ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

0

ಪುತ್ತೂರು: ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ಪುತ್ತೂರು, ಮಾಯಿದೆ ದೇವುಸ್ ಚರ್ಚ್‌ನ ಆರೋಗ್ಯ ಆಯೋಗ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಮಾ.12 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ಪ್ರತಿಯೋರ್ವರಿಗೂ ಉತ್ತಮ ಆರೋಗ್ಯ ಬೇಕೇ ಬೇಕು. ಪ್ರಸ್ತುತ ದಿನಗಳಲ್ಲಿ ಮಾನವ ಅನಿಯಮಿತ ಆಹಾರ ಶೈಲಿ, ವ್ಯಾಯಾಮ ಇಲ್ಲದಿರುವಿಕೆ, ಕೆಟ್ಟ ಆಲೋಚನೆಯಿಂದ ತನ್ನ ಆರೋಗ್ಯದತ್ತ ಗಮನ ಕೇಂದ್ರೀಕರಿಸದೆ ಇರುವುದರಿಂದ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಆದ್ದರಿಂದ ಎಲ್ಲರೂ ನಿಯಮಿತ ಆರೋಗ್ಯ ಶೈಲಿ, ವ್ಯಾಯಾಮ ಮಾಡುವಿಕೆ ಹಾಗೂ ಕ್ಲಪ್ತ ಸಮಯದಲ್ಲಿ ಆರೋಗ್ಯ ತಪಾಸಣೆಯತ್ತ ಗಮನ ಹರಿಸಿದಾಗ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.


ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜ, ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕಿ ರೈನಾ ಜೆನಿಫರ್ ಮಸ್ಕರೇನ್ಹಸ್, ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಮಾಯಿದೆ ದೇವುಸ್ ಚರ್ಚ್‌ನ ಆರೋಗ್ಯ ಆಯೋಗದ ಕಾರ್ಯದರ್ಶಿ ಜೆಸಿಂತಾ ಡಿ’ಸೋಜ ಮಿತ್ತೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಯಿದೆ ದೇವುಸ್ ಚರ್ಚ್‌ನ ಆರೋಗ್ಯ ಆಯೋಗದ ಸಂಚಾಲಕ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಎಲ್‌ಸಿ ಸಂಘಟನೆಯ ಸದಸ್ಯರು, ಮಾಯಿದೆ ದೇವುಸ್ ಚರ್ಚ್‌ನ ಆರೋಗ್ಯ ಆಯೋಗದ ಸದಸ್ಯರು ಸಹಕರಿಸಿದರು.


ಶಿಬಿರದಲ್ಲಿ ಸ್ತ್ರೀಯರ ಆರೋಗ್ಯ ತಪಾಸಣೆ, ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ತಪಾಸಣೆ, ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿ, ಕಿವಿ, ಮೂಗು, ಗಂಟಲು ತಪಾಸಣೆ, ಚರ್ಮರೋಗ ತಪಾಸಣೆ ಹಾಗೂ ಇನ್ನಿತರ ಖಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆ ಮುಂತಾದ ಸೇವೆಗಳು ನಡೆದವು. ಫಾ|ಮುಲ್ಲರ್‍ಸ್ ಆಸ್ಪತ್ರೆಯ 12 ಮಂದಿ ವೈದ್ಯರು, 5 ಮಂದಿ ಶುಶ್ರೂಷಕಿಯರು, ಮೂವರು ಟೆಕ್ನಿಶಿಯನ್ಸ್‌ಗಳು ಶಿಬಿರದಲ್ಲಿ ಸಹಕರಿಸಿದರು.

180ಕ್ಕೂ ಮಿಕ್ಕಿ ಫಲಾನುಭವಿಗಳು ಭಾಗಿ..
ಶಿಬಿರದಲ್ಲಿ ಪಾಲ್ಗೊಂಡವರಿಗೆ ಮುಂದಿನ ಚಿಕಿತ್ಸೆಗೆ ಫಾ|ಮುಲ್ಲರ್ ಆಸ್ಪತ್ರೆಯಲ್ಲಿ ನೋಂದಾವಣೆ, ರಕ್ತ ಪರೀಕ್ಷೆ, , ಎದೆಯ ಎಕ್ಸ್-ರೇ, ಹೊರರೋಗಿ ಚಿಕಿತ್ಸೆ(ಎಲ್ಲಾ ವಿಭಾಗಗಳಲ್ಲಿ), ಒಳರೋಗಿ ದಾಖಲಾತಿ(ಜನರಲ್ ವಾರ್ಡ್), ಬೆಡ್, ಊಟ, ಆಸ್ಪತ್ರೆಯ ಸೇವೆಗಳು, ವೈದ್ಯರ ಚಿಕಿತ್ಸಾ ವೆಚ್ಚ, ಎಲ್ಲಾ ಶಸ್ತ್ರ ಚಿಕಿತ್ಸೆ, ಅರಿವಳಿಕೆ ತಜ್ಞರ ಶುಲ್ಕಗಳು, ಸಿಟಿ ಸ್ಕ್ಯಾನ್‌ನಲ್ಲಿ ಶೇ.25 ರಿಯಾಯಿತಿ, ಆಲ್ಟ್ರಾ ಸೌಂಡ್‌ನಲ್ಲಿ ಶೇ.50 ರಿಯಾಯಿತಿ ಮುಂತಾದ ಸೌಲಭ್ಯಗಳು ಸಿಗಲಿದ್ದು, 180ಕ್ಕೂ ಮಿಕ್ಕಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

LEAVE A REPLY

Please enter your comment!
Please enter your name here