ಕರ್ನಾಟಕ ವಿಧಾನಸಭೆ ಚುನಾವಣೆ;80 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರು ಮನೆಯಿಂದಲೇ ಮತ ಚಲಾಯಿಸಲು ವ್ಯವಸ್ಥೆ

0

ಬೆಂಗಳೂರು:ಇದೇ ಮೊದಲ ಬಾರಿಗೆ, 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.


ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ದಿನಗಳಿಂದ ರಾಜಕೀಯ ಪಕ್ಷಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.


ಇದೇ ಮೊದಲ ಬಾರಿಗೆ, ರಾಜ್ಯದಲ್ಲಿ ೮೦ ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಮತದಾರರು ಬಯಸಿದಲ್ಲಿ, ಅವರ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿzವೆ.ಅಧಿಸೂಚನೆ ಹೊರಡಿಸಿದ ೫ ದಿನಗಳೊಳಗೆ ಫಾರ್ಮ್ ೧೨ ಡಿ ಲಭ್ಯವಿರುತ್ತದೆ.ಇದರಿಂದ ೮೦ ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು.


೮೦ ವರ್ಷ ಮೇಲ್ಪಟ್ಟವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಚುನಾವಣಾ ಆಯೋಗ ಪ್ರೋತ್ಸಾಹಿಸುತ್ತಿದ್ದರೂ, ಬರಲು ಸಾಧ್ಯವಾಗದವರು ಈ ಸೌಲಭ್ಯವನ್ನು ಪಡೆಯಬಹುದು.ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುವುದು.ಮನೆಯಿಂದ ಮತದಾನದ ಸೌಲಭ್ಯ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.


ಮತದಾರರ ಅನುಕೂಲಕ್ಕಾಗಿ ಕೆವೈಸಿ ಅಭಿಯಾನ:
ವಿಶೇಷ ಚೇತನರಿಗಾಗಿ ‘ಸಕ್ಷಮ್’ ಮೊಬೈಲ್ ಆಪ್ ಪರಿಚಯಿಸಲಾಗಿದೆ. ಇದರಲ್ಲಿ ಲಾಗಿನ್ ಆಗಿ ಮತದಾನದ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮತ್ತೊಂದು ಸುವಿಧಾ' ಆಪ್ ಅಭಿವೃದ್ಧಿಪಡಿಸಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮತ್ತು ಅಫಿಡವಿಟ್‌ಗೆ ಇದು ಆನ್ ಲೈನ್ ಪೋರ್ಟಲ್ ಆಗಿದೆ. ಅಭ್ಯರ್ಥಿಗಳು ಸಭೆ, ರ್‍ಯಾಲಿಗಳಿಗೆ ಅನುಮತಿ ಪಡೆಯಲುಸುವಿಧಾ’ ಪೋರ್ಟಲ್ ಬಳಸಬಹುದಾಗಿದೆ. ಮತದಾರರ ಅನುಕೂಲಕ್ಕಾಗಿ ನೋ ಯುವರ್ ಕ್ಯಾಂಡಿಡೇಟ್ (ಕೆವೈಸಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಉನ್ನತ ಚುನಾವಣಾ ಅಧಿಕಾರಿ ತಿಳಿಸಿದರು.


ಉಲ್ಲಂಘನೆ ರೆಕಾರ್ಡ್ ಮಾಡಲು ಇ-ವಿಜಿಲ್ ಆಪ್:

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಿ ಟಿಕೆಟ್ ನೀಡಿದರು ಎಂಬುದನ್ನು ರಾಜಕೀಯ ಪಕ್ಷಗಳು ತಮ್ಮ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತದಾರರಿಗೆ ತಿಳಿಸಬೇಕು.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರು ಸಲ್ಲಿಸಲು ಆಯೋಗವು ಇ-ವಿಜಿಲ್ ಆಪ್ ಪರಿಚಯಿಸಿದೆ.ಇದಕ್ಕೆ ಪ್ರತಿಕ್ರಿಯಿಸಲು ೧೦೦ ನಿಮಿಷ ಬೇಕಾಗುತ್ತದೆ.ಇದು ಉಲ್ಲಂಘನೆ ರೆಕಾರ್ಡ್ ಮಾಡಲು, ವರದಿ ಮಾಡಲು ಮತ್ತು ಪರಿಹರಿಸಲು ಒಂದೇ ಆಪ್ ಆಗಿದ್ದು, ೧೦೦ ನಿಮಿಷಗಳಲ್ಲಿ ಕುಂದುಕೊರತೆ ಪರಿಹರಿಸುತ್ತದೆ ಎಂದು ಅವರು ತಿಳಿಸಿದರು.


ಪಕ್ಷಪಾತ ತೋರಿದರೆಅಧಿಕಾರಿಗಳ ವಿರುದ್ಧ ಕ್ರಮ:

ಚುನಾವಣೆ ಸಂದರ್ಭದಲ್ಲಿ ಪಕ್ಷಪಾತ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಚುನಾವಣೆಯಲ್ಲಿ ಹಣದ ದುರುಪಯೋಗವಾಗದಂತೆ ಬ್ಯಾಂಕ್‌ಗಳು ತಮ್ಮದೇ ಆದ ರೀತಿಯಲ್ಲಿ ಮತ್ತು ತಮ್ಮದೇ ವ್ಯವಸ್ಥೆಯ ಮೂಲಕ ನಿಗಾ ಇಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ವಿಧಾನ ಸಭೆ ಅವಧಿ ಮೇ ೨೪ಕ್ಕೆ ಪೂರ್ಣ:
ಸಂಭವನೀಯ ಚುನಾವಣಾ ದಿನಾಂಕ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಕುಮಾರ್, ಪ್ರಸ್ತುತ ರಾಜ್ಯ ವಿಧಾನಸಭೆಯ ಅವಧಿ ಮೇ ೨೪ಕ್ಕೆ ಮುಗಿಯಲಿದೆ.ಅದಕ್ಕೂ ಮುನ್ನ ಚುನಾವಣೆ ನಡೆಸಬೇಕು ಎಂದು ಹೇಳಿದರಲ್ಲದೆ, ರಾಜ್ಯದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ಕರ್ನಾಟಕದಲ್ಲಿ ಎಷ್ಟು ಹಂತಗಳಲ್ಲಿ ಚುನಾವಣೆಗಳು ನಡೆಯಲಿದೆ ಎಂಬುದು ಪರೀಕ್ಷೆಗಳು ಮತ್ತು ಹಬ್ಬಗಳಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.

LEAVE A REPLY

Please enter your comment!
Please enter your name here