ಸಂತ ಫಿಲೋಮಿನಾ ಪಿ .ಯು ಕಾಲೇಜು: ಸೇತುಬಂಧ ತರಗತಿ ಉದ್ಘಾಟನಾ ಸಮಾರಂಭ

0

ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಸಾಧ್ಯ: ರೆ.ಫಾ.ಸ್ಟ್ಯಾನಿ ಪಿಂಟೊ



ಪುತ್ತೂರು: ಸಂತ ಫಿಲೋಮಿನಾ ಪಿ .ಯು ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕೇಂದ್ರ ಪ್ರಸ್ತುತಪಡಿಸುವ ಸೇತುಬಂಧ ತರಗತಿ ಮತ್ತು ವೃತ್ತಿ ಮಾರ್ಗದರ್ಶನದ ಉದ್ಘಾಟನಾ ಸಮಾರಂಭವು ಸ್ನಾತಕೋತರ ವಿಭಾಗದ ಸೆಮಿನಾರ್ ಸಭಾಂಗಣದಲ್ಲಿ ಮಾ.10ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಕ್ಯಾoಪಸ್ ನಿರ್ದೇಶಕ ರೆ. ಫಾ .ಸ್ಟ್ಯಾನಿ ಪಿಂಟೊರವರು ‘ಯಶಸ್ಸು ನಮ್ಮನ್ನು ಹಿಂಬಾಳಿಸುವುದಿಲ್ಲ ನಾವು ಅದನ್ನು ಹಿಂಬಾಲಿಸಬೇಕು. ನಮಗೆ ಸಿಗುವ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸ್ಪರ್ಧೆಗೆ ಒಗ್ಗಿಕೊಂಡಾಗ, ಸ್ಪರ್ಧಾಮನೋಭಾವನೆ ನಮ್ಮನ್ನು ಆವರಿಸಿದಾಗ ಭವಿಷ್ಯವನ್ನು ತಾನಾಗಿಯೇ ಕಟ್ಟಿಕೊಳ್ಳಬಹುದು ಅದಕ್ಕೆ ವೃತ್ತಿ ಮಾರ್ಗರ್ಶನಗಳು ಸಾದರಪಡಿಸುವ ಸೇತುಬಂಧ ತರಗತಿಗಳು ಅವಶ್ಯಕ ಎಂದು ನುಡಿದರು.


ಕಾರ್ಯಕ್ರಮದ ಮುಖ್ಯ ಅತಿಥಿ ಸಂತ ಫಿಲೋಮಿನಾ ಪಿ. ಯು ಕಾಲೇಜಿನ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಮಾಮಚ್ಚನ್ .ಎಂ ಮಾತನಾಡಿ ವಿದ್ಯಾರ್ಥಿಗಳು ವರ್ಷದ ಆರಂಭದಿಂದಲೇ ನಿರಂತರವಾಗಿ ಕಲಿಕೆಗೆ ಪ್ರಾಶಸ್ತ್ಯ ನೀಡಿದರೆ ಹೆಚ್ಚು ಪ್ರತಿಭಾವಂತರಾಗಬಹುದು ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಕನಸು ಹೊಂದಿರುತ್ತಾರೆ ಅದನ್ನು ನನಸು ಮಾಡಬೇಕು ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ರೆ. ಫಾ . ಅಶೋಕ ರಾಯನ್ ಕ್ರಾಸ್ತಾ ಮಾತನಾಡಿ ನಮ್ಮಲ್ಲಿರುವ ಆಲಸ್ಯವೇ ನಮ್ಮನ್ನು ಗೊತ್ತಿಲ್ಲದೇ ಹಾಳು ಮಾಡುವ ಅಸ್ತ್ರವಾಗಿದ್ದು , ಸದಾ ಉತ್ಸಾಹದಿಂದ ನಮ್ಮನ್ನು ನಾವು ಯಶಸ್ಸಿನ ಬದುಕಿಗೆ ಒಗ್ಗಿಕೊಂಡಾಗ ನಮ್ಮ ಬದುಕು ಹಸನಾಗುತ್ತದೆ . ಸಮಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಹವ್ಯಾಸ ಮತ್ತು ಅಭ್ಯಾಸದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಮತ್ತು ಸೇತುಬಂಧ ತರಗತಿಗೆ ನೋಂದಾವಣೆ ಮಾಡಿಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಉಪನ್ಯಾಸಕ ರೋಹಿತ್ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ರವಿಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಕ್ಷಿತಾ ಮತ್ತು ತಂಡ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here