸುಸಂಸ್ಕೃತ ಭಾರತದಲ್ಲಿ ಮಾತ್ರ. ರಾಮಾಯಣದಂತಹ ಸುಸಂಸ್ಕೃತ ಕಾಲ ನಡೆದಿರುವುದು ಸನಾತನ ಭಾರತದಲ್ಲಿ. ಪ್ರತಿ ಮನೆಗಳು ವ್ಯಕ್ತಿಯ ಜೀವನದ ಮೊದಲ ಸಂಸ್ಕಾರ ಕೇಂದ್ರಗಳಾಗಬೇಕು. ಎರಡನೆಯ ಸಂಸ್ಕಾರ ಕೇಂದ್ರವಾಗಿ ಶಾಲೆಗಳು ಕಾರ್ಯನಿರ್ವಹಿಸಬೇಕು. ದೇವಾಲಯಗಳು ಸಂಸ್ಕಾರ ನೀಡುವ ಮೂರನೇ ಕೇಂದ್ರಗಳು. ಸಂಸ್ಕಾರ ಕೇಂದ್ರಗಳ ನಿರ್ಮಾಣಕ್ಕೆ, ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕೊಂಡುಹೋಗಲು ನಾವೆಲ್ಲಾ ಮನೆಯಿಂದಲೇ ಸಂಸ್ಕಾರದ ಚಿಂತನೆ ಆರಂಭಿಸಬೇಕಿದೆ. ಸಮಾಜವೂ ಪರಸ್ಪರ ವ್ಯಕ್ತಿ ನಿರ್ಮಾಣದಲ್ಲಿ ಸಂಸ್ಕಾರಯುತ ಸಮಾಜವಾಗಿ ಪರಿವರ್ತನೆಗೊಳ್ಳಬೇಕಿದೆ. ನಮ್ಮ ಭಾಷೆಯನ್ನೇ ನಾವು ಪ್ರೀತಿಸಿ ಮಾತನಾಡಿದಾಗ ನಮ್ಮಲ್ಲಿ ಭಾವನೆಗಳು ಜಾಗೃತವಾಗಿ ಸಂಸ್ಕೃತಿ ರೂಪುಗೊಳ್ಳುತ್ತದೆ’ ಎಂದರು.


ಸ್ವಚ್ಛತೆ ಮತ್ತು ಅಚ್ಚುಕಟ್ಟುತನದ ಬ್ರಹ್ಮಕಲಶೋತ್ಸವ – ಸೀತಾರಾಮ ರೈ:
ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಸವಣೂರು ಸೀತಾರಾಮ ರೈ ಯವರು ಮಾತನಾಡಿ ‘ಗ್ರಾಮದ ಜನತೆ ಧರ್ಮ ಮತ್ತು ದೇವರಲ್ಲಿ ಇಟ್ಟಿರುವ ನಂಬಿಕೆ ಇಲ್ಲಿ ಸಾಕಾರಗೊಂಡಿದೆ. ಸ್ವಚ್ಛತೆ ಮತ್ತು ಅಚ್ಚುಕಟ್ಟುತನಕ್ಕೆ ಪುಣಚದ ಬ್ರಹ್ಮಕಲಶೋತ್ಸವ ಸಾಕ್ಷಿಯಾಗಿದೆ ಎಂಬುದನ್ನು ಪತ್ರಿಕೆಗಳ ಮೂಲಕ ನೋಡಿದ್ದೆವು. ರಂಗಮೂರ್ತಿಯವರ ನಾಯಕತ್ವ ವ್ಯವಸ್ಥೆಯ ಹಿಂದಿದೆ. ಅನೇಕ ಬ್ರಹ್ಮಕಲಶೋತ್ಸವ ಮಾಡುವ ಅವಕಾಶ ನನಗೂ ದೊರೆತಿರುವುದರಿಂದ ಒಂದಷ್ಟು ಅನುಭವ ಹೊಂದಿದ್ದೇನೆ ಎಂದರಲ್ಲದೆ ಯುವಜನತೆ ಧರ್ಮಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದರು.


ಅತ್ಯಂತ ಸುಂದರ ದೇವಾಲಯ – ಕೆ.ಕೆ. ಶೆಟ್ಟಿ ಕುತ್ತಿಕಾರ್:
ಶ್ರೀ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ನ ಕೆ. ಕೆ. ಶೆಟ್ಟಿ ಕುತ್ತಿಕಾರ್ ರವರು ಮಾತನಾಡಿ ‘ಅತ್ಯಂತ ಸುಂದರವಾದ ದೇವಾಲಯ ಇಲ್ಲಿ ನಿರ್ಮಾಣಗೊಂಡಿದೆ. ಮನಸ್ಸಿಗೆ ಅತ್ಯಂತ ಖುಷಿ ನೀಡಿದೆ. ದೇವರ ಕಾರ್ಯ ಮಾಡಿದರೆ ನಮಗೆ ದೇವರು ಅನುಗ್ರಹಿಸುತ್ತಾನೆ. ಪುಣ್ಯದ ಕಾರ್ಯದಲ್ಲಿ ಪಾಲ್ಗೊಂಡ ಪುಣಚದ ಪ್ರತಿಯೋರ್ವರಿಗೂ ನನ್ನ ಅಭಿನಂದನೆಯಿದೆ’ ಎಂದರು.


ದೇವಸ್ಥಾನ ಕೇಂದ್ರೀಕೃತ ಸಂಘಟನೆ ನಮ್ಮದು – ಶ್ರೀಶ ನಾಯಕ್:
ಮುಖ್ಯ ಅತಿಥಿಯಾಗಿದ್ದ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶ ನಾಯಕ್ ರವರು ಮಾತನಾಡಿ ‘ದೇವಸ್ಥಾನ ಕೇಂದ್ರೀಕೃತವಾಗಿ ನಾವು ಸಂಘಟನಾತ್ಮಕವಾಗಿ ಇರುವವರು. ನಮ್ಮ ದೇಶ ವಿಶ್ವದಲ್ಲಿ ಗೌರವ ಸ್ಥಾನಮಾನ ಇಟ್ಟುಕೊಂಡ ಕಾರಣವೆಂದರೆ ನಮ್ಮ ಸಂಸ್ಕೃತಿ.
ದೇವಸ್ಥಾನದಲ್ಲಿ ನಾನು ಎಂಬುದಿಲ್ಲ. ದೇವಾಲಯದ ಕಾರ್ಯಗಳನ್ನು ಸರಿಯಾದ ಕಾಲಕ್ಕೆ ದೇವರೇ ಮಾಡಿಸಿಕೊಳ್ಳುತ್ತಾನೆ’ ಎಂದ ಅವರು ತನ್ನೂರಿನ ದೇವಸ್ಥಾನದಲ್ಲಿ ಆಗಿರುವ ಘಟನೆಗಳನ್ನು ಸ್ಮರಿಸಿಕೊಂಡರು.


ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಟ್ಲ ಅರಮನೆಯ ಬಂಗಾರು ಅರಸರು ಗೌರವ ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಂಕರನಾರಾಯಣ ಭಟ್ ಮಲ್ಯ ಉಪಸ್ಥಿತರಿದ್ದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಸ್ವಾಗತಿಸಿ, ಆಡಳಿತ ಸಮಿತಿಯ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ ವಂದಿಸಿದರು. ಅಭಿಷೇಕ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಗರಡಿ ಪ್ರಾರ್ಥಿಸಿದರು. ಗುರುವಪ್ಪ ದಲ್ಕಜೆ ದಂಪತಿ ಒಡಿಯೂರು ಸ್ವಾಮೀಜಿಯವರಿಗೆ ಹಾಗೂ ಉದಯ ಕುಮಾರ್ ದಂಬೆ ದಂಪತಿ ಪೇಜಾವರ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ಕೃಷ್ಣ ಭಟ್ ಬರೆಂಗಾಯಿ, ಪುಂಡರಿಕ ರಾವ್, ವರುಣ್ ರೈ ಬೈಲುಗುತ್ತು, ಜಯಂತ ಮೂಡಾಯಿಬೆಟ್ಟು, ಜಯರಾಮ ಕಾನ, ಈಶ್ವರ ನಾಯ್ಕ್ ಬೇರಿಕೆ, ದಿನೇಶ್ ಬುಡಾಳೆ, ರಾಮಕೃಷ್ಣ ಮೂಡಂಬೈಲುರವರು ಅತಿಥಿಗಳನ್ನು ಗೌರವಿಸಿದರು.

ಅಚ್ಚುಕಟ್ಟಿನ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ
ಬ್ರಹ್ಮಕಲಶೋತ್ಸವಕ್ಕೆ ಜೋಡಿಸಲಾಗಿರುವ ವಿವಿಧ ವ್ಯವಸ್ಥೆಗಳಲ್ಲಿ ಅಚ್ಚುಕಟ್ಟುತನ ತೋರುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ಊಟೋಪಚಾರ ವ್ಯವಸ್ಥೆ ಮತ್ತು ದೇವಾಲಯದ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೇಸರಿ ಅಲಂಕಾರದ ತಟ್ಟಿಯ ಸ್ವಾಗತ ಚಪ್ಪರ, ವರ್ಣಮಯ ವಿದ್ಯುತ್ ದೀಪಗಳ ಸಾಲು ಒಟ್ಟು ದೇವಾಲಯದ ಪರಿಸರದ ಶೋಭೆ ಹೆಚ್ಚಿಸಿವೆ. ಸಭಾ ಕಾರ್ಯಕ್ರಮವೂ ನಿಗದಿತ ವೇಳೆಗೆ ಆರಂಭಗೊಂಡು ನಿಗದಿತ ಸಮಯದಲ್ಲಿ ಮುಕ್ತಾಯಗೊಳ್ಳುತ್ತಿದೆ. ಊರಿನ ಜನರೂ ಬ್ರಹ್ಮಕಲಶೋತ್ಸವದ ಸಂಭ್ರಮದ ಉತ್ಸಾಹದಲ್ಲಿದ್ದು, ವ್ಯವಸ್ಥೆಯ ಅಚ್ಚುಕಟ್ಟಿನ ಜೋಡಣೆಗೆ ನಿತ್ಯ ಶ್ರಮಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇಂದು ದೇವಳದಲ್ಲಿ – ಮಾತೃ ಸಂಗಮ

ಬ್ರಹ್ಮಕಲಶೋತ್ಸವದ ಮೂರನೆಯ ದಿನವಾದ ಮಾ. 10 ರಂದು ದೇವಳದಲ್ಲಿ ವಿವಿಧ ವೈದಿಕ ಮತ್ತು ತಾಂತ್ರಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ‘ಮಾತೃ ಸಂಗಮ’ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಬೆಳಿಗ್ಗೆ ಶ್ರದ್ಧಾ ಭಟ್ ನಾರ್ಯಪಳ್ಳ ಮತ್ತು ಬಳಗದವರಿಂದ ‘ಹರಿಕಥೆ’, ರಾತ್ರಿ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ‘ಮಸ್ತ್ ಮ್ಯಾಜಿಕ್’ ಜಾದೂ ಪ್ರದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here