ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿ, ಮಯೂರ ಬಳಿ ವೃತ್ತ ರಚನೆಗೆ ಚಾಲನೆ

0

ಪುಡಾದಿಂದ ಏಕಕಾಲದಲ್ಲಿ ರೂ.೮೫ ಲಕ್ಷದ ಕಾಮಗಾರಿಗೆ ಶಿಲಾನ್ಯಾಸ-ಸಂಜೀವ ಮಠಂದೂರು
ಶಾಸಕರಿಗೆ, ಪುಡಾ ಅಧ್ಯಕ್ಷರಿಗೆ ಕೃತಜ್ಞತೆಗಳು-ಕೇಶವಪ್ರಸಾದ್ ಮುಳಿಯ
ಪುಣ್ಯದ ಕಾರ್ಯಕ್ಕೆ ನಗರಸಭೆಯು ಕೈ ಜೋಡಿಸಲಿದೆ – ಕೆ.ಜೀವಂಧರ್ ಜೈನ್
ಶಾಸಕ, ಸಂಸದ, ನಗರಸಭೆ ಅಧ್ಯಕ್ಷರು ಮಹಾಲಿಂಗೇಶ್ವರ ದೇವರ ಮೂರು ಕಣ್ಣುಗಳಿದ್ದಂತೆ – ಭಾಮಿ ಅಶೋಕ್ ಶೆಣೈ

ಪುತ್ತೂರು:ನಗರಾಭಿವೃದ್ಧಿ ಪ್ರಾಧಿಕಾರ ಇದ್ದರೆ ನಮ್ಮ ಪುಷ್ಕರಣಿ, ಅಪಾಯಕಾರಿ ತಿರುವು ಜಂಕ್ಷನ್ ಅಭಿವೃದ್ಧಿಯಾಗುತ್ತದೆ, ಪಟ್ಟಣದೊಳಗೆ ಚರಂಡಿ ನಿರ್ಮಾಣ, ಸಹಿತ ಒಂದಷ್ಟು ಪಾರ್ಕ್ ನಿರ್ಮಾಣ ಆಗುವ ಮೂಲಕ ಪ್ರಕೃತಿಗೂ ಒಂದಷ್ಟು ಕೊಡುಗೆ ಕೊಡಬಹುದು ಎಂದು ತೋರಿಸುವ ನಿಟ್ಟಿನಲ್ಲಿ ಇವತ್ತು ಏಕಕಾಲದಲ್ಲಿ ರೂ.೮೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ರೂ.೫೦ ಲಕ್ಷದಲ್ಲಿ ಉರ್ಲಾಂಡಿ ಮತ್ತು ಮುಖ್ಯರಸ್ತೆ ಸಂಪರ್ಕ ಮಾಡುವ ಅಪಾಯಕಾರಿ ಜಂಕ್ಷನ್ ಮಯೂರ ಬಳಿ ವೃತ್ತ ರಚನೆ ಮತ್ತು ರೂ. ೩೫ ಲಕ್ಷ ವೆಚ್ಚದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ದೇವಳದ ಕೆರೆಯ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸುಮಾರು ೧೦ ವರ್ಷಗಳ ಹಿಂದೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಈ ಕೆರೆ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದರು.ಆಗ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಅವಕಾಶ ಇರಲಿಲ್ಲವಾದ್ದರಿಂದ ಯೋಜನೆ ಮುಂದುವರಿಸಲು ಆಗಿರಲಿಲ್ಲ.ಆಮೇಲೆ ಬಂದ ಸರಕಾರ ದೇವಸ್ಥಾನದ ಕುರಿತು ಹೆಚ್ಚು ಕಾಳಜಿ ವಹಿಸಲಿಲ್ಲ.ಆದರೆ ನಾವು ಬಂದ ಮೇಲೆ ಮತ್ತೆ ತ್ರಿವಿಕ್ರಮನಂತೆ ಯಾಕೆ ಕೆರೆ ಅಭಿವೃದ್ಧಿ ಆಗುವುದಿಲ್ಲ ಎಂದು ಪ್ರಯತ್ನ ಪಟ್ಟಾಗ ಅದು ಸಾಧ್ಯ ಎಂದು ತೋರಿಸಿಕೊಡುವ ಕೆಲಸ ಆಗಿದೆ ಎಂದ ಶಾಸಕರು, ನಾಡಪ್ರಭು ಕೆಂಪೇಗೌಡ ಅವರು ಹಾಕಿದ ಯೋಜನೆಯಂತೆ ಪುತ್ತೂರಿನಲ್ಲೂ ನಗರ ಯೋಜನಾ ಪ್ರಾಧಿಕಾರ ಸಮಿತಿ ಮುಂದುವರಿಸಿದೆ ಎಂದರು.


ಶಾಸಕರಿಗೆ, ಪುಡಾ ಅಧ್ಯಕ್ಷರಿಗೆ ಕೃತಜ್ಞತೆಗಳು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಳದ ನಮ್ಮ ಸಮಿತಿಯ ಅವಧಿಯಲ್ಲಿ ಮೊದಲಾಗಿ ಅನ್ನಪೂರ್ಣೇಶ್ವರಿ ಸೇವೆ ಆಗುತ್ತಿದೆ.ಅದರ ಬಳಿಕ ಕೆರೆಯ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಇವೆಲ್ಲಕ್ಕೂ ಸಹಕಾರ ನೀಡಿದ ಕ್ಷೇತ್ರದ ಶಾಸಕರಿಗೆ ಮತ್ತು ಪುಡಾ ಅಧ್ಯಕ್ಷರಿಗೆ ಕೃತಜ್ಞತೆಗಳು.ಮುಂದೆ ಕೆರೆಯ ಮಧ್ಯೆಯ ಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಅನುಜ್ಞಾ ಕಲಶ ಮಾ.೧೭ಕ್ಕೆ ನಡೆಯಲಿದೆ.ಈ ಕೆಲಸ ಕಾರ್ಯ ಪ್ರಾರಂಭ ಮಾಡಲು ಮುಂದೆ ದಾನಿಗಳ ಸಹಕಾರ ಅಗತ್ಯವಿದೆ ಎಂದರು.


ಪುಣ್ಯದ ಕಾರ್ಯಕ್ಕೆ ನಗರಸಭೆ ಕೈ ಜೋಡಿಸಲಿದೆ:

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ನಗರಸಭೆಗೆ ಪೂರಕವಾಗಿ ಪುಡಾದಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.ಇದರ ಜೊತೆಗೆ ನಗರಸಭೆಯು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ, ಬೆದ್ರಾಳ ಜಿಡೆಕಲ್ಲು ಮೂಲಭೂತ ಉದ್ದೇಶವಿಟ್ಟು ಕೆಲಸ ಕಾರ್ಯ ನಡೆಯುತ್ತಿದೆ.ದೇವಸ್ಥಾನದ ಕೆರೆಯ ಅಭಿವೃದ್ಧಿಗೂ ಪೂಡಾ ಅನುದಾನ ನೀಡಿದೆ. ಅದೇ ರೀತಿ ಇಂತಹ ಪುಣ್ಯದ ಕಾರ್ಯಗಳಿಗೆ ನಗರಸಭೆಯೂ ಕೈ ಜೋಡಿಸಲಿದೆ ಎಂದು ಹೇಳಿದರು.


ಶಾಸಕ, ಸಂಸದ, ನಗರಸಭೆ ಅಧ್ಯಕ್ಷರು ಮಹಾಲಿಂಗೇಶ್ವರ ದೇವರ ಮೂರು ಕಣ್ಣುಗಳಿದ್ದಂತೆ:

ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮಾತನಾಡಿ, ಮಹಾಲಿಂಗೇಶ್ವರ ದೇವರ ಮೂರು ಕಣ್ಣಿನಂತೆ ಶಾಸಕರು, ನಗರಸಭೆ ಅಧ್ಯಕ್ಷರು, ಸಂಸದರಿಂದ ಈ ಅಭಿವೃದ್ಧಿ ಕಾರ್ಯ ಆಗುತ್ತಿದೆ ಹೊರತು ನನ್ನ ಪಾಲು ಏನು ಇಲ್ಲ. ನಾನು ಪೋಸ್ಟ್‌ಮ್ಯಾನ್ ಕೆಲಸ ಮಾಡಿದ್ದೇನೆ. ಎಷ್ಟೋ ಬಾರಿ ನಗರಸಭೆ ಅಧ್ಯಕ್ಷರು ಅವರ ಸ್ವಂತ ಖರ್ಚಿನಲ್ಲೇ ಬೆಂಗಳೂರಿಗೆ ಹೋಗಿ ಹಲವು ಕಾರ್ಯಗಳ ಅನುಷ್ಠಾನಕ್ಕೆ ಪ್ರಯತ್ನ ಪಟ್ಟಿದ್ದಾರೆ.ಶಾಸಕರು ಹಲವು ಸಚಿವರ ಬಳಿಗೆ ತೆರಳಿ ಒತ್ತಾಯ ಮಾಡಿದ್ದೂ ಇದೆ.ಯಾಕೆಂದರೆ ಒಂದು ಕೆರೆ ಮೂರು ಬಾರಿ ರಿಜೆಕ್ಟ್ ಆಗಿರುವುದು ಸಣ್ಣ ವಿಷಯ ಅಲ್ಲ.ಅದನ್ನು ಮತ್ತೆ ತಿಳುವಳಿಕೆ ಮಾಡಿ ಅನುಮೋದನೆ ಪಡೆಯುವಲ್ಲಿ ಅನೇಕ ಪ್ರಯತ್ನ ನಡೆದಿದೆ.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಕೂಡಾ ತುಂಬಾ ಶ್ರಮವಹಿಸಿದ್ದಾರೆ.ಇದರ ಜೊತೆಗೆ ರಂಜಿತ್ ಮಲ್ಲ ಎಂಬವರು ಹಲವು ರೀತಿಯ ಸಹಕಾರ ನೀಡಿದ್ದಾರೆ ಎಂದರು.

ಪುಡಾ ಸದಸ್ಯ ಕಾರ್ಯದರ್ಶಿ ಅಭಿಲಾಷ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ, ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ವೀಣಾ ಬಿ.ಕೆ.,ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.ಅಪೂರ್ವ ಪ್ರಾರ್ಥಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ವಂದಿಸಿದರು.ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.ಪುಡಾ ಸದಸ್ಯರಾದ ಜಯಶ್ರೀ ಎಸ್ ಶೆಟ್ಟಿ, ರಮೇಶ್ ಭಟ್, ಇಂಜಿನಿಯರ್ ದಯಾಂದ ಪೈ ಉಪಸ್ಥಿತರಿದ್ದರು.

ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ದಿಶಾ ನಾಮನಿರ್ದೇಶಿತ ಸದಸ್ಯ ರಾಮ್‌ದಾಸ್ ಹಾರಾಡಿ, ನಗರಸಭಾ ಸದಸ್ಯರುಗಳಾದ ಸುಂದರ ಪೂಜಾರಿ ಬಡಾವು, ಸಂತೋಷ್ ಬೊಳುವಾರು, ಪೂರ್ಣಿಮಾ, ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ದೀಕ್ಷಾ ಪೈ, ಲೀಲಾವತಿ, ಇಂದಿರಾ ಪಿ, ಮನೋಹರ್ ಕಲ್ಲಾರೆ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಮಾಜಿ ಪುರಸಭಾ ಅಧ್ಯಕ್ಷರಾದ ಯು.ಲೋಕೇಶ್ ಹೆಗ್ಡೆ, ರಾಜೇಶ್ ಬನ್ನೂರು, ಪ್ರೇಮಲತಾ ರಾವ್, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಸುದರ್ಶನ್, ಶಿವಪ್ರಸಾದ್, ಸೀತಾರಾಮ ರೈ ಕೆದಂಬಾಡಿಗುತ್ತು, ರಾಧಾಕೃಷ್ಣ ರೈ, ನ್ಯಾಯವಾದಿಗಳಾದ ಇ.ಶಿವಪ್ರಸಾದ್, ಚಿದಾನಂದ ಬೈಲಾಡಿ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಎ.ವಿ.ನಾರಾಯಣ್, ಅಜಿತ್ ರೈ ಹೊಸಮನೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮಯೂರದ ಬಳಿ ವೃತ್ತ ನಿರ್ಮಾಣಕ್ಕೆ ಸ್ಥಳೀಯ ಹಿರಿಯರಾದ ಭಾಸ್ಕರ್ ದೀಪ ಪ್ರಜ್ವಲಸಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

2 ಕೋಟಿಯ ಅಂದಾಜು ಪಟ್ಟಿ ಸಿದ್ಧ
ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ ರೂ.೩೫ ಲಕ್ಷದಲ್ಲಿ ಪೂರ್ವ ಭಾಗದ ತಡೆಗೋಡೆ ಮತ್ತು ಶಿಲಾಮಯ ಮೆಟ್ಟಿಲುಗಳನ್ನು ಮತ್ತು ಕೆರೆಯ ಕೆಸರು ತೆಗೆದು ಸಂಪೂರ್ಣ ಸ್ವಚ್ಛ ಮಾಡಲಾಗುವುದು.ಅದಲ್ಲದೇ ದಾನಿಗಳ ಸಹಾಯದಿಂದ ಸುಮಾರು ರೂ.೨೫ ಲಕ್ಷ ಅಂದಾಜಿನಲ್ಲಿ ಕೆರೆಯ ಮಧ್ಯದಲ್ಲಿ ಸಂಪೂರ್ಣ ಶಿಲಾಮಯ ಮಂಟಪ ಮತ್ತು ಕಟ್ಟೆ ನಿರ್ಮಿಸಲಾಗುವುದು. ಹಾಗೆಯೇ ಉಳಿದ ಮೂರು ದಿಕ್ಕುಗಳ ತಡೆಗೋಡೆಗಳಿಗೆ ಕೂಡಾ ನಿರ್ವಹಣೆ ಯಾ ಪೂರ್ಣ ಹೊಸತಾಗಿ ಮಾಡುವ ಅವಶ್ಯಕತೆ ಇರುವ ಸಾಧ್ಯತೆ ಇದ್ದು ನೀರು ಖಾಲಿ ಮಾಡಿದ ನಂತರ ಪರಿಶೀಲಿಸಿ ಮುಂದುವರಿಯಲು ನಿರ್ಧರಿಸಿದೆ.ನೀರು ಬರಿದು ಮಾಡುವಾಗ ಕೆರೆಯ ಉತ್ತರ ಭಾಗದಲ್ಲಿ ಪೂರ್ವ ಪಶ್ಚಿಮವಾಗಿ ಉದ್ದಕ್ಕೆ ಗುಂಡಿ ಮಾಡಿ ಮತ್ಸ್ಯಗಳನ್ನು ಅಲ್ಲಿಗೆ ಬಿಡಲಾಗುವುದು.
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ಕೆರೆಗೆ ಇನ್ನೂ ರೂ.65 ಲಕ್ಷ ನೀಡಲು ಬದ್ಧ
ಕೆರೆಯ ಅಭಿವೃದ್ಧಿಗೆ ಪುಡಾದ ರೂ.೩೫ ಲಕ್ಷ ಅನುದಾನ ಸಾಕಾಗುವುದಿಲ್ಲ.ಈ ನಿಟ್ಟಿನಲ್ಲಿ ನಾನು ರೂ.೬೫ ಲಕ್ಷ ನೀಡಲು ಬದ್ಧನಿದ್ದೇನೆ.ಅದೂ ಕಡಿಮೆ ಆದರೆ ಮತ್ತೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಕೊಡಿಸುತ್ತೇನೆ.ನಗರದೊಳಗೆ ಮೂರು ಕೆರೆಗಳ ಅಭಿವೃದ್ಧಿಗೂ ನೀಲನಕಾಶೆ ಆಗಿದೆ.ಬನ್ನೂರು ಬಾವುದ ಕೆರೆಗೆ ರೂ.೧.೭೫ ಕೋಟಿ ಮತ್ತು ಬಪ್ಪಳಿಗೆಯಲ್ಲಿ ಕೆರೆ ಅಭಿವೃದ್ಧಿ ನಡೆಯಲಿದೆ.ದೇವಸ್ಥಾನದಲ್ಲಿ ಕೆರೆಯಿಂದ ಅಂತರ್ ಜಲ ಅಭಿವೃದ್ಧಿಯಾಗುತ್ತದೆ.ಈ ನಿಟ್ಟಿನಲ್ಲಿ ಸಣ್ಣ ನೀರಾವರಿಗೆ ಒತ್ತು ಕೊಟ್ಟು ಅಭಿವೃದ್ಧಿ ಕೆಲಸ ಕಾಮಗಾರಿ ಸಣ್ಣ ನೀರಾವರಿ ಕೈಗೆತ್ತಿಕೊಳ್ಳಲಿದೆ.ದೇವಸ್ಥಾನಕ್ಕೆ ಗೋ ಶಾಲೆಗೂ ೧೯.೧೦ ಸೆಂಟ್ಸ್‌ನ ಆರ್‌ಟಿಸಿ ಆಗಿದೆ.ಅನ್ನಛತ್ರಕ್ಕೆ ರೂ.೧ ಕೋಟಿ ನೀಡಲಾಗಿದೆ. ಇದರ ಜೊತೆ ಅಪಾಯಕಾರಿ ಜಂಕ್ಷನ್ ಗುರುತಿಸಿ ಅಲ್ಲಿ ಕೂಡಾ ವೃತ್ತ ರಚನೆಗೆ ಚಿಂತನೆ ಮಾಡಲಾಗುತ್ತದೆ-
ಸಂಜೀವ ಮಠಂದೂರು
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here