ಪುಣಚ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ

0

ಪುಣಚ: ಇಲ್ಲಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಧಾರ್ಮಿಕ ಸಭೆ ಮಾ. ೧೧ ರಂದು ಸಂಜೆ ನಡೆಯಿತು.


ಅಧ್ಯಾತ್ಮ ಆಧುನಿಕ ವಿಜ್ಞಾನಕ್ಕೂ ನಿಲುಕದ್ದು – ಬ್ರಹ್ಮಾನಂದ ಸರಸ್ವತಿ ಶ್ರೀ:
ಆಶೀರ್ವಚನ ನೀಡಿದ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ‘ಬದುಕಿನ ಪಯಣ ಸುಖ ಶಾಂತಿ ನೆಮ್ಮದಿಗಾಗಿ ನಡೆಯುತ್ತಿರುತ್ತದೆ. ಸಾರ್ವತ್ರಿಕವಾಗಿ ಒಪ್ಪತಕ್ಕದ್ದು ಧರ್ಮವಾಗಿರುತ್ತದೆ. ಕಾಲಾಧಾರಿತ ಪುಣ್ಯ ಭೂಮಿಯಲ್ಲಿ ಧರ್ಮಾಧಾರಿತ ಕಾರ್ಯಗಳಲ್ಲಿ ನಾವು ನಿರತವಾಗಿದ್ದೇವೆ. ನಿಜವಾದ ಸುಖ ಧರ್ಮದ ಅಂತರಾಳದಲ್ಲಿದೆ. ಯೋಗ, ಧ್ಯಾನದ ಮೂಲಕ ವಿಜ್ಞಾನಕ್ಕೂ ನಿಲುಕದ ಸುಖವನ್ನು ಪಡೆಯುವ ವಿಧಾನವನ್ನು ಕಲಿಸಿಕೊಟ್ಟದ್ದು ನಮ್ಮ ಸನಾತನ ಸಂಸ್ಕೃತಿಯಾಗಿದೆ. ಅಧ್ಮಾತ್ಮದ ಮೂಲಕ ಭಾವಸಮಾಧಿ ಪಡೆದು ನಾವು ಆನಂದ ಪಡುತ್ತೇವೆ. ಅಧ್ಯಾತ್ಮ ಆಧುನಿಕ ವಿಜ್ಞಾನಕ್ಕೂ ಮಿಗಿಲಾದುದು. ಇಂತಹ ಶ್ರದ್ಧಾ ಕೇಂದ್ರಗಳ ಮೂಲಕ ಅಂತಹ ಅಧ್ಯಾತ್ಮವನ್ನು ಪಾಲಿಸಲು ಅನುಕೂಲವಾಗುತ್ತದೆ’ ಎಂದರು.

ಭಾರತ ತ್ಯಾಗ ಭೂಮಿ – ಡಾ. ಧರ್ಮಪಾಲನಾಥ ಶ್ರೀ:
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಶ್ರೀಗಳು ಆಶೀರ್ವಚನ ನೀಡಿ ‘ಭಕ್ತರಿಗೆ ಜ್ಞಾನದ ಔತಣವನ್ನು ಕೊಡಿಸುವ ಕಾರ್ಯ ಮಾಡಿರತಕ್ಕಂತಹ ಸಮಿತಿಯವರಿಗೆ ಅಭಿನಂದನೆ. ಭಾರತ ಪುಣ್ಯ ಭೂಮಿ, ಧರ್ಮ ಭೂಮಿ ಮತ್ತು ಕರ್ಮ ಭೂಮಿ. ಇಂತಹ ದೇಶದಲ್ಲಿ ಹುಟ್ಟಿರುವ ನಾವು ಪುಣ್ಯಾತ್ಮರಾಗಿzವೆ. ತ್ಯಾಗ ಭೂಮಿ ಇರುವುದು ಭಾರತ ಒಂದೇ. ಉಳಿದೆಲ್ಲಾ ಭೋಗ ಭೂಮಿಗಳಾಗಿವೆ. ದೇವಿಯ ಅವತಾರಗಳನ್ನು ಅನ್ವೇಷಿಸಿ ನೋಡಿದಾಗ ಆಕೆ ನಿಗ್ರಹ ಮತ್ತು ಅನುಗ್ರಹ ಶಕ್ತಿಯನ್ನು ಹೊಂದಿದವಳು ಎಂದು ಅರಿವಾಗುತ್ತದೆ. ಆಕೆ ಧರ್ಮಬೋಧನೆ ಮಾಡುವವಳೂ ಆಗಿದ್ದಾಳೆ. ನಮ್ಮ ಶರೀರದಲ್ಲಿ ಆಸುರೀ ಗುಣಗಳಿವೆ. ಅವೆಲ್ಲವನ್ನೂ ದೇವಿಯ ಆರಾಧನೆಯಿಂದ ನಿರ್ಮೂಲನೆಗೊಳಿಸ ಬಹುದಾಗಿದೆ’ ಎಂದರು.

ದೇವಿ ಮಹಾತ್ಮೆಯಲ್ಲಿ ಜೀವನ ತತ್ವ ಇದೆ – ಕಶೆಕೋಡಿ:

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ ‘ಬ್ರಹ್ಮಕಲಶದಂತಹ ಸತ್ಕರ್ಮ ನಡೆಸಬೇಕೆಂಬುದು ಶಾಸ್ತ್ರದಲ್ಲಿದೆ. ದೇವಾಲಯವನ್ನು ಕೇಂದ್ರವಾಗಿಟ್ಟುಕೊಂಡು ನವಸಮಾಜ ನಿರ್ಮಾಣ ಹೇಗೆ ನಡೆಯಬೇಕೆಂಬ ಚಿಂತನೆ ಪುಣಚ ಗ್ರಾಮದಲ್ಲಿದೆ. ದೇವಿ ಮಹಾತ್ಮೆಯ ಮಂತ್ರಗಳಲ್ಲಿ ಇರುವ ಸಂದೇಶ ಜೀವನ ತತ್ವ ಹೇಳುತ್ತದೆ. ಮಹಿಷಮರ್ದಿನಿಯಾಗಿ ದೇವಿ ಲೋಕಕ್ಕೆ ಶಕ್ತಿಯ ಮಹಿಮೆಯನ್ನು ತಿಳಿಸಿದ್ದಾಳೆ. ಕಲಿಯುಗದಲ್ಲಿ ಸಂಘಟನೆಯ ಶಕ್ತಿಯಾಗಿ ದುಷ್ಟನಿಗ್ರಹಕ್ಕಾಗಿ ದೇವಿ ಶಕ್ತಿಯನ್ನು ನಾವು ಆರಾಧಿಸುತ್ತೇವೆ’ ಎಂದರು.


ಸಮಾಜದ ಹಿತಕ್ಕಾಗಿ ಬ್ರಹ್ಮಕಲಶ – ಮಂಜುನಾಥ ಭಂಡಾರಿ:
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಮಾತನಾಡಿ ‘ನಾವು ಸಂಪೂರ್ಣ ಶರಣಾಗುವ ಸ್ಥಳ ದೇವಾಲಯವಾಗಿದೆ. ದೇವರ ಎದುರು ನಾವು ಭಿಕ್ಷುಕರಾಗಿದ್ದೇವೆ. ಅಲ್ಲಿ ನಾವು ಅಹಂ ಬಿಟ್ಟು ದೇವರಲ್ಲಿ ಬೇಡುತ್ತೇವೆ. ಸಮಾಜದ ಹಿತಕ್ಕಾಗಿ ದೇವರ ಆಶೀರ್ವಾದ ಬೇಡಲು ಮಾಡಿರುವ ಬ್ರಹ್ಮಕಲಶ ಲೋಕಕ್ಕೆ ಸಂದೇಶವಾಗಲಿ’ ಎಂದರು.


ತಾಯಂದಿರು ಮಕ್ಕಳ ಜೊತೆ ಭಾಗವಹಿಸಿ – ಕುಸಮೋಧರ ಶೆಟ್ಟಿ:
ಭವಾನಿ ಗ್ರೂಪ್ ನ ಆಡಳಿತ ನಿರ್ದೇಶಕ ಕುಸುಮೋಧರ ಶೆಟ್ಟಿರವರು ಮಾತನಾಡಿ ‘ದೇವಸ್ಥಾನದ ಕಾರ್ಯಕ್ರಮಗಳಲ್ಲಿ ತಾಯಂದಿರು ತಮ್ಮ ಮಕ್ಕಳ ಜೊತೆ ಭಾಗವಹಿಸಿ. ಜ್ಞಾನವಂತರ ಮಾತುಗಳನ್ನು ಮಕ್ಕಳು ಕೇಳುವಂತಾಗಬೇಕು’ ಎಂದರು.


ಇಲ್ಲಿನ ಜನ ಶಕ್ತಿಯುಳ್ಳವರು – ಬಲರಾಮ ಆಚಾರ್ಯ:
ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ರವರು ಮಾತನಾಡಿ ಪುಣಚದ ಜನಸಂಖ್ಯೆ ಕಡಿಮೆಯಿದ್ದರೂ ಇಲ್ಲಿಯವರು ಶಕ್ತಿಯುಳ್ಳವರು. ಅದು ದೇವಿಯ ಅನುಗ್ರಹದಿಂದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಪುಣಚದ ಹೆಸರು ವಿಶ್ವದೆತ್ತರಕ್ಕೆ ಏರಿದೆ ಎಂದರು ಈ ದೇವಾಲಯ ನಿರ್ಮಾಣದ ಹಿಂದೆ ಸೇವೆಗೈದವರು, ಸ್ವಾರ್ಥ ರಹಿತವಾಗಿ ನೇತೃತ್ವದ ವಹಿಸಿದವರನ್ನು ಅವರು ಶ್ಲಾಸಿದರು.


ನಿಸ್ವಾರ್ಥ ಸೇವೆ – ಸುದೀಪ್ ಪ್ರಧಾನ್:
ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸುದೀಪ್ ಪ್ರಧಾನ್ ರವರು ಮಾತನಾಡಿ ‘ಪವಿತ್ರ ಕಾರ್ಯಕ್ರಮದ ಹಿಂದಿನ ನಿಸ್ವಾರ್ಥ ಸೇವೆ ಅಭಿನಂದನಾರ್ಹ. ದೇವಿಯ ಕಾರ್ಯ ನಡೆಯಲು ಇಲ್ಲಿನ ಜನರಿಗೆ ಇನ್ನೂ ಶಕ್ತಿ ನೀಡಲಿ’ ಎಂದರು.


ಮಂಗಳೂರುನಲ್ಲಿ ಉದ್ಯೋಗ ಸೃಷ್ಟಿಯಾಗಬೇಕು – ವಿಜಯಕೃಷ್ಣ:
ವಿಜಯಕೃಷ್ಣ ಪೇರಾಲುಗುತ್ತುರವರು ಮಾತನಾಡಿ ‘ನಾವು ಉದ್ಯಮ ಕ್ಷೇತ್ರದಲ್ಲಿ ಮುಂದುವರಿದಿರಲು ಕಾರಣ ಪುಣಚ ಗ್ರಾಮ ಮತ್ತು ಇಲ್ಲಿನ ದೇವಸ್ಥಾನವಾಗಿದೆ. ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯ ನಡೆಯಬೇಕು. ಯುವಕರು ಆದಷ್ಟು ಮಂಗಳೂರಿನಲ್ಲಿ ಉದ್ಯೋಗ ಮಾಡುವ ರೀತಿಯಲ್ಲಿ ಈಗಾಗಲೇ ಒಂದು ಯೋಜನೆ ರೂಪಿಸುತ್ತಿzವೆ’ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸ್ವಯಂಸೇವಕರಾಗಿ ದೇವಸ್ಥಾನದ ಕಾರ್ಯಗಳಲ್ಲಿ ಸೇವೆಗೈದಿರುವ ಡಿ. ಮನೋಹರ್, ಜನಾರ್ಧನ ಆಚಾರ್ಯ, ಸಂತೋಷ್ ಆಚಾರ್ಯ, ಗಣೇಶ್ ಓಟೆತ್ತಡ್ಡ, ಶ್ರೀಧರ ಗೌಡ, ಸಂತೋಷ್ ಅಲಂಗಾರು ರವರನ್ನು ರವಿ ಶೆಟ್ಟಿಯವರು ಗೌರವಿಸಿದರು.


ಪುಣಚ ಗ್ರಾ.ಪಂ. ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿ, ಉದಯ ಕುಮಾರ್ ದಂಬೆ ವಂದಿಸಿದರು. ಚೈತನ್ಯ ದಂಬೆ ಪ್ರಾರ್ಥಿಸಿದರು.
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ರವೀಶ ಪಿ. ಮತ್ತು ಅಕ್ಷತಾ ದಂಪತಿ ಹಾಗೂ ಡಾ. ಧರ್ಮಪಾಲನಾಥ ಸ್ವಾಮೀಜಿಯವರನ್ನು ರವಿ ಬಿ.ಕೆ ಮತ್ತು ನಿಶಾ ದಂಪತಿ ಗೌರವಿಸಿದರು. ಕರುಣಾಕರ ಗೌಡ ಸಂಕೇಶ, ಆನಂದ ನಾಯ್ಕ ನಡುಸಾರು, ಲಕ್ಷ್ಮಣ ಶರಾವು, ರವಿನಾಥ ರೈ, ವಿನೋದ್ ಶೆಟ್ಟಿ, ಮಹೇಶ್ ಶೆಟ್ಟಿ ಬೈಲುಗುತ್ತು, ರವೀಂದ್ರ ದಕ್ಷ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕರಾದ ವೆಂಕಟ್ರಮಣ ನಟ್ಟಿ, ಲೋಕೇಶ್ ರವರು ಕಾರ್ಯಕ್ರಮ ನಿರೂಪಿಸಿದರು.

ಇಂದು ದೇವಳದಲ್ಲಿ

ಬೆಳಿಗ್ಗೆ ಹಾಗೂ ಸಂಜೆ ದೇವಾಲಯದಲ್ಲಿ ವೈದಿಕ ತಾಂತ್ರಿಕ ಕಾರ್ಯಕ್ರಮಗಳು ಜರಗಲಿವೆ. ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಲಿದ್ದಾರೆ. ಬೆಳಿಗ್ಗೆ ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ಇವರಿಂದ ‘ಭಕ್ತ ಸುಧನ್ವ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಹನುಮಗಿರಿ ಮೇಳದವರಿಂದ ‘ತ್ರಿಜನ್ಮ ಮೋಕ್ಷ’ ಯಕ್ಷಗಾನ ನಡೆಯಲಿದೆ.

LEAVE A REPLY

Please enter your comment!
Please enter your name here